ಕೇಶವಪ್ರಸಾದ.ಬಿ
ಮುಂಬೈ: ಸೆನ್ಸೆಕ್ಸ್ ಮತ್ತು ನಿಫ್ಟಿ (Stock Market) ಇವತ್ತು ಏರಿಕೆಯಾಗಿವೆ. ಕಳೆದ ಐದು ದಿನಗಳ ಇಳಿಕೆಗೆ ಬ್ರೇಕ್ ಬಿದ್ದಿದೆ. ಅಮೆರಿಕದ ಟಾರಿಫ್ ಕುರಿತ ಬೆಳವಣಿಗೆಗಳನ್ನು ಹೂಡಿಕೆದಾರರು ಕುತೂಹಲದಿಂದ ಅಂದಾಜಿಸುತ್ತಿದ್ದಾರೆ. ಜತೆಗೆ ಅಮೆರಿಕದಲ್ಲಿ ಫೆಡರಲ್ ರಿಸರ್ವ್ ತನ್ನ ಬಡ್ಡಿ ದರಗಳನ್ನು ಕಡಿಮೆ ಮಾಡಬಹುದು ಎಂಬ ನಿರೀಕ್ಷೆ ಉಂಟಾಗಿದೆ. ಈ ನಡುವೆ ಟಾಟಾ ಸಮೂಹದ ಕಂಪನಿಯಾಗಿರುವ ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯು ತನ್ನ ಷೇರುದಾರರಿಗೆ ಷೇರುಗಳ ವಿಭಜನೆಯನ್ನು ಘೋಷಿಸಿದೆ. ಇದರಿಂದಾಗಿ ಪ್ರತಿ 1 ಷೇರಿಗೆ 10 ಷೇರುಗಳು ಸಿಗಲಿದ್ದು, ಈ ಕುರಿತ ವಿವರಗಳನ್ನೂ ನೋಡೋಣ.
ಇವತ್ತು ಸೆನ್ಸೆಕ್ಸ್ 418 ಅಂಕ ಏರಿಕೆಯಾಗಿ 81,018 ಅಂಕಗಳಿಗೆ ಸ್ಥಿರವಾಯಿತು. ನಿಫ್ಟಿ 157 ಅಂಕ ಜಿಗಿದು 24,722ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಸೆಕ್ಟರ್‌ಗಳ ಬಗ್ಗೆ ನೋಡುವುದಿದ್ದರೆ, ನಿಫ್ಟಿ ಆಟೊ, ಮೆಟಲ್, ಫೈನಾನ್ಷಿಯಲ ಸರ್ವೀಸ್, ಎಫ್‌ಎಂಸಿಜಿ, ಫಾರ್ಮಾ, ಪಿಎಸ್‌ಯು ಬ್ಯಾಂಕ್, ಕನ್‌ಸ್ಯೂಮರ್ ಡ್ಯೂರಬಲ್ಸ್ ಮತ್ತು ತೈಲ ಮತ್ತು ಅನಿಲ ವಲಯ ಸಕಾರಾತ್ಮಕವಾಗಿತ್ತು. ನಿಫ್ಟಿ ಐಟಿ ಇಂಡೆಕ್ಸ್ ಇಳಿಕೆ ದಾಖಲಿಸಿತ್ತು.
ಈ ನಡುವೆ ಅಮೆರಿಕದಲ್ಲಿ ಜುಲೈ ತಿಂಗಳಿನ ಜಾಬ್ಸ್ ಡೇಟಾಗಳು ನಿರೀಕ್ಷೆ ಮೀರಿ ಸಾಫ್ಟ್ ಆಗಿತ್ತು. ಅಲ್ಲಿ ಹೊಸ ಉದ್ಯೋಗಗಳ ಸೃಷ್ಟಿ ಕಡಿಮೆಯಾಗಿದೆ. ಜುಲೈನಲ್ಲಿ ಕೇವಲ 73,000 ಉದ್ಯೋಗಗಳು ಸೃಷ್ಟಿಯಾಗಿದೆ. ಆದ್ದರಿಂದ ಫೆಡರಲ್ ರಿಸರ್ವ್, ಸೆಪ್ಟೆಂಬರ್‌ನಲ್ಲಿ ಬಡ್ಡಿ ದರ ಕಡಿತ ಮಾಡುವ ನಿರೀಕ್ಷೆ ಹೆಚ್ಚಿದೆ.
ಇಂದಿನ ಟಾಪ್ ಟ್ರೇಡ್ಸ್ ಬಗ್ಗೆ ನೋಡುವುದಾದರೆ
- ಟಾಟಾ ಪವರ್ ಷೇರು ದರ 3% ಇಳಿಕೆಯಾಗಿದೆ.
-ಫೆಡರಲ್ ಬ್ಯಾಂಕ್ ಷೇರು ದರ 5% ಡ್ರಾಪ್ ಆಗಿದೆ.
-ಡೆಲ್ಲಿವೆರಿ ಷೇರು ದರ 5% ಹೆಚ್ಚಳವಾಗಿದೆ.
-ದಿಲೀಪ್ ಬಿಲ್ಡ್‌ಕಾನ್ 4% ಏರಿಕೆಯಾಗಿದೆ.
- ಹೀರೊ ಮೊಟೊ ಕಾರ್ಪ್, ಭಾರತ್ ಎಲೆಕ್ಟ್ರಾನಿಕ್ಸ್, ಟಾಟಾ ಸ್ಟೀಲ್ ಷೇರು ದರದಲ್ಲಿ 4% ತನಕ ಏರಿಕೆ
ಜಾಗತಿಕ ಮಾರ್ಕೆಟ್ ಹೇಗಿತ್ತು?
-ಎಸ್ & ಪಿ ಫ್ಯೂಚರ್ಸ್ 0.3% ಏರಿತ್ತು.
- ಜಪಾನಿನ ಟಾಪಿಕ್ಸ್ 1.4% ಇಳಿದಿತ್ತು.
- ಆಸ್ಟ್ರೇಲಿಯಾದ ಎಸ್ & ಪಿ /ಎಎಸ್‌ಎಕ್ಸ್ 200 ಸೂಚ್ಯಂಕ 0.2% ಇಳಿಕೆ
- ಹಾಂಕಾಂಗ್‌ನ ಹ್ಯಾಂಗ್ ಸೆಂಗ್ 0.3% ಏರಿಕೆ
ಟಾಟಾ ಗ್ರೂಪ್‌ನ ಕಂಪನಿಯಾಗಿರುವ ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಮೊಟ್ಟ ಮೊದಲ ಬಾರಿಗೆ ಸ್ಟಾಕ್ ಸ್ಪ್ಲಿಟ್ ಅನ್ನು ಘೋಷಿಸಿದೆ. 1:10 ಅನುಪಾತದಲ್ಲಿ ಷೇರುಗಳು ವಿಭಜನೆಯಾಗಲಿದೆ. ಅಂದರೆ ಷೇರುದಾರರಿಗೆ ಪ್ರತಿ 1 ಷೇರಿಗೆ 10 ಷೇರುಗಳು ಸಿಗಲಿದೆ.
ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಕಳೆದ ಏಪ್ರಿಲ್-ಜೂನ್ ಅವಧಿಯ ತ್ರೈಮಾಸಿಕ ಫಲಿತಾಂಶವನ್ನೂ ಪ್ರಕಟಿಸಿದೆ. ಈ ಸಂದರ್ಭ ಆಡಳಿತ ಮಂಡಳಿಯು 10 ರುಪಾಯಿ ಮುಖಬೆಲೆಯ ಷೇರುಗಳನ್ನು ವಿಭಜಿಸುವ ನಿರ್ಧಾರವನ್ನೂ ಪ್ರಕಟಿಸಿದೆ.
ಈ ಷೇರು ವಿಭಜನೆಯಿಂದ ಷೇರುಗಳ ಲಿಕ್ವಿಡಿಟಿ ಹೆಚ್ಚಲಿದೆ. ಅದೇ ರೀತಿ ರಿಟೇಲ್ ಹೂಡಿಕೆದಾರರಿಗೆ ಅಫರ್ಡಬಿಲಿಟಿ ಹೆಚ್ಚಲಿದೆ. ಅಂದರೆ ಕಡಿಮೆ ದರದಲ್ಲಿ ಷೇರುಗಳನ್ನು ಕೊಳ್ಳಲು ಅನುಕೂಲವಾಗಲಿದೆ. ಈಗ ಪ್ರತಿ ಒಂದು ಷೇರಿನ ದರ 7,021 ರುಪಾಯಿ ಇದೆ. ಈ ಷೇರು ವಿಭಜನೆಯ ರೆಕಾರ್ಡ್ ಡೇಟ್ ಇನ್ನೂ ಘೋಷಣೆಯಾಗಿಲ್ಲ.
ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಟಾಟಾ ಇನ್ವೆಸ್ಟ್‌ಮೆಂಟ್ಸ್ 146 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು.
ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಷೇರಿನ ಈಗಿನ ದರ: 7,021/-
5 ವರ್ಷಗಳ ಹಿಂದೆ ಈ ಷೇರಿನ ದರ: 770/-
5 ವರ್ಷಗಳಲ್ಲಿ ಷೇರಿನ ದರ ಏರಿಕೆ ಎಷ್ಟು: 812%
ಹಾಗಾದರೆ ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಕಂಪನಿ ಏನು ಮಾಡುತ್ತಿದೆ? ಇದು ಬ್ಯಾಂಕೇತರ ಹಣಕಾಸು ಕಂಪನಿಯಾಗಿದೆ. ಎನ್‌ಬಿಎಫ್‌ಸಿ ಆಗಿದೆ. ಇದು ಈಕ್ವಿಟಿ ಷೇರು, ಡೆಟ್ ಇನ್‌ಸ್ಟ್ರುಮೆಂಟ್‌ಗಳಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡುತ್ತದೆ. ಲಿಸ್ಟೆಡ್ ಮತ್ತು ಅನ್‌ಲಿಸ್ಟೆಡ್ ಷೇರುಗಳಲ್ಲಿ ಇನ್ವೆಸ್ಟ್ ಮಾಡುತ್ತದೆ.ಬ್ಯಾಂಕ್, ಸಿಮೆಂಟ್, ಕೆಮಿಕಲ್ಸ್, ಫರ್ಟಿಲೈಸರ್ಸ್, ಎಲೆಕ್ಟ್ರಿಸಿಟಿ, ಟ್ರಾನ್ಸ್‌ಮಿಶನ್, ಎಂಜಿನಿಯರಿಂಗ್, ನಿರ್ಮಾಣ, ಮೂಲಸೌಕರ್ಯ, ಹೆಲ್ತ್‌ಕೇರ್, ಹೋಟೆಲ್ಸ್, ಐಟಿ, ರಿಟೇಲ್, ಟೆಕ್ಸ್ ಟೈಲ್ಸ್, ಆಟೊಮೊಬೈಲ್ಸ್ ಮತ್ತಿತರ ಕ್ಷೇತ್ರಗಳಲ್ಲಿ ಇನ್ವೆಸ್ಟ್ ಮಾಡುತ್ತದೆ. ಮುಂಬಯಿನಲ್ಲಿ ಪ್ರಧಾನ ಕಚೇರಿ ಹೊಂದಿದೆ.
ಆದಿತ್ಯ ಇನ್ಫೋಟೆಕ್ ಕಂಪನಿಯ ಷೇರು ಆಗಸ್ಟ್ 5ರಂದು ಲಿಸ್ಟ್ ಆಗಲಿದೆ. ಜಿಎಂಪಿಯ ಪ್ರಕಾರ ಪ್ರೀಮಿಯಂನ 44% ರಷ್ಟು ಹೆಚ್ಚಿನ ದರದಲ್ಲಿ ಲಿಸ್ಟ್ ಆಗುವ ನಿರೀಕ್ಷೆ ಇದೆ. 1300 ಕೋಟಿ ರುಪಾಯಿ ಗಾತ್ರದ ಐಪಿಒ ಇದಾಗಿದ್ದು, ಷೇರುಗಳು 106 ಪಟ್ಟು ಸಬ್‌ಸ್ಕ್ರೈಬ್ ಆಗಿತ್ತು. ಆದಿತ್ಯ ಇನ್ಫೋಟೆಕ್ ಕಂಪನಿಯು ಸಿಪಿ ಪ್ಲಸ್ ಮತ್ತು ಇತರ ಸರ್ವೈವಲೆನ್ಸ್ ಟೆಕ್ನೋಲಜಿಯ ಉತ್ಪನ್ನಗಳನ್ನು 15,000ಕ್ಕೂ ಹೆಚ್ಚು ಪಾರ್ಟನರ್ ಮೂಲಕ ವಿತರಿಸುತ್ತದೆ. 2023-24ರಲ್ಲಿ 3,212 ಕೋಟಿ ರುಪಾಯಿ ಆದಾಯ ಗಳಿಸಿದೆ. ಶ್ರೀ ಸಿಮೆಂಟ್ ಕಂಪನಿಯು ಏಪ್ರಿಲ್-ಜೂನ್ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದ್ದು, ನಿವ್ವಳ ಲಾಭದಲ್ಲಿ 131% ಏರಿಕೆಯಾಗಿದೆ. 643 ಕೋಟಿ ರುಪಾಯಿಗೆ ಜಿಗಿದಿದೆ. ಆದಾಯದಲ್ಲಿ 3% ಹೆಚ್ಚಳವಾಗಿದೆ. ಶ್ರೀ ಸಿಮೆಂಟ್ ಷೇರಿನ ಈಗಿನ ದರ 30,620/- ಆಗಿದೆ.
ಇಂದು ಸ್ಟಾಕ್ ಮಾರ್ಕೆಟ್ ಚೇತರಿಸಲು ಪ್ರಮುಖ ಕಾರಣಗಳ ಬಗ್ಗೆ ನೋಡುವುದಾದರೆ,
- ಆಟೊಮೊಬೈಲ್ ಷೇರುಗಳ ಏರಿಕೆ: ನಿಫ್ಟಿ ಆಟೊ ಇಂಡೆಕ್ಸ್ ಇವತ್ತು 1.1% ಏರಿಕೆ ದಾಖಲಿಸಿತು. ಟಿವಿಎಸ್ ಮೋಟಾರ್ ಕಂಪನಿಯು ಉತ್ತಮ ತ್ರೈಮಾಸಿಕ ರಿಸಲ್ಟ್ ಕೊಟ್ಟಿರುವ ಹಿನ್ನೆಲೆಯಲ್ಲಿ ಷೇರು ದರ 2.4% ಹೆಚ್ಚಳವಾಯಿತು. ಹೀರೊ ಮೊಟೊ ಕಾರ್ಪ್ ಷೇರು ದರ 2.3 ಪರ್ಸೆಂಟ್ ಏರಿಕೆಯಾಯಿತು. ಇದು ಆಟೊಮೊಬೈಲ್ ಸೆಕ್ಟರ್‌ನಲ್ಲಿ ಹೂಡಿಕೆದಾರರ ಸೆಂಟಿಮೆಂಟ್ ಅನ್ನು ಸಕಾರಾತ್ಮಕಗೊಳಿಸಿತ್ತು.
- ಲೋಹ ವಲಯದ ಷೇರುಗಳ ಏರಿಕೆ: ಇವತ್ತು ನಿಫ್ಟಿ ಮೆಟಲ್ ಇಂಡೆಕ್ಸ್ 1.6% ಏರಿಕೆಯಾಯಿತು. ಡಾಲರ್ ಎದುರು ರುಪಾಯಿ ಚೇತರಿಕೆ ಕಮಾಡಿಟಿಸ್ ಸೆಕ್ಟರ್ ಮೇಲೆ ಸಕಾರಾತ್ಮಕ ಪ್ರಭಾವ ಬೀರಿತು.
- ಸಕಾರಾತ್ಮಕ ಗ್ಲೋಬಲ್ ಮಾರ್ಕೆಟ್: ಇವತ್ತು ದಕ್ಷಿಣ ಕೊರಿಯಾದ ಕೋಸ್ಪಿ, ಹಾಂಕಾಂಗ್‌ನ ಹ್ಯಾಂಗ್ ಸೆಂಗ್, ಶಾಂಘೈನ ಎಸ್‌ಎಸ್‌ಇ ಕಂಪೊಸಿಟ್ ಇಂಡೆಕ್ಸ್ ಏರಿಕೆಯಾಗಿತ್ತು. ಅಮೆರಿಕದ ಸ್ಟಾಕ್ ಫ್ಯೂಚರ್ಸ್ ಕೂಡ ಪಾಸಿಟಿವ್ ಆಗಿ ಟ್ರೇಡ್ ಆಗಿತ್ತು.
4.ಕಚ್ಚಾ ತೈಲ ದರ ಇಳಿಕೆ: ಕಚ್ಚಾ ತೈಲ ದರ ಇವತ್ತು ಇಳಿಕೆ ದಾಖಲಿಸಿತು. ಬ್ರೆಂಟ್ ಕಚ್ಚಾ ತೈಲ ದರ 69 ಡಾಲರ್ ಮಟ್ಟದಲ್ಲಿತ್ತು. ಈ ನಡುವೆ ಭಾರತ ಸರಕಾವು ಅಮೆರಿಕದ ಟಾರಿಫ್ ಸಂಘರ್ಷದ ಹಿನ್ನೆಲೆಯಲ್ಲಿ ರಷ್ಯಾ ಮೂಲದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಿದೆ ಎಂಬ ವರದಿಗಳನ್ನು ಕೇಂದ್ರ ಸರಕಾರದ ಅಧಿಕಾರಿಗಳು ನಿರಾಕರಿಸಿದ್ದಾರೆ. ತೈಲ ಸಂಸ್ಕರಣೆ ವಲಯದ ಕಂಪನಿಗಳಿಗೆ ರಷ್ಯಾದಿಂದ ತೈಲ ಖರೀದಿಯನ್ನು ಸ್ಥಗಿತಗೊಳಿಸಲು ಯಾವುದೇ ಆದೇಶ ಹೊರಡಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಸ್ಟಾಕ್ ಮಾರುಕಟ್ಟೆ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ.
ಈ ಸುದ್ದಿಯನ್ನೂ ಓದಿ: Stock Market: ಸೆನ್ಸೆಕ್ಸ್ 700 ಅಂಕ ಪತನ, ಸ್ಟಾಕ್ ಮಾರ್ಕೆಟ್ ಕುಸಿಯುತ್ತಿರುವುದೇಕೆ?
ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಸ್ಥಗಿತಗೊಳಿಸಿರುವ ವರದಿಗಳು ಬಂದಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ಹೇಳಿದ್ದರೂ, ಕೇಂದ್ರ ಸರಕಾರದ ಅಧಿಕಾರಿಗಳು ಅಂಥ ವರದಿಗಳನ್ನು ನಿರಾಕರಿಸಿದ್ದಾರೆ.