ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅದ್ಭುತ ಸಾಹಸ ಪ್ರದರ್ಶನ: ಮೇಲಕ್ಕೆ ಹಾರಿ, ತಲೆಕೆಳಗಾಗಿ ಚಲಿಸಿದ ಟೆಸ್ಲಾ ಕಾರು!

Tesla Car Stunt: ಟೆಸ್ಲಾ ಕಂಪನಿಯು ಹೊಸ ರೋಡ್‌ಸ್ಟರ್ ಕಾರಿನ ಸಾಹಸ ಪ್ರದರ್ಶನ ಮಾಡಲಾಗಿದೆ. ಈ ಕಾರು ವಿಶೇಷವಾಗಿ ನಿರ್ಮಿಸಿದ ಬಾಗಿದ ರ‍್ಯಾಂಪ್ ಮೇಲೆ ಚಲಿಸಿ, ತಲೆಕೆಳಗಾಗಿ ಸಾಗಿದ ನಂತರ ಗಾಳಿಯಲ್ಲಿ ಹಾರಿದಂತೆ ಚಲಿಸಿ ಸುರಕ್ಷಿತವಾಗಿ ಕೆಳಗಿಳಿದಿದೆ. ಹಾರುವ ಕಾರು ಎಂದರೆ ವಿಮಾನದಂತೆ ಸ್ವತಂತ್ರವಾಗಿ ಹಾರುವುದಲ್ಲ. ಕಾರು ಮೇಲೆ ಹಾರಿ ಪಲ್ಟಿಯಾಗುವ ರೀತಿ ಹಾರುತ್ತಾ, ಮತ್ತೆ ರಸ್ತೆಗಿಳಿಯುತ್ತೆ.

ಮೇಲಕ್ಕೆ ಹಾರಿ, ತಲೆಕೆಳಗಾಗಿ ಚಲಿಸಿದ ಟೆಸ್ಲಾ ಕಾರು

ವಾಷಿಂಗ್ಟನ್, ಅ.16: ವಿಮಾನ, ಹೆಲಿಕಾಪ್ಟರ್‌ಗಳು ಆಕಾಶದಲ್ಲಿ ಹಾರುವ ರೀತಿಯೇ ಮುಂದೊಂದು ದಿನ ಹಾರುವ ಕಾರುಗಳು ಕೂಡ ಬರಬಹುದು ಎಂದು ಜನರು ಕಲ್ಪನೆ ಮಾಡಿದಂತೆ ಇದೀಗ ಟೆಸ್ಲಾ (Tesla) ಕಂಪನಿ ಈ ಪರಿಕಲ್ಪನೆಯನ್ನು ವಾಸ್ತವಕ್ಕೆ ತರಲು ಮುಂದಾಗಿದೆ. ಟೆಸ್ಲಾ ಕಂಪನಿಯು ಹೊಸ ರೋಡ್‌ಸ್ಟರ್ ಕಾರಿನ ಸಾಹಸ ಪ್ರದರ್ಶನ ಮಾಡಲಾಗಿದೆ. ಈ ಕಾರು ವಿಶೇಷವಾಗಿ ನಿರ್ಮಿಸಿದ ಬಾಗಿದ ರ‍್ಯಾಂಪ್ ಮೇಲೆ ಚಲಿಸಿ, ತಲೆಕೆಳಗಾಗಿ ಸಾಗಿದ ನಂತರ ಗಾಳಿಯಲ್ಲಿ ಹಾರಿದಂತೆ ಚಲಿಸಿ ಸುರಕ್ಷಿತವಾಗಿ ಕೆಳಗಿಳಿದಿದೆ. ಅಕ್ಟೋಬರ್ 15ರಂದು ಟೆಕ್ಸಾಸ್‌ನ ಮೆಕ್‌ಗ್ರೆಗರ್‌ನಲ್ಲಿರುವ ಸ್ಪೇಸ್‌ಎಕ್ಸ್‌ ಘಟಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮರುವಿನ್ಯಾಸಗೊಳಿಸಲಾದ ರೋಡ್‌ಸ್ಟರ್ ಕಾರನ್ನು (Roadster car) ಪ್ರದರ್ಶಿಸಲಾಯಿತು.

ಸುಮಾರು ಒಂಬತ್ತು ವರ್ಷಗಳ ಹಿಂದೆ ಮುಂದಿನ ತಲೆಮಾರಿನ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರನ್ನು ಮೊದಲ ಬಾರಿಗೆ ಅನಾವರಣಗೊಳಿಸಿದ ಬಳಿಕ ನಡೆದ ಈ ಪ್ರದರ್ಶನ ಗಮನ ಸೆಳೆದಿದೆ. ಹಾರುವ ಕಾರು ಎಂದರೆ ವಿಮಾನದಂತೆ ಸ್ವತಂತ್ರವಾಗಿ ಹಾರುವುದಲ್ಲ. ಕಾರು ಮೇಲೆ ಹಾರಿ ಪಲ್ಟಿಯಾಗುವ ರೀತಿ ಹಾರುತ್ತಾ, ಮತ್ತೆ ರಸ್ತೆಗಿಳಿಯುತ್ತೆ. ಇಂತಹ ಕಾರುಗಳ ದೈನಂದಿನ ಬಳಕೆ ದೂರದ ಮಾತೇ ಸರಿ.

ಬಹಳ ದಿನಗಳಿಂದ ನಿರೀಕ್ಷಿಸಲಾಗುತ್ತಿದ್ದ ಈ ಎಲೆಕ್ಟ್ರಿಕ್ ಸೂಪರ್‌ಕಾರ್‌ನ ಈ ಪ್ರದರ್ಶನ ಮಹತ್ವದ ಮೈಲಿಗಲ್ಲಾಗಿದೆ. ಬೃಹತ್ ಬಾಗಿದ ರ‍್ಯಾಂಪ್ ಮೇಲೆ ಚಲಿಸಿದ ಕಾರು, ಅದರ ಮೇಲೆ ತಲೆಕೆಳಗಾಗಿ ಮುಂದುವರಿದು, ಬಳಿಕ ಗಾಳಿಯಲ್ಲಿ ಹಾರಿದಂತೆ ಚಲಿಸಿ ಸುರಕ್ಷಿತವಾಗಿ ಕೆಳಗಿಳಿಯಿತು. ಈ ತಂತ್ರಜ್ಞಾನವನ್ನು ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಕಂಪನಿಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಇಲ್ಲಿದೆ ವಿಡಿಯೊ:



Tesla Cars: ಕರ್ನಾಟಕಕ್ಕೆ ಲಗ್ಗೆ ಇಟ್ಟ ಟೆಸ್ಲಾ: ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಮೊದಲ ಎಕ್ಸ್‌ಪೀರಿಯೆನ್ಸ್ ಸೆಂಟರ್ ಆರಂಭ

ಮಸ್ಕ್ ಅವರು ಈ ಸಾಹಸ ಪ್ರದರ್ಶನದ ವಿಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, “ಭವಿಷ್ಯದಲ್ಲಿ ಹಾರುವ ಕಾರುಗಳು ಇರಲಿವೆ ಎಂಬುದು ಈಗ ನಿಜವಾಗುವಂತೆ ಕಾಣುತ್ತಿದೆ” ಎಂಬ ಶೀರ್ಷಿಕೆ ನೀಡಿದ್ದಾರೆ.

ಮರುವಿನ್ಯಾಸಗೊಳಿಸಲಾದ ರೋಡ್‌ಸ್ಟರ್ ಕಾರಿನಲ್ಲಿ ಸ್ಪೇಸ್‌ಎಕ್ಸ್ ಅಭಿವೃದ್ಧಿಪಡಿಸಿದ ಕೋಲ್ಡ್-ಗ್ಯಾಸ್ ಥ್ರಸ್ಟರ್‌ಗಳನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಯು ಒತ್ತಡದಲ್ಲಿರುವ ಅನಿಲವನ್ನು ಬಳಸಿಕೊಂಡು ತಳ್ಳುವ ಬಲವನ್ನು ಉತ್ಪಾದಿಸುತ್ತದೆ. ಈ ವ್ಯವಸ್ಥೆಯು ಕಾರಿನ ಚಲನೆಯನ್ನು ನಿಯಂತ್ರಿಸಲು ಮತ್ತು ಸಾಮಾನ್ಯ ಕಾರುಗಳಿಂದ ಸಾಧ್ಯವಾಗದ ಕೆಲವು ವಿಶೇಷ ಚಲನೆಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ. ಹಾಗಂತ ವಿಮಾನದಂತೆ ಹಾರಲು ಸಾಧ್ಯವಾಗುವುದಿಲ್ಲ.

ಅಂದಹಾಗೆ, ಸಾಮಾನ್ಯ ರಸ್ತೆಯಲ್ಲಿ ಕಾರಿನ ಸಾಹಸ ಪ್ರದರ್ಶನವನ್ನು ಮಾಡಲಾಗಿಲ್ಲ. ಬದಲಾಗಿ ಕಾರಿನ ಸಾಹಸ ಪ್ರದರ್ಶನವನ್ನು ವಿಶೇಷ ವ್ಯವಸ್ಥೆ ಇರುವ ಸ್ಥಳದಲ್ಲಿ ನಡೆಸಲಾಗಿದೆ. ಕಾರು ಗಾಳಿಯಲ್ಲಿ ಚಲಿಸುವಾಗ ಅಪಘಾತವಾಗದಂತೆ ಸುರಕ್ಷಿತವಾಗಿ ಬಳಸಲು ಸಾಧ್ಯವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಾರ್ವಜನಿಕ ರಸ್ತೆಗಳಲ್ಲಿ ಇದನ್ನು ಬಳಸಲು ಸರ್ಕಾರದಿಂದ ಅನುಮತಿ ಸಿಕ್ಕಿದೆಯಾ ಎಂಬುದು ಸದ್ಯಕ್ಕಿರುವ ಪ್ರಶ್ನೆಯಾಗಿದೆ.

ಟೆಸ್ಲಾ ಕಂಪನಿಯು ತನ್ನ ಮುಂದಿನ ತಲೆಮಾರಿನ ರೋಡ್‌ಸ್ಟರ್ ಕಾರನ್ನು 2017ರ ನವೆಂಬರ್‌ನಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಿತ್ತು. ಆರಂಭದಲ್ಲಿ ಈ ಕಾರಿನ ಉತ್ಪಾದನೆ ಬಹಳ ಹಿಂದೆಯೇ ಆರಂಭವಾಗಬೇಕಿತ್ತು. ಆದರೆ, ಯೋಜನೆಯು ಪದೇಪದೇ ವಿಳಂಬವಾಗಿದ್ದು, ಈ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರಿಗಾಗಿ ಗ್ರಾಹಕರು ಹಲವು ವರ್ಷಗಳಿಂದ ಕಾಯುವಂತಾಗಿದೆ.