ದೆಹಲಿ, ಮೇ 11: ಬಟರ್ ಫ್ಲೈ ಎಫೆಕ್ಟ್ ಸಿದ್ಧಾಂತದ (The Butterfly Effect) ಬಗ್ಗೆ ನೀವು ಕೇಳಿರಬಹುದು. ಅಂದರೆ ಇದು ವ್ಯವಸ್ಥೆಯಲ್ಲಿನ ಸಣ್ಣ ಬದಲಾವಣೆ ಹೇಗೆ ದೊಡ್ಡ ಮತ್ತು ಅನಿರೀಕ್ಷಿತ ದೀರ್ಘಕಾಲೀನ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬುದನ್ನು ವಿವರಿಸುತ್ತದೆ. ಬ್ರೆಜಿಲ್‌ನಲ್ಲಿರುವ ಚಿಟ್ಟೆ ತನ್ನ ರೆಕ್ಕೆಗಳನ್ನು ಬೀಸಿ ದೂರದ ಟೆಕ್ಸಾಸ್‌ನಲ್ಲಿ ಚಂಡಮಾರುತವನ್ನು ಉಂಟುಮಾಡುವುದನ್ನು ವಿವರಿಸುವ ಈ ಸಿದ್ಧಾಂತವು ಅತ್ಯಲ್ಪವೆಂದು ತೋರುವ ಕ್ರಿಯೆಯು ಸಂಕೀರ್ಣ ಮತ್ತು ಅನಿರೀಕ್ಷಿತ ಸರಪಳಿ ಕ್ರಿಯೆಯನ್ನು ಹೇಗೆ ಪ್ರಚೋದಿಸುತ್ತದೆ ಎಂಬುದನ್ನು ವಿವರಿಸುತ್ತದೆ. ಅದರಲ್ಲಿಯೂ ಜಾಗತೀಕರಣದ ಈ ಸಂದರ್ಭದಲ್ಲಿ ಇದರ ಪರಿಣಾಮ ತುಸು ಹೆಚ್ಚೇ. ಜಗತ್ತಿನ ಯಾವುದೋ ಒಂದು ದೇಶದಲ್ಲಿ ಉಂಟಾದ ಆರ್ಥಿಕ ಹಿಂಜರಿತ ಭಾರತದಲ್ಲಿ ಉದ್ಯೋಗ ಕಡಿತಕ್ಕೆ ಕಾರಣವಾಗುತ್ತದೆ. ಇತ್ತೀಚಿನ ಉದಾಹರಣೆ ನೋಡುವುದಾದರೆ ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ. ಇದು ತೈಲ ಸಾಗಾಟ ಸರಳಪಳಿಯ ಮೇಲೆ ಪರಿಣಾಮ ಬೀರಿದ್ದು, ಭಾರತದಲ್ಲಿಯೂ ಇಂಧನ, ಗ್ಯಾಸ್ ಕೊರತೆ ಸೃಷ್ಟಿಸಿದೆ. ಸಂಘರ್ಷ ಕೊನೆಗೊಳ್ಳದ ಕಾರಣ ಸಮಸ್ಯೆ ಇನ್ನಷ್ಟು ಹೆಚ್ಚುವ ಸೂಚನೆ ಸಿಕ್ಕಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗುತ್ತಿದ್ದು, ಇದು ಇಂಧನ ಆಮದನ್ನೇ ಅವಲಂಬಿಸಿರುವ ಭಾರತದಂತಹ ದೇಶಗಳ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಬೆಲೆ ಏರಿಕೆ ಕ್ರಮೇಣ ನಮ್ಮ ಜೇಬಿಗೆ ಭಾರವಾಗುತ್ತದೆ.
ಕಚ್ಚಾ ತೈಲದ ದರ ಬ್ಯಾರೆಲ್‌ಗೆ 100 ಡಾಲರ್‌ಗೆ ಏರಿಕೆಯಾಗಿದೆ. ಇದರ ಬಿಸಿ ಈಗಾಗಲೇ ಭಾರತೀಯರಿಗೆ ತಟ್ಟಲು ಆರಂಭಿಸಿದ್ದು, ಮಾಸಿಕ ಬಜೆಟ್ ಹೊರೆ ಹೆಚ್ಚಾಗಿದೆ. ಭಾರತ ಪ್ರಪಂಚದಲ್ಲಿಯೇ 3ನೇ ಅತೀ ದೊಡ್ಡ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ದೇಶ. ಇಲ್ಲಿನ ತೈಲ ಉಪಯೋಗದ ಶೇಕಡ 85-90ರಷ್ಟು ಬೇರೆ ದೇಶಗಳಿಂದ ತರಿಸಿಕೊಳ್ಳಲಾಗುತ್ತದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆ ಬೇಗ ನಮ್ಮನ್ನು ತಟ್ಟುತ್ತವೆ. ಪೆಟ್ರೋಲ್ ಬಂಕ್‌ಗಳಿಂದ ಹಿಡಿದು, ರೆಸ್ಟೋರೆಂಟ್, ಸಾರಿಗೆ ಖರ್ಚುಗಳೂ ಹೆಚ್ಚುತ್ತವೆ.
ಮೋದಿ ಕರೆಯಂತೆ ಒಂದು ವರ್ಷ ನೀವು ಚಿನ್ನ ಖರೀದಿಸದಿದ್ದರೆ ಏನಾಗುತ್ತದೆ?
ಉತ್ತಡದಲ್ಲಿ ಕೇಂದ್ರ
ಇರಾನ್-ಇಸ್ರೇಲ್-ಅಮೆರಿಕ ಯುದ್ಧದಿಂದ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗಿದ್ದರೂ 2 ತಿಂಗಳಿಂದ ಭಾರತದಲ್ಲಿ ದರ ಸ್ಥಿರವಾಗಿದೆ. ತನ್ನ ಮೇಲೆ ಬೀಳುತ್ತಿರುವ ಒತ್ತಡವನ್ನು ಕೇಂದ್ರ ಜನರ ಮೇಲೆ ಹೇರದಿರುವುದರಿಂದ ಪ್ರತಿನಿತ್ಯ ತೈಲ ಕಂಪನಿಗಳು 1,000 ಕೋಟಿ ರುಪಾಯಿ ನಷ್ಟ ಅನುಭವಿಸುತ್ತಿವೆ. ಬೆಲೆ ಏರಿಕೆಗೆ ತೈಲ ಕಂಪನಿಗಳು ಕೇಂದ್ರದ ಮೇಲೆ ಒತ್ತಡ ಹಾಕಲು ಆರಂಭಿಸಿದ್ದು, ಯಾವಾಗ ಬೇಕಾದರೂ ಜಾರಿಗೆ ಬರಬಹುದು ಎನ್ನಲಾಗುತ್ತಿದೆ. ಅಲ್ಲದೆ ಈಗಾಗಲೇ ಸರ್ಕಾರ ಗಾಬರಿಯಿಂದ ಅನಗತ್ಯವಾಗಿ ಖರೀದಿಸಿ ಸಂಗ್ರಹಿಸಿ ಇಡದಂತೆ ಮನವಿ ಮಾಡಿದೆ. ಸದ್ಯಕ್ಕೆ ಬೆಲೆ ಏರಿಕೆ ಇಲ್ಲ ಎಂದು ಕೇಂದ್ರ ಹೇಳುತ್ತಿದ್ದರೂ ಈ ಸ್ಥಿತಿಯನ್ನು ತುಂಬ ದಿನಗಳ ಕಾಲ ಕಾಯ್ದುಕೊಳ್ಳುವುದು ಕಷ್ಟ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಮೋದಿ ಪೆಟ್ರೋಲ್-ಡೀಸೆಲ್ ಕಡಿಮೆ ಬಳಸಿ, ಎಲೆಕ್ಟ್ರಿಕ್ ವಾಹನಗಳ ಉಪಯೋಗ ಹೆಚ್ಚಿಸುವಂತೆ ಕರೆ ನೀಡಿದ್ದು.
ಇಎಂಐ ಕಥೆ ಏನಾಗಲಿದೆ?
ಕಚ್ಚಾ ತೈಲ ಬೆಲೆ ಏರಿಕೆಯು ಸಾಲಗಾರರ ಮೇಲೆ ನೇರ ಪರಿಣಾಮ ಬೀರಬಹುದು. ಏರುತ್ತಿರುವ ತೈಲ ಬೆಲೆಗಳು ಸಾಮಾನ್ಯವಾಗಿ ಹಣದುಬ್ಬರವನ್ನು ಹೆಚ್ಚಿಸುತ್ತದೆ. ಇದನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚಿನ ಬಡ್ಡಿದರಗಳನ್ನು ಕಾಯ್ದುಕೊಳ್ಳಲು ಅಥವಾ ದರ ಕಡಿತವನ್ನು ವಿಳಂಬಗೊಳಿಸಲು ಮುಂದಾಗುತ್ತದೆ. ಮನೆ, ವಾಹನ ಅಥವಾ ವೈಯಕ್ತಿಕ ಸಾಲ ಹೊಂದಿರುವವರಿಗೆ ಇದು ದೀರ್ಘಾವಧಿಯ ಹೆಚ್ಚಿನ ಇಎಂಐಗೆ ಕಾರಣವಾಗಬಹುದು. ಬಡ್ಡಿದರಗಳಲ್ಲಿ 0.25%ರಿಂದ 0.50%ರಷ್ಟು ಹೆಚ್ಚಳವು 50 ಲಕ್ಷ ರುಪಾಯಿ ಗೃಹ ಸಾಲದಂತಹ ದೊಡ್ಡ ಸಾಲಗಳ ಮಾಸಿಕ ಮರುಪಾವತಿಯನ್ನು ಗಮನಾರ್ಹವಾಗಿ ಹೆಚ್ಚಿಸಬಹುದು. ವಾಹನ ಮತ್ತು ವೈಯಕ್ತಿಕ ಸಾಲಗಳ ಮೇಲೂ ತಕ್ಷಣವೇ ಪರಿಣಾಮ ಬೀರಬಹುದು.
ಇನ್ನು ಹೆಚ್ಚುವ ಇಂಧನ ದರ ಮತ್ತು ವೆಚ್ಚಗಳು ಕಂಪನಿಗಳ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ. ಇದು ಸಂಬಳ ಹೈಕ್ ಅನ್ನು ನಿಧಾನಗೊಳಿಸುತ್ತದೆ, ನೇಮಕಾತಿಯನ್ನು ವಿಳಂಬಗೊಳಿಸುತ್ತದೆ ಮತ್ತು ಉದ್ಯೋಗ ಕಡಿತಕ್ಕೆ ಕಾರಣವಾಗುತ್ತದೆ. ಇದು ಕೂಡ ಸಂಬಳವನ್ನೇ ನೆಚ್ಚಿಕೊಂಡಿರುವವರ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಕಚ್ಚಾ ತೈಲ ಬೆಲೆಗಳು ವರ್ಷವಿಡೀ ಸರಾಸರಿ 100 ಡಾಲರ್‌ಗಿಂತ ಹೆಚ್ಚಿದ್ದರೆ ಆರ್‌ಬಿಐ ಹಣದುಬ್ಬರ ನಿಯಂತ್ರಣಕ್ಕೆ ಆದ್ಯತೆ ನೀಡಬಹುದು ಮತ್ತು ಸಾಲದ ಬಡ್ಡಿದರವನ್ನು ಕಡಿತಗೊಳಿಸದೆ ದೀರ್ಘಕಾಲದವರೆಗೆ ಹೆಚ್ಚಿಸಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.

ಏರಲಿದೆ ದಿನಸಿ ಬಿಲ್
ತೈಲ ಮಾರುಕಟ್ಟೆ ಕಂಪನಿಗಳು ಇಂಧನ ಬೆಲೆಯಲ್ಲಿ ಏರಿಕೆ ಘೋಷಿಸಿದರೆ, ಅದು ನೇರವಾಗಿ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವೆಚ್ಚವನ್ನು ಹೆಚ್ಚಿಸುತ್ತದೆ. ಸರಕು ಸಾಗಣೆ ವೆಚ್ಚಗಳು ಹೆಚ್ಚಾದಂತೆ, ಕೃಷಿ ಕೇಂದ್ರಗಳಿಂದ ನಗರ ಮಾರುಕಟ್ಟೆಗಳಿಗೆ ತರಕಾರಿ, ಹಾಲು ಮತ್ತು ಪ್ಯಾಕ್ ಮಾಡಿದ ಸರಕುಗಳ ಸಾಗಾಟ ಕೂಡ ದುಬಾರಿಯಾಗುತ್ತದೆ. ಈ ಹೊರೆ ಅಂತಿಮವಾಗಿ ಹೆಚ್ಚಿನ ದಿನಸಿ ಬಿಲ್‌ಗಳ ರೂಪದಲ್ಲಿ ಗ್ರಾಹಕರನ್ನು ತಲುಪುತ್ತದೆ.
ಕಚ್ಚಾ ವಸ್ತುಗಳ ಬೆಲೆ ಹೀಗೆಯೇ ಹೆಚ್ಚಾದರೆ ತರಕಾರಿಗಳು, ಹಣ್ಣುಗಳು, ಅಕ್ಕಿ, ಬೇಳೆಕಾಳುಗಳು ಮತ್ತು ಖಾದ್ಯ ತೈಲಗಳ ಬೆಲೆಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಾರೆ. ರಸಗೊಬ್ಬರ ದರದ ಏರಿಕೆಯಿಂದಾಗಿ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಾಗಬಹುದು. ಉದಾಹರಣೆ ನೋಡುವುದಾದರೆ ಮಧ್ಯಮ ವರ್ಗದ ಕುಟುಂಬಗಳು ತಿಂಗಳಿಗೆ ದಿನಸಿ ವಸ್ತುಗಳ ಮೇಲೆ ಸುಮಾರು 8,000-10,000 ರುಪಾಯಿ ಖರ್ಚು ಮಾಡುತ್ತಿದ್ದರೆ, ಬೆಲೆಗಳಲ್ಲಿ 5-8% ಏರಿಕೆಯಾದರೂ ಪ್ರತಿ ತಿಂಗಳು 500-1,000 ರೂ.ಗಳ ಹೆಚ್ಚುವರಿ ಹೊರೆ ಬೀಳಬಹುದು.
ಚಿನ್ನಾಭರಣ ಖರೀದಿಸದಂತೆ ಮೋದಿ ಮನವಿ ಪ್ರಧಾನಿ ಮಾತಿನ ಹಿಂದಿರುವ ಅರ್ಥವಾದರೂ ಏನು?
ಸಂಬಳ ಏನಾಗುತ್ತದೆ?
ರೂಪಾಯಿ ದುರ್ಬಲಗೊಳ್ಳುವುದರಿಂದ ಆಮದುಗಳು ಹೆಚ್ಚು ದುಬಾರಿಯಾಗಬಹುದು. ಇದು ಕಾರ್ಪೊರೇಟ್ ಲಾಭಾಂಶವನ್ನು ಕುಗ್ಗಿಸಬಹುದು ಮತ್ತು ಕಂಪನಿಗಳು ಬೋನಸ್, ಸಂಬಳ ಹೆಚ್ಚಳ ಮತ್ತು ನೇಮಕಾತಿ ಯೋಜನೆಗಳನ್ನು ಮುಂದೂಡಬಹುದು. ಪ್ರಾದೇಶಿಕ ಆರ್ಥಿಕತೆಗಳು ದೀರ್ಘಕಾಲದ ಅಸ್ಥಿರತೆಯನ್ನು ಎದುರಿಸಿದರೆ, ವಿದೇಶಿ ಆದಾಯವನ್ನು ಅವಲಂಬಿಸಿರುವ ಸಾವಿರಾರು ಭಾರತೀಯ ಕುಟುಂಬಗಳ ಮೇಲೆ ಪರಿಣಾಮ ಬೀರುವ ಅಪಾಯವೂ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.