ಬೆಂಗಳೂರು: ದೇಶದಲ್ಲಿ ಗೃಹ ಬಳಕೆಯ ಅನಿಲ (Domestic gas) ಪೂರೈಕೆಗೆ ಯಾವುದೇ ತೊಂದರೆಯಾಗಿಲ್ಲ. ಈ ಕುರಿತು ಗ್ರಾಹಕರು ಗೊಂದಲಕ್ಕೆ ಒಳಗಾಗಬೇಡಿ ಎಂದು ಎಲ್‌ಪಿಜಿ (LPG) ಸಿಲಿಂಡರ್ ವಿತರಕರೊಬ್ಬರು ಅಭಯ ನೀಡಿರುವ ವಿಶ್ವವಾಣಿಯ ವಿಡಿಯೊ (Vishwavani TV) ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದೆ. ಈ ವಿಡಿಯೊ ಸುಮಾರು 1ಕೋಟಿ ( 9.5 ಮಿಲಿಯನ್‌ಗೂ) ಹೆಚ್ಚು ಮಂದಿ ವೀಕ್ಷಿಸಿರುವುದು ಈಗ ದಾಖಲೆಯಾಗಿದೆ. ಕಳೆದ ಕೆಲವು ದಿನಗಳಿಂದ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆಯ (Middle East conflict) ಪರಿಣಾಮ ದೇಶದಲ್ಲಿ ಎಲ್‌ಪಿಜಿ (LPG) ಪೂರೈಕೆ ಇರುವ ವದಂತಿಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ವಿತರಕರೊಬ್ಬರು ವಿಶ್ವವಾಣಿ ಟಿವಿಯೊಂದಿಗೆ ಮಾತನಾಡಿದ್ದಾರೆ.
ದೇಶದಲ್ಲಿ ಗೃಹ ಬಳಕೆಯ ಅಡುಗೆ ಅನಿಲ ಪೂರೈಕೆಗೆ ಯಾವುದೇ ತೊಂದರೆಯಾಗಿಲ್ಲ. ಯಾರೂ ಕೂಡ ಗಾಬರಿಯಾಗಬೇಡಿ. ಇರಾನ್ ಯುದ್ಧ ಪ್ರಾರಂಭಿಸಿದ ಬಳಿಕ ದೇಶಾದ್ಯಂತ ಅಡುಗೆ ಅನಿಲ ಬಳಕೆದಾರರು ಆತಂಕಿತರಾಗಿದ್ದು, ಜನರು ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ. ಸಮಯಕ್ಕೆ ಸರಿಯಾಗಿ ಅಡುಗೆ ಅನಿಲ ನಿಮ್ಮ ಮನೆಯನ್ನು ತಲುಪುತ್ತದೆ ಎಂದು ಗ್ಯಾಸ್ ಸಿಲಿಂಡರ್ ವಿತರಕರೊಬ್ಬರು ತಿಳಿಸಿದ್ದಾರೆ.
ದೇಶದಲ್ಲಿ ಎಲ್‌ಪಿಜಿ ಕೊರತೆಯಾಗಿಲ್ಲ, ವಿತರಣೆಗೆ ಬೇಕಾಗುವಷ್ಟು ಇದೆ: ಕೇಂದ್ರ ಸರ್ಕಾರ ಸ್ಪಷ್ಟನೆ
ಜನರು ಸುಮ್ಮನೆ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬುಕ್ಕಿಂಗ್ ತೊಂದರೆಗಳು. ಹಿಂದೆಲ್ಲ ಸಿಲಿಂಡರ್ ಖಾಲಿಯಾದ ಎರಡು ಮೂರು ದಿನಗಳಲ್ಲಿ ಬುಕ್ಕಿಂಗ್ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈಗ ಒಂದು ಮನೆಗೆ ಒಂದು ಸಿಲಿಂಡರ್ ವಿತರಣೆಯಾದ 25 ಅಥವಾ 30 ದಿನಗಳ ಬಳಿಕವೇ ಬುಕ್ಕಿಂಗ್ ಮಾಡಬಹುದಾಗಿದೆ ಎಂದು ಅವರು ಹೇಳಿದರು.
ಮನೆಯಲ್ಲಿ ಸಿಂಗಲ್ ಸಿಲಿಂಡರ್ ಹೊಂದಿರುವವರು 25 ದಿನಗಳ ಬಳಿಕ ಹಾಗೂ ಡಬಲ್ ಸಿಲಿಂಡರ್ ಹೊಂದಿರುವವರು 30 ದಿನದ ಬಳಿಕ ಮಾತ್ರ ಬುಕ್ಕಿಂಗ್ ಮಾಡಲು ಸಾಧ್ಯ. ಗೃಹ ಬಳಕೆಯ ಅನಿಲ ಕೊರತೆ ಇಲ್ಲ. ಸುಮ್ಮನೆ ಆತಂಕಿತರಾಗಬೇಡಿ. ಬುಕ್ಕಿಂಗ್ ಆದ ಕೂಡಲೇ ನಿಗದಿತ ಸಮಯದಲ್ಲಿ ಅಡುಗೆ ಅನಿಲ ಸಿಲಿಂಡರ್ ಮನೆಗೆ ಬರಲಿದೆ ಎಂದು ಅವರು ಭರವಸೆ ನೀಡಿದರು.
ವಾಣಿಜ್ಯ ಸಿಲಿಂಡರ್ ಅಂದರೆ ಹೊಟೇಲ್ ಗಳಿಗೆ ವಿತರಣೆಯಾಗುವ 19 ಕೆ.ಜಿ. ಸಿಲಿಂಡರ್ ಪೂರೈಕೆಗೆ ಮಾತ್ರ ತೊಂದರೆಯಾಗಿದೆ. ಇದರ ಬುಕ್ಕಿಂಗ್ ಸ್ವೀಕರಿಸಲಾಗುತ್ತಿಲ್ಲ. ಗೃಹ ಬಳಕೆಯ 14 ಕೆ.ಜಿ. ಸಿಲಿಂಡರ್ ಮನೆ ಬಾಗಿಲಿಗೆ ಬರುತ್ತದೆ. ಸುಮ್ಮನೆ ಗೊಂದಲಕ್ಕೆ ಒಳಗಾಗಬೇಡಿ ಎಂದು ಅವರು ತಿಳಿಸಿದರು.
ಕಳೆದ ಕೆಲವು ದಿನಗಳಿಂದ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಪರಿಣಾಮ ದೇಶದಲ್ಲಿ ಎಲ್‌ಪಿಜಿ ಬುಕ್ಕಿಂಗ್ ಹೆಚ್ಚಾಗಿದೆ. ಜನರು ಆತಂಕಿತರಾಗಿ ಬುಕ್ಕಿಂಗ್ ಹೆಚ್ಚು ಮಾಡುತ್ತಿದ್ದಾರೆ. ಇದರಿಂದ ಪೂರೈಕೆ ವಿಳಂಬವಾಗಿದ್ದು, ಹೀಗಾಗಿ ಬುಕ್ಕಿಂಗ್ ಕಡಿಮೆ ಮಾಡಲು ಸಮಯ ವಿಸ್ತರಣೆ ಮಾಡಲಾಗಿದೆ. ಇದರಿಂದ ಆದ್ಯತೆ ಮೇರೆಗೆ ಸಿಲಿಂಡರ್ ವಿತರಣೆ ಸಾಧ್ಯವಾಗುತ್ತದೆ ಎಂಬುದನ್ನು ಕೇಂದ್ರ ಸರ್ಕಾರ ಕೂಡ ಶನಿವಾರ ಸ್ಪಷ್ಟ ಪಡಿಸಿತ್ತು.
ವಿಶ್ವದ ಎರಡನೇ ಅತಿ ದೊಡ್ಡ ಎಲ್‌ಪಿಜಿ ಖರೀದಿದಾರ ರಾಷ್ಟ್ರವಾಗಿರುವ ಭಾರತಕ್ಕೆ ಸುಮಾರು ಶೇಕಡಾ 90ರಷ್ಟು ಎಲ್‌ಪಿಜಿ ಪೂರೈಕೆ ಇರಾನ್‌ನ ಹೊರ್ಮುಜ್ ಜಲಸಂಧಿಯ ಮೂಲಕ ಬರುತ್ತದೆ. ಪಶ್ಚಿಮ ಏಷ್ಯಾ ಭಾಗದಲ್ಲಿ ಉಂಟಾಗಿರುವ ಉದ್ವಿಗ್ನತೆಯಿಂದ ಈ ಮಾರ್ಗದಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಆದರೂ ದೇಶದಲ್ಲಿ ಕಚ್ಚಾ ತೈಲ ಪೂರೈಕೆ ಸಮರ್ಪಕವಾಗಿದೆ. ಡೀಸೆಲ್ ಮತ್ತು ಪೆಟ್ರೋಲ್ ಲಭ್ಯವಿದೆ ಎಂಬುದಾಗಿ ಸರ್ಕಾರ ಹೇಳಿದೆ.
ಎಲ್‌ಪಿಜಿ ಸಿಲಿಂಡರ್ ಬುಕಿಂಗ್ ನಿಯಮದಲ್ಲಿ ಬದಲಾವಣೆ; ಸಬ್ಸಿಡಿ ಪಡೆಯಲು ಇ-ಕೆವೈಸಿ ಕಡ್ಡಾಯ?
ಇರಾನ್ ಜೊತೆ ಮಾತುಕತೆಯ ಬಳಿಕ ಇದೀಗ ದೇಶಕ್ಕೆ ಸೌದಿ ಅರೇಬಿಯಾದಿಂದ ಎಲ್‌ಪಿಜಿಯನ್ನು ಹೊತ್ತ ಶಿವಾಲಿಕ್ ಹಡಗು ಬಂದು ತಲುಪಿದೆ. ಸುಮಾರು 40,000 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಟ್ಯಾಂಕರ್ ಶಿವಾಲಿಕ್ ಗುಜರಾತ್‌ನ ಮುಂದ್ರಾ ಬಂದರು ತಲುಪಿದ್ದು, ಶೀಘ್ರದಲ್ಲೇ ಇನ್ನೊಂದು ಹಡಗು ನಂದಾದೇವಿ ಕೂಡ ಬಂದು ತಲುಪಲಿದೆ. ಹೀಗಾಗಿ ದೇಶದಲ್ಲಿ ಉಂಟಾಗಿರುವ ಎಲ್‌ಪಿಜಿ ಬಿಕ್ಕಟ್ಟು ಕೆಲವೇ ದಿನಗಳಲ್ಲಿ ಪರಿಹಾರವಾಗಲಿದೆ.