ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಐಆರ್‌ಡಿಎಐ ಹೊಸ ಪ್ರಸ್ತಾಪ: ಪಿಬಿ ಫಿನ್‌ ಟೆಕ್‌ ಷೇರುಗಳ ದರ ಶೇಕಡಾ 36 ಕುಸಿತ

Stock Market: ಐಆರ್‌ಡಿಎಐ ಮುಂದಿಟ್ಟಿರುವ ಒಂದು ಪ್ರಸ್ತಾಪದಿಂದ ಪಾಲಿಸಿ ಬಜಾರ್‌ನ ಮಾತೃಸಂಸ್ಥೆ ಪಿಬಿ ಫಿನ್‌ ಟೆಕ್‌ ಕಂಪನಿಯ ಷೇರುಗಳ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಒಂದೇ ದಿನ ಬರೋಬ್ಬರಿ 31,426 ಕೋಟಿ ರುಪಾಯಿ ನಷ್ಟ ಸಂಭವಿಸಿದೆ.

ಸಾಂದರ್ಭಿಕ ಚಿತ್ರ.

ಮುಂಬೈ, ಸೆ. 24: ವಿಮೆ ಮಾರುಕಟ್ಟೆ ನಿಯಂತ್ರಕ ಐಆರ್‌ಡಿಎಐ ಮುಂದಿಟ್ಟಿರುವ ಒಂದು ಪ್ರಸ್ತಾಪದಿಂದ ಪಾಲಿಸಿ ಬಜಾರ್‌ನ ಮಾತೃಸಂಸ್ಥೆ ಪಿಬಿ ಫಿನ್‌ ಟೆಕ್‌ ಕಂಪನಿಯ ಷೇರುಗಳ ಮಾರುಕಟ್ಟೆ (Stock Market) ಬಂಡವಾಳ ಮೌಲ್ಯದಲ್ಲಿ ಒಂದೇ ದಿನ ಬರೋಬ್ಬರಿ 31,426 ಕೋಟಿ ರುಪಾಯಿ ನಷ್ಟ ಸಂಭವಿಸಿದೆ. ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (IRDAI) ವಿಮೆಗಳ ಹಂಚಿಕೆ, ಮಧ್ಯವರ್ತಿಗಳ ಕಮಿಷನ್, ಕಂಪನಿಗಳ ಆಡಳಿತಾತ್ಮಕ ವೆಚ್ಚಗಳನ್ನು ಸುಧಾರಿಸಲು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಒಂದು ಮಹತ್ವದ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಡಿಜಿಟಲ್ ವಿಮೆ ಮಧ್ಯವರ್ತಿ ಸಂಸ್ಥೆಗಳಿಗೆ ಇದರ ಬಿಸಿ ತಟ್ಟಿದೆ.

ಪಾಲಿಸಿ ಬಜಾರ್‌ನ ಮಾತೃಸಂಸ್ಥೆ ಪಿಬಿ ಫಿನ್‌ಟೆಕ್‌ ಕಂಪನಿಯ ಕಮಿಷನ್ ಆದಾಯದ ಮೇಲೆ ದೊಡ್ಡ ಕತ್ತರಿ ಬೀಳಲಿದೆ ಎಂಬ ಆತಂಕದಿಂದ ಹೂಡಿಕೆದಾರರು ಮುಗಿಬಿದ್ದು ಷೇರುಗಳನ್ನು ಮಾರಾಟ ಮಾಡಿದರು. ಇದರ ಪರಿಣಾಮವಾಗಿ ಗುರುವಾರ ಒಂದೇ ದಿನ ಕಂಪನಿಯ ಷೇರು ಬರೋಬ್ಬರಿ 36 ಪರ್ಸೆಂಟ್ ಕುಸಿದು ₹1,210ಕ್ಕೆ ಬಂದು ನಿಂತಿತು. ಕೇವಲ ಒಂದೇ ವಹಿವಾಟಿನಲ್ಲಿ ಬಂಡವಾಳ ಮಾರುಕಟ್ಟೆಯಿಂದ ಕೋಟ್ಯಂತರ ರೂ. ನಷ್ಟವಾಯಿತು. ಸೆನ್ಸೆಕ್ಸ್ ಸೂಚ್ಯಂಕವೂ ಸಹ ಇದರ ಪ್ರಭಾವದಿಂದ ಭಾರೀ ಕುಸಿತವನ್ನು ಕಂಡಿತು.

ಹೊಸ ಪ್ರಸ್ತಾಪದ ಮುಖ್ಯಾಂಶಗಳು

ಇನ್ನು ಮುಂದೆ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿ ಅಥವಾ ಒತ್ತಡ ಹೇರಿ ವಿಮೆ ಮಾರಾಟ ಮಾಡುವುದು ಸುಲಭವಲ್ಲ. ಒಂದು ವೇಳೆ ತಪ್ಪು ಮಾರಾಟ ಸಾಬೀತಾದರೆ, ವಿತರಕರು ಪಡೆದ ಕಮಿಷನ್ ಅನ್ನು ವಾಪಸ್ ಪಡೆಯುವ ನಿಯಮ ತರಲಾಗುತ್ತಿದೆ. ಅಲ್ಲದೆ, ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳು ವಿಮೆ ಮಾರಲು ತಮ್ಮ ಉದ್ಯೋಗಿಗಳಿಗೆ ಯಾವುದೇ ಸ್ಪೆಷಲ್ ಟಾರ್ಗೆಟ್ ಇನ್ಸೆಂಟಿವ್ ನೀಡುವಂತಿಲ್ಲ. ಇದುವರೆಗೆ ಎಲ್ಲ ವಿಮೆಗಳಿಗೂ ಒಂದೇ ರೀತಿಯ ಕಮಿಷನ್ ಇತ್ತು. ಇನ್ನು ಮುಂದೆ ವಿಮೆಯ ಸಂಕೀರ್ಣ ಸ್ವರೂಪ ಮತ್ತು ಮಾರಾಟ ಮಾಡಲು ಬೇಕಾಗುವ ಪರಿಶ್ರಮದ ಆಧಾರದ ಮೇಲೆ ಕಮಿಷನ್ ನಿಗದಿಯಾಗಲಿದೆ. ಅಲ್ಲದೆ, ದೊಡ್ಡ ಪಾಲಿಸಿಗಳಲ್ಲಿ ಕಮಿಷನ್ ವಿವರಗಳನ್ನು ಗ್ರಾಹಕರಿಗೆ ಸ್ಪಷ್ಟವಾಗಿ ತೋರಿಸಬೇಕಾಗುತ್ತದೆ.

ವಿಮಾ ಕಂಪನಿಗಳ ಆಡಳಿತಾತ್ಮಕ ವೆಚ್ಚವನ್ನು ಹಂತ ಹಂತವಾಗಿ ಇಳಿಸಲು ಪ್ರಸ್ತಾವಿಸಲಾಗಿದೆ. ಜೀವ ವಿಮಾ ಕಂಪನಿಗಳ ಈ ಮಿತಿಯನ್ನು ಮುಂದಿನ 5 ವರ್ಷಗಳಲ್ಲಿ ಪ್ರೀಮಿಯಂ ಆದಾಯದ 12.5% ಕ್ಕೆ ಇಳಿಸಲಾಗುವುದು. ಇದರಿಂದ ವಿಮಾ ವೆಚ್ಚ ತಗ್ಗಲಿದ್ದು, ಗ್ರಾಹಕರಿಗೆ ಹೆಚ್ಚಿನ ಲಾಭ ಸಿಗಲಿದೆ. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಮತ್ತು ಗ್ರಾಹಕರೇ ನೇರವಾಗಿ ವಿಮೆಗಳನ್ನು ಹೋಲಿಸಿ ಖರೀದಿಸಲು 'ಬೀಮಾ ಸುಗಮ್' ನಂತಹ ಡಿಜಿಟಲ್ ವೇದಿಕೆಗಳನ್ನು ಬಲಪಡಿಸಲಾಗುತ್ತಿದೆ.

ಆಮದು ಸುಂಕ ಕಡಿತ: ಹಬ್ಬದ ಋತುವಿನಲ್ಲಿ ಇಳಿಕೆಯಾಗುವತ್ತ ಅಡುಗೆ ಎಣ್ಣೆ ಬೆಲೆ

ಐಆರ್‌ಡಿಎಐ ಪ್ರಸ್ತಾಪದ ಉದ್ದೇಶ ಏನು?

ಕಳೆದ ಕೆಲವು ವರ್ಷಗಳಿಂದ ವಿಮಾ ವಲಯದಲ್ಲಿ ಗ್ರಾಹಕರು ಪಾವತಿಸುವ ಪ್ರೀಮಿಯಂಗಿಂತ ಮಧ್ಯವರ್ತಿಗಳ ಕಮಿಷನ್ ಮತ್ತು ವೆಚ್ಚಗಳೇ ಬೆಳೆಯುತ್ತಿದ್ದವು. ಗ್ರಾಹಕರಿಗಿಂತ ದಲ್ಲಾಳಿಗಳೇ ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದರು. ಇದನ್ನು ಸರಿಪಡಿಸಲು ಐಆರ್‌ಡಿಎಐ 'ಸಬ್ಕಾ ಬೀಮಾ ಸಬ್ಕಿ ರಕ್ಷಾ' ಕಾಯ್ದೆಯಡಿ ಈ ಹೊಸ ಸುಧಾರಣೆಗಳಿಗೆ ಕೈಹಾಕಿದೆ. ವಿಮೆಯನ್ನು ದೇಶದ ಮೂಲೆಮೂಲೆಗೆ, ಯುಕ್ತ ದರದಲ್ಲಿ ತಲುಪಿಸುವುದು ಇದರ ಉದ್ದೇಶವಾಗಿದೆ. ಸಾರ್ವಜನಿಕರು ಇದರ ಬಗ್ಗೆ ಅಕ್ಟೋಬರ್ 25, 2026 ರೊಳಗೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು ಅವಕಾಶವಿದೆ.

ಮಿಸ್‌ ಸೆಲ್ಲಿಂಗ್‌ ಹೇಗೆ ನಡೆಯುತ್ತದೆ?

ವಿಮಾ ವಲಯದಲ್ಲಿ 'ಮಿಸ್‌ ಸೆಲ್ಲಿಂಗ್' (Mis-selling) ಎಂದರೆ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿ, ಮೋಸ ಮಾಡಿ ಅಥವಾ ಅವರ ಅಗತ್ಯಕ್ಕೆ ತಕ್ಕುದಲ್ಲದ ವಿಮಾ ಪಾಲಿಸಿಗಳನ್ನು ಬಲವಂತವಾಗಿ ಮಾರಾಟ ಮಾಡುವುದು. ಗ್ರಾಹಕರು ಇದರಿಂದ ಸಾಕಷ್ಟು ಹಣ ಕಳೆದುಕೊಳ್ಳುತ್ತಾರೆ. ಮಿಸ್‌ ಸೆಲ್ಲಿಂಗ್‌ನಲ್ಲಿ ಇದು ಸಾಮಾನ್ಯ. ಉದಾಹರಣೆಗೆ ಬ್ಯಾಂಕ್ ಉದ್ಯೋಗಿಗಳು ಅಥವಾ ಏಜೆಂಟ್‌ಗಳು ಗ್ರಾಹಕರಿಗೆ ಬಂದು, "ಇದು ಅದ್ಭುತವಾದ ಫಿಕ್ಸೆಡ್ ಡೆಪಾಸಿಟ್ (FD) ಅಥವಾ ಮ್ಯೂಚುಯಲ್ ಫಂಡ್ ತರಹದ ಸ್ಕೀಮ್, ಇದರಲ್ಲಿ ಹಣ ಹಾಕಿದರೆ ಮೂರೇ ವರ್ಷದಲ್ಲಿ ಡಬಲ್ ಆಗಬಹುದು" ಎಂದು ನಂಬಿಸುತ್ತಾರೆ. ಆದರೆ ವಾಸ್ತವದಲ್ಲಿ ಅದು ಲಾಕ್-ಇನ್ ಅವಧಿಯಿರುವ ಒಂದು ದುಬಾರಿ ಜೀವ ವಿಮಾ ಪಾಲಿಸಿ (Life Insurance) ಆಗಿರುತ್ತದೆ.

ಪಾಲಿಸಿ ಮಾರುವವರು ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಸಿಗದಷ್ಟು ಅತಿ ಹೆಚ್ಚಿನ ಬಡ್ಡಿ ದರ ಅಥವಾ ರಿಟರ್ನ್ಸ್ ಸಿಗುತ್ತದೆ ಎಂದು ಸುಳ್ಳು ಭರವಸೆ ನೀಡುತ್ತಾರೆ. ಪಾಲಿಸಿ ಬಾಂಡ್‌ ಬಂದ ಮೇಲೆ ನೋಡಿದರೆ, ಅವರು ಹೇಳಿದ ಲಾಭಕ್ಕೂ ನಿಜವಾದ ಪಾಲಿಸಿಯ ನಿಯಮಗಳಿಗೂ ಸಂಬಂಧವೇ ಇರುವುದಿಲ್ಲ.

ನೀವು ಈ ಸಾಲ (Loan) ಅಥವಾ ಖಾತೆ ತೆಗೆದುಕೊಳ್ಳುತ್ತಿರುವುದರಿಂದ ಕಂಪನಿಯು ನಿಮಗೆ ಉಚಿತವಾಗಿ ಒಂದು ಇನ್ಶೂರೆನ್ಸ್ ನೀಡುತ್ತಿದೆ" ಎಂದು ನಂಬಿಸಿ ಸದ್ದಿಲ್ಲದೆ ಗ್ರಾಹಕರ ಖಾತೆಯಿಂದ ದುಬಾರಿ ಪ್ರೀಮಿಯಂ ಹಣವನ್ನು ಕಡಿತಗೊಳಿಸುವುದೂ ಇದೆ.

ಬ್ಯಾಂಕ್‌ಗಳಿಗೆ ಬರುವ ನಿವೃತ್ತ ನೌಕರರು ಅಥವಾ ಹಿರಿಯ ನಾಗರಿಕರಿಗೆ ಆರ್ಥಿಕ ಜ್ಞಾನ ಕಡಿಮೆ ಇರುತ್ತದೆ ಎಂಬುದನ್ನು ದುರುಪಯೋಗಪಡಿಸಿಕೊಂಡು, ಅವರ ಜೀವಮಾನದ ಉಳಿತಾಯದ ಹಣವನ್ನು ಕಳಪೆ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಹೂಡಿಕೆ ಮಾಡುವಂತೆ ಮಾಡಲಾಗುತ್ತದೆ.

ಬ್ಯಾಂಕ್ ಸಿಬ್ಬಂದಿಗೆ ಅಥವಾ ವಿಮಾ ಏಜೆಂಟ್‌ಗಳಿಗೆ ಕಂಪನಿಯಿಂದ ಮಾಸಿಕ ಟಾರ್ಗೆಟ್ ಇರುತ್ತದೆ. ಇದನ್ನು ತಲುಪಲು ಅವರು ತಮ್ಮ ಗ್ರಾಹಕರಿಗೆ ಅಥವಾ ಸಾಲ ಪಡೆಯಲು ಬಂದವರಿಗೆ "ಇನ್ಶೂರೆನ್ಸ್ ಮಾಡಿಸಿದರೆ ಮಾತ್ರ ಲೋನ್ ಪಾಸ್ ಆಗುತ್ತದೆ" ಎಂದು ಸುಳ್ಳು ಹೇಳಿ ಬಲವಂತವಾಗಿ ಪಾಲಿಸಿಗಳನ್ನು ಮಾರುತ್ತಾರೆ.

ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಯಾವ ವಿಮಾ ಕಂಪನಿಯು ತಮಗೆ ಅತಿ ಹೆಚ್ಚು ಕಮಿಷನ್ ನೀಡುತ್ತದೆಯೋ ಆ ಪಾಲಿಸಿಯನ್ನು ಗ್ರಾಹಕರಿಗೆ ಹೆಚ್ಚು ಪ್ರಮೋಟ್ ಮಾಡುತ್ತವೆ ಎಂಬ ಆರೋಪವಿದೆ. ವಿಮಾ ಕಂಪನಿಗಳು ಬ್ರೋಕರ್‌ಗಳಿಗೆ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ನೀಡುವ ಈ ಕಮಿಷನ್ ಮೊತ್ತವನ್ನು ಕೊನೆಯಲ್ಲಿ ಪಾಲಿಸಿದಾರರಿಂದಲೇ (ಗ್ರಾಹಕರಿಂದ) ನೇರವಾಗಿ ಅಥವಾ ಪರೋಕ್ಷವಾಗಿ ವಸೂಲು ಮಾಡುತ್ತವೆ.

ಸೆಪ್ಟೆಂಬರ್ 28ರಿಂದ ಮುಷ್ಕರ; ಈ ಭಾನುವಾರ ಕಾರ್ಯ ನಿರ್ವಹಿಸಲಿದೆ ಬ್ಯಾಂಕ್

ಜೆರೋಧಾದ ನಿತಿನ್‌ ಕಾಮತ್‌ ಹೇಳಿದ್ದೇನು?

ಝೆರೋಧಾ (Zerodha) ಸಂಸ್ಥೆಯ ಸ್ಥಾಪಕ ನಿತಿನ್ ಕಾಮತ್ ಅವರು ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ್ದಾರೆ. "ನಿಯಂತ್ರಣಕ್ಕೊಳಪಟ್ಟ ವ್ಯವಹಾರಗಳಿಗೆ 'ನಿಯಂತ್ರಣಾತ್ಮಕ ಅಪಾಯವೇ' (Regulatory Risk) ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. ನಿಯಮಗಳಲ್ಲಿ ಆಗುವ ಬದಲಾವಣೆಗಳು ರಾತ್ರೋರಾತ್ರಿ ಒಂದು ಕಂಪನಿಯ ಸಂಪೂರ್ಣ ಆರ್ಥಿಕ ಸ್ವರೂಪವನ್ನೇ ಬದಲಾಯಿಸಿಬಿಡಬಹುದು ಎಂಬುದಕ್ಕೆ ಇದು ಉತ್ತಮ ನಿದರ್ಶನವಾಗಿದೆʼʼ ಎಂದಿದ್ದಾರೆ.

ಕೇಶವ ಪ್ರಸಾದ್​ ಬಿ

View all posts by this author