ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಭಾರತ-ಪಾಕಿಸ್ತಾನ ಉದ್ವಿಗ್ನ ಪರಿಸ್ಥಿತಿ; ಸೆನ್ಸೆಕ್ಸ್‌ 880 ಅಂಕ ಕುಸಿತ

Share Market: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್‌ 880 ಕುಸಿದು 79,454ಕ್ಕೆ ಸ್ಥಿರವಾಯಿತು. ನಿಫ್ಟಿ 265 ಅಂಕ ಇಳಿದು 24,008ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು.

ಭಾರತ-ಪಾಕಿಸ್ತಾನ ಉದ್ವಿಗ್ನ ಪರಿಸ್ಥಿತಿ; ಸೆನ್ಸೆಕ್ಸ್‌ 880  ಅಂಕ ಕುಸಿತ

ಸಾಂದರ್ಭಿಕ ಚಿತ್ರ.

Profile Ramesh B May 9, 2025 8:32 PM

ಕೇಶವ ಪ್ರಸಾದ ಬಿ.

ಮುಂಬೈ: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಂಬೈ ಷೇರು ಮಾರುಕಟ್ಟೆ (Stock Market) ಸೂಚ್ಯಂಕ ಸೆನ್ಸೆಕ್ಸ್‌ (Sensex) 880 ಕುಸಿದು 79,454ಕ್ಕೆ ಸ್ಥಿರವಾಯಿತು. ನಿಫ್ಟಿ (Nifty) 265 ಅಂಕ ಇಳಿದು 24,008ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಗುರುವಾರ ರಾತ್ರಿ ಗಡಿಯಲ್ಲಿ ಪಾಕ್‌ ಸೇನಾ ಪಡೆಯ ದಾಳಿಗೆ ಪ್ರತಿಯಾಗಿ ಭಾರತೀಯ ಸೇನಾ ಪಡೆ ತೀವ್ರವಾದ ಸಂಘರ್ಷ ನಡೆಸಿದ್ದು, ಪಾಕಿಸ್ತಾನ ತತ್ತರಿಸಿದೆ. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಷೇರು ಮಾರುಕಟ್ಟೆ ಸೂಕ್ಷ್ಮ ಸಂವೇದಿಯಾಗಿ ಸ್ಪಂದಿಸುತ್ತದೆ. ಹೀಗಿದ್ದರೂ, ಹಲವು ಷೇರುಗಳು ಲಾಭವನ್ನೂ ಗಳಿಸಿವೆ. ಸ್ಟಾಕ್‌ ಮಾರ್ಕೆಟ್‌ ಸೂಚ್ಯಂಕ ಕುಸಿದರೂ, ಎಲ್ಲ ಷೇರುಗಳೂ ನಷ್ಟದಲ್ಲಿ ಇರುವುದಿಲ್ಲ. ಉದಾಹರಣೆಗೆ L&T, ಟೈಟನ್‌ ಷೇರುಗಳ ದರ ಲಾಭ ಗಳಿಸಿತು.

ಸ್ಟಾಕ್‌ ಮಾರ್ಕೆಟ್ ಮುಖ್ಯಾಂಶಗಳು

  • ಇಂಡಿಯಾ ವಿಕ್ಸ್‌ 7% ಏರಿಕೆ
  • ಏರ್‌ಲೈನ್‌, ಟೂರಿಸಂ, ರಿಯಾಲ್ಟಿ ಮತ್ತು ಏವಿಯೇಶನ್‌ ಸ್ಟಾಕ್ಸ್‌ಗಳಿಗೆ ಒತ್ತಡ
  • ಡಿಫೆನ್ಸ್‌, ಡ್ರೋನ್‌ ಕಂಪನಿಗಳ ಷೇರುಗಳ ಏರಿಕೆ
  • ಎಚ್‌ಎಎಲ್‌, ಭಾರತ್‌ ಫೋರ್ಜ್‌ ತಲಾ 4% ಹೆಚ್ಚಳ
  • ಹೈಟೆಕ್‌ ಡ್ರೋನ್‌ ತಯಾರಿಸುವ ಕಂಪನಿಗಳ ಷೇರು 15% ಹೆಚ್ಚಳ
  • ಡಿಫೆನ್ಸ್‌ ಸ್ಟಾಕ್ಸ್‌ 4% ಏರಿಕೆ
  • L&T ಷೇರು ದರ 4% ಹೆಚ್ಚಳ, ಕಂಪನಿಯ ಲಾಭ 5,497 ಕೋಟಿ ರೂ.ಗೆ ಏರಿಕೆ
  • ಎಂಸಿಎಕ್ಸ್‌ ಷೇರು 7% ಇಳಿಕೆ
  • ಕಲ್ಯಾಣ್‌ ಜ್ಯುವೆಲರ್ಸ್‌ ಷೇರು 3% ಏರಿಕೆ

L&T ಷೇರಿನ ಈಗಿನ ದರ: 3,441 ರೂ.

ಡಿವಿಡೆಂಡ್‌ ಘೋಷಣೆ: 34 ರೂ.

ರೆಕಾರ್ಡ್‌ ದಿನಾಂಕ: 2025ರ ಜೂನ್‌ 3.



ಲಾರ್ಸನ್‌ & ಟೂಬ್ರೊ ಷೇರಿನ ದರದಲ್ಲಿ ಶುಕ್ರವಾರ 3.47% ಏರಿಕೆ ದಾಖಲಾಯಿತು. 3,441 ರೂ.ಗೆ ಮಧ್ಯಂತರದಲ್ಲಿ ಏರಿತು. ಕಳೆದ ಜನವರಿ-ಮಾರ್ಚ್‌ ತ್ರೈಮಾಸಿಕದಲ್ಲಿ ಎಲ್‌ & ಟಿ ಕಂಪನಿಯು 5,497 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, 25% ಏರಿಕೆ ದಾಖಲಿಸಿದೆ. ಇದು ಸಕಾರಾತ್ಮಕ ಪ್ರಭಾವ ಬೀರಿತು. ಕಂಪನಿಯ ಆದಾಯದಲ್ಲಿ 11% ಏರಿಕೆಯಾಗಿದ್ದು, 67,079 ಕೋಟಿ ರೂ.ಗೆ ಏರಿದೆ.

ಎಲ್‌ & ಟಿ ಪ್ರತಿ ಷೇರಿಗೆ 34 ರೂ. ಡಿವಿಡೆಂಡ್‌ ಘೋಷಿಸಿದೆ. ಇದರ ರೆಕಾರ್ಡ್‌ ದಿನಾಂಕ ಜೂನ್‌ 3 ಆಗಿದೆ. ಎಲ್‌ & ಟಿ ಕಂಪನಿಯು ಮಾರ್ಚ್‌ 31ರ ವೇಳೆಗೆ 3.5 ಲಕ್ಷ ಕೋಟಿ ರೂ.ಯ ಆರ್ಡರ್‌ ಗಳಿಸಿದ್ದು, 18% ಏರಿಕೆ ದಾಖಲಿಸಿದೆ.

ಟೈಟನ್‌ ಷೇರಿನ ಈಗಿನ ದರ : 3,492 ರೂ.

ಟಾರ್ಗೆಟ್‌ ಪ್ರೈಸ್:‌ (ಟ್ರೆಂಡ್‌ ಲೈನ್‌ ಪ್ರಕಾರ): 3,690 ರೂ.

ಡಿವಿಡೆಂಡ್‌ ಘೋಷಣೆ : ಪ್ರತಿ ಷೇರಿಗೆ 11 ರೂ.

ಈ ಸುದ್ದಿಯನ್ನೂ ಓದಿ: Stock market: ಆಪರೇಷನ್‌ ಸಿಂಧೂರ; ಸೆನ್ಸೆಕ್ಸ್‌, ನಿಫ್ಟಿ ಸ್ಥಿರ!

ನಷ್ಟಕ್ಕೀಡಾದ ಷೇರುಗಳು

ಥಾಮಸ್‌ ಕುಕ್‌: 127 ರೂ. (3.48%)

ಇಂಡಿಯನ್‌ ಹೋಟೆಲ್ಸ್‌ ಕಂಪನಿ: 710 ರೂ. (5.25%)

ತಾಜ್‌ ಜಿವಿಕೆ ಹೋಟೆಲ್ಸ್‌ & ರೆಸಾರ್ಟ್ಸ್‌: 355 ರೂ. (4.36%)

ಲೆಮೆನ್‌ ಟ್ರೀ ಹೋಟೆಲ್ಸ್‌: 129 ರೂ. (3.34%)

ಇಂಡಿಯಾ ಟೂರಿಸಂ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌: 522 ರೂ.(3.38%)

ಭಾರತ ಮತ್ತು ಪಾಕಿಸ್ತಾನದ ಸಂಘರ್ಷದಿಂದ ಭಾರತಕ್ಕೆ ವಿದೇಶಿ ಹೂಡಿಕೆಯ ಒಳ ಹರಿವು ಕಡಿಮೆಯಾದೀತೆ? ಎಂಬ ಪ್ರಶ್ನೆ ಇದೆ. ಆದರೆ ತಜ್ಞರ ಪ್ರಕಾರ ಭಾರತದ ಇಕಾನಮಿ 4 ಲಕ್ಷ ಕೋಟಿ ಡಾಲರ್‌ ಗಡಿ ದಾಟಿದೆ. ವಿಶ್ವದಲ್ಲೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಾಗಿದೆ. ಈ ವರ್ಷ ಜಪಾನನ್ನು ಹಿಂದಿಕ್ಕೆ ನಾಲ್ಕನೇ ಅತಿ ದೊಡ್ಡ ಇಕಾನಮಿಯಾಗಲಿದೆ. ಇನ್ನೆರಡು ವರ್ಷದಲ್ಲಿ ಜರ್ಮನಿಯನ್ನೂ ಹಿಂದಿಕ್ಕಿ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ. ಭಾರತ ಪ್ರಬಲ ದೇಶವಾಗಿರುವುದರಿಂದ ಪಾಕಿಸ್ತಾನದ ಜತೆಗಿನ ಸಂಘರ್ಷದ ಹೊರತಾಗಿಯೂ ವಿದೇಶಿ ಹೂಡಿಕೆಯ ಒಳ ಹರಿವಿಗೆ ಅಂಥ ತೊಂದರೆ ಆಗದು. ತಾತ್ಕಾಲಿಕವಾಗಿ ಇಳಿಕೆಯಾದರೂ ಮತ್ತೆ ಏರಿಕೆಯಾಗಬಹುದು.

ಏಪ್ರಿಲ್‌ ಮಧ್ಯ ಭಾಗದಿಂದ ಕೇವಲ 16 ದಿನಗಳ ಟ್ರೇಡಿಂಗ್‌ ಸೆಷನ್ಸ್‌ನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 50,000 ಕೋಟಿ ರೂ. ಹೂಡಿಕೆಯನ್ನು ಮಾಡಿದ್ದರು. ಈಗ ಮೇ 8-9ರ ರಾತ್ರಿಯಲ್ಲಿ ಪಾಕಿಸ್ತಾನದ ಡ್ರೋನ್‌ ದಾಳಿಗೆ ಪ್ರತಿಯಾಗಿ ಭಾರತ ಪ್ರತಿ ದಾಳಿಯನ್ನೂ ತೀವ್ರಗೊಳಿಸಿದೆ.

ಸಾಮಾನ್ಯ ಸಂದರ್ಭವಾಗಿದ್ದರೆ ಇಂಥ ಸನ್ನಿವೇಶದಲ್ಲಿ ಮಾರ್ಕೆಟ್‌ ಸೂಚ್ಯಂಕಗಳು ತೀವ್ರ ಕುಸಿತಕ್ಕೀಡಾಗುತ್ತಿತ್ತು ಎಂಬುದರಲ್ಲಿ ಸಂದೇಹವೇ ಬೇಡ. ಆದರೆ ಹಾಗೆ ಆಗಿಲ್ಲ. ಏಕೆಂದರೆ ಪಾಕಿಸ್ತಾನದ ವಿರುದ್ಧದ ಸಂಘರ್ಷದಲ್ಲಿ ಭಾರತ ಎಲ್ಲ ಆಯಾಮಗಳಿಂದಲೂ ಮೇಲುಗೈ ಸಾಧಿಸಿದೆ. ಆದ್ದರಿಂದ ಪೂರ್ಣ ಪ್ರಮಾಣದ ಯುದ್ಧ ನಡೆದರೂ, ಭಾರತಕ್ಕಿಂತ ಹೆಚ್ಚು ನಷ್ಟ ಆಗೋದು ಪಾಕಿಸ್ತಾನಕ್ಕೆ. ಅದರ ಇಕಾನಮಿಗೆ ಮತ್ತು ಅದರ ಸ್ಟಾಕ್‌ ಮಾರುಕಟ್ಟೆಗೇ ಹೊರತು ಭಾರತಕ್ಕಲ್ಲ.

ಎರಡನೆಯದಾಗಿ ಭಾರತದ ಆರ್ಥಿಕತೆಯ ಬೆಳವಣಿಗೆ, ಸಾಧ್ಯತೆಗಳ ಹಿನ್ನೆಲೆಯಲ್ಲಿ ವಿದೇಶಿ ಹೂಡಿಕೆಯ ಒಳಹರಿವು ಮತ್ತೆ ಬರುತ್ತಿದೆ. ದೇಶೀಯ ಹೂಡಿಕೆದಾರರೂ ಅಚಲವಾಗಿ ಹೂಡಿಕೆ ಮಾಡುತ್ತಿದ್ದಾರೆ. ಡಾಲರ್‌ ಅಬ್ಬರ ಕಡಿಮೆಯಾಗಿರುವುದರಿಂದ ಇಂಡಿಯನ್‌ ಮಾರ್ಕೆಟ್‌ಗೆ ಒಳ್ಳೆಯದು ಎನ್ನುತ್ತಾರೆ ತಜ್ಞರು.

ಈಗ ಸುದ್ದಿಯಲ್ಲಿರುವ ಷೇರುಗಳ ಬಗ್ಗೆ ನೋಡೋಣ:

ಮೊದಲನೆಯದಾಗಿ ಬಿಎಸ್‌ಇ ಷೇರು ದರ ಏಕೆ ಏರಿಕೆಯಾಗುತ್ತಿದೆ? ಷೇರು ಮಾರುಕಟ್ಟೆಯಲ್ಲಿ ಕಳೆದೊಂದು ವರ್ಷದಿಂದೀಚೆಗೆ ಏರಿಕೆಯ ಹಾದಿಯಲ್ಲಿರುವ ಷೇರುಗಳಲ್ಲಿ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಷೇರು ಕೂಡ ಒಂದು.

ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಕಳೆದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ಪ್ರಕಟಿಸಿದ್ದು, ಬಳಿಕ ಷೇರಿನ ದರದಲ್ಲಿ 10% ಹೆಚ್ಚಳವಾಗಿದೆ. ಕಂಪನಿಯ ಆದಾಯದಲ್ಲಿ 75% ಹೆಚ್ಚಳವಾಗಿದೆ. ಬಿಎಸ್‌ಇ ಪ್ರತಿ ಷೇರಿಗೆ 15 ರೂ. ಡಿವಿಡೆಂಡ್‌ ಘೋಷಿಸಿದ್ದು, ಇದರ ರೆಕಾರ್ಡ್‌ ದಿನಾಂಕ ಮೇ 14 ಆಗಿದೆ.

ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಮುಂಬೈಯ ದಲಾಲ್‌ ಸ್ಟ್ರೀಟ್‌ನಲ್ಲಿದೆ. ಇದು 1875ರಲ್ಲಿ ಸ್ಥಾಪನೆಯಾಗಿದ್ದು, ಏಷ್ಯಾದಲ್ಲೇ ಹಳೆಯ ಸ್ಟಾಕ್‌ ಎಕ್ಸ್‌ಚೇಂಜ್‌ ಆಗಿದೆ. ವಿಶ್ವದ ಹತ್ತನೇ ಅತ್ಯಂತ ಹಳೆಯ ಎಕ್ಸ್‌ಚೇಂಜ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತೀಚೆಗೆ ಟಾಟಾ ಮೋಟಾರ್ಸ್‌ ಷೇರು ದರ ಏರಿಕೆಯ ಹಾದಿಯಲ್ಲಿ ಕಳೆದ ಹಲವು ತಿಂಗಳುಗಳಲ್ಲಿ ಕುಸಿತಕ್ಕೀಡಾಗಿದ್ದ ಟಾಟಾ ಮೋಟಾರ್ಸ್‌ ಷೇರು ದರ ಏರಿಕೆಯಾಗುತ್ತಿರುವುದೇಕೆ? ಇದಕ್ಕೆ ಕಾರಣವಿದೆ. ಟಾಟಾ ಮೋಟಾರ್ಸ್‌ ಡಿಮರ್ಜರ್‌ ಪ್ರಕ್ರಿಯೆ ನಡೆಯುತ್ತಿದೆ ಎಂಬ ವರದಿ ಇದಕ್ಕೆ ಕಾರಣವಾಗಿದೆ. ಜತೆಗೆ ಭಾರತ-ಬ್ರಿಟನ್‌ ಮುಕ್ತ ವ್ಯಾಪಾರ ಒಪ್ಪಂದದಿಂದಲೂ ಕಂಪನಿಗೆ ಜಾಗ್ವಾರ್‌ ಕಾರುಗಳ ಮಾರಾಟಕ್ಕೆ ಅನುಕೂಲವಾಗಲಿದೆ. ಹೀಗಾಗಿ ಷೇರಿನ ದರ ಚೇತರಿಸುತ್ತಿದೆ.

2026ರಲ್ಲಿ ಟಾಟಾ ಮೋಟಾರ್ಸ್‌ ಎರಡು ಕಂಪನಿಗಳಾಗಿ ವಿಭಜನೆಯಾಗುವ ನಿರೀಕ್ಷೆ ಇದೆ. ಸ್ಟಾಕ್‌ ಮಾರ್ಕೆಟ್‌ನಲ್ಲಿ ಎರಡು ಭಿನ್ನ ಕಂಪನಿಗಳಾಗಿ ಲಿಸ್ಟ್‌ ಆಗಲಿದೆ. ಹಾಗಾದರೆ ಹೇಗೆ ಈ ವಿಭಜನೆಯಾಗಲಿದೆ?

ಟಾಟಾ ಮೋಟಾರ್ಸ್‌ ತನ್ನ ಪ್ಯಾಸೆಂಜರ್‌ ವೆಹಿಕಲ್ಸ್‌ ಬಿಸಿನೆಸ್‌ ಅನ್ನು ಒಂದು ಕಂಪನಿಯಾಗಿಸಲಿದೆ. ಇದರಲ್ಲಿ ಎಲೆಕ್ಟ್ರಿಕ್‌ ಕಾರುಗಳು, ಜಾಗ್ವಾರ್‌ ಲ್ಯಾಂಡ್‌ ರೋವರ್‌ ಇರಲಿವೆ. ಮತ್ತೊಂದು ಕಂಪನಿಯಲ್ಲಿ ಕಮರ್ಶಿಯಲ್‌ ವೆಹಿಕಲ್‌ಗಳು ಇರಲಿವೆ. ಇದರಲ್ಲಿ ಟ್ರಕ್ಕ್‌ , ಬಸ್‌ಗಳು ಇರಲಿವೆ. ಆಗ ಈಗ ಟಾಟಾ ಮೋಟಾರ್ಸ್‌ ಷೇರುಗಳನ್ನು ಹೊಂದಿರುವವರಿಗೆ ಹೊಸ ಕಂಪನಿಯ ಷೇರು ಸಿಗಲಿದೆ.

ಟಾಟಾ ಮೋಟಾರ್ಸ್‌

ಷೇರಿನ ಈಗಿನ ದರ: 708 ರೂ.

2024 ಮೇ 10ಕ್ಕೆ: 1,030 ರೂ.

ಪಾಕಿಸ್ತಾನದ ಜತೆಗೆ ಬಾರ್ಡರ್‌ ಹೊಂದಿರುವ ರಾಜ್ಯಗಳಲ್ಲಿ ಇರುವ ಪ್ರಮುಖ ಕಂಪನಿಗಳ ಷೇರುಗಳು ಇವತ್ತು ದರ ಇಳಿಕೆ ದಾಖಲಿಸಿತು. ಆ ಕಂಪನಿಗಳು ಯಾವುದು ಎಂಬುದನ್ನು ನೋಡೋಣ.

  1. ಅದಾನಿ ಪೋರ್ಟ್‌: ಗುಜರಾತಿನಲ್ಲಿ ಮುಂದ್ರಾ ಪೋರ್ಟ್‌
  2. ರಿಲಯನ್ಸ್‌ ಇಂಡಸ್ಟ್ರೀಸ್‌: ಗುಜರಾತಿನಲ್ಲಿ ರಿಫೈನರಿ ಘಟಕಗಳು.
  3. ಎನ್‌ಎಚ್‌ಪಿಸಿ: ಜಮ್ಮು ಕಾಶ್ಮೀರ
  4. ಪವರ್‌ ಗ್ರಿಡ್‌ ಕಾರ್ಪ್‌: ಜಮ್ಮು ಕಾಶ್ಮೀರ
  5. ವೇದಾಂತ: ರಾಜಸ್ಥಾನದಲ್ಲಿ ಕೇರ್ನ್‌ ಆಯಿಲ ಫೀಲ್ಡ್
  6. ಶ್ರೀ ಸಿಮೆಂಟ್‌ : ರಾಜಸ್ಥಾನ
  7. ಟಾಟಾ ಕೆಮಿಕಲ್ಸ್‌: ಮಿಥಾಪುರ್
  8. ಎಚ್‌ಪಿಸಿಎಲ್‌: ರಾಜಸ್ಥಾನ ಘಟಕ.

ಯಸ್‌ ಬ್ಯಾಂಕ್‌ ಷೇರಿನ ದರದಲ್ಲಿ 8% ಏರಿಕೆಯಾಗಿದೆ. ಜಪಾನಿನ ಎಸ್‌ಎಂಬಿಸಿ ಬ್ಯಾಂಕ್‌, ಯಸ್‌ ಬ್ಯಾಂಕಿನ ಬಹುಪಾಲು ಷೇರುಗಳನ್ನು ಖರೀದಿಸುವ ನಿರೀಕ್ಷೆ ಇದಕ್ಕೆ ಕಾರಣ. 20 ರೂ.ಗೆ ಏರಿಕೆಯಾಗಿದೆ.