- ಕೇಶವ ಪ್ರಸಾದ್ ಬಿ.
ಮುಂಬೈ, ಅ. 23: ಸೆನ್ಸೆಕ್ಸ್ (Sensex) ಮತ್ತು ನಿಫ್ಟಿ (Nifty) ಎರಡೂ ಸೂಚ್ಯಂಕಗಳು ಗುರುವಾರ ತೀವ್ರ ಏರಿಳಿತವನ್ನು ದಾಖಲಿಸಿವೆ. ಸೆನ್ಸೆಕ್ಸ್ 85,000 ಮತ್ತು ನಿಫ್ಟಿ 26,000 ಅಂಕಗಳ ಅಂಚಿನಲ್ಲಿದ್ದು, ಹೂಡಿಕೆದಾರರ ಉತ್ಸಾಹ ಹೆಚ್ಚಳವಾಗಿದೆ (Share Market). ವಿದೇಶಿ ಹೂಡಿಕೆಯ ಒಳಹರಿವು ಕೂಡ ಏರಿಕೆಯಾಗಿದೆ. ದೀಪಾವಳಿಯ ಸಂದರ್ಭ ಮಾರುಕಟ್ಟೆಯಲ್ಲಿ ನಡೆದಿರುವ 6 ಲಕ್ಷ ಕೋಟಿ ರುಪಾಯಿಗೂ ಅಧಿಕ ವಹಿವಾಟು ಕೂಡ ಸಕಾರಾತ್ಮಕ ಪ್ರಭಾವ ಬೀರಿದೆ. ಏಕೆಂದರೆ ಕಾರ್ಪೊರೇಟ್ ವಲಯದ ಕಂಪನಿಗಳ ಆದಾಯ ಮತ್ತು ಲಾಭಾಂಶ ಏರಿಕೆಯಾಗುವ ನಿರೀಕ್ಷೆ ಉಂಟಾಗಿದೆ.
ಇತ್ತೀಚಿನ ಜಿಎಸ್‌ಟಿ ಕಡಿತ, ಪಾಲಿಸಿ ಸಪೋರ್ಟ್ ಕೂಡ 2025-26ರ ದ್ವಿತೀಯಾರ್ಧದಲ್ಲಿ ಕಾರ್ಪೊರೇಟ್ ಕಂಪನಿಗಳ ಲಾಭವನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಸ್ಟಾಕ್ ಮಾರ್ಕೆಟ್ ಸೆಂಟಿಮೆಂಟ್ ಇವತ್ತು ಅತ್ಯಂತ ಸಕಾರಾತ್ಮಕ ಮತ್ತು ಪ್ರಬಲವಾಗಿತ್ತು. ಐಟಿ, ಖಾಸಗಿ ಬ್ಯಾಂಕ್, ಎಫ್‌ಎಂಸಿಜಿ, ಫಾರ್ಮಾ, ಆಟೊಮೊಬೈಲ್, ರಿಯಾಲ್ಟಿ ವಲಯದ ಷೇರುಗಳು ಲಾಭ ಗಳಿಸಿತು. ಅಂತಿಮವಾಗಿ ಇವತ್ತು ಸೆನ್ಸೆಕ್ಸ್ 130 ಅಂಕ ಏರಿಕೆಯಾಗಿ 84,556ಕ್ಕೆ ಸ್ಥಿರವಾಯಿತು. ನಿಫ್ಟಿ 23 ಅಂಕ ಏರಿಕೆಯಾಗಿ 25,891ಕ್ಕೆ ವಹಿವಾಟು ಮುಕ್ತಾಯಗೊಳಿಸಿತು. ಇವತ್ತು ಇನ್ಫೋಸಿಸ್, ಎಚ್‌ಸಿಎಲ್ ಟೆಕ್ನಾಲಜೀಸ್, ಟಾಟಾ ಸ್ಟೀಲ್, ಎಕ್ಸಿಸ್ ಬ್ಯಾಂಕ್, ಟಿಸಿಎಸ್, ಟೆಕ್ ಮಹೀಂದ್ರಾ ಷೇರುಗಳ ದರ ಏರಿಕೆ ಕಂಡಿತು. ಒಂದು ಹಂತದಲ್ಲಿ ಸೆನ್ಸೆಕ್ಸ್ 800 ಅಂಕ ಏರಿದ್ದರೂ, ಪ್ರಾಫಿಟ್ ಬುಕಿಂಗ್ ಪರಿಣಾಮ ಇಳಿಕೆಯಾಯಿತು. ಬ್ಯಾಂಕ್ ನಿಫ್ಟಿ 400 ಅಂಕ ಕಳೆದುಕೊಂಡು 58,161ರಲ್ಲಿ ವಹಿವಾಟು ನಡೆಸಿತು. ಬ್ರೆಂಟ್ ಕಚ್ಚಾ ತೈಲ ದರ ಬ್ಯಾರಲ್‌ಗೆ 64 ಡಾಲರ್‌ಗೆ ಏರಿತು.
ಈ ಸುದ್ದಿಯನ್ನೂ ಓದಿ: ಅಮೆರಿಕ-ಚೀನಾ ವಾಣಿಜ್ಯ ಸಂಘರ್ಷ ನವೆಂಬರ್ 1ರಿಂದ ಮತ್ತಷ್ಟು ತೀವ್ರ?
ನಿಫ್ಟಿ 50 ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 26,277 ಅಂಕಗಳ ದಾಖಲೆಯ ಎತ್ತರಕ್ಕೇರಿತ್ತು. ಸೆನ್ಸೆಕ್ಸ್ ಅದೇ ಸಂದರ್ಭ 85,978 ಅಂಕಗಳ ಎತ್ತರದಲ್ಲಿತ್ತು.
ಮಾರುಕಟ್ಟೆ ಮೇಲೆ ಪ್ರಭಾವ ಬೀರಿದ ಅಂಶಗಳು
- ಅಮೆರಿಕ-ಭಾರತ ವಾಣಿಜ್ಯ ಒಪ್ಪಂದ ಸಾಧ್ಯತೆ: ಮಾಧ್ಯಮ ವರದುಗಳ ಪ್ರಕಾರ ಭಾರತ ಮತ್ತು ಅಮೆರಿಕ ನಡುವೆ ವಾಣಿಜ್ಯ ಒಪ್ಪಂದ ನಡೆಯಲಿದ್ದು, ಭಾರತದಿಂದ ಅಮೆರಿಕಕ್ಕೆ ವಸ್ತುಗಳ ರಫ್ತಿನ ಮೇಲೆ ಈಗ ಇರುವ 50% ಸುಂಕವು 15-16%ಕ್ಕೆ ಇಳಿಕೆಯಾಗುವ ನಿರೀಕ್ಷೆ ಇದೆ. ಭಾರತವೂ ರಷ್ಯಾದಿಂದ ಕಚ್ಚಾ ತೈಲ ಆಮದನ್ನು ಕ್ರಮೇಣ ಕಡಿತಗೊಳಿಸುವ ಸಾಧ್ಯತೆ ಇದೆ. ಇಂಧನ, ಕೃಷಿ ಕ್ಷೇತ್ರ ಮಾತುಕತೆಯ ಪ್ರಧಾನ ಭಾಗವಾಗಿದೆ.
- ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳ ಖರೀದಿ ಭರಾಟೆ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸತತ ಐದನೇ ದಿನ ಖರೀದಿದಾರರಾಗಿದ್ದಾರೆ.
- ಡಾಲರ್ ಎದುರು ರುಪಾಯಿ ಬಲವರ್ಧನೆ
- ಕಂಪನಿಗಳ ಆದಾಯ ಗಳಿಕೆ: ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಾರ್ಪೊರೇಟ್ ಕಂಪನಿಗಳ ಆದಾಯ ಸುಧಾರಿಸಿದೆ. ಮುಂಬರುವ ತಿಂಗಳಲ್ಲಿ ಮತ್ತಷ್ಟು ಸುಧಾರಿಸುವ ನಿರೀಕ್ಷೆ ಇದೆ. ಮಾರುಕಟ್ಟೆಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
- ಟೆಕ್ನಿಕಲ್ ಸಪೋರ್ಟ್
- ಇಂಡಿಯಾ ವಿಕ್ಸ್ 4% ಏರಿಕೆ
- ಹೂಡಿಕೆದಾರರಿಂದ ಪ್ರಾಫಿಟ್ ಬುಕಿಂಗ್
ಭಾರತೀಯ ಐಟಿ ಕಂಪನಿಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆ ಹಿಂತೆಗೆದುಕೊಳ್ಳುತ್ತಿದ್ದರೆ, ದೇಶೀಯ ಹೂಡಿಕೆದಾರರು ಇನ್ವೆಸ್ಟ್ ಮಾಡುತ್ತಿದ್ದಾರೆ. ಇನ್ಫೋಸಿಸ್, ಟಿಸಿಎಸ್, ಎಚ್ ಸಿಎಲ್ ಟೆಕ್, ಟೆಕ್ ಮಹೀಂದ್ರಾ ಷೇರುಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆ ಹಿಂತೆಗೆದುಕೊಳ್ಳುತ್ತಿದ್ದಾರೆ. ಆದರೆ ದೇಶೀಯ ಹೂಡಿಕೆದಾರರು ಅವುಗಳನ್ನು ಖರೀದಿಸುತ್ತಿದ್ದಾರೆ.
ಸತತ 6 ದಿನಗಳಿಂದ ಷೇರು ಮಾರುಕಟ್ಟೆಯಲ್ಲಿ ಗೂಳಿಯ ಅಬ್ಬರ ಇದೆ. ಹೀಗಿದ್ದರೂ, ಮಧ್ಯಂತರದಲ್ಲಿ ಸೆನ್ಸೆಕ್ಸ್ 700 ಅಂಕಗಳ ಏರಿಕೆ ದಾಖಲಿಸಿತ್ತು. ಆ ಎತ್ತರದಿಂದ ಸೆನ್ಸೆಕ್ಸ್ ಇಳಿಕೆಯನ್ನೂ ಕಂಡಿತು. ಮಧ್ಯಂತರ ವಹಿವಾಟಿನಲ್ಲಿ ಸೆನ್ಸೆಕ್ಸ್ 85,290 ಅಂಕಗಳಿಗೆ ಏರಿತ್ತು. ನಿಫ್ಟಿ ಒಂದು ಹಂತದಲ್ಲಿ 26,104 ಕ್ಕೆ ಏರಿದರೂ, ಕೊನೆಯಲ್ಲಿ 25,891ಕ್ಕೆ ಇಳಿಯಿತು.