ಮಾಸ್ಕೋ: ಮಧ್ಯಪ್ರಾಚ್ಯದಲ್ಲಿ (Middle East crisis) ಉಂಟಾಗಿರುವ ಬಿಕ್ಕಟ್ಟು ಜಾಗತಿಕವಾಗಿ ತೈಲ ಪೂರೈಕೆಗೆ (Oil supply) ಅಡ್ಡಿಯಾಗಿದೆ. ಇದರಿಂದ ಭಾರತಕ್ಕೂ ತೊಂದರೆ ಎದುರಾಗುವ ಆತಂಕ ಉಂಟಾಗಿದೆ. ಯುಎಸ್ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ (Iran war) ನಡೆಸಿದ ಪರಿಣಾಮ ಇರಾನ್ ಇದಕ್ಕೆ ಪ್ರತಿಯಾಗಿ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿದೆ ಅಲ್ಲದೇ ಹೊರ್ಮುಜ್ ಜಲಸಂಧಿಯ (Strait of Hormuz) ಮೂಲಕ ನಡೆಯುವ ವ್ಯಾಪಾರ ಚಟುವಟಿಕೆ ಮೇಲೆ ಅಡ್ಡಿ ಪಡಿಸಿದೆ. ಈ ಹಿನ್ನೆಲೆಯಲ್ಲಿ ಈಗ ಭಾರತಕ್ಕೆ ಎದುರಾಗಿರುವ ತೈಲ ಬಿಕ್ಕಟ್ಟನ್ನು ಪರಿಹರಿಸಲು ರಷ್ಯಾ ಮುಂದಾಗಿದೆ.
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪರಿಣಾಮ ಭಾರತಕ್ಕೆ ತೈಲ ಪೂರೈಕೆಯಲ್ಲಿ ಆಗಿರುವ ಅಡಚಣೆಗಳನ್ನು ಸರಿದೂಗಿಸಲು ರಷ್ಯಾ ಭಾರತಕ್ಕೆ ತೈಲವನ್ನು ಒದಗಿಸುವುದಾಗಿ ಹೇಳಿದೆ. ಇದಕ್ಕಾಗಿ ಸುಮಾರು 9.5 ಮಿಲಿಯನ್ ಬ್ಯಾರೆಲ್ ರಷ್ಯಾದ ಕಚ್ಚಾ ತೈಲವು ಭಾರತೀಯ ಸಮುದ್ರ ತೀರದ ಬಳಿ ಹಡಗುಗಳಲ್ಲಿದೆ. ಕೆಲವೇ ವಾರಗಳಲ್ಲಿ ಇದು ತಲುಪಲು ಸಾಧ್ಯವಿದೆ ಎನ್ನಲಾಗಿದೆ.
ಗಲ್ಫ್ ಬಿಕ್ಕಟ್ಟಿನ ನಡುವೆ ಭಾರತಕ್ಕೆ ರಷ್ಯಾದ ನೆರವಿನ ಹಸ್ತ: ಇಂಧನ ಭದ್ರತೆಗೆ ಕ್ರಮ
ರಷ್ಯಾದ ಈ ತೈಲ ಎಲ್ಲಿಗೆ ಹೋಗುತ್ತಿತ್ತು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇದನ್ನು ಭಾರತಕ್ಕೆ ಕಳುಹಿಸಲು ರಷ್ಯಾ ಮುಂದಾಗಿದೆ. ಇದನ್ನು ಸ್ವೀಕರಿಸಲು ನವದೆಹಲಿಯು ಸಮ್ಮತಿಸಿದರೆ ತೈಲ ಬಿಕ್ಕಟ್ಟಿನಿಂದ ಭಾರತದ ಸಂಸ್ಕರಣಾಗಾರಗಳಿಗೆ ತ್ವರಿತ ಪರಿಹಾರ ದೊರೆತಂತಾಗುತ್ತದೆ.
ಭಾರತಕ್ಕೆ ತೈಲ ಪೂರೈಕೆಯಲ್ಲಿ ನಿರಂತರ ಅಡ್ಡಿಯಾದರೆ ಈಗ ಇರುವ ಕಚ್ಚಾ ತೈಲ ದಾಸ್ತಾನುಗಳು ಸುಮಾರು 25 ದಿನಗಳ ಬೇಡಿಕೆಯನ್ನು ಮಾತ್ರ ಪೂರೈಸಬಹುದು. ಇದರೊಂದಿಗೆ ಗ್ಯಾಸೋಯಿಲ್, ಗ್ಯಾಸೋಲಿನ್ ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲ ಕೂಡ ಸೀಮಿತ ದಾಸ್ತಾನುಗಳನ್ನು ಹೊಂದಿದೆ. ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಸಮಸ್ಯೆಗಳು 10–15 ದಿನಗಳೊಳಗೆ ಪರಿಹಾರ ಕಾಣದೇ ಇದ್ದರೆ ಭಾರತ ಪರ್ಯಾಯ ದಾರಿಯನ್ನು ನೋಡಲೇ ಬೇಕು. ಅದಕ್ಕಾಗಿ ನವದೆಹಲಿ ತಯಾರಿ ನಡೆಸುತ್ತಿದೆ ಎನ್ನಲಾಗಿದೆ.
ಭಾರತಕ್ಕೆ ಪರ್ಯಾಯ ಪೂರೈಕೆದಾರರನ್ನು ಹುಡುಕುವುದು ಅನಿವಾರ್ಯವಾಗಿದೆ. ಯಾಕೆಂದರೆ ತೈಲ ಬಿಕ್ಕಟ್ಟು ದೇಶದ ಸಂಪೂರ್ಣ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಭಾರತದ ಕಚ್ಚಾ ತೈಲ ಆಮದುಗಳಲ್ಲಿ ಸುಮಾರು ಶೇ. 40ರಷ್ಟು ತೈಲ ರಫ್ತು ಹೊರ್ಮುಜ್ ಜಲಸಂಧಿಯ ಮೂಲಕವೇ ಸಾಗಿ ಬರುತ್ತದೆ. ಆದರೆ ಈಗ ಈ ಮಾರ್ಗವು ಬಹುತೇಕ ಮುಚ್ಚಲ್ಪಟ್ಟಿರುವುದರಿಂದ ತೈಲ ಆಮದಿಗೆ ಪರ್ಯಾಯ ದಾರಿ ನೋಡಲೇಬೇಕಿದೆ.
ಭಾರತೀಯ ಸಂಸ್ಕರಣಾಗಾರರು ದಿನಕ್ಕೆ ಸುಮಾರು 5.6 ಮಿಲಿಯನ್ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲವನ್ನು ಸಂಸ್ಕರಿಸುತ್ತಾರೆ. ಆದರೆ ಈಗ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಭಾರತಕ್ಕೆ ತೈಲ ಆಮದು ಸಾಧ್ಯವಾಗದೇ ಇರುವುದರಿಂದ ಭಾರತಕ್ಕೆ ಶೇ. 40ರಷ್ಟು ಕಚ್ಚಾ ತೈಲವನ್ನು ಪೂರೈಸಲು ರಷ್ಯಾ ಮುಂದೆ ಬಂದಿದೆ.
ಅಮೆರಿಕದ ಒತ್ತಡದ ಪರಿಣಾಮ ಭಾರತವು ರಷ್ಯಾದಿಂದ ತೈಲ ಆಮದನ್ನು ಕಡಿಮೆಗೊಳಿಸಿತ್ತು. ಕಳೆದ ಜನವರಿಯಲ್ಲಿ ರಷ್ಯಾದ ಕಚ್ಚಾ ತೈಲ ಆಮದು ಪ್ರಮಾಣ ದಿನಕ್ಕೆ ಸುಮಾರು 1.1 ಮಿಲಿಯನ್ ಬ್ಯಾರೆಲ್‌ಗಳಿಗೆ ಇಳಿದಿತ್ತು. ಇದು 2022ರ ನವೆಂಬರ್ ಬಳಿಕ ಅತ್ಯಂತ ಕಡಿಮೆ ಪ್ರಮಾಣದ ಆಮದಾಗಿದೆ. ನವದೆಹಲಿ ಯುಎಸ್ ಸುಂಕಗಳಿಂದ ಪರಿಹಾರ ಕೋರಿದ ಬಳಿಕ ಮಾಸ್ಕೋದ ಒಟ್ಟಾರೆ ತೈಲ ಆಮದಿನ ಪಾಲನ್ನು ಶೇ. 21.2ಕ್ಕೆ ಇಳಿಸಿತು. ಫೆಬ್ರವರಿಯಲ್ಲಿ ಇದು ಶೇ. 30ಕ್ಕೆ ಏರಿತ್ತು.
ಭಾರತೀಯ ಸಂಸ್ಕರಣಾಗಾರರು ರಷ್ಯಾದ ಕಚ್ಚಾ ತೈಲವನ್ನು ಮಾರಾಟ ಮಾಡುವ ವ್ಯಾಪಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಆದರೆ ಮಾಸ್ಕೋದಿಂದ ಹೆಚ್ಚಿನ ತೈಲ ಆಮದು ಯುನೈಟೆಡ್ ಸ್ಟೇಟ್ಸ್ ಜೊತೆಗಿನ ವ್ಯಾಪಾರ ಮಾತುಕತೆಗಳ ಮೇಲೆ ಯಾವುದೇ ಪರಿಣಾಮ ಬೀರದಂತೆ ಸರ್ಕಾರ ಯೋಜನೆ ಮಾಡಿಕೊಳ್ಳಬೇಕಿದೆ ಎಂದು ಸಂಸ್ಕರಣಾ ಮೂಲಗಳು ತಿಳಿಸಿವೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ತಿಂಗಳು ರಷ್ಯಾದ ತೈಲ ಖರೀದಿಗೆ ಭಾರತಕ್ಕೆ ವಿಧಿಸಿರುವ ದಂಡನಾತ್ಮಕ ಸುಂಕಗಳನ್ನು ಕೈಬಿಡಲು ಒಪ್ಪಿಕೊಂಡರು. ಇದಕ್ಕೆ ಪ್ರತಿಯಾಗಿ ನವದೆಹಲಿಯು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲು ಒಪ್ಪಿಕೊಂಡಿತ್ತು ಎಂದು ಹೇಳಿದ್ದರು. ಆದರೆ ಭಾರತ ಇದು ತನ್ನ ಕಾರ್ಯತಂತ್ರವಾಗಿದೆ ಎಂದು ಹೇಳಿತ್ತು.
ರಷ್ಯಾದಿಂದ ಹೆಚ್ಚುವರಿ ತೈಲ ಖರೀದಿ ಬಗ್ಗೆ ಭಾರತದ ವಿದೇಶಾಂಗ ಮತ್ತು ತೈಲ ಸಚಿವಾಲಯ ಹಾಗೂ ನವದೆಹಲಿಯಲ್ಲಿರುವ ರಷ್ಯಾದ ರಾಯಭಾರ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇರಾನ್ ಯುದ್ಧ ಪ್ರಾರಂಭವಾಗುವ ಮೊದಲು ಭಾರತೀಯ ಕಂಪೆನಿಗಳು ರಷ್ಯಾದ ತೈಲವನ್ನು ಸ್ವೀಕರಿಸುವುದಿಲ್ಲ ಎಂಬುದಾಗಿ ಹೇಳಿಲ್ಲ ಎನ್ನಲಾಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಆರಂಭವಾದ ಬಳಿಕ ರಷ್ಯಾದ ತೈಲ ಜಾಗತಿಕ ಬೆಲೆಗಳಿಗೆ ಹೋಲಿಸಿದರೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದೀಗ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಹೆಚ್ಚಾದಂತೆ ಜಾಗತಿಕ ಮಾರುಕಟ್ಟೆಗೆ ಪ್ರಮುಖ ತೈಲ ಪೂರೈಕೆದಾರ ಕತಾರ್ ಸೋಮವಾರ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಇದರಿಂದ ರಷ್ಯಾ ಭಾರತಕ್ಕೆ ತೈಲ ಮಾರಾಟ ಮಾಡಲು ಮುಂದಾಗಿದೆ.
US-Israel-Iran War: ಶ್ರೀಲಂಕಾದಲ್ಲಿ ಇರಾನ್ ಯುದ್ಧನೌಕೆ ಮೇಲೆ ದಾಳಿ; 101 ಮಂದಿ ನಾಪತ್ತೆ
ಏಷ್ಯಾದ ಅತಿದೊಡ್ಡ ಇಂಧನ ಗ್ರಾಹಕರಾದ ಚೀನಾ ಮತ್ತು ಭಾರತ ಎರಡೂ ಮಧ್ಯಪ್ರಾಚ್ಯದಿಂದ ಹೆಚ್ಚಿನ ಪ್ರಮಾಣದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿವೆ. ಆದರೆ ಭಾರತವು ಚೀನಾಕ್ಕಿಂತ ಕಡಿಮೆ ಸಂಗ್ರಹವನ್ನು ಹೊಂದಿದೆ. ಹೀಗಾಗಿ ಭಾರತದ ಮುಂದೆ ಇದೀಗ ರಷ್ಯಾ ತೈಲ ಖರೀದಿ ಮಾಡುವ ಆಯ್ಕೆ ಮಾತ್ರ ಇದೆ. ಆದರೆ ಇದಕ್ಕಾಗಿ ಅದು ಯುಎಸ್ ನಿಂದ ಒತ್ತಡವನ್ನು ಎದುರಿಸಬೇಕಾಗಬಹುದು.