ಹೊರ್ಮುಜ್ ಜಲಸಂಧಿ ಸ್ಥಗಿತಗೊಂಡರೂ ಭಾರತಕ್ಕಿಲ್ಲ ಸಮಸ್ಯೆ; 25 ದಿನಕ್ಕಾಗುವಷ್ಟು ಕಚ್ಚಾ ತೈಲ ದಾಸ್ತಾನಿದೆ ಎಂದ ಕೇಂದ್ರ: ಪ್ಲ್ಯಾನ್ ಬಿಯೂ ಸಿದ್ಧ
US-Israel-Iran War: ಜಗತ್ತಿನ ಅತ್ಯಂತ ಮಹತ್ವದ ಸಾಗರ ಮಾರ್ಗಗಳಲ್ಲಿ ಒಂದಾದ ಹೊರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದೆ. ಇದರಿಂದ ತೈಲ ಸಾಗಾಟ್ ಹಡಗುಗಳು ದಿಕ್ಕೆಟ್ಟು ನಿಂತುಬಿಟ್ಟಿವೆ. ಹಾಗಿದ್ದರೂ ಭಾರತಕ್ಕೆ ಸ್ವಲ್ಪ ದಿನದ ಮಟ್ಟಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ದೆಹಲಿ, ಮಾ. 3: ಮಧ್ಯಪ್ರಾಚ್ಯದಲ್ಲಿ ಫೆಬ್ರವರಿ 28ರಂದು ಆರಂಭವಾದ ಉದ್ವಿಗ್ನ ವಾತಾವರಣ ಇನ್ನೂ ತಿಳಿಯಾಗಿಲ್ಲ. ಮೊದಲು ಇರಾನ್ ವಿರುದ್ಧ ಇಸ್ರೇಲ್-ಅಮೆರಿಕ ಸಂಘಟಿತ ದಾಳಿ ನಡೆಸಿತಾದರೂ ಬಳಿಕ ಕೊಲ್ಲಿ ರಾಷ್ಟ್ರಗಳು ಈ ಯುದ್ಧದ ಭಾಗವಾದವು (US-Israel-Iran War). ಈಗಲೂ ವಿವಿಧ ಕಡೆ ದಾಳಿ ನಡೆಯುತ್ತಿದ್ದು, ಇರಾನ್ ಹೊರ್ಮುಜ್ ಜಲಸಂಧಿಯನ್ನು (Hormuz Strait) ಬಂದ್ ಮಾಡಿದೆ. ಇದು ಜಗತ್ತಿನ ಅತ್ಯಂತ ಮಹತ್ವದ ಸಾಗರ ಮಾರ್ಗಗಳಲ್ಲಿ ಒಂದು. ಜಾಗತಿಕ ಕಚ್ಚಾ ತೈಲ ಸರಬರಾಜಿನ ಸುಮಾರು ಶೇಕಡಾ 20–25ರಷ್ಟು ಹಡಗುಗಳು ಈ ಸಣ್ಣ ಕಾಲುವೆ ಮಾರ್ಗದ ಮೂಲಕ ಸಾಗುತ್ತವೆ. ದಕ್ಷಿಣ ಏಷ್ಯಾದ ದೊಡ್ಡ ಆರ್ಥಿಕತೆಯ ದೇಶಗಳಾದ ಭಾರತ, ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾಗಳಿಗೆ ಹೊರ್ಮುಜ್ ಮೂಲಕವೇ ಅವುಗಳ ಸುಮಾರು ಶೇಕಡಾ 40ರಷ್ಟು ಕಚ್ಚಾ ತೈಲ ಇದೇ ಮಾರ್ಗದ ಮೂಲಕ ಬರುತ್ತದೆ. ಇದೇ ಕಾರಣಕ್ಕೆ ಹೊರ್ಮುಜ್ ಜಲಸಂಧಿ ಬಂದ್ ಆಗಿರುವುದರಿಂದ ತೈಲ ಬೆಲೆಯಲ್ಲಿ ಭಾರಿ ಏರಿಕೆಯಾಗಲಿದೆ ಎನ್ನುವ ಆತಂಕ ಎದುರಾಗಿದೆ. ಇದೀಗ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಚ್ಚಾ ತೈಲ ಮತ್ತು ಅನಿಲ ಸಂಗ್ರಹವಿದೆ, ಈ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದಿದೆ.
ಎನ್‌ಡಿಟಿವಿ ಜತೆಗೆ ಮಾತನಾಡಿದ ಸರ್ಕಾರದ ಮೂಲಗಳು ಇಂಧನದ ವಿಚಾರದಲ್ಲಿ ಭಯಪಡಬೇಕಾದ ಅಗತ್ಯವಿಲ್ಲವೆಂದು ತಿಳಿಸಿವೆ. ಮಧ್ಯಪ್ರಾಚ್ಯ ಯುದ್ಧ ಉಲ್ಬಣಗೊಂಡರೂ ಕಚ್ಚಾ ತೈಲ ಮತ್ತು ಅನಿಲದ ವಿಷಯದಲ್ಲಿ ಭಾರತವು ಉತ್ತಮ ಸ್ಥಿತಿಯಲ್ಲಿದೆ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ. "ಕಚ್ಚಾ ತೈಲ, ಎಲ್‌ಪಿಜಿ ಮತ್ತು ಎಲ್‌ಎನ್‌ಜಿಗಳ ಸಾಕಷ್ಟು ದಾಸ್ತಾನಿದೆ. ನಮ್ಮಲ್ಲಿ 25 ದಿನಗಳಿಗೆ ಬೇಕಾಗುವಷ್ಟು ಕಚ್ಚಾ ತೈಲ ಮತ್ತು ಇಂಧನದ ಸಂಗ್ರಹವಿದೆʼʼ ಎಂದು ಹೇಳಿವೆ.
ಕಳೆದ ತಿಂಗಳು, ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ ರಾಜ್ಯಸಭೆಗೆ ತಿಳಿಸಿದ ಪ್ರಕಾರ, ಭಾರತದಲ್ಲಿ ಸುಮಾರು 74 ದಿನಗಳಿಗೆ ಅಗತ್ಯವಾದ ಪೆಟ್ರೋಲಿಯಂ ನಿಕ್ಷೇಪವಿದೆ. ʼʼಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಬೃಹತ್ ತೈಲ ಸಂಗ್ರಾಹಗಾರವಿದೆ. ಶೀಘ್ರದಲ್ಲೇ ಒಡಿಶಾದಲ್ಲಿ ಪ್ರಾರಂಭಿಸಲಿದ್ದೇವೆʼʼ ಎಂದು ಅವರು ಮಾಹಿತಿ ನೀಡಿದ್ದರು. ಇದೀಗ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿದ್ದರಿಂದ ಭಾರತದಲ್ಲಿ ಇಂಧನ ಬೆಲೆಯಲ್ಲಿ ಭಾರಿ ಹೆಚ್ಚಳವಾಗಲಿದೆ ಎನ್ನುವ ಆತಂಕ ಮಧ್ಯೆ ಕೇಂದ್ರ ಸರ್ಕಾರ ಈ ಭರವಸೆ ನೀಡಿದೆ.
ಇರಾನ್- ಇಸ್ರೇಲ್ ಸಮರ: ಪೆಟ್ರೋಲ್ ಬೆಲೆ 200 ರುಪಾಯಿ ಆಗುತ್ತಾ?
ಭಾರತದ ಪ್ಲ್ಯಾನ್ ಬಿ
ಇನ್ನು ಅಮೆರಿಕ-ಇಸ್ರೇಲ್-ಇರಾನ್ ಯುದ್ಧದಿಂದಾಗಿ ಇಂಧನ ಪೂರೈಕೆ ಜಾಲದ ಮೇಲೆ ಉಂಟಾದ ದೊಡ್ಡ ಪ್ರಮಾಣದ ಅಡೆ-ತಡೆಯನ್ನು ನಿವಾರಿಸಲು ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಹೆಚ್ಚಿಸಬಹುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಹಾಗೆ ನೋಡಿದರೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದರಿಂದ ದೇಶದ ಇಂಧನ ಸಮಸ್ಯೆ ಬಗೆಹರಿಯಲಿದೆ. ಅದಾಗ್ಯೂ ಭಾರತದ ಈ ನಡೆ ರಾಜತಾಂತ್ರಿಕ ಸಮಸ್ಯೆಯನ್ನು ತಂದೊಡ್ಡುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ. ಫೆಬ್ರವರಿ ಆರಂಭದಲ್ಲಿ ಅಮೆರಿಕದೊಂದಿಗೆ ಮಾಡಿಕೊಂಡ ಮಧ್ಯಂತರ ಸುಂಕ ಒಪ್ಪಂದ ಪ್ರಕಾರ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆ ಮಾಡಬೇಕಿದೆ.
ರಷ್ಯಾದಿಂದ ಕಡಿಮೆ ಪ್ರಮಾಣದಲ್ಲಿ ತೈಲ ಖರೀದಿಸಲು ಮತ್ತು ಈ ಕೊರತೆಯನ್ನು ಸರಿದೂಗಿಸಲು ವೆನೆಜುವೆಲಾದಿಂದ ಆಮದು ಮಾಡಿಕೊಳ್ಳಲು ಭಾರತ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಅಮೆರಿಕ ಶೇಕಡಾ 25ರಷ್ಟು 'ದಂಡ' ಸುಂಕವನ್ನು ಮನ್ನಾ ಮಾಡಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಭಾರತದ ಮೇಲೆ ಅಮೆರಿಕ ವಿಧಿಸಿದ್ದ ಸುಂಕ ಶೇಕಡಾ 50ರಿಂದ ಶೇಕಡಾ 18ಕ್ಕೆ ಇಳಿದಿದೆ. ಹೀಗಾಗಿ ಭಾರತ ಇಂಧನಕ್ಕಾಗಿ ಮತ್ತೆ ರಷ್ಯಾವನ್ನು ಅವಲಂಬಿಸಿದರೆ ಅಮೆರಿಕ ಯಾವ ರೀತಿ ಪ್ರತಿಕ್ರಿಯಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.