ನವದೆಹಲಿ, ಮಾ. 31: ಕೇಂದ್ರ ಸರ್ಕಾರವು ಸಾರ್ವಜನಿಕ ಭವಿಷ್ಯ ನಿಧಿ (Public Provident Fund) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (National Savings Certificate) ಸೇರಿದಂತೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದೆ. 2026ರ ಏಪ್ರಿಲ್ 1ರಿಂದ ಪ್ರಾರಂಭವಾಗುವ ತ್ರೈಮಾಸಿಕ ಅವಧಿಗೆ ಈ ದರಗಳು ಅನ್ವಯವಾಗಲಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. 2026-27ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್ 1ರಿಂದ ಜೂನ್ 30ರವರೆಗೆ) ಬಡ್ಡಿ ದರಗಳು 2025-26ರ ನಾಲ್ಕನೇ ತ್ರೈಮಾಸಿಕದಲ್ಲಿ ಇದ್ದಂತೆಯೇ ಮುಂದುವರಿಯಲಿವೆ. ಈ ಹಿಂದೆ 2023-24ರ ನಾಲ್ಕನೇ ತ್ರೈಮಾಸಿಕದಲ್ಲಿ ಸರ್ಕಾರವು ಈ ಯೋಜನೆಗಳ ದರಗಳಲ್ಲಿ ಕೊನೆಯ ಬಾರಿಗೆ ಬದಲಾವಣೆ ಮಾಡಿತ್ತು.
ನೂತನ ಪ್ರಕಟಣೆಯ ಪ್ರಕಾರ, ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಇರುವ ಸುಕನ್ಯಾ ಸಮೃದ್ಧಿ ಯೋಜನೆಗೆ ಶೇಕಡಾ 8.2ರಷ್ಟು ಬಡ್ಡಿ ದರ ನಿಗದಿಪಡಿಸಲಾಗಿದೆ. ಈ ಯೋಜನೆಯಡಿ 10 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದಾಗಿದ್ದು, ವಾರ್ಷಿಕ ಕನಿಷ್ಠ 250 ರುಪಾಯಿಯಿಂದ ಗರಿಷ್ಠ 1.5 ಲಕ್ಷ ರುಪಾಯಿವರೆಗೆ ಹೂಡಿಕೆ ಮಾಡಬಹುದು. ಇದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ವಿನಾಯಿತಿಗೆ ಅರ್ಹವಾಗಿದೆ. ಇನ್ನು ಜನಪ್ರಿಯ ಸಾರ್ವಜನಿಕ ಭವಿಷ್ಯ ನಿಧಿ (PPF) ಯೋಜನೆಗೆ ಶೇಕಡಾ 7.1ರಷ್ಟು ಬಡ್ಡಿ ಮುಂದುವರಿಸಲಾಗಿದ್ದು, ಇದರಲ್ಲಿಯೂ ವಾರ್ಷಿಕ 1.5 ಲಕ್ಷ ರುಪಾಯಿವರೆಗಿನ ಹೂಡಿಕೆಗೆ ತೆರಿಗೆ ವಿನಾಯಿತಿ ಸಿಗಲಿದೆ. ಅಂಚೆ ಕಚೇರಿ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರವು ಶೇಕಡಾ 4ರಷ್ಟೇ ಇರಲಿದೆ.
ಪಾನ್, ಎಸ್‌ಬಿಐ ಕಾರ್ಡ್ ಸೇರಿದಂತೆ ನಾಳೆಯಿಂದ ಹಲವು ನಿಯಮ ಬದಲಾವಣೆ
ಇತರ ಯೋಜನೆಗಳಾದ ಕಿಸಾನ್ ವಿಕಾಸ್ ಪತ್ರಕ್ಕೆ ಶೇಕಡಾ 7.5ರಷ್ಟು ಬಡ್ಡಿ ನೀಡಲಾಗುತ್ತಿದ್ದು, ಇಲ್ಲಿ ಹೂಡಿಕೆ ಮಾಡಿದ ಹಣವು 115 ತಿಂಗಳುಗಳಲ್ಲಿ ದ್ವಿಗುಣಗೊಳ್ಳಲಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಕ್ಕೆ (NSC) ಶೇಕಡಾ 7.7ರಷ್ಟು ಬಡ್ಡಿ ದರ ನಿಗದಿಯಾಗಿದೆ. ಮಾಸಿಕ ಆದಾಯ ಯೋಜನೆಗೆ (MIS) ಶೇಕಡಾ 7.4ರಷ್ಟು ಬಡ್ಡಿ ಸಿಗಲಿದ್ದು, ಏಕ ಖಾತೆಗೆ 9 ಲಕ್ಷ ರುಪಾಯಿ ಮತ್ತು ಜಂಟಿ ಖಾತೆಗೆ 15 ಲಕ್ಷ ರುಪಾಯಿಗಳ ಗರಿಷ್ಠ ಹೂಡಿಕೆ ಮಿತಿ ಇದೆ.
ಈ ಅಲ್ಪ ಉಳಿತಾಯ ಯೋಜನೆಗಳು ಹಣಕಾಸು ಸಚಿವಾಲದ ಅಡಿಯಲ್ಲಿ ಬರುತ್ತಿದ್ದು, ಇವುಗಳಿಗೆ ಸಂಪೂರ್ಣ ಸರ್ಕಾರಿ ಗ್ಯಾರಂಟಿ ಇರುವುದರಿಂದ ಅತ್ಯಂತ ಸುರಕ್ಷಿತವಾಗಿವೆ. ಮಾರುಕಟ್ಟೆಯ ಇತರ ಯೋಜನೆಗಳಿಗೆ ಹೋಲಿಸಿದರೆ ಇಲ್ಲಿ ಬಡ್ಡಿ ದರಗಳು ಆಕರ್ಷಕವಾಗಿವೆ. ಈ ಯೋಜನೆಗಳ ಮೂಲಕ ಸಂಗ್ರಹವಾಗುವ ಹಣವನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಅಭಿವೃದ್ಧಿ ಚಟುವಟಿಕೆಗಳಿಗಾಗಿ ದೀರ್ಘಾವಧಿ ಸಾಲದ ರೂಪದಲ್ಲಿ ನೀಡುತ್ತದೆ. ಇದರಿಂದ ದೇಶದ ಒಟ್ಟಾರೆ ಮೂಲ ಸೌಕರ್ಯ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ.