ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Stock Market Outlook: ಈ ವಾರ ಸೆನ್ಸೆಕ್ಸ್‌, ನಿಫ್ಟಿ ಮತ್ತಷ್ಟು ಕುಸಿತ? ಮಾರ್ಚ್‌ ಅಂತ್ಯಕ್ಕೆ ಬುಲ್‌ ರನ್?

ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸತತ 8 ವಹಿವಾಟು ದಿನಗಳಿಂದ ಕುಸಿತಕ್ಕೀಡಾಗಿದ್ದು, ಹೂಡಿಕೆದಾರರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ನಾಳೆ ಏನಾಗಬಹುದು ಎಂದು ನಿಖರವಾಗಿ ಭವಿಷ್ಯ ಹೇಳಲು ಯಾರಿಗೂ ಸಾಧ್ಯವಿಲ್ಲ. ಅದಾಗ್ಯೂ ಒಂದಿಷ್ಟು ಅಂದಾಜು ನಡೆಸಬಹುದು. ಅದರಂತೆ ಈ ವಾರ ಸೆನ್ಸೆಕ್ಸ್‌, ನಿಫ್ಟಿ ಮತ್ತಷ್ಟು ಕುಸಿತವಾಗುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.

ಈ ವಾರ ಸೆನ್ಸೆಕ್ಸ್‌, ನಿಫ್ಟಿ ಮತ್ತಷ್ಟು ಕುಸಿತ?

ಸಾಂದರ್ಭಿಕ ಚಿತ್ರ.

Keshava Prasad B Keshava Prasad B Feb 16, 2025 5:17 PM

-ಕೇಶವ ಪ್ರಸಾದ್‌ ಬಿ.

ಮುಂಬೈ: ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸತತ 8 ವಹಿವಾಟು ದಿನಗಳಿಂದ ಕುಸಿತಕ್ಕೀಡಾಗಿದೆ. ಹೀಗಾಗಿ ಮುಂದಿನ ವಾರ ಏನಾಗಲಿದೆ ಎಂಬ ಕಾತರ ಉಂಟಾಗಿದೆ. ಷೇರು ಮಾರುಕಟ್ಟೆಯಲ್ಲಿ ನಾಳೆ ಏನಾಗಬಹುದು ಎಂದು ನಿಖರವಾಗಿ ಭವಿಷ್ಯ ಹೇಳಲು ಯಾರಿಗೂ ಸಾಧ್ಯವಿಲ್ಲ. ಆದರೆ ಪ್ರಸಕ್ತ ಸಂದರ್ಭವನ್ನು ವಿಶ್ಲೇಷಿಸಿ, ವಾರದ ಮುನ್ನೋಟವನ್ನು ಗ್ರಹಿಸಬಹುದು (Stock Market Outlook). ಮಾರುಕಟ್ಟೆ ಮೇಲೆ ಈ ವಾರ ಪ್ರಭಾವ ಬೀರಬಹುದಾದ 9 ಪ್ರಮುಖ ಅಂಶಗಳನ್ನು ನೋಡೋಣ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಅಥವಾ ಫಾರಿನ್‌ ಇನ್‌ಸ್ಟಿಟ್ಯೂಶನಲ್‌ ಇನ್ವೆಸ್ಟರ್ಸ್‌ ಅಥವಾ ಸಂಕ್ಷಿಪ್ತವಾಗಿ FIIಗಳು, ನಿರಂತರವಾಗಿ ಕೆಲವು ಸೆಕ್ಟರ್‌ಗಳಿಂದ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಇದು ಸೂಚ್ಯಂಕಗಳ ಇಳಿಕೆಗೆ ಒಂದು ಕಾರಣವಾಗಿದೆ. ಈ ಎಫ್‌ಐಐಗಳು ಮುಖ್ಯವಾಗಿ, ಬ್ಯಾಂಕಿಂಗ್‌, ಆಟೊಮೊಬೈಲ್‌ ಮತ್ತು FMCG ಕ್ಷೇತ್ರದಿಂದ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಕಳೆದ ಶುಕ್ರವಾರ 4,294 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಿದ್ದರು. ಈ ವರ್ಷ ಇದುವರೆಗೆ ಒಟ್ಟು ಒಂದು ಲಕ್ಷ ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಎಫ್‌ಐಐಗಳು ಮಾರಾಟ ಮಾಡಿದ್ದಾರೆ. ಇದು ಮಾರುಕಟ್ಟೆಯಲ್ಲಿ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ. ಭಾರತದಿಂದ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿರುವ ಈ ವಿದೇಶಿ ಹೂಡಿಕೆದಾರರು, ಚೀನಾದಲ್ಲಿ ಹೂಡಿಕೆ ಮಾಡುತ್ತಿದ್ದಾರೆ.



ಎಫ್‌ಐಐಗಳು ಭಾರತದ ಸ್ಟಾಕ್‌ ಮಾರ್ಕೆಟ್‌ನಿಂದ ಏಕೆ ಹೊರಗೆ ಹೋಗುತ್ತಿದ್ದಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಏನಾಗಿದೆ ಎಂದರೆ, ಎಫ್‌ಐಐಗಳಿಗೆ ಭಾರತದ ಸ್ಟಾಕ್‌ ಮಾರ್ಕೆಟ್‌ನಲ್ಲಿ ಸರಾಸರಿ 12% ರಿಟರ್ನ್ಸ್‌ ಸಿಗುತ್ತಿದೆ. ಆದರೆ ಡಾಲರ್‌ ಎದುರು ರುಪಾಯಿಯ ಮೌಲ್ಯ 3-4% ಇಳಿಕೆಯಾಗಿದೆ. ಡಾಲರ್‌ ಲೆಕ್ಕದಲ್ಲಿ ಅಸಲಿ ರಿಟರ್ನ್ಸ್‌ 8 % ಆಗುತ್ತದೆ. ಆದರೆ ಇಷ್ಟಕ್ಕೇ ಮುಗಿಯುವುದಿಲ್ಲ. ಕ್ಯಾಪಿಟಲ್‌ ಗೇನ್ಸ್‌ ಆಗಿ 12%-20% ತನಕ ತೆರಿಗೆಯನ್ನೂ ಕಟ್ಟಬೇಕಾಗುತ್ತದೆ. ಇದರ ಪರಿಣಾಮ ಅಸಲಿ ರಿಟರ್ನ್ಸ್‌ 6%-7% ಇಳಿದಿದೆ.

ಮತ್ತೊಂದು ಕಡೆ ಅಮೆರಿಕದಲ್ಲಿ ರಿಸ್ಕ್‌ ಇಲ್ಲದೆ ಬಾಂಡ್‌ಗಳಲ್ಲಿ 5% ತನಕ ರಿಟರ್ನ್ಸ್‌ ಸಿಗುತ್ತಿದೆ. ಅಮೆರಿಕ, ಜಪಾನ್‌, ಯುರೋಪ್‌ನಲ್ಲಿ ಎಫ್‌ಐಐಗಳಿಗೆ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಇರುವುದಿಲ್ಲ. ಹೀಗಾಗಿ ವಿದೇಶಿ ಹೂಡಿಕೆದಾರರು ಭಾರತದಿಂದ ನಿರ್ಗಮಿಸುತ್ತಿದ್ದಾರೆ.

ಕಳೆದ ಶುಕ್ರವಾರ NSE ಸೂಚ್ಯಂಕ ನಿಫ್ಟಿಯು 102 ಅಂಕ ಕಳೆದುಕೊಂಡು 22,929 ಅಂಕಗಳಿಗೆ ದಿನದಾಟ ಮುಗಿಸಿತ್ತು. 23,000 ಅಂಕಗಳ ಮೈಲ್‌ಸ್ಟೋನ್‌ ಅನ್ನು ಕಳೆದುಕೊಂಡಿದೆ.

ಮಿರಾಯ್‌ ಅಸೆಟ್ಸ್‌ ಶೇರ್‌ಖಾನ್‌ ಸಂಸ್ಥೆಯ ತಜ್ಞರಾದ ಜತಿನ್‌ ಗೆಡಿಯಾ ಅವರೊಂದು ವಿಷಯ ತಿಳಿಸಿದ್ದಾರೆ. ಡೈಲಿ ಚಾರ್ಟ್‌ನಲ್ಲಿ ನಿಫ್ಟಿ ಕಳೆದ ಒಂದು ತಿಂಗಳಿನಲ್ಲಿ ಮೂರನೇ ಬಾರಿಗೆ 22,800 ಅಂಕಗಳ ಕೆಳಮಟ್ಟವನ್ನು ಮುಟ್ಟಿದೆ. ಹೀಗಾಗಿ, ಈ ವಾರ ನಿಫ್ಟಿಯು 22,670- 22,600 ಅಂಕಗಳ ಕೆಳ ಮಟ್ಟವನ್ನು ಮುಟ್ಟಬಹುದು. ಅಪ್‌ಸೈಡ್‌ ಬಗ್ಗೆ ಹೇಳುವುದಿದ್ದರೆ, 23,000- 23,100 ಅಂಕಗಳ ಮಟ್ಟಕ್ಕೆ ಏರಿಕೆಯಾಗಬಹುದು.

ಈ ವಾರ ಮಾರುಕಟ್ಟೆ ರಿ ಓಪನ್‌ ಆದಾಗ ಪ್ರಭಾವ ಬೀರಬಹುದಾದ ಮೊದಲ ಬೆಳವಣಿಗೆ ಯಾವುದು ಎಂದರೆ ಟ್ರಂಪ್‌ ಅವರ ರೆಸಿಪ್ರೊಕಲ್‌ ಟಾರಿಫ್.‌ ಭಾರತ, ಬ್ರೆಜಿಲ್‌, ಯುರೋಪ್‌ ಮೇಲೆ ಇದು ಪ್ರಭಾವ ಬೀರಲಿದೆ. ಏನಿದು ರೆಸಿಪ್ರೊಕಲ್‌ ಟಾರಿಫ್?‌

ಭಾರತ, ಬ್ರೆಜಿಲ್‌, ಯುರೋಪ್‌ ವಲಯದ ದೇಶಗಳು ಅಮೆರಿಕದ ವಸ್ತುಗಳಿಗೆ ಹೆಚ್ಚಿನ ಆಮದು ತೆರಿಗೆಯನ್ನು ವಿಧಿಸುತ್ತವೆ.ಇದರಿಂದ ಅಮೆರಿಕದ ಕಂಪನಿಗಳಿಗೆ ನಷ್ಟವಾಗುತ್ತಿದೆ. ಈ ದೇಶಗಳ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಕಷ್ಟವಾಗುತ್ತಿದೆ. ಆದ್ದರಿಂದ ಅಮೆರಿಕದಲ್ಲೂ ಅದೇ ಆಮದು ತೆರಿಗೆಯನ್ನು ವಿಧಿಸಲಾಗುವುದು. ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ ಎಂದು ಟ್ರಂಪ್‌ ಹೇಳುತ್ತಾರೆ. ಇದರಿಂದ ಅಮೆರಿಕದಲ್ಲೂ ಉತ್ಪನ್ನಗಳ ದರ ಹೆಚ್ಚಳವಾಗಲಿದೆ. ಮತ್ತೊಂದು ಕಡೆ ಇತರ ದೇಶಗಳೂ, ತೆರಿಗೆ ಹೊರೆಯನ್ನು ಇಳಿಸಲು, ಅಮೆರಿಕದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಇದು ಟ್ರೇಡ್‌ ವಾರ್‌ ಆಗಿ ಬದಲಾಗಬಹುದು, ಅಥವಾ ಚೌಕಾಶಿಯೂ ನಡೆಯಬಹುದು. ಕೆಲವು ವಿಶ್ಲೇಷಕರ ಪ್ರಕಾರ, ಈ ಸಂಧಾನ ಮಾತುಕತೆಗಳು ಮಾರ್ಚ್‌ ಅಂತ್ಯದ ತನಕ ನಡೆದು ಒಂದು ಇತ್ಯರ್ಥವಾಗಲಿದೆ. ಬಳಿಕ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಚೇತರಿಸಲಿವೆ. ಭಾರತವು ಅಮೆರಿಕಕ್ಕೆ ಕೃಷಿ ಉತ್ಪನ್ನಗಳು, ಜವಳಿ, ಮೆಡಿಕಲ್‌ ಡಿವೈಸ್‌ಗಳನ್ನು ಎಕ್ಸ್‌ಪೋರ್ಟ್‌ ಮಾಡುತ್ತದೆ. ಸರ್ವೀಸ್‌ ಸೆಕ್ಟರ್‌ನಲ್ಲಿ ಮುಖ್ಯವಾಗಿ ಐಟಿ ರಫ್ತು ಮಾಡುತ್ತದೆ. ಭಾರತವು ಅಮೆರಿಕದಿಂದ ಆಮದಾಗುವ ಉತ್ಪನ್ನಗಳಿಗೆ ಸಾಮಾನ್ಯವಾಗಿ 5ರಿಂದ 20% ತೆರಿಗೆ ವಿಧಿಸುತ್ತದೆ. ಹೀಗಿದ್ದರೂ, ಭಾರತವು ಅಮೆರಿಕದಿಂದ ಆಮದು ಮಾಡುವುದಕ್ಕಿಂತಲೂ, ಅಮೆರಿಕವು ಭಾರತದಿಂದ ಹೆಚ್ಚಿನ ಆಮದು ಮಾಡುತ್ತಿದೆ. ಆದ್ದರಿಂದ ಭಾರತಕ್ಕೆ ಅಂಥ ಚಿಂತೆ ಮಾಡಬೇಕಾದ ಅಗತ್ಯ ಇಲ್ಲ.

FOMC Minutes

ಅಮೆರಿಕದ ಫೆಡರಲ್‌ ರಿಸರ್ವ್‌ ತನ್ನ FOMC ಮಿನಿಟ್ಸ್‌ ವರದಿಯನ್ನು ಫೆಬ್ರವರಿ 19ರಂದು ಬಿಡುಗಡೆಗೊಳಿಸಲಿದೆ. ಟ್ರಂಪ್‌ ಅವರು ಬಡ್ಡಿ ದರ ಇಳಿಕೆಗೆ ಒತ್ತಾಯಿಸುತ್ತಿದ್ದರೂ, ಫೆಡರಲ್‌ ರಿಸರ್ವ್‌ ಅರ್ಜೆಂಟ್‌ ಇಲ್ಲ ಎನ್ನುತ್ತಿದೆ. ಕಳೆದ ಜನವರಿಯಲ್ಲಿ ಅಮೆರಿಕದ ಹಣದುಬ್ಬರ 3% ಕ್ಕೆ ಏರಿಕೆಯಾಗಿರುವುದರಿಂದ FOMC ಮಿನಿಟ್ಸ್‌ ವರದಿ ಕುತೂಹಲ ಮೂಡಿಸಿದೆ. ಬಡ್ಡಿ ದರ ಇಳಿಸುವ ಉದ್ದೇಶವನ್ನು ಫೆಡರಲ್‌ ರಿಸರ್ವ್‌ ಘೋಷಿಸಿದದರೆ, ಸ್ಟಾಕ್‌ ಮಾರ್ಕೆಟ್‌ಗಳಲ್ಲಿ ಸೂಚ್ಯಂಕಗಳು ಏರಬಹುದು.

ಅಮೆರಿಕದ ಸ್ಟಾಕ್‌ ಮಾರ್ಕೆಟ್‌

ಅಮೆರಿಕದ ಸ್ಟಾಕ್‌ ಮಾರ್ಕೆಟ್‌ನಲ್ಲಿ ಕಳೆದ ಶುಕ್ರವಾರ ಮಿಶ್ರ ಪ್ರತಿಕ್ರಿಯೆ ಇತ್ತು. ಎಸ್‌ &ಪಿ 500 ಸೂಚ್ಯಂಕ ಇಳಿಕೆಯಾದರೆ, ನಾಸ್‌ಡಾಕ್‌ ಕಂಪೊಸಿಟ್‌ ಇಂಡೆಕ್ಸ್ ಏರಿತ್ತು. ಬ್ಲೂಚಿಪ್‌ ಇಂಡೆಕ್ಸ್‌ ಡವ್‌ ಚೇತರಿಸಿತ್ತು.

ಈ ವಾರ ನಡೆಯಲಿರುವ IPOಗಳ ಬಗ್ಗೆ ನೋಡೋಣ. ಅಜೆಕ್ಸ್‌ ಎಂಜಿನಿಯರಿಂಗ್‌ ಕಂಪನಿಯ ಐಪಿಒ ಮುಗಿದಿದ್ದು, ಬಿಎಸ್‌ಇ ಮತ್ತು ಎನ್‌ ಎಸ್‌ಇನಲ್ಲಿ ಫೆಬ್ರವರಿ 17ರಂದು ಲಿಸ್ಟ್‌ ಆಗಲಿದೆ. ಇದರ ಐಪಿಒ ದರ ಪ್ರತಿ ಷೇರಿಗೆ 629 ರುಪಾಯಿ ಆಗಿದೆ. ಹೆಕ್ಸಾವೇರ್‌ ಟೆಕ್ನಾಲಜೀಸ್‌ನ ಐಪಿಒ ಮುಗಿದಿದ್ದು, ಫೆಬ್ರವರಿ 19ಕ್ಕೆ ಬಿಎಸ್‌ಇ, ಎನ್‌ಎಸ್‌ಇನಲ್ಲಿ ಲಿಸ್ಟ್‌ ಆಗಲಿದೆ.

ಎಸ್‌ಎಂಇ ವಿಭಾಗದ ಐಪಿಒದಲ್ಲಿ ಎಚ್‌ಪಿ ಟೆಲಿಕಾಂ ಇಂಡಿಯಾ ಕಂಪನಿಯ ಐಪಿಒ ಫೆಬ್ರವರಿ 20ಕ್ಕೆ ನಡೆಯಲಿದೆ. ಪ್ರತಿ ಷೇರಿನ ಐಪಿಒ ದರ 108 ರೂ. ಆಗಿದೆ.

ಮಾರ್ಚ್‌ ಅಂತ್ಯಕ್ಕೆ ಸ್ಟಾಕ್‌ ಮಾರ್ಕೆಟ್‌ನಲ್ಲಿ ಗೂಳಿಯ ಅಬ್ಬರ ಆರಂಭವಾಗಲಿದೆ ಎಂಬ ಅಭಿಪ್ರಾಯ ತಜ್ಞರಲ್ಲಿದೆ. ಇದಕ್ಕೆ ಕಾರಣವೂ ಇದೆ. ಅಮೆರಿಕ-ಚೀನಾ ಮತ್ತಿತರ ದೇಶಗಳ ನಡುವಣ ಟ್ರೇಡ್‌ ವಾರ್‌ ಮಾರ್ಚ್‌ ವೇಳೆಗೆ ಇತ್ಯರ್ಥವಾಗುವ ನಿರೀಕ್ಷೆ ಇದೆ.

ಈಗ ಸೆನ್ಸೆಕ್ಸ್‌ ಮತ್ತು ನಿಫ್ಟಿ ಕುಸಿದಿರುವುದರಿಂದ ಹೂಡಿಕೆದಾರರು ಏನು ಮಾಡಬಹುದು? ಎಡಿಲ್‌ವೈಸ್‌ ಮ್ಯೂಚುವಲ್‌ ಫಂಡ್‌ ಸಂಸ್ಥೆಯ ರಾಧಿಕಾ ಗುಪ್ತಾ ಅವರ ಸಲಹೆಯನ್ನು ಇಲ್ಲಿ ಸ್ಮರಿಸಬಹುದು.

ಈಗ ನಡೆಯುತ್ತಿರುವ ಸೂಚ್ಯಂಕಗಳ ಭಾರಿ ಇಳಿಕೆಯಿಂದ 2008 ಮತ್ತು 2020ರ ಕುಸಿತದ ದಿನಗಳು ನೆನಪಾಗಬಹುದು. ಆದರೆ ನೆನಪಿಡಿ, ಸಂಕಷ್ಟದ ಕಾಲ ಕಾಯಂ ಆಗಿ ಇರುವುದಿಲ್ಲ. ಕೆಟ್ಟ ಕಾಲ ಕೊನೆಯಾಗುತ್ತದೆ. ಆದರೆ ಉತ್ತಮ ಹೂಡಿಕೆದಾರರು ಉಳಿಯುತ್ತಾರೆ ಎನ್ನುತ್ತಾರೆ ರಾಧಿಕಾ ಗುಪ್ತಾ. ಈ ಮಾತು ರಿಟೇಲ್‌ ಹೂಡಿಕೆದಾರರಿಗೆ ತುಂಬ ಭರವಸೆಯನ್ನು ನೀಡಬಲ್ಲುದು. ಈಗಿನ ಪರಿಸ್ಥಿತಿ ನಿಮಗೆ ನರಕದಂತೆ ಕಂಡರೆ, 2008 ಮತ್ತು 2020ರಲ್ಲೂ ಇಂಥದ್ದೇ ಪರಿಸ್ಥಿತಿ ಉಂಟಾಗಿತ್ತು. ಹಾಗೂ ಅದನ್ನು ಎದುರಿಸಿ ನಾವು ಬೆಳೆದಿದ್ದೇವೆ ಎಂದು ವಿವರಿಸುತ್ತಾರೆ ಅವರು.

ಮ್ಯೂಚುವಲ್‌ ಫಂಡ್‌ ಹೂಡಿಕೆದಾರರೂ ಅಷ್ಟೇ. ಈಗ ಸಿಪ್‌ ಅನ್ನು ನಿಲ್ಲಿಸಲು ಹೀಗಬಾರದು. ಬದಲಿಗೆ ಮುಂದುವರಿಸುತ್ತಾ ಹೋಗಬೇಕು. ಸಿಪ್‌ ಕಂಪೌಂಡ್‌ನ ಬೆನಿಫಿಟ್‌ ಪಡೆಯಬೇಕು. ಷೇರುಗಳಲ್ಲಿ ಹೂಡಿಕೆ ಮಾಡುವವರು ಉತ್ತಮ ಕಂಪನಿಗಳ ಬಗ್ಗೆ ಅಧ್ಯಯನ ನಡೆಸಿ ಹೂಡಿಕೆ ಮಾಡಲೂ ಇದು ಸಕಾಲ. ಒಂದು ವೇಳೆ ಹೂಡಿಕೆಯೂ ಬೇಡ ಎಂದಿದ್ದರೆ, ಸುಮ್ಮನಿರಬಹುದು. ಅಗತ್ಯ ಇಲ್ಲದೆ ನಷ್ಟದಲ್ಲಿ ಷೇರುಗಳನ್ನು ಮಾರಾಟ ಮಾಡುವುದು ಬೇಡ ಎನ್ನುತ್ತಾರೆ ತಜ್ಞರು.

ಕಳೆದ 10 ವರ್ಷಗಳ ಸಿಪ್‌ ರಿಟರ್ನ್ಸ್‌ ಆಧಾರದಲ್ಲಿ ಹೂಡಿಕೆದಾರರಿಗೆ ಹೆಚ್ಚು ಲಾಭ ನೀಡಿರುವ ಟಾಪ್‌ 5 ಮ್ಯೂಚುವಲ್‌ ಫಂಡ್‌ಗಳು ಯಾವುದು ಎಂಬುದನ್ನು ನೋಡೋಣ.

ಕ್ವಾಂಟ್‌ ಸ್ಮಾಲ್‌ ಕ್ಯಾಪ್‌ ಫಂಡ್‌ 25.41% ರಿಟರ್ನ್ಸ್‌ ನೀಡಿದೆ.

ನಿಪ್ಪೋನ್‌ ಇಂಡಿಯಾ ಸ್ಮಾಲ್‌ ಕ್ಯಾಪ್‌ ಫಂಡ್‌ 23.71% ಆದಾಯ ಕೊಟ್ಟಿದೆ.

ಮೋತಿಲಾಲ್‌ ಓಸ್ವಾಲ್‌ ಮಿಡ್‌ ಕ್ಯಾಪ್‌ ಫಂಡ್‌ 22.56% ರಿಟರ್ನ್ಸ್‌ ನೀಡಿದೆ.

ಕ್ವಾಂಟ್‌ ELSS ಟ್ಯಾಕ್ಸ್‌ ಸೇವರ್‌ ಫಂಡ್‌ 21.41% ಆದಾಯ ನೀಡಿದೆ.

ಕ್ವಾಂಟ್‌ ಮಿಡ್‌ ಕ್ಯಾಪ್‌ ಫಂಡ್‌ 21.31% ರಿಟರ್ನ್ಸ್‌ ಕೊಟ್ಟಿದೆ.

ಈ ಸುದ್ದಿಯನ್ನೂ ಓದಿ: Stock Market: 1000 ಕ್ಕೂ ಹೆಚ್ಚು ಷೇರುಗಳ ದರ 30% ಇಳಿಕೆ, ಖರೀದಿಗೆ ಯಾವುದು ಬೆಸ್ಟ್?

ಕೊನೆಯದಾಗಿ, 2025ರ ಸೆಪ್ಟೆಂಬರ್- ಅಕ್ಟೋಬರ್‌ ವೇಳೆಗೆ ಮೊಟ್ಟ ಮೊದಲ ಮೇಡ್‌ ಇನ್‌ ಇಂಡಿಯಾ ಸೆಮಿಕಂಡಕ್ಟರ್‌ ಚಿಪ್‌ ಉತ್ಪಾದನೆಯಾಗಲಿದೆ ಎಂದು ಕೇಂದ್ರ ಐಟಿ ಸಚಿವ ಅಶ್ವಿನಿ ಕುಮಾರ್‌ ತಿಳಿಸಿದ್ದಾರೆ. ಟಾಟಾ ಎಲೆಕ್ಟ್ರಾನಿಕ್ಸ್‌ ಕಂಪನಿಯು, ತೈವಾನಿನ ಪವರ್‌ಚಿಪ್‌ ಸೆಮಿಕಂಡಕ್ಟರ್‌ ಮಾನ್ಯುಫಾಕ್ಚರಿಂಗ್‌ ಕಾರ್ಪೊರೇಷನ್‌ ಸಹಭಾಗಿತ್ವದಲ್ಲಿ, ಗುಜರಾತಿನ್‌ ಧೊಲೆರಿಯಾದಲ್ಲಿ ದೇಶದ ಮೊದಲ ಸೆಮಿಕಂಡಕ್ಟರ್‌ ಫ್ಯಾಬ್‌ ಅನ್ನು ನಿರ್ಮಿಸುತ್ತಿದೆ.