ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದರೂ ಕೂಡ ಇದು ಭಾರತದ ಮೇಲೆ ಅಷ್ಟಾಗಿ ಪರಿಣಾಮ ಬೀರಿಲ್ಲ. ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿ ರಿಟೈಲ್ ದರವನ್ನು ಒಂದೇ ರೀತಿಯಲ್ಲಿ ಇರಿಸಲಾಗಿದೆ. ಯಾಕೆಂದರೆ ನಾಳೆ ಕಚ್ಚಾ ತೈಲದ ದರ ಇಳಿಕೆಯಾಗುವ ನಿರೀಕ್ಷೆ ಇದೆ. ಒಂದು ವೇಳೆ ದೀರ್ಘಾವಧಿಯಲ್ಲಿ ಇದು ಇಳಿಕೆಯಾಗದೇ ಇದ್ದರೆ ಆಗ ದರ ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಮುಂದೆ ಸಾಕಷ್ಟು ತೊಂದರೆಗಳು ಎದುರಾಗಬಹುದು ಎನ್ನುತ್ತಾರೆ ಖ್ಯಾತ ಹೂಡಿಕೆ ತಜ್ಞ ಕೌಟಿಲ್ಯ ಕ್ಯಾಪಿಟಲ್ ಸಂಸ್ಥಾಪಕ (Founder of cautilya Capital) ಅಶೋಕ್ ದೇವನಾಂಪ್ರಿಯ.
'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಕಚ್ಚಾ ತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 70- 75 ಡಾಲರ್ ಇದ್ದರೆ ಭಾರತಕ್ಕೆ ಒಳ್ಳೆಯದು. 50 ಡಾಲರ್ ಗಿಂತ ಕೆಳಗೆ ಇದ್ದರೆ ಮತ್ತಷ್ಟು ಒಳ್ಳೆಯದು ಎಂದು ಹೇಳಿದರು.
ಅನ್ ಲಿಸ್ಟೆಡ್ ಸ್ಟಾಕ್ ಮೇಲೆ ಹೂಡಿಕೆ ಮಾಡುವಾಗ ಇರಲಿ ಎಚ್ಚರ
ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ಇರಾನ್ ಮೇಲೆ ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ದಾಳಿ ನಡೆಸಿದ ಮೇಲೆ ಇದಕ್ಕೆ ಪ್ರತಿಯಾಗಿ ಇರಾನ್ ಹೊರ್ಮುಜ್ ಜಲ ಸಂಧಿಯನ್ನು ಮುಚ್ಚಿತ್ತು. ಇದರ ಪರಿಣಾಮವಾಗಿ ಕಚ್ಚಾ ತೈಲ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ 120 ಡಾಲರ್ ವರೆಗೆ ಹೋಗಿದೆ ಎಂದರು.
ಕಚ್ಚಾ ತೈಲ ಬೆಲೆ ದೀರ್ಘಾವಧಿಗೆ 100 ಡಾಲರ್ ಮೇಲೆ ಇದ್ದರೆ ಅದರ ಪರಿಣಾಮ ವಿಶ್ವದ ಎಲ್ಲಾ ರಾಷ್ಟ್ರಗಳು ಎದುರಿಸಬೇಕಾಗುತ್ತದೆ. 100 ಡಾಲರ್ ಮೇಲೆ ಇದ್ದರೆ ಅದು ಭಾರತದ ಜಿಡಿಪಿಯ ಶೇಕಡಾ 6 ರಷ್ಟಾಗಿರುತ್ತದೆ. ಇದರಿಂದ ಕಚ್ಚಾ ತೈಲ ಆಮದು ಹೊರೆಯಾಗುತ್ತದೆ ಎಂದು ತಿಳಿಸಿದರು.
ಕಚ್ಚಾ ತೈಲ ದರ 70- 75 ಡಾಲರ್ ಇದ್ದರೆ ಎಲ್ಲ ವ್ಯವಸ್ಥೆಯು ಸುವ್ಯವಸ್ಥಿತವಾಗಿ ನಡೆಯುತ್ತದೆ. ಒಂದು ವೇಳೆ ಹೆಚ್ಚಾದರೆ ಅದು ಪೆಟ್ರೋಲ್, ಸಾರಿಗೆ ಬೆಲೆ ಮೇಲೆ ಪರಿಣಾಮ ಬೀಳುತ್ತದೆ. ಇದರಿಂದ ದೇಶದಲ್ಲಿ ಹಣ ದುಬ್ಬರ ಉಂಟಾಗುತ್ತದೆ. ಇದು ಜನ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.
ಚಿನ್ನ ಅಥವಾ ಬೆಳ್ಳಿ ಹೂಡಿಕೆಗೆ ಯಾವುದು ಬೆಸ್ಟ್? ತಜ್ಞರು ಏನಂತಾರೆ? ಇಲ್ಲಿದೆ ವಿವರ
ಹಣದುಬ್ಬರವಾದಾಗ ಜನರ ಖರ್ಚು ಹೆಚ್ಚಾಗುತ್ತದೆ. ಉಳಿತಾಯ ಮೊತ್ತ ಕಡಿಮೆಯಾಗುತ್ತದೆ. ಹೀಗಾಗಿ ಕಚ್ಚಾ ತೈಲ ದರ ಜಿಡಿಪಿಯ ಶೇಕಡಾ ೫ರ ಒಳಗೆ ಇರಬೇಕು. 1ರಿಂದ 3 ತಿಂಗಳು ಬೆಲೆ ಹೆಚ್ಚಾಗಿದ್ದರೆ ಅಷ್ಟು ತೊಂದರೆಯಾಗುವುದಿಲ್ಲ. ಆದರೆ ಅದಕ್ಕಿಂತ ಹೆಚ್ಚು ಅವಧಿಯಲ್ಲಿ 100 ಡಾಲರ್ ಮೇಲೆಯೇ ಇದ್ದರೆ ಅದು ದೇಶದ ಎಲ್ಲಾ ವಹಿವಾಟಿನ ಮೇಲೂ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದರು.