ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸ್ಟಾಕ್ ಮಾರ್ಕೆಟ್‌ನಲ್ಲಿ ಸೂಚ್ಯಂಕಗಳು ಪತನಕ್ಕೀಡಾಗಿವೆ. ಸೆನ್ಸೆಕ್ಸ್ ಮತ್ತು ನಿಫ್ಟಿ ತಲಾ 2 ಪರ್ಸೆಂಟ್ ಇಳಿಕೆಯಾಗಿವೆ. ಅಮೆರಿಕ ಮತ್ತು ಇಸ್ರೇಲ್‌ನ ಕ್ಷಿಪಣಿ ದಾಳಿಗೆ ಇರಾನ್ ನ ಸರ್ವಾಧಿಕಾರಿ ಅಯೊತೊಲ್ಲಾ ಆಲಿ ಖಮೇನಿ ಹತರಾದ ಬಳಿಕ ಯುದ್ಧ ತೀವ್ರಗೊಂಡಿದೆ. ಇಂದು ಸೆನ್ಸೆಕ್ಸ್ 1,048 ಅಂಕ ಕಳೆದುಕೊಂಡು 80,238 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 312 ಅಂಕ ನಷ್ಟದಲ್ಲಿ 24,865ಕ್ಕೆ ಸ್ಥಿರವಾಯಿತು. ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಒಟ್ಟು ಷೇರು ಮಾರುಕಟ್ಟೆ ಬಂಡವಾಳ ಮೌಲ್ಯವು 463 ಲಕ್ಷ ಕೋಟಿ ರುಪಾಯಿಗಳಿಂದ 456 ಲಕ್ಷ ಕೋಟಿ ರುಪಾಯಿಗೆ ಇಳಿಕೆಯಾಗಿದ್ದು, ಹೂಡಿಕೆದಾರರಿಗೆ 6.5 ಲಕ್ಷ ಕೋಟಿ ರುಪಾಯಿ ನೋಶನಲ್ ನಷ್ಟ ಉಂಟಾಗಿದೆ.
ಆಟೊಮೊಬೈಲ್, ಕನ್‌ಸಮ್ಷನ್, ಆಯಿಲ್ ಆಂಡ್ ಗ್ಯಾಸ್, ರಿಯಾಲ್ಟಿ ಅತಿ ಹೆಚ್ಚು ನಷ್ಟಕ್ಕೀಡಾಯಿತು. ಬ್ಯಾಂಕಿಂಗ್ ಮತ್ತು ಹಣಕಾಸು ಷೇರುಗಳು ಒತ್ತಡದಲ್ಲಿತ್ತು. ಐಟಿ, ಫಾರ್ಮಾ ಷೇರುಗಳೂ ಬೆಂಬಲ ಕೊಡುವಲ್ಲಿ ವಿಫಲವಾಯಿತು.
ವಿಡಿಯೊ ಇಲ್ಲಿದೆ:
ಸೆನ್ಸೆಕ್ಸ್-ನಿಫ್ಟಿ ಕುಸಿತಕ್ಕೆ ಕಾರಣಗಳು:
- ಮಧ್ಯಪ್ರಾಚ್ಯದಲ್ಲಿ ಯುದ್ಧ
- ಕಚ್ಚಾ ತೈಲ ದರ ಏರಿಕೆ
- ಡಾಲರ್ ಎದುರು ರುಪಾಯಿ ಇಳಿಕೆ
- ಎಫ್‌ಐಐಗಳಿಂದ ಷೇರುಗಳ ಮಾರಾಟ
ಭಾರತ, ಮಾತ್ರವಲ್ಲದೆ ಜಗತ್ತಿನ ನಾನಾ ಭಾಗಗಳಲ್ಲಿ ಷೇರು ಸೂಚ್ಯಂಕಗಳು ಕುಸಿತಕ್ಕೀಡಾಗಿವೆ.
ಎಸ್ &ಪಿ 500 ಫ್ಯೂಚರ್ಸ್ 1.4% ಇಳಿಕೆಯಾಗಿದೆ.
ನಾಸ್‌ಡಾಕ್ 100 ಫ್ಯೂಚರ್ಸ್ 1.7% ತಗ್ಗಿದೆ.
MSCI ಏಷ್ಯಾ ಪೆಸಿಫಿಕ್ ಇಂಡೆಕ್ಸ್ 1.7% ಇಳಿಕೆಯಾಗಿದೆ.
ಹಾಂಕಾಂಗ್‌ನ ಹ್ಯಾಂಗ್ ಸೆಂಗ್ 2.1% ತಗ್ಗಿದೆ.
ಶಾಂಘೈ ಕಂಪೊಸಿಟ್ 0.5% ಏರಿಕೆಯಾಗಿದೆ.
ಪಾಕಿಸ್ತಾನದ ಕೆಎಸ್‌ಇ-30 ಇಂಡೆಕ್ಸ್ 10% ಪತನವಾಗಿದೆ.
ಮಾರ್ಚ್ 3ರಂದು ಹೋಳಿ ಹಬ್ಬದ ಪ್ರಯುಕ್ತ ಬಿಎಸ್‌ಇ ಮತ್ತು ಎನ್‌ಎಸ್‌ಇಗೆ ರಜೆ ಇರಲಿದೆ.
ಇವತ್ತು ಅದಾನಿ ಪೋರ್ಟ್ಸ್ ಮತ್ತು ಸ್ಪೆಶಲ್ ಇಕನಾಮಿಕ್ ಝೋನ್‌ನ ಷೇರುಗಳಲ್ಲಿ 6% ಇಳಿಕೆಯಾಗಿದೆ. ಮಿಡ್ಲ್ ಈಸ್ಟ್‌ನಲ್ಲಿ ಜಿಯೊಪೊಲಿಟಿಕಲ್ ಟೆನ್ಷನ್ ಹೆಚ್ಚಿರುವುದು ಇದಕ್ಕೆ ಕಾರಣ. ಅದಾನಿ ಪೋರ್ಟ್ಸ್ ಇಸ್ರೇಲ್‌ನಲ್ಲಿರುವ ಹಫಿಯಾ ಪೋರ್ಟ್ ಅನ್ನು ನಿರ್ವಹಿಸುತ್ತಿದೆ. ಪ್ರಸ್ತುತ ಬಂದರು ನಿರ್ವಹಣೆಗೆ ಯಾವುದೇ ಸಮಸ್ಯೆ ಆಗಿಲ್ಲ ಎಂದು ಕಂಪನಿ ತಿಳಿಸಿದೆ.
ಇರಾನ್ ಅಧ್ಯಕ್ಷ ಅಯತೊಲ್ಲಾ ಖಮೇನಿಯ ಹತ್ಯೆಯ ಬಳಿಕ ಅಮೆರಿಕ- ಇಸ್ರೇಲ್ ಸೇನಾಪಡೆಗಳು ಜಂಟಿಯಾಗಿ ಇರಾನ್‌ನ ಹಲವಾರು ತಾಣಗಳ ಮೇಲೆ ದಾಳಿ ನಡೆಸಿವೆ. ಪ್ರತಿಯಾಗಿ ಇರಾನ್, ಇಸ್ರೇಲ್‌ನ ಹಲವು ನಗರಗಳ ಮೇಲೆ ದಾಳಿ ನಡೆಸಿದೆ. ಜತೆಗೆ ಕತಾರ್, ಯುಎಇ, ಕುವೈತ್, ಬಹರೇನ್‌ನ ಆಯಕಟ್ಟಿನ ಪ್ರದೇಶಗಳು ಮತ್ತು ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿವೆ.
ನಿಫ್ಟಿ 50ಯಲ್ಲಿ ಹೆಚ್ಚು ನಷ್ಟಕ್ಕೀಡಾದ ಷೇರುಗಳು:
ಇಂಟರ್ ಗ್ಲೋಬ್: 4,520/- : 6.36%
ಎಲ್&ಟಿ : 4,067/- : 4.95%
ಅದಾನಿ ಪೋರ್ಟ್ಸ್: 1,470/- : 3.34%
ಮಾರುತಿ ಸುಜುಕಿ : 14,388/- : 3.16%
ಟಾಟಾ ಮೋಟಾರ್ಸ್ ಪಿವಿ: 370/-: 3.15%
ಏಷ್ಯನ್ ಪೇಂಟ್ಸ್: 2,307/- : 2.91%
ಬಜಾಜ್ ಫಿನ್ ಸರ್ವ್: 1,942/- 2.59%
ನಿಫ್ಟಿ 50ಯಲ್ಲಿ ಲಾಭ ಗಳಿಸಿದ ಷೇರುಗಳು:
ಕ್ವಾಲಿಟಿ ವಾಲ್ಸ್: 28/- : 7.24%
BEL : 453/- : 2.09%
ಹಿಂಡಾಲ್ಕೊ : 940/- : 1.66%
ONGC : 282/- 0.90%
ಸನ್ ಫಾರ್ಮಾ: 1,753/- 0.90%
ಡಾ. ರೆಡ್ಡೀಸ್: 1,294/- : 0.63%
ITC : 314/- : 0.42%
ಇವತ್ತು 850 ಷೇರುಗಳು 52 ವಾರಗಳ ಕನಿಷ್ಠ ಮಟ್ಟಕ್ಕೆ ಇಳಿದಿವೆ. ಅವುಗಳಲ್ಲಿ ಟಿಸಿಎಸ್, ಐಟಿಸಿ, ಟ್ರೆಂಟ್, ವಿಪ್ರೊ, ಕೊಫೋರ್ಜ್, ಡಿಕ್ಸಾನ್ ಟೆಕ್ನಾಲಜೀಸ್, ಇನ್ಫೋ ಎಡ್ಜ್ (ಇಂಡಿಯಾ), ಶ್ರೀ ಸಿಮೆಂಟ್, ಎಸ್ ಆರ್ ಎಫ್, ಸುಜ್ಲಾನ್ ಎನರ್ಜಿ, ಯುನೈಟೆಡ್ ಸ್ಪಿರಿಟ್ಸ್ ಇವೆ.
ಇರಾನ್ ಯುದ್ಧದ ಪರಿಣಾಮ ಬಂಗಾರ-ಬೆಳ್ಳಿಯ ದರ ಗಣನೀಯ ಏರಿಕೆಯಾಗಿದೆ. ಚಿನ್ನದ ದರದಲ್ಲಿ ಪ್ರತಿ 10 ಗ್ರಾಮ್‌ಗೆ ಇವತ್ತು 6,000/- ಹೆಚ್ಚಳವಾಗಿದ್ದರೆ, ಬೆಳ್ಳಿಯ ದರದಲ್ಲಿ ಪ್ರತಿ ಕೆಜಿಗೆ 9,500/- ಹೆಚ್ಚಳವಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಬಂಗಾರದ ದರ 5,200 ಡಾಲರ್‌ಗೆ ಏರಿಕೆಯಾಗಿದೆ. ಒಂದು ವೇಳೆ ಯುದ್ಧದ ಪರಿಸ್ಥಿತಿ ದೀರ್ಘಾವಧಿಗೆ ಮುಂದುವರಿದರೆ, ಚಿನ್ನದ ದರ ಪ್ರತಿ 10 ಗ್ರಾಮ್‌ಗೆ 2 ಲಕ್ಷ ರುಪಾಯಿಗೆ ಏರಿಕೆಯಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಇವತ್ತು ಮಧ್ಯಂತರದಲ್ಲಿ ಚಿನ್ನದ ದರ ಪ್ರತಿ 10 ಗ್ರಾಮ್‌ಗೆ 1,67,915 ರುಪಾಯಿಗಳ ಮಟ್ಟದಲ್ಲಿತ್ತು. ಎಂಸಿಎಕ್ಸ್‌ನಲ್ಲಿ ಬೆಳ್ಳಿಯ ದರ ಪ್ರತಿ ಕೆಜಿಗೆ 2,78,644 ರುಪಾಯಿಯಷ್ಟು ಇತ್ತು.
ಇರಾನ್ ಯುದ್ಧದ ಬೆನ್ನಲ್ಲೇ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 77 ಡಾಲರ್‌ಗೆ ಏರಿಕೆಯಾಗಿದೆ. ಬ್ರೆಂಟ್ ಫ್ಯೂಚರ್ಸ್ ದರ ಬ್ಯಾರೆಲ್‌ಗೆ 82 ರುಪಾಯಿಗೆ ಹೆಚ್ಚಳವಾಗಿದೆ. ಹಾಗಾದರೆ ಮುಂದೇನಾಗಬಹುದು ಎಂಬ ಆತಂಕ ಇದೆ. ಭಾರತ ಈಗ ಹಲವು ಮೂಲಗಳಿಂದ ತೈಲ ಖರೀದಿಸುತ್ತಿದೆ. ಆದರೆ ದರ ಏರಿಕೆಯೇ ಸವಾಲಾಗಿದೆ. ಹೀಗಿದ್ದರೂ ಕೆಲ ಬ್ರೋಕರೇಜ್ ಕಂಪನಿಗಳ ಪ್ರಕಾರ ಜಿಯೊ ಪಾಲಿಟಿಕಲ್ ಬಿಕ್ಕಟ್ಟಿನ ಸಂದರ್ಭ ಕಚ್ಚಾ ತೈಲ ದರಗಳು 25%-300% ತನಕ ಏರಿಕೆಯಾದರೂ, ಅದು ತಾತ್ಕಾಲಿಕವಾಗಿರುತ್ತವೆ. ಭೌತಿಕವಾಗಿ ಪೂರೈಕೆ ಕಡಿಮೆಯಾದಾಗ ದರ ಏರುತ್ತದೆ. ಪೂರೈಕೆ ಸಹಜ ಸ್ಥಿತಿಗೆ ಮರಳಿದಾಗ ದರಗಳೂ ಇಳಿಯುತ್ತವೆ.