ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಭಾರತ-ಪಾಕ್‌ ಟೆನ್ಷನ್‌ ನಡುವೆ ಸೆನ್ಸೆಕ್ಸ್‌ 1,005 ಅಂಕ ಜಿಗಿತ; ಕಾರಣವೇನು?

Share Market: ಭಾರತ-ಪಾಕ್‌ ಯುದ್ಧದ ಭೀತಿಯ ನಡುವೆಯೂ ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸೋಮವಾರ ಬೆಳಗ್ಗೆ 1,000 ಅಂಕಗಳ ಏರಿಕೆಯೊಂದಿಗೆ ಶುಭಾರಂಭ ಮಾಡಿತು. ದಿನದ ಮುಕ್ತಾಯದ ವೇಳೆಗೆ ಸೆನ್ಸೆಕ್ಸ್‌ 1,005 ಅಂಕ ಏರಿಕೆಯಾಗಿ 80,218ಕ್ಕೆ ಸ್ಥಿರವಾಯಿತು. ನಿಫ್ಟಿ 289 ಅಂಕ ಜಿಗಿದು 24,328ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿತು.

ಭಾರತ-ಪಾಕ್‌ ಟೆನ್ಷನ್‌ ನಡುವೆ ಸೆನ್ಸೆಕ್ಸ್‌ 1,005 ಅಂಕ ಜಿಗಿತ

ಸಾಂದರ್ಭಿಕ ಚಿತ್ರ.

Profile Ramesh B Apr 28, 2025 8:59 PM

ಮುಂಬೈ: ಮುಂಬೈ ಷೇರು ಮಾರುಕಟ್ಟೆ (Stock Market) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ (Sensex) ಸೋಮವಾರ ಬೆಳಗ್ಗೆ 1,000 ಅಂಕಗಳ ಏರಿಕೆಯೊಂದಿಗೆ ಶುಭಾರಂಭ ಮಾಡಿತು. ಮುಖ್ಯವಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಬ್ಯಾಂಕ್‌ಗಳ ಷೇರುಗಳ ದರದಲ್ಲಿ ಏರಿಕೆ ದಾಖಲಾಯಿತು. ದಿನದ ಮುಕ್ತಾಯದ ವೇಳೆಗೆ ಸೆನ್ಸೆಕ್ಸ್‌ 1,005 ಅಂಕ ಏರಿಕೆಯಾಗಿ 80,218ಕ್ಕೆ ಸ್ಥಿರವಾಯಿತು. ನಿಫ್ಟಿ (Nifty) 289 ಅಂಕ ಜಿಗಿದು 24,328ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿತು. ಹಾಗಾದರೆ ಇದರ ಹಿಂದಿನ ಕಾರಣವೇನು? ನೋಡೋಣ.

ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರಿಕೆಗೆ ಕಾರಣಗಳ ಪಟ್ಟಿ

  • ರಿಲಯನ್ಸ್‌ ಇಂಡಸ್ಟ್ರೀಸ್‌ ಕಳೆದ ಜನವರಿ-ಮಾರ್ಚ್‌ನಲ್ಲಿ ನಿರೀಕ್ಷೆಗೂ ಮೀರಿ ಲಾಭ ಗಳಿಸಿರೋದು.
  • ಭಾರತದ ಕೈಗಾರಿಕಾ ಉತ್ಪಾದನೆ ಮಾರ್ಚ್‌ನಲ್ಲಿ 3% ಏರಿಕೆಯಾಗಿರೋದು.
  • ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆ ಮಾಡುತ್ತಿರುವುದು.
  • ಕಚ್ಚಾ ತೈಲ ದರ 66 ಡಾಲರ್‌ಗೆ ಇಳಿಕೆಯಾಗಿರುವುದು
  • ಡಾಲರ್‌ ದುರ್ಬಲವಾಗುತ್ತಿರುವುದು.

ಈ ಸುದ್ದಿಯನ್ನೂ ಓದಿ: Stock Market: ರಿಲಯನ್ಸ್‌ಗೆ ಭರ್ಜರಿ ಲಾಭ, ಸೆನ್ಸೆಕ್ಸ್‌ 800 ಅಂಕ ಹೈ ಜಂಪ್‌

ರಿಲಯನ್ಸ್‌ ಇಂಡಸ್ಟ್ರೀಸ್‌ (Reliance Industries) ಷೇರುಗಳ ದರದಲ್ಲಿ 5% ಏರಿಕೆಯಾಯಿತು. ಬಿಎಸ್‌ಇನಲ್ಲಿ 1,351 ರುಪಾಯಿಗೆ ಜಿಗಿಯಿತು. ಕಳೆದ ಜನವರಿ-ಮಾರ್ಚ್‌ ತ್ರೈಮಾಸಿಕದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ 19,407 ಕೋಟಿ ರುಪಾಯಿ ನಿವ್ವಳ ಲಾಭ ದಾಖಲಿಸಿತ್ತು. ಮಾರುಕಟ್ಟೆಯ ನಿರೀಕ್ಷೆಯನ್ನೂ ಮೀರಿದ ಲಾಭ ಇದಾಗಿದೆ. (18,471 ಕೋಟಿ ಲಾಭ ಬರಬಹುದು ಎಂದು ಅಂದಾಜಿಸಲಾಗಿತ್ತು.) ರಿಲಯನ್ಸ್‌ ಈ ತ್ರೈಮಾಸಿಕದಲ್ಲಿ 2.88 ಲಕ್ಷ ಕೋಟಿ ರುಪಾಯಿಗಳ ಆದಾಯವನ್ನೂ ಗಳಿಸಿದೆ. ಹೀಗಾಗಿ ರಿಲಯನ್ಸ್‌ ಷೇರುನ ದರದಲ್ಲಿ 30 % ತನಕ ಏರಿಕೆಯಾಗುವ ನಿರೀಕ್ಷೆಯೂ ಉಂಟಾಗಿದೆ. ಇವತ್ತು ರಿಲಯನ್ಸ್‌ ಷೇರಿನ ದರ 1,366 ರುಪಾಯಿಗೆ ಏರಿತ್ತು.

ಬ್ಯಾಂಕಿಂಗ್‌ ಷೇರುಗಳ ಗಣನೀಯ ಚೇತರಿಕೆಯೂ ಪ್ರಭಾವ ಬೀರಿತು. ಐಸಿಐಸಿಐ ಬ್ಯಾಂಕ್‌, ಬಜಾಜ್‌ ಫಿನ್‌ ಸರ್ವ್‌ ಮತ್ತು ಮಹೀಂದ್ರಾ ಆಂಡ್‌ ಮಹೀಂದ್ರಾ, ಸನ್‌ ಫಾರ್ಮಾ, ಜೆಎಸ್‌ಡಬ್ಲ್ಯು ಸ್ಟೀಲ್‌ ಷೇರು ಲಾಭ ಗಳಿಸಿವೆ. 13ರಲ್ಲಿ 12 ಸೆಕ್ಟರ್‌ಗಳು ಲಾಭದಲ್ಲಿತ್ತು.

ನಿಫ್ಟಿಯಲ್ಲಿ ಹೆಚ್ಚು ಲಾಭ ಮತ್ತು ನಷ್ಟಕ್ಕೀಡಾದ ಷೇರುಗಳ ಲಿಸ್ಟ್

ಲಾಭ ಗಳಿಸಿದ ಷೇರುಗಳು

ಆರ್‌ಬಿಎಲ್‌ ಬ್ಯಾಂಕ್‌: 10%, ಷೇರಿನ ದರ: 207 ರುಪಾಯಿ.

ಡಿಸಿಬಿ ಬ್ಯಾಂಕ್‌: 9%, ಷೇರಿನ ದರ: 139 ರುಪಾಯಿ.

ಸೊನಾಟಾ ಸಾಫ್ಟ್‌ವೇರ್:‌ 7%, 362 ರುಪಾಯಿ.

ಸನ್‌ ಫಾರ್ಮಾ: 3% ಏರಿಕೆ

ಜೆಎಸ್‌ಡಬ್ಲ್ಯೂ ಸ್ಟೀಲ್:‌ 3% ಏರಿಕೆ

ನಷ್ಟಕ್ಕೀಡಾದ ಷೇರುಗಳು

ಶ್ರೀರಾಮ್‌ ಫೈನಾನ್ಸ್‌: 5% ನಷ್ಟ, ಷೇರಿನ ದರ: 622 ರುಪಾಯಿ.

ಚೋಳಮಂಡಲಂ ಫೈನಾನ್ಷಿಯಲ್‌ ಹೋಲ್ಡಿಂಗ್ಸ್:‌ 4% ನಷ್ಟ, ಷೇರಿನ ದರ 1,893 ರುಪಾಯಿ.

ವಿದೇಶಿ ಹೂಡಿಕೆಯ ಹೆಚ್ಚಳ

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಕಳೆದ ಎಂಟು ವಹಿವಾಟು ದಿನಗಳಲ್ಲಿ ಒಟ್ಟು 32,465 ಕೋಟಿ ರುಪಾಯಿಗಳ ಷೇರುಗಳನ್ನು ಖರೀದಿಸಿದ್ದಾರೆ. ಇದು ಸೂಚ್ಯಂಕಗಳ ಜಿಗಿತಕ್ಕೆ ಮತ್ತೊಂದು ಕಾರಣವಾಗಿದೆ. ಅಮೆರಿಕದ ಸ್ಟಾಕ್‌ ಮಾರ್ಕೆಟ್‌ ಸೂಚ್ಯಂಕಗಳು ಕುಸಿಯುತ್ತಿರುವುದು, ಬಾಂಡ್‌, ಡಾಲರ್‌ ಮಾರುಕಟ್ಟೆಯೂ ದುರ್ಬಲವಾಗುತ್ತಿರುವುದರಿಂದ ವಿದೇಶಿ ಹೂಡಿಕೆದಾರರು ಮತ್ತೆ ಭಾರತದ ಮಾರುಕಟ್ಟೆಯತ್ತ ಆಕರ್ಷಿತರಾಗುತ್ತಿದ್ದಾರೆ.

ದಕ್ಷಿಣ ಕೊರಿಯಾದ ಕೋಸ್ಪಿ ಇಂಡೆಕ್ಸ್‌, ಟೋಕಿಯೊದ ನಿಕ್ಕಿ 225, ಹಾಂಕಾಂಗ್‌ನ ಹಾಂಗ್‌ ಸೆಂಗ್‌ ಸೂಚ್ಯಂಕಗಳು ಚೇತರಿಸಿತ್ತು. ಡಾಲರ್‌ ದುರ್ಬಲವಾಗುತ್ತಿರುವುದು ಕೂಡ ಮಾರುಕಟ್ಟೆಯನ್ನು ಉತ್ತೇಜಿಸಿದೆ. ಕಚ್ಚಾ ತೈಲ ದರ ಬ್ಯಾರೆಲ್‌ಗೆ 66 ಡಾಲರ್‌ಗೆ ಇಳಿದಿದೆ. ಇದು ಕೂಡ ಪ್ರಭಾವ ಬೀರಿದೆ.

ಷೇರು ಮಾರುಕಟ್ಟೆಯ ಒಂದಷ್ಟು ಸುದ್ದಿಗಳನ್ನು ನೋಡೋಣ.

ಅಲ್ಟ್ರಾ ಟೆಕ್‌ ಸಿಮೆಂಟ್‌ ನಾಲ್ಕನೇ ತ್ರೈಮಾಸಿಕ ರಿಸಲ್ಟ್‌ ಅನ್ನು ಪ್ರಕಟಿಸಿದ್ದು, 2,482 ಕೋಟಿ ರುಪಾಯಿ ಲಾಭ ಗಳಿಸಿದೆ. ಪ್ರತಿ ಷೇರಿಗೆ 77 ರುಪಾಯಿ ಡಿವಿಡೆಂಡ್‌ ಘೋಷಿಸಿದೆ.

ಎಥೆರ್‌ ಎನರ್ಜಿ ಐಪಿಒ: ಬೆಂಗಳೂರು ಮೂಲದ ಎಲೆಕ್ಟ್ರಿಕ್‌ ಸ್ಕೂಟರ್‌ ತಯಾರಕ ಎಥೆರ್‌ ಎನರ್ಜಿ ಕಂಪನಿಯ ಐಪಿಒ ಆರಂಭವಾಗಿದ್ದು, ಷೇರಿನ ದರ 304-321 ರುಪಾಯಿಯ ಶ್ರೇಣಿಯಲ್ಲಿದೆ. ಐಪಿಒ ಮೂಲಕ ಸುಮಾರು 3 ಸಾವಿರ ಕೋಟಿ ರುಪಾಯಿಗಳನ್ನು ಸಂಗ್ರಹಿಸುವ ಉದ್ದೇಶ ಹೊಂದಿದೆ. ಆದರೆ ಐಪಿಒದ ಮೊದಲ ದಿನ 12% ಮಾತ್ರ ಸಬ್‌ ಸ್ಕ್ರೈಬ್‌ ಆಗಿದೆ.

ಇಂಡಿಯನ್‌ ರೈಲ್ವೆ ಫೈನಾನ್ಸ್‌ ಕಾರ್ಪೊರೇಷನ್‌ ಅಥವಾ IRFC ಜನವರಿ-ಮಾರ್ಚ್‌ ತ್ರೈಮಾಸಿಕದ ರಿಸಲ್ಟ್‌ ಪ್ರಕಟಿಸಿದ್ದು, ಸಂಸ್ಥೆಯ ನಿವ್ವಳ ಲಾಭ 1,682 ಕೋಟಿ ರುಪಾಯಿಗೆ ಇಳಿಕೆಯಾಗಿದೆ. ಅಂದ್ರೆ ಎರಡು ಪರ್ಸೆಂಟ್‌ ತಗ್ಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,717 ಕೋಟಿ ರುಪಾಯಿ ಲಾಭ ಗಳಿಸಿತ್ತು.

ICICI Securities ಪ್ರಕಾರ ನಿಫ್ಟಿ ಮುಂದಿನ 6 ತಿಂಗಳಿನಲ್ಲಿ 25,500 ಅಂಕಗಳ ಗಡಿಯನ್ನು ದಾಟಲಿದೆ. ಬ್ಯಾಂಕಿಂಗ್‌, ಪಿಎಸ್‌ಯು ಅಥವಾ ಸಾರ್ವಜನಿಕ ವಲಯ, ಲೋಹ, ಟೆಲಿಕಾಂ, ಫಾರ್ಮಾ ಮತ್ತು Consumption ವಲಯದ ಷೇರುಗಳು ಗಮನಾರ್ಹ ಲಾಭ ಗಳಿಸಬಹುದು ಎಂದು ಐಸಿಐಸಿಐ ಸೆಕ್ಯುರಿಟೀಸ್‌ ತಿಳಿಸಿದೆ. ಜತೆಗೆ ಐಟಿ, ಕ್ಯಾಪಿಟಲ್‌ ಗೂಡ್ಸ್‌ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ವಾಲ್ಯುಯೇಶನ್‌ ಆಕರ್ಷಕವಾಗಿದೆ ಎಂದು ತಿಳಿಸಿದೆ.