Stock Market: ಹೂಡಿಕೆದಾರರಿಗೆ ಶುಭ ಮಂಗಳವಾರ; ಸೆನ್ಸೆಕ್ಸ್ 1,500 ಪಾಯಿಂಟ್ ಹೆಚ್ಚಳ: ಗೂಳಿ ನೆಗೆತಕ್ಕೆ ಕಾರಣವೇನು?
Share Market: ಕೆಲವು ದಿನಗಳ ಹಿಂದೆ ಸೊರಗಿದ್ದ ಷೇರು ಮಾರುಕಟ್ಟೆ ಇದೀಗ ಚಿಗಿತುಕೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಟೋ ಮೊಬೈಲ್ ಕ್ಷೇತ್ರಕ್ಕೆ ಸುಂಕದಿಂದ ರಿಯಾಯಿತಿ ನೀಡುವ ಸುಳಿವು ಪ್ರಕಟಿಸಿದ್ದರಿಂದ ಭಾರತೀಯ ಷೇರುಗಳು ಮಂಗಳವಾರ (ಏ. 15) ಬೆಳಗ್ಗೆ ಶೇ. 2ಕ್ಕಿಂತ ಹೆಚ್ಚು ಏರಿಕೆ ಕಂಡವು.

ಸಾಂದರ್ಭಿಕ ಚಿತ್ರ.

ಮುಂಬೈ: ಕೆಲವು ದಿನಗಳ ಹಿಂದೆ ಸೊರಗಿದ್ದ ಷೇರು ಮಾರುಕಟ್ಟೆ (Stock Market) ಇದೀಗ ಚಿಗಿತುಕೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆಟೋ ಮೊಬೈಲ್ ಕ್ಷೇತ್ರಕ್ಕೆ ಸುಂಕದಿಂದ ರಿಯಾಯಿತಿ ನೀಡುವ ಸುಳಿವು ಪ್ರಕಟಿಸಿದ್ದರಿಂದ ಭಾರತೀಯ ಷೇರುಗಳು ಮಂಗಳವಾರ (ಏ. 15) ಬೆಳಗ್ಗೆ ಶೇ. 2ಕ್ಕಿಂತ ಹೆಚ್ಚು ಏರಿಕೆ ಕಂಡವು. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಸೆನ್ಸೆಕ್ಸ್ 1,500 ಪಾಯಿಂಟ್‌ಗಿಂತಲೂ ಅಧಿಕ ಏರಿಕೆ ಕಂಡರೆ, ನಿಫ್ಟಿ ಬರೋಬ್ಬರಿ 540 ಅಂಕಗಳಷ್ಟು ಹೆಚ್ಚಳ ಕಂಡು 23,000 ಮಟ್ಟದ ಗಡಿ ದಾಟಿತು. ಆದಾಗ್ಯೂ ಜಾಗತಿಕ ಮಾರುಕಟ್ಟೆಗಳಲ್ಲಿ ಚಂಚಲತೆ ಮುಂದುವರಿದಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕದ ಘೋಷಣೆಯ ನಂತರ ಉಂಟಾಗಿದ್ದ ನಷ್ಟವನ್ನು ನಿಫ್ಟಿ 50 ಹಾಗೂ ಸೆನ್ಸೆಕ್ಸ್ ಮರಳಿ ಪಡೆದುಕೊಂಡಿವೆ. ಬೆಳಗ್ಗೆ 10 ಗಂಟೆ ಸುಮಾರಿಗೆ, ಬಿಎಸ್ಇ ಸೆನ್ಸೆಕ್ಸ್ 1,600 ಪಾಯಿಂಟ್ ಅಥವಾ ಶೇ. 2ರಷ್ಟು ಏರಿಕೆಯಾಗಿ 76,800ಕ್ಕೆ ತಲುಪಿದ್ದರೆ, ನಿಫ್ಟಿ 50 450 ಪಾಯಿಂಟ್ ಅಥವಾ ಶೇ. 2ರಷ್ಟು ಏರಿಕೆ ಕಂಡು 23,300 ಪಾಯಿಂಟ್ ದಾಟಿದೆ.
#WATCH | Sensex opens in green; currently trading at 76,712.71, up by 1575.45 points (+2.07%)
— ANI (@ANI) April 15, 2025
(Visuals from outside Bombay Stock Exchange) pic.twitter.com/TlaHXWU8V3
ಈ ಸುದ್ದಿಯನ್ನೂ ಓದಿ: Stock Market: ಷೇರು ಮಾರುಕಟ್ಟೆ ಇಂಡೆಕ್ಸ್ ಕುಸಿತದ ವೇಳೆ ಯಾವ ಷೇರು ಬೆಸ್ಟ್?
ಮಾರುಕಟ್ಟೆ ಚೇತರಿಕೆಗೆ ಕಾರಣವೇನು?
ಆಟೋ ಷೇರುಗಳ ಮೌಲ್ಯ ಏರಿಕೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಮದು ಸುಂಕದಿಂದ ತೊಂದರೆಗೀಡಾಗಿದ್ದ ಕಾರು ತಯಾರಕರಿಗೆ ವಿನಾಯಿತಿ ಘೋಷಿಸಿದ್ದಾರೆ. ಇದರಿಂದ ಆಟೋ ಷೇರುಗಳು ಮಂಗಳವಾರ ಹೆಚ್ಚಿನ ಲಾಭ ಗಳಿಸಿದವು. ಆಟೋ ವಲಯವು ಬೆಳಗ್ಗೆ ವಹಿವಾಟಿನಲ್ಲಿ ಸುಮಾರು ಶೇ. 3ರಷ್ಟು ಏರಿಕೆ ಕಂಡಿದೆ. ಟಾಟಾ ಮೋಟಾರ್ಸ್ ಸೆನ್ಸೆಕ್ಸ್‌ನಲ್ಲಿ ಲಾಭ ಗಳಿಸಿದ್ದು, ಆರಂಭಿಕ ವಹಿವಾಟಿನಲ್ಲಿ ಶೇ. 5.03 ಜಿಗಿತವಾಗಿದೆ. ಮಹೀಂದ್ರಾ & ಮಹೀಂದ್ರಾದಂತಹ ಇತರ ಆಟೋ ಷೇರುಗಳು ಸಹ ಚೇತರಿಕೆ ಕಂಡಿವೆ. ಇದು ಶೇ. 3.74ರಷ್ಟು ಹೆಚ್ಚಾಗಿದೆ.
ಲಾಭ ಗಳಿಸಿದ ಬ್ಯಾಂಕಿಂಗ್ ಷೇರುಗಳು: ಬ್ಯಾಂಕಿಂಗ್ ಷೇರುಗಳು ಕೂಡ ಮಾರುಕಟ್ಟೆಯ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಎಚ್‌ಡಿಎಫ್‌ಸಿ ಬ್ಯಾಂಕ್ ಶೇ. 3.62ರಷ್ಟು ಏರಿಕೆ ಕಂಡರೆ, ಐಸಿಐಸಿಐ ಬ್ಯಾಂಕ್ ಶೇ. 2.65ರಷ್ಟು ಪ್ರಗತಿ ಸಾಧಿಸಿದೆ. ಲಾರ್ಸೆನ್ & ಟೂಬ್ರೊ (L&T) ಕೂಡ ಶೇ. 3.97ರಷ್ಟು ಏರಿಕೆಯನ್ನು ಕಂಡಿದ್ದು, ಇದು ಕೂಡ ಸೆನ್ಸೆಕ್ಸ್ ಗಣನೀಯ ಕೊಡುಗೆ ನೀಡಿದೆ.
90 ದಿನಗಳ ಸುಂಕ ತಡೆ: ಡೊನಾಲ್ಡ್ ಟ್ರಂಪ್ ಸದ್ಯ ಪ್ರತಿಸುಂಕಕ್ಕೆ 90 ದಿನಗಳ ತಾತ್ಕಾಲಿಕ ತಡೆ ನೀಡಿರುವುದರಿಂದ ಮಾರುಕಟ್ಟೆಗಳಿಗೆ ಉತ್ತೇಜನ ಸಿಕ್ಕಿದೆ. ಅಲ್ಲದೆ ಭಾರತೀಯ ರಿಸರ್ವ್ ಬ್ಯಾಂಕ್ ಸಾಲದ ಬಡ್ಡಿ ದರವನ್ನು 25 ಮೂಲಾಂಶಗಳಷ್ಟು ಕಡಿತಗೊಳಿಸಿ ಶೇ. 6ಕ್ಕೆ ಇಳಿಸಿದ್ದು ಕೂಡ ಪ್ಲಸ್ ಪಾಯಿಂಟ್ ಆಗಿದೆ.
ಅತಿ ಹೆಚ್ಚು ಲಾಭ ಪಡೆದವರು
ಬಿಎಸ್ಇ ಸೆನ್ಸೆಕ್ಸ್ ಲಾಭದೊಂದಿಗೆ ವಹಿವಾಟು ಆರಂಭಿಸಿತು. ಸೆನ್ಸೆಕ್ಸ್ ಷೇರುಗಳ ಪೈಕಿ ಟಾಟಾ ಮೋಟಾರ್ಸ್ ಮುನ್ನಡೆ ಸಾಧಿಸಿದ್ದು, ಆರಂಭಿಕ ವಹಿವಾಟಿನಲ್ಲಿ ಶೇ. 5.03 ಏರಿಕೆಯಾಗಿದೆ. ಲಾರ್ಸೆನ್ & ಟೂಬ್ರೊ ಶೇ. 3.97ರಷ್ಟು ಏರಿಕೆ ಕಂಡಿದೆ. ಮಹೀಂದ್ರಾ & ಮಹೀಂದ್ರಾ ಶೇ. 3.74ರಷ್ಟು, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ. 3.62ರಷ್ಟು ಹೆಚ್ಚಾಗಿದೆ. ಐಸಿಐಸಿಐ ಬ್ಯಾಂಕ್ ಕೂಡ ಶೇ. 2.65 ವೃದ್ಧಿಯೊಂದಿಗೆ ಲಾಭ ಗಳಿಸಿದ ಅಗ್ರ 5 ಷೇರುಗಳಲ್ಲಿ ಒಂದಾಗಿದೆ. ಈ ಷೇರುಗಳನ್ನು ಮಾರುಕಟ್ಟೆ ಹೆವಿವೇಯ್ಟ್‌ಗಳೆಂದು ಪರಿಗಣಿಸಲಾಗಿದ್ದು, ಸೆನ್ಸೆಕ್ಸ್‌ನ ಒಟ್ಟಾರೆ ಏರಿಕೆಗೆ ಗಮನಾರ್ಹ ಕೊಡುಗೆ ನೀಡಿವೆ.
ನಷ್ಟ ಕಂಡ ಷೇರುಗಳು
ಮಾರುಕಟ್ಟೆ ಏರಿಕೆಯ ಹೊರತಾಗಿಯೂ ಕೆಲವು ಷೇರುಗಳು ಕುಸಿತವನ್ನು ಕಂಡವು. ಸೆನ್ಸೆಕ್ಸ್ ಷೇರುಗಳಲ್ಲಿ ನೆಸ್ಲೆ ಇಂಡಿಯಾ 0.33ರಷ್ಟು ಕುಸಿತ ಕಂಡಿದೆ. ಐಟಿಸಿ ಶೇ. 0.13ರಷ್ಟು ಇಳಿಕೆ ಕಂಡರೆ, ಹಿಂದೂಸ್ತಾನ್ ಯೂನಿಲಿವರ್ ಶೇ. 0.11ರಷ್ಟು ಕುಸಿದಿದೆ.