ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ (Indigo Flight) ಅಕ್ಟೋಬರ್ 6 ರಿಂದ ಜಾರಿಯಾಗುವಂತೆ ಹೊಸ ವಿಮಾನಯಾನ ದರಗಳನ್ನು ಘೋಷಿಸಿದೆ. ಜಾಗತಿಕ ಮಟ್ಟದಲ್ಲಿ ಜೆಟ್ ಇಂಧನ ದರಗಳಲ್ಲಿ ಆಗುತ್ತಿರುವ ಏರಿಕೆಯ ಹಿನ್ನೆಲೆಯಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ಶುಲ್ಕವನ್ನು ಹೆಚ್ಚಿಸುವುದಾಗಿ ಇಂಡಿಗೋ ತಿಳಿಸಿದೆ. ಪ್ರಯಾಣದ ದೂರವನ್ನು ಅವಲಂಬಿಸಿ 100 ರಿಂದ 350 ರೂಪಾಯಿಗಳಷ್ಟು ವಿಮಾನಯಾನ ಪ್ರಯಾಣ ದರ ಹೆಚ್ಚಳವಾಗಲಿದೆ ಎಂದು ಇಂಡಿಗೋ ಸಂಸ್ಥೆ ಸೋಮವಾರ ತಿಳಿಸಿದೆ.
ಜಾಗತಿಕ ಮಟ್ಟದಲ್ಲಿ ನಿರಂತರವಾಗಿ ಇಂಧನ ಬೆಲೆ ಹೆಚ್ಚಳವಾಗುತ್ತಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಇತ್ತೀಚಿನ ಏರಿಕೆಯು ಶೇಕಡಾ 14 ಕ್ಕಿಂತ ಹೆಚ್ಚಾಗಿದೆ. ವಿಮಾನಯಾನ ಇಂಧನ ವೆಚ್ಚವು ಕಳೆದ ಒಂದು ದಶಕದಲ್ಲೇ ಅತ್ಯಧಿಕ ಮಟ್ಟವನ್ನು ತಲುಪಿದೆ.
ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯ ವೆಚ್ಚದಲ್ಲಿ ವಿಮಾನಯಾನ ಇಂಧನ ಗರಿಷ್ಠ ಪಾಲನ್ನು ಹೊಂದಿರುವುದರಿಂದ ಈ ಬೆಲೆ ಏರಿಕೆ ಅನಿವಾರ್ಯವಾಗಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಇಂಧನ ಶುಲ್ಕವನ್ನು ಸ್ವಲ್ಪ ಮಟ್ಟಿಗೆ ಪರಿಷ್ಕರಿಸಿರುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ.
ಕಳೆದ ಫೆಬ್ರವರಿ ತಿಂಗಳಾಂತ್ಯದಿಂದ ಇರಾನ್ ಮತ್ತು ಯುಎಸ್ ನಡುವೆ ಉಂಟಾಗಿರುವ ಸಂಘರ್ಷದ ಪರಿಣಾಮ ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆ ಏರಿಕೆ ನಿರಂತರವಾಗಿದೆ. ಇದರಲ್ಲಿ ಏವಿಯೇಷನ್ ಟರ್ಬೈನ್ ಇಂಧನ ದರವು ಸೇರಿದೆ. ವಿಮಾನ ಟರ್ಬೈನ್ ಇಂಧನ ಬೆಲೆ ಅಕ್ಟೋಬರ್ 3ರಂದು ಲೀಟರ್‌ಗೆ 16 ರೂಪಾಯಿ ಹೆಚ್ಚಿಸಲಾಗಿದೆ. ದೇಶೀಯ ವಿಮಾನಯಾನ ಸಂಸ್ಥೆಗಳ ಎಟಿಎಫ್ ಬೆಲೆಗಳು ಲೀಟರ್‌ಗೆ 121 ರೂಪಾಯಿಯಿಂದ 137 ರೂಪಾಯಿಗೆ ಏರಿಕೆಯಾಗಿದೆ.
ಇರಾನ್ ಯುದ್ಧದ ಬಳಿಕ ಜೆಟ್ ಇಂಧನ ಬೆಲೆಗಳು ಶೇ. 5.46 ರಷ್ಟು ಏರಿಕೆಯಾಗಿವೆ. ಇಂಧನ ಬೆಲೆ ಹೆಚ್ಚಳವು ವಿಮಾನ ಪ್ರಯಾಣ ದರಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ವಿಮಾನ ಟಿಕೆಟ್ ಬೆಲೆಗಳು ಪ್ರಯಾಣಿಕರ ಬೇಡಿಕೆ, ವಿಮಾನಯಾನ ಸಂಸ್ಥೆಗಳ ನಡುವಿನ ಪೈಪೋಟಿ ಮತ್ತು ಆಸನ ಲಭ್ಯತೆ ಆಧಾರದಲ್ಲಿ ನಿರ್ಧರಿಸಲಾಗುತ್ತದೆ.
191 ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆಯ ಕಂಬ ಕುಸಿತ: ಚಾವಣಿ ಬೀಳದಂತೆ ಬೆಂಚ್, ಮೇಜುಗಳನ್ನು ಆಧಾರವಾಗಿಟ್ಟ ಸಿಬ್ಬಂದಿ!
ವಿಮಾನಯಾನ ಸಂಸ್ಥೆಯ ನಿರ್ವಹಣಾ ವೆಚ್ಚದಲ್ಲಿ ಶೇಕಡಾ 35 ರಿಂದ 40ರಷ್ಟು ವಾಯುಯಾನ ಇಂಧನಕ್ಕೆ ವೆಚ್ಚವಾಗುತ್ತದೆ. ಎಟಿಎಫ್ ದರ ಹೆಚ್ಚಳವು ಉದ್ಯಮಕ್ಕೆ ದೊಡ್ಡ ಹೊಡೆತವನ್ನು ನೀಡುತ್ತದೆ. ಇದನ್ನು ಸರಿದೂಗಿಸಿಕೊಳ್ಳಲು ವಿಮಾನಯಾನ ಸಂಸ್ಥೆಗಳು ವಿಮಾನ ಟಿಕೆಟ್ ದರಗಳನ್ನು ಹೆಚ್ಚಿಸುತ್ತವೆ.