Share Market: ಸೆನ್ಸೆಕ್ಸ್ 476 ಅಂಕ ಏರಿಕೆ; ದೀಪಾವಳಿಗೆ ನಿಫ್ಟಿ 50 ಜಿಗಿತ: ಕಾರಣವೇನು?
Stock Market 17-October: ದೀಪಾವಳಿ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬಂದಿದ್ದು, ಶುಕ್ರವಾರ ಸೆನ್ಸೆಕ್ಸ್ 476 ಅಂಕ ಏರಿಕೆಯಾಗಿ 83,953ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 115 ಅಂಕ ಚೇತರಿಸಿ 25,699ಕ್ಕೆ ಸ್ಥಿರವಾಯಿತು.

-

- ಕೇಶವ ಪ್ರಸಾದ್ ಬಿ.
ಮುಂಬೈ, ಅ. 17: ದೀಪಾವಳಿ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ (Share Market) ಉತ್ಸಾಹ ಮನೆ ಮಾಡಿದೆ. ಸೆನ್ಸೆಕ್ಸ್ (Sensex) ಶುಕ್ರವಾರ 476 ಅಂಕ ಏರಿಕೆಯಾಗಿ 83,953ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ (Nifty) 115 ಅಂಕ ಚೇತರಿಸಿ 25,699ಕ್ಕೆ ಸ್ಥಿರವಾಯಿತು. ಏಷ್ಯನ್ ಪೇಂಟ್ಸ್ 4%, ಮಹೀಂದ್ರಾ & ಮಹೀಂದ್ರಾ 3% ಏರಿಕೆಯಾಯಿತು. ದೀಪಾವಳಿಗೆ ನಿಫ್ಟಿ 50 ಸೂಚ್ಯಂಕವು ಶುಕ್ರವಾರ ಮಧ್ಯಂತರ ವಹಿವಾಟಿನಲ್ಲಿ 52 ವಾರಗಳ ಎತ್ತರಕ್ಕೇರಿದೆ. 25,700 ಅಂಕಗಳಿಗೆ ಜಿಗಿದಿದೆ. ಇದಕ್ಕೆ ಪ್ರಮುಖ ಕಾರಣಗಳೇನು ಎಂಬುದನ್ನು ವಿವರವಾಗಿ ತಿಳಿಯೋಣ.
ಏರಿಕೆಯ ಹೊರತಾಗಿಯೂ ಇಂಡೆಕ್ಸ್ ತನ್ನ ಸಾರ್ವಕಾಲಿಕ ಎತ್ತರವಾದ 26,277ರಿಂದ ಸದ್ಯಕ್ಕೆ ಕೆಳ ಮಟ್ಟದಲ್ಲಿದೆ. ಈಗ ಏರಿಕೆಗೆ ಕಾರಣಗಳನ್ನು ನೋಡೋಣ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಪುನರಾಗಮನ
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಅಥವಾ ಫಾರಿನ್ ಇನ್‌ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಹಲವಾರು ತಿಂಗಳುಗಳ ಬ್ರೇಕ್ ನಂತರ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಮತ್ತೆ ಆರಂಭಿಸಿದ್ದಾರೆ. ಅಕ್ಟೋಬರ್ 7 ಮತ್ತು 14 ರ ನಡುವೆ ಐದು ಸೆಷನ್ಸ್‌ಗಳಲ್ಲಿ ಎಫ್‌ಐಐಗಳು ನಿವ್ವಳ ಖರೀದಿದಾರರಾಗಿದ್ದಾರೆ. ಸೆಕೆಂಡರಿ ಮಾರುಕಟ್ಟೆಗೆ 3,000 ಕೋಟಿ ರುಪಾಯಿಗಳನ್ನು ಹೂಡಿದ್ದಾರೆ ಎಂದು NSDL ಅಂಕಿ ಅಂಶಗಳು ತಿಳಿಸಿವೆ. ಇದೇ ಅವಧಿಯಲ್ಲಿ ಐಪಿಒ ಅಥವಾ ಪ್ರೈಮರಿ ಮಾರ್ಕೆಟ್ ನಲ್ಲಿ ಎಫ್‌ಐಐಗಳು 7,600 ಕೋಟಿ ರುಪಾಯಿ ಹೂಡಿಕೆ ಮಾಡಿದ್ದಾರೆ. ಅಕ್ಟೋಬರ್ 16ರಂದು ಎಫ್‌ಐಐಗಳು 997 ಕೋಟಿ ರುಪಾಯಿ ಷೇರುಗಳನ್ನು ಖರೀದಿಸಿದ್ದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು 4,076 ಕೋಟಿ ರುಪಾಯಿ ಹೂಡಿಕೆ ಮಾಡಿದ್ದಾರೆ.
ಎಫ್‌ಐಐಗಳ ಹೂಡಿಕೆಯ ಹೊರ ಹರಿವಿನಲ್ಲಿ ಕೆಲ ತಿಂಗಳಿನಿಂದೀಚೆಗೆ ಗಣನೀಯ ಕಡಿಮೆ ಆಗಿರುವುದನ್ನು ಗಮನಿಸಬಹುದು. ಉದಾಹರಣೆಗೆ ಅಕ್ಟೋಬರ್‌ನಲ್ಲಿ ಎಫ್‌ಐಐ ಹೊರಹರಿವು 903 ಕೋಟಿ ರುಪಾಯಿಗಳಾಗಿದ್ದರೆ, ಸೆಪ್ಟೆಂಬರ್‌ನಲ್ಲಿ 22,761 ಕೋಟಿ ರುಪಾಯಿಗಳಾಗಿತ್ತು. ಸೆಪ್ಟೆಂಬರ್‌ನಲ್ಲಿ 22,761 ಕೋಟಿ ರುಪಾಯಿ, ಆಗಸ್ಟ್‌ನಲ್ಲಿ 41,908 ಕೋಟಿ ರುಪಾಯಿಗಳು ಹಾಗೂ ಜುಲೈನಲ್ಲಿ 38,214 ಕೋಟಿ ರುಪಾಯಿಗಳಷ್ಟು ಇತ್ತು.
ಶಾರ್ಟ್ ಕವರಿಂಗ್
ತಜ್ಞರ ಪ್ರಕಾರ ಭಾರ್ತಿ ಏರ್ ಟೆಲ್, ಎಚ್‌ಡಿಎಫ್ =ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್ ಮೊದಲಾದ ಹೆವಿ ವೈಟ್ಸ್ ಷೇರುಗಳಲ್ಲಿ ಶಾರ್ಟ್ ಕವರಿಂಗ್ ಆಗಿರುವ ನಿರೀಕ್ಷೆ ಇದೆ. ಇದು ಇಂಡೆಕ್ಸ್ ಅನ್ನು ಏರಿಸಿದೆ.
ಅಮೆರಿಕದ ಬಾಂಡ್‌ಗೆ ಹಿನ್ನಡೆ
ಅಮೆರಿದ ಬಾಂಡ್‌ಗಳಲ್ಲಿ ಆದಾಯ ಇಳಿಮುಖವಾಗಿದೆ. ಎರಡು ವರ್ಷಗಳ ಬಾಂಡ್ ನೀಡುವ ಬಡ್ಡಿ ಆದಾಯವು ಮೂರು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕಿಳಿದಿದೆ. ಹೀಗಾಗಿ ಹೂಡಿಕೆದಾರರು ಭಾರತದಂತಹ ಎಮರ್ಜಿಂಗ್ ಮಾರುಕಟ್ಟೆಗಳಲ್ಲಿ ಹೂಡಿಕೆಗೆ ಮರಳುತ್ತಿದ್ದಾರೆ.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಸಂಭವ
ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ-ವಾಣಿಜ್ಯ ಒಪ್ಪಂದಗಳು ಪ್ರಗತಿಯ ಹಂತದಲ್ಲಿದೆ. ಹೀಗಾಗಿ ಷೇರು ಪೇಟೆಯಲ್ಲಿ ಹೂಡಿಕೆದಾರರ ವಿಶ್ವಾಸ ವೃದ್ಧಿಸಿದೆ.
ಐಪಿಒ ಒತ್ತಡ ಇಳಿಮುಖ
ಕಳೆದ ಎರಡು ವಾರಗಳಲ್ಲಿ ಟಾಟಾ ಕ್ಯಾಪಿಟಲ್ ಮತ್ತು ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾದ ಹೈ ಪ್ರೊಫೈಲ್ ಐಪಿಒಗಳು ನಡೆದಿತ್ತು. ಇದೀಗ ಪ್ರೈಮರಿ ಮಾರ್ಕೆಟ್ ಪೈಪ್‌ಲೈನ್ ಶಾಂತವಾಗಿದೆ. ಐಪಿಒ ಒತ್ತಡ ಇಳಿಮುಖವಾಗಿದೆ. ಇದು ಲಿಕ್ವಿಡಿಟಿ ಪ್ರೆಶರ್ ಅನ್ನೂ ಕಡಿಮೆ ಮಾಡುತ್ತದೆ. ಆಗ ಸೆಕೆಂಡರಿ ಮಾರುಕಟ್ಟೆಯಲ್ಲಿ ಹೂಡಿಕೆ ಹೆಚ್ಚುವ ನಿರೀಕ್ಷೆ ಇದೆ. ಟೆಕ್ನಿಕಲಿ ಮಾರ್ಕೆಟ್ ಟ್ರೆಂಡ್‌ಗಳು ಇವತ್ತು ಸ್ಟ್ರಾಂಗ್ ಆಗಿದ್ದವು.
ಈ ಸುದ್ದಿಯನ್ನೂ ಓದಿ: WIPRO: ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ನಿವ್ವಳ ಆದಾಯ ಶೇ.2.5 ಹೆಚ್ಚಳ, ನಿವ್ವಳ ಲಾಭ ವರ್ಷದಿಂದ ವರ್ಷಕ್ಕೆ ಶೇ.1.2ರಷ್ಟು ಪ್ರಗತಿ
ಡಾಲರ್ ಎದುರು ರುಪಾಯಿ ಚೇತರಿಕೆ
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ ಚೇತರಿಸಿತು. 87 ರುಪಾಯಿ 75 ಪೈಸೆಯ ಮಟ್ಟದಲ್ಲಿತ್ತು. ಬ್ಯಾಂಕಿಂಗ್ ಷೇರುಗಳು ಇವತ್ತು ಗಣನೀಯ ಚೇತರಿಸಿತು. ಕಚ್ಚಾ ತೈಲ ದರ ಇಳಿಕೆಯ ಟ್ರೆಂಡ್‌ನಲ್ಲಿತ್ತು. ಪ್ರತಿ ಬ್ಯಾರಲ್‌ಗೆ 61 ಡಾಲರ್ ಮಟ್ಟದಲ್ಲಿತ್ತು. ಕಚ್ಚಾ ತೈಲ ದರ ಇಳಿಕೆಯು ಭಾರತಕ್ಕೆ ಅನುಕೂಲಕರವಾಗಿದೆ.
ನಿಫ್ಟಿ ಬ್ಯಾಂಕ್ ಇಂಡೆಕ್ಸ್ ಇವತ್ತು ಸಾರ್ವಕಾಲಿಕ ಏರಿಕೆಯಾದ 57,828 ಮಟ್ಟಕ್ಕೇರಿತು. ಆಟೊಮೊಬೈಲ್, ಕನ್ ಸ್ಯೂಮರ್ ಡ್ಯೂರಬಲ್ಸ್, ಎಫ್‌ಎಂಸಿಜಿ ಷೇರುಗಳು ಲಾಭ ಗಳಿಸಿತು.
ವರ್ಲ್ ಪೂಲ್ ಆಫ್ ಇಂಡಿಯಾ: 1384/-
ಕೆನರಾ ಎಚ್‌ಎಸ್‌ಬಿಸಿ ಲೈಫ್ ಇನ್ಷೂರೆನ್ಸ್ ಕಂಪನಿ: 112/-
ಅದಾನಿ ಪವರ್: 166/-
ಟಿವಿಎಸ್ ಹೋಲ್ಡಿಂಗ್ಸ್ : 14,400/-
ರಿಲಯನ್ಸ್ ಇಂಡಸ್ಟ್ರೀಸ್‌ನ ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ರಿಸಲ್ಟ್ ಇವತ್ತು ಪ್ರಕಟವಾಗಲಿದೆ. ಇದು ಸ್ಟಾಕ್ ಮಾರ್ಕೆಟ್ ಮೇಲೆ ಸೋಮವಾರ ಹೇಗೆ ಪ್ರಭಾವ ಬೀರಲಿದೆ ಎಂಬ ಕುತೂಹಲ ಉಂಟಾಗಿದೆ. ಮೊದಲ ತ್ರೈಮಸಿಕ ರಿಸಲ್ಟ್ ಬಂದ ಬಳಿಕ ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆದಾರರಿಗೆ ನಷ್ಟ ಉಂಟಾಗಿತ್ತು.
ಈ ಸುದ್ದಿಯನ್ನೂ ಓದಿ: Russian Oil Purchase: ರಷ್ಯಾದಿಂದ ಇಂಧನ ಖರೀದಿ ವಿಚಾರ; ಟ್ರಂಪ್ ಹೇಳಿಕೆ ಬೆನ್ನಲ್ಲೇ ಭಾರತ ಸ್ಪಷ್ಟನೆ
ಕೋಕಾ-ಕೋಲಾ ಭಾರತೀಯ ಘಟಕದ ಸಲುವಾಗಿ ಐಪಿಒಗೆ ಸಜ್ಜಾಗುತ್ತಿದೆ ಎಂದು ಇಕನಾಮಿಕ್ ಟೈಮ್ಸ್ ವರದಿ ತಿಳಿಸಿದೆ. ಇದು 1 ಶತಕೋಟಿ ಡಾಲರ್ ಗಾತ್ರದ ಮೆಗಾ ಐಪಿಒ ಆಗುವ ಸಾಧ್ಯತೆ ಇದೆ.
ಜೆಎಸ್‌ಡಬ್ಲ್ಯು ಸ್ಟೀಲ್ ಎರಡನೇ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದೆ. ಕಂಪನಿಯು ಈ ಅವಧಿಯಲ್ಲಿ 1,646 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಅಂದ್ರೆ 307% ಏರಿಕೆಯಾಗಿದೆ. ಆದಾಯದಲ್ಲಿ ಕೂಡ 12% ಹೆಚ್ಚಳವಾಗಿದೆ.
ವೈರ್ಸ್ ಮತ್ತು ಕೇಬಲ್ಸ್ ಉತ್ಪಾದಕ ಪಾಲಿಕ್ಯಾಬ್ ಇಂಡಿಯಾ ಎರಡನೇ ತ್ರೈಮಾಸಿಕ ರಿಸಲ್ಟ್ ಪ್ರಕಟಿಸಿದ್ದು 693 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಅಂದ್ರೆ 56% ಹೆಚ್ಚಳವಾಗಿದೆ.
ಟೆನ್ನೆಕೊ ಕ್ಲೀನ್ ಏರ್ ಇಂಡಿಯಾ ಕಂಪನಿಯು ನವೆಂಬರ್‌ನಲ್ಲಿ 3,000 ಕೋಟಿ ರುಪಾಯಿ ಗಾತ್ರದ ಐಪಿಒ ನಡೆಸಲು ಉದ್ದೇಶಿಸಿದೆ.
ದೀಪಾವಳಿಯ ಸಂದರ್ಭ ನಡೆಯುವ ವಿಶೇಷ ಮುಹೂರ್ತ ಟ್ರೇಡಿಂಗ್ ಈ ಸಲ ವಿಶೇಷವಾಗಿದೆ. ಏಕೆಂದರೆ ಅಕ್ಟೋಬರ್ 21ಕ್ಕೆ ಮುಹೂರ್ತ ಟ್ರೇಡಿಂಗ್ ಈ ಸಲ ಮಧ್ಯಾಹ್ನ 1.45ರಿಂದ 2.45ಕ್ಕೆ ನಡೆಯಲಿದೆ. ಸಾಮಾನ್ಯವಾಗಿ ಇದು ಸಂಜೆ ನಡೆಯುತ್ತಿತ್ತು. ಈ ಸಲ ಮಧ್ಯಾಹ್ನವೇ ನಡೆಯುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ 8 ಸಲ ಲಾಭ ಮತ್ತು ಎರಡೇ ಸಲ ಹೂಡಿಕೆದಾರರಿಗೆ ನಷ್ಟವಾಗಿದೆ.