ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Share Market: ಸೆನ್ಸೆಕ್ಸ್‌, ನಿಫ್ಟಿ ಅಲ್ಪ ಇಳಿಕೆ; ಚೇತರಿಕೆ ಯಾವಾಗ?

ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮಂಗಳವಾರ 29 ಅಂಕ ಕಳೆದುಕೊಂಡು 75,967ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ ಸೂಚ್ಯಂಕವು 14 ಅಂಕ ಕಳೆದುಕೊಂಡು 22,945ಕ್ಕೆ ಸ್ಥಿರವಾಯಿತು. ಕಾರ್ಪೊರೇಟ್‌ ಆದಾಯದ ಇಳಿಕೆ, ಎಫ್‌ಐಐಗಳ ಹೂಡಿಕೆ ಹೊರ ಹರಿವಿನ ಪರಿಣಾಮ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸೂಚ್ಯಂಕ ಮಂದಗತಿಯಲ್ಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸೆನ್ಸೆಕ್ಸ್‌, ನಿಫ್ಟಿ ಅಲ್ಪ ಇಳಿಕೆ; ಚೇತರಿಕೆ ಯಾವಾಗ?

ಸಾಂದರ್ಭಿಕ ಚಿತ್ರ.

Profile Ramesh B Feb 18, 2025 6:42 PM

ಮುಂಬೈ: ಷೇರು ಮಾರುಕಟ್ಟೆ (Share Market) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮಂಗಳವಾರ 29 ಅಂಕ ಕಳೆದುಕೊಂಡು 75,967ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ ಸೂಚ್ಯಂಕವು 14 ಅಂಕ ಕಳೆದುಕೊಂಡು 22,945ಕ್ಕೆ ಸ್ಥಿರವಾಯಿತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಷೇರುಗಳು ಚೇತರಿಸಿದರೆ, ಹಣಕಾಸು ಷೇರುಗಳು ಇಳಿಯಿತು. ಕಾರ್ಪೊರೇಟ್‌ ಆದಾಯದ ಇಳಿಕೆ, ಎಫ್‌ಐಐಗಳ ಹೂಡಿಕೆ ಹೊರ ಹರಿವಿನ ಪರಿಣಾಮ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸೂಚ್ಯಂಕ ಮಂದಗತಿಯಲ್ಲಿದೆ. ಟ್ರೆಂಟ್‌, ಇಂಡಸ್‌ಇಂಡ್‌ ಬ್ಯಾಂಕ್‌, ಮಹೀಂದ್ರಾ & ಮಹೀಂದ್ರಾ, ಅಲ್ಟ್ರಾ ಟೆಕ್‌ ಸಿಮೆಂಟ್‌, ಭಾರತ್‌ ಎಲೆಕ್ಟ್ರಾನಿಕ್ಸ್‌ ಷೇರುಗಳು ನಷ್ಟಕ್ಕೀಡಾಯಿತು. ಟೆಕ್‌ ಮಹೀಂದ್ರಾ, ವಿಪ್ರೊ, ಒಎನ್‌ಜಿಸಿ, ಪವರ್‌ ಗ್ರಿಡ್‌ ಮತ್ತು ಎನ್‌ಟಿಪಿಸಿ ಷೇರುಗಳು ಲಾಭ ಗಳಿಸಿತು. ಸೆಕ್ಟರ್‌ಗಳ ಪೈಕಿ ಫಾರ್ಮಾ, ಎಫ್‌ಎಂಸಿಜಿ, ಮೀಡಿಯಾ, ಪಿಎಸ್‌ಯು ಬ್ಯಾಂಕ್‌, ಕನ್‌ಸ್ಯೂಮರ್‌ ಡ್ಯೂರಬಲ್ಸ್‌ ಷೇರುಗಳು ಇಳಿಯಿತು.

ಸ್ವಾಸ್ಥ್ಯ್‌ ಫುಡ್‌ ಟೆಕ್‌ ಇಂಡಿಯಾ ಕಂಪನಿಯ ಐಪಿಒ ಮಂಗಳವಾರ ಆರಂಭವಾಗಿದೆ. ಪ್ರತಿ ಷೇರಿನ ದರ 94 ರುಪಾಯಿ ಆಗಿದೆ. ಬಿಎಸ್‌ಇ ಎಸ್‌ಎಂಇ ಪ್ಲಾಟ್‌ಫಾರ್ಮ್‌ನಲ್ಲಿ ಷೇರು ಲಿಸ್ಟ್‌ ಆಗಲಿದೆ. ಸಾರ್ವಜನಿಕ ವಲಯದ ಎನ್‌ಟಿಪಿಸಿ ಸಂಸ್ಥೆಯು ಹೆಚ್ಚುವರಿ 2,424 ಕೋಟಿ ರುಪಾಯಿ ಡಿವಿಡೆಂಡ್‌ ನೀಡಲಿದೆ.



ಕಳೆದ ವರ್ಷ ಸೆಪ್ಟೆಂಬರ್‌ನಿಂದಲೇ ಈ ಎಫ್‌ಐಐಗಳು ಷೇರುಗಳನ್ನು ಮಾರಾಟ ಮಾಡಿ ಲಾಭ ಮಾಡಿಕೊಳ್ಳಲು ಶುರು ಮಾಡಿದ್ದರು. 2024ರ ಸೆಪ್ಟೆಂಬರ್‌ ಬಳಿಕ ಒಟ್ಟು ಎರಡು ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದರ ಪರಿಣಾಮ ಸೆನ್ಸೆಕ್ಸ್‌ 10% ಇಳಿದಿದೆ. ಬ್ರಾಡರ್‌ ಇಂಡೆಕ್ಸ್‌ಗಳಾದ ಬಿಎಸ್‌ಇ ಮಿಡ್‌ ಕ್ಯಾಪ್‌ 19% ಮತ್ತು ಬಿಎಸ್‌ಇ ಸ್ಮಾಲ್‌ ಕ್ಯಾಪ್‌ 21% ಇಳಿದಿದೆ.

ನಿಫ್ಟಿ ಇಂಡೆಕ್ಸ್‌ 2024ರ ಉನ್ನತ ಮಟ್ಟಕ್ಕೆ ಹೋಲಿಸಿದರೆ 13% ಇಳಿಕೆಯಾಗಿದೆ. ಹೀಗಿದ್ದರೂ ಸಿಟಿ ರಿಸರ್ಚ್‌ ಪ್ರಕಾರ 2025ರ ಡಿಸೆಂಬರ್‌ ವೇಳೆಗೆ 26,000 ಅಂಕಗಳಿಗೆ ಏರಿಕೆಯಾಗುವ ನಿರೀಕ್ಷೆ ಇದೆ. ಪಿಒ ರೇಶಿಯೊ ಕಡಿಮೆ ಇರುವ ಷೇರುಗಳಲ್ಲಿ ಹೂಡಿಕೆ ಮಾಡಬಹುದು ಎನ್ನುತ್ತಾರೆ ತಜ್ಞರು. ಲುಪಿನ್‌, ಎಚ್‌ಪಿಸಿಎಲ್‌, ಅಶೋಕ್‌ ಲೇಲ್ಯಾಂಡ್‌ ಷೇರುಗಳ ಪಿಇ ರೇಶಿಯೊ ಕಡಿಮೆ ಇದೆ.

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಚೀನಾ, ಕೆನಡಾ, ಯುರೋಪ್‌ ಮತ್ತು ಬ್ರಿಕ್ಸ್‌ ದೇಶಗಳ ವಿರುದ್ಧ ಟ್ರೇಡ್‌ ವಾರ್‌ ಆರಂಭಿಸಿದ ಬಳಿಕ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆಯನ್ನು ಹಿಂತೆಗೆದುಕೊಳ್ಳುತಿದ್ದಾರೆ. ಮತ್ತೊಂದು ಕಡೆ ಬಂಗಾರದ ದರ ಏರುಗತಿಯಲ್ಲಿದೆ. ಹೀಗಿದ್ದರೂ, ಈ ಪ್ರಕ್ಷುಬ್ಧ ಪರಿಸ್ಥಿತಿ ತಿಳಿಯಾಗಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಎಫ್‌ಐಐಗಳು ಸ್ಟಾಕ್‌ ಮಾರ್ಕೆಟ್‌ಗೆ ಬಂಡವಾಳ ಹಾಕಿದಾಗ ಮತ್ತು ತೆಗೆದಾಗ ಮಾರುಕಟ್ಟೆಯಲ್ಲಿ ಹೆಚ್ಚಿನ ಏರಿಳಿತ ಆಗುತ್ತದೆ. ಡಿಐಐಗಳು ನಿರಂತರವಾಗಿ ಮಾರುಕಟ್ಟೆಯಲ್ಲಿ ಇದ್ದಾಗ ಹಣಕಾಸು ಮಾರುಕಟ್ಟೆಯಲ್ಲಿ ಸ್ಥಿರತೆ ಉಂಟಾಗುತ್ತದೆ.

ಈ ಸುದ್ದಿಯನ್ನೂ ಓದಿ: Stock Market Outlook: ಈ ವಾರ ಸೆನ್ಸೆಕ್ಸ್‌, ನಿಫ್ಟಿ ಮತ್ತಷ್ಟು ಕುಸಿತ? ಮಾರ್ಚ್‌ ಅಂತ್ಯಕ್ಕೆ ಬುಲ್‌ ರನ್?

ಹೀಗಾಗಿ ಡಿಐಐ ಮತ್ತು ಎಫ್‌ಐಐಗಳ ಬಗ್ಗೆ ತಿಳಿದುಕೊಂಡಷ್ಟೂ ರಿಟೇಲ್‌ ಹೂಡಿಕೆದಾರರಿಗೆ ಮಾರುಕಟ್ಟೆಯ ಏರಿಳಿತಗಳು ಏಕೆ ಉಂಟಾಗುತ್ತವೆ ಎಂಬುದು ಅರ್ಥವಾಗುತ್ತದೆ ಎಂದು ತಜ್ಞರು ವಿವರಿಸಿದ್ದಾರೆ.