ನವದೆಹಲಿ, ಆ. 25: ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ಏಕೀಕೃತ ಪಾವತಿ ಇಂಟರ್ಫೇಸ್ (UPI) ಯಶಸ್ವಿಯಾಗಿ ಒಂದು ದಶಕವನ್ನು ಪೂರೈಸಿದೆ (10 Years Of UPI). ಈ ಮಹತ್ವದ ಮೈಲುಗಲ್ಲಿನ ಸಂದರ್ಭದಲ್ಲಿ ಭಾರತದ ಡಿಜಿಟಲ್ ಪಾವತಿ ಪಯಣವನ್ನು ಸ್ಮರಿಸಿಕೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi), ಯುಪಿಐ ಬಳಕೆಯ ಅನುಭವಗಳನ್ನು ಮತ್ತು ಅದು ದೈನಂದಿನ ಜೀವನವನ್ನು ಹೇಗೆ ಸುಲಭಗೊಳಿಸಿದೆ ಎಂಬುದನ್ನು ಹಂಚಿಕೊಳ್ಳುವಂತೆ ದೇಶದ ಜನತೆಗೆ ಆತ್ಮೀಯ ಆಹ್ವಾನ ನೀಡಿದ್ದಾರೆ.
ಈ ಕುರಿತು ತಮ್ಮ ಅಧಿಕೃತ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "ಒಂದು ದಶಕದ ಹಿಂದೆ ಆರಂಭವಾದ ಯುಪಿಐ, ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯ ಪಯಣದಲ್ಲಿ ಅತ್ಯಂತ ಪ್ರಮುಖ ತಿರುವಾಗಿ ಹೊರಹೊಮ್ಮಿದೆ. ಇಂದು ಯುಪಿಐ ಬೆಳೆದು ನಿಂತಿರುವ ಅಗಾಧ ಪ್ರಮಾಣ ಮತ್ತು ಅದರ ವ್ಯಾಪ್ತಿಯು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ವಿಷಯವಾಗಿದೆ" ಎಂದು ಶ್ಲಾಘಿಸಿದ್ದಾರೆ.
ಪ್ರಧಾನಿ ಮೋದಿ ಅವರ ಎಕ್ಸ್ ಪೋಸ್ಟ್:
ಅಂಕಿಅಂಶಗಳಲ್ಲಿ ಯುಪಿಐನ ಬೃಹತ್ ಬೆಳವಣಿಗೆ
ದಾಖಲೆಯ ವಹಿವಾಟು: 2016-17ರಲ್ಲಿ ಕೇವಲ 1.78 ಕೋಟಿ ವಹಿವಾಟುಗಳೊಂದಿಗೆ ಆರಂಭವಾದ ಯುಪಿಐ, 2025-26ರ ಆರ್ಥಿಕ ವರ್ಷದ ವೇಳೆಗೆ ಬರೋಬ್ಬರಿ 24,162 ಕೋಟಿ ವಹಿವಾಟುಗಳನ್ನು ನಡೆಸಿ ಶೇ. 188 ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರವನ್ನು ದಾಖಲಿಸಿದೆ.
ಒಂದೇ ತಿಂಗಳಲ್ಲಿ ಸಾವಿರಾರು ಕೋಟಿ ವಹಿವಾಟು
2026ರ ಜುಲೈಯಲ್ಲಿ ಒಂದೇ ತಿಂಗಳಲ್ಲಿ 2,366 ಕೋಟಿ ವಹಿವಾಟುಗಳು ನಡೆದಿದ್ದು, ಪ್ರತಿದಿನ ಸರಾಸರಿ 76 ಕೋಟಿಗೂ ಅಧಿಕ ಡಿಜಿಟಲ್ ಪಾವತಿಗಳು ದಾಖಲಾಗಿವೆ.
Yuva Samvada; ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ ಅತ್ಯಗತ್ಯ: ಡಿಸಿ ಶುಭ ಕಲ್ಯಾಣ್
ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನ
ಜಗತ್ತಿನಾದ್ಯಂತ ನಡೆಯುವ ಪ್ರತಿ 2 ರಿಯಲ್-ಟೈಮ್ ಡಿಜಿಟಲ್ ವಹಿವಾಟುಗಳಲ್ಲಿ ಒಂದು ವಹಿವಾಟು ಭಾರತದಲ್ಲೇ ನಡೆಯುತ್ತಿದೆ. ಯುಪಿಐ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) "ವಿಶ್ವದ ಅತಿ ದೊಡ್ಡ ರಿಟೇಲ್ ಫಾಸ್ಟ್ ಪೇಮೆಂಟ್ ಸಿಸ್ಟಮ್" ಎಂದು ಮುಕ್ತಕಂಠದಿಂದ ಗುರುತಿಸಿ ಪ್ರಶಂಸಿಸಿದೆ.
ಭಾರತದ ಗಡಿ ದಾಟಿರುವ ಯುಪಿಐ ಸೇವೆಗಳು ಇಂದು ಯುಎಇ, ಫ್ರಾನ್ಸ್, ಸಿಂಗಾಪುರ, ಭೂತಾನ್, ಶ್ರೀಲಂಕಾ, ನೇಪಾಳ, ಮಾರಿಷಸ್, ಕತಾರ್, ಕಾಂಬೋಡಿಯಾ, ಗ್ರೀಸ್ ಹಾಗೂ ಮಾಲ್ಡೀವ್ಸ್ ಸೇರಿ ಒಟ್ಟು 11ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಸಕ್ರಿಯವಾಗಿ ವಿಸ್ತರಣೆಗೊಂಡಿವೆ. ಬೀದಿಬದಿಯ ಸಣ್ಣ ಚಹಾ ಅಂಗಡಿಯಿಂದ ಹಿಡಿದು ಬೃಹತ್ ವ್ಯಾಪಾರ ಮಳಿಗೆಗಳವರೆಗೆ ಸಾರ್ವಜನಿಕರ ಬದುಕನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿರುವ ಯುಪಿಐ ಪಯಣದ ಬಗ್ಗೆ ಪ್ರತಿಯೊಬ್ಬ ನಾಗರಿಕರು ತಮ್ಮ ಅನಿಸಿಕೆಗಳನ್ನು ತಪ್ಪದೇ ಹಂಚಿಕೊಳ್ಳಬೇಕೆಂದು ಪ್ರಧಾನಿ ಮನವಿ ಮಾಡಿದ್ದಾರೆ.