ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸೆನ್ಸೆಕ್ಸ್‌ 1,068 ಅಂಕ ಪತನ; ಹೂಡಿಕೆದಾರರಿಗೆ 6 ಲಕ್ಷ ಕೋಟಿ ರುಪಾಯಿ ನಷ್ಟ: ಐಟಿ ಸ್ಟಾಕ್ಸ್‌ ನಿಲ್ಲದ ಕುಸಿತ

Share Market: ಷೇರು ಮಾರುಕಟ್ಟೆಯಲ್ಲಿ ಮಂಗಳವಾರ ಸೆನ್ಸೆಕ್ಸ್‌ 1,068 ಅಂಕ ಪತನವಾಗಿ 82,225ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಇತ್ತ ನಿಫ್ಟಿ 288 ಅಂಕ ಕಳೆದುಕೊಂಡು 25,424ಕ್ಕೆ ಸ್ಥಿರವಾಯಿತು. ಹಾಗಾದರೆ ಈ ಕುಸಿತಕ್ಕೆ ಕಾರಣವೇನು ಎನ್ನುವ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ.

ಮುಂಬೈ, ಫೆ. 24: ಷೇರು ಮಾರುಕಟ್ಟೆಯಲ್ಲಿ (Share Market) ಮಂಗಳವಾರ (ಫೆಬ್ರವರಿ 24) ಸೆನ್ಸೆಕ್ಸ್‌ 1,068 ಅಂಕ ಪತನವಾಗಿ 82,225ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 288 ಅಂಕ ಕಳೆದುಕೊಂಡು 25,424ಕ್ಕೆ ಸ್ಥಿರವಾಯಿತು. ಹೂಡಿಕೆದಾರರಿಗೆ 6 ಲಕ್ಷ ಕೋಟಿ ರುಪಾಯಿ ನೋಶನಲ್‌ ನಷ್ಟ ಉಂಟಾಯಿತು. ಬಿಎಸ್‌ಇನ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯ 462 ಲಕ್ಷ ಕೋಟಿ ರುಪಾಯಿಗೆ ತಗ್ಗಿತು. ಟೆಕ್‌ ಮಂಹೀಂದ್ರಾ ಮತ್ತು ಎಚ್‌ ಸಿಎಲ್‌ ಟೆಕ್‌ ತಲಾ 6 ಪರ್ಸೆಂಟ್‌ ತಗ್ಗಿತು. ಐಟಿ ಮತ್ತು ಆಟೊಮೊಬೈಲ್‌ ಸ್ಟಾಕ್ಸ್‌ ದರದಲ್ಲಿ ಗಣನೀಯ ಇಳಿಕೆ ದಾಖಲಾಯಿತು.

ಅಮೆರಿಕದಲ್ಲಿ ಟ್ರಂಪ್‌ ಟಾರಿಫ್‌ ಕಾನೂನುಬಾಹಿರ ಎಂದು ಅಲ್ಲಿನ ಸುಪ್ರೀಂಕೋರ್ಟ್‌ ತೀರ್ಪು ನೀಡಿದ್ದರೂ, ಟ್ರಂಪ್‌ ತಿರುಗಿ ಬಿದ್ದಿದ್ದಾರೆ. ಆದರೆ ಇತ್ತೀಚಿನ ಟ್ರೇಡ್‌ ಅಗ್ರಿಮೆಂಟ್‌ಗಳಿಗೆ ಯಾವುದಾದರೂ ದೇಶ ವಿರುದ್ಧ ದಿಕ್ಕಿನಲ್ಲಿ ನಡೆದರೆ, ಪರ್ಯಾಯ ಟ್ರೇಡ್‌ ಕಾನೂನು ಅಡಿಯಲ್ಲಿ ಹೆಚ್ಚಿನ ಸುಂಕ ವಿಧಿಸಲಾಗುವುದು ಎಂದು ಟ್ರಂಪ್‌ ಎಚ್ಚರಿಕೆ ಕೊಟ್ಟಿದ್ದಾರೆ. ಇದು ಅನಿಶ್ಚಿತತೆ ಸೃಷ್ಟಿಸಿದೆ.

ವಿಡಿಯೊ ಇಲ್ಲಿದೆ:



ಮತ್ತೊಂದು ಕಡೆ ಪವರ್‌ ಗ್ರಿಡ್‌, ಟಾಟಾ ಸ್ಟೀಲ್‌ ಮತ್ತು ಎಸ್‌ಬಿಐ ಷೇರು ಲಾಭ ಗಳಿಸಿದ್ದರೆ, ಎಟರ್ನಲ್‌, ಇನ್ಫೋಸಿಸ್‌, ಎಚ್‌ಸಿಎಲ್‌ ಟೆಕ್‌, ಟೆಕ್‌ ಮಹೀಂದ್ರಾ ನಷ್ಟಕ್ಕೀಡಾಗಿವೆ.

ಸೆನ್ಸೆಕ್ಸ್-ನಿಫ್ಟಿ ಕುಸಿತಕ್ಕೆ ಕಾರಣಗಳು

  • ಐಟಿ ಸ್ಟಾಕ್ಸ್‌ ತೀವ್ರ ಕುಸಿತ.
  • ಟ್ರಂಪ್‌ ಅವರಿಂದ ನೂತನ ಟಾರಿಫ್‌ ಬೆದರಿಕೆ.
  • ಅಮೆರಿಕದ ಐಟಿ ಕಂಪನಿಗಳ ಷೇರು ದರ ಕುಸಿತ.
  • ಏಷ್ಯಾದ ಮಾರುಕಟ್ಟೆಗೆ ಹಿನ್ನಡೆ.
  • ಡಾಲರ್‌ ಎದುರು ರುಪಾಯಿ ದುರ್ಬಲ.
  • ಅಮೆರಿಕ-ಇರಾನ್‌ ಸಂಘರ್ಷ.

ಫೆಬ್ರವರಿ ಒಂದರಲ್ಲೇ ನಿಫ್ಟಿ ಐಟಿ ಇಂಡೆಕ್ಸ್‌ 21 ಪರ್ಸೆಂಟ್‌ ಕುಸಿತಕ್ಕೀಡಾಗಿದೆ. 2008ರ ಜಾಗತಿಕ ಆರ್ಥಿಕ ಹಿಂಜರಿತದ ಬಳಿಕ ತಿಂಗಳೊಂದರ ಗರಿಷ್ಠ ಕುಸಿತ ಇದಾಗಿದೆ. ರಿಯಲ್‌ ಎಸ್ಟೇಟ್‌ ಷೇರುಗಳು ಕೂಡ 5 ಪರ್ಸೆಂಟ್‌ ತನಕ ಇಳಿಕೆಯಾಗಿದೆ. ನಿಫ್ಟಿ ರಿಯಾಲ್ಟಿ ಇಂಡೆಕ್ಸ್‌ 3 ಪರ್ಸೆಂಟ್‌ ತಗ್ಗಿದೆ.

IBM ಐಟಿ ಕಂಪನಿಯ ಷೇರು ದರ ಕಳೆದ 25 ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಕುಸಿದಿದೆ. ಎಐ ಸ್ಟಾರ್ಟ್‌ ಆಂಥ್ರೊಪಿಕ್‌ ತನ್ನ ಕ್ಲೌಡ್‌ ಕೋಡ್‌ ಟೂಲ್‌, ಕೊಬೊಲ್‌ ಪ್ರೋಗ್ರಾಮಿಂಗ್‌ ಲಾಂಗ್ವೇಜ್‌ ಅನ್ನು ಅರ್ಥ ಮಾಡಿಕೊಳ್ಳುತ್ತದೆ ಮತ್ತು ಸುಧಾರಿಸುತ್ತದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಐಬಿಎಂ ಷೇರು ಭಾರಿ ಕುಸಿದಿದೆ. ಏಕೆಂದರೆ ಐಬಿಎಂನ ಕೊಬೊಲ್‌ ಪ್ರೊಗ್ರಾಮಿಂಗ್‌ ಲಾಂಗ್ವೇಜ್‌ ಬಿಸಿನೆಸ್‌ ವ್ಯಾಪಕ ಪ್ರಮಾಣದಲ್ಲಿದೆ. ಐಬಿಎಂ ಷೇರು ದರದಲ್ಲಿ ಸೋಮವಾರ 13 ಪರ್ಸೆಂಟ್‌ ಇಳಿಕೆ ಆಗಿತ್ತು. ಆಂಥ್ರೊಪಿಕ್‌ನ ಕೌಡಗ ಕೋಡ್‌ ಕೊಬೊಲ್‌ ಮಾಡರ್ನೈಶೇಶನ್‌ನ ಭಾರಿ ಭಾಗಗಳನ್ನು ಬೇಗ ಮಾಡಿ ಬಿಡಬಹುದು ಎಂಬ ನಿರೀಕ್ಷೆ ಇದೆ. ಆಗ ಐಬಿಎಂಗೆ ಸಿಗುವ ಭಾರಿ ಪ್ರಾಜೆಕ್ಟ್‌ ಕೆಲಸಗಳು ನಿಂತು, ಅದರ ಅದಾಯ ಇಳಿಕೆಯಾಗಬಹುದು ಎಂಬ ಆತಂಕ ಈಗ ಉಂಟಾಗಿದೆ. ಹಣಕಾಸು, ‌ಬ್ಯಾಂಕಿಂಗ್‌, ಎಟಿಎಂ ಟ್ರಾನ್ಸ್ಷನ್ಸ್‌, ಏರ್‌ ಲೈನ್ಸ್‌, ಸರಕಾರಗಳ ಇಲಾಖೆಗಳಲ್ಲಿ ಕೊಬೊಲ್‌ ಸಾಫ್ಟ್‌ವೇರ್‌ ಪ್ರೋಗ್ರಾಮಿಂಗ್‌ ಲಾಂಗ್ವೇಜ್ ಬಳಕೆಯಾಗುತ್ತದೆ.

ಟೆಕ್ಸ್‌ ಟೈಲ್ಸ್‌ ಕಂಪನಿಗಳ ಷೇರು ದರದಲ್ಲಿ 6 ಪರ್ಸೆಂಟ್‌ ಇಳಿಕೆಯಾಗಿದ್ದು, ರಫ್ತುದಾರರಿಗೆ Remission of Duties and Taxes on Exported Products (RoDTEP) ಅಡಿಯಲ್ಲಿ ತೆರಿಗೆ ಲಾಭವನ್ನು ಕಡಿಮೆ ಮಾಡಿರುವುದು ಇದಕ್ಕೆ ಕಾರಣ.

ಸುಳ್ಳು ಸುದ್ದಿ ಕಂಪನಿಗಳ ಮೇಲೆ ಪರಿಣಾಮ ಬೀರುತ್ತಾ? ಆಗ ಏನು ಮಾಡಬೇಕು?

ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಷೇರಿನ ದರದಲ್ಲಿ ಏರಿಕೆ

ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಷೇರಿನ ದರದಲ್ಲಿ ಇವತ್ತು 3 ಪರ್ಸೆಂಟ್‌ ಏರಿಕೆ ಆಗಿದೆ. ಹರಿಯಾಣ ಸರಕಾರವು ಬ್ಯಾಂಕ್‌ನಲ್ಲಿ ಇಟ್ಟಿದ್ದ ಠೇವಣಿಗೆ ಬಡ್ಡಿ ಸಮೇತ ವಾಪಸ್‌ ಲಭಿಸಿದೆ ಎಂದು ಸ್ವತಃ ಸರಕಾರ ಹೇಳಿಕೆ ನೀಡಿದ ನಂತರ ಷೇರು ದರ ಏರಿಕೆಯಾಗಿದೆ. ಕೇವಲ 24 ಗಂಟೆಗಳಲ್ಲಿ ಈ ಬೆಳವಣಿಗೆ ಆಗಿರುವುದು ವಿಶೇಷ. 583 ಕೋಟಿ ರುಪಾಯಿ ಮರಳಿ ಬಂದಿದೆ ಎಂದು ಸರಕಾರ ತಿಳಿಸಿದೆ. ಬ್ಯಾಂಕ್‌ನ ಚಂಡೀಗಢ ಶಾಖೆಯಲ್ಲಿ ಹರಿಯಾಣ ಸರಕಾರದ ಠೇವಣಿ ಹಣಕ್ಕೆ ಸಂಬಂಧಿಸಿ ಲೆಕ್ಕಾಚಾರ ತಪ್ಪಾಗಿ ಹಗರಣ ಪತ್ತೆಯಾಗಿತ್ತು. ಆದರೆ 24 ಗಂಟೆಗಳಲ್ಲಿ ಬಡ್ಡಿ ಸಮೇತ ಸರಕಾರದ ಹಣ ಸರಕಾರಕ್ಕೆ ಮರಳಿದೆ.

ಟೆಕ್ನಾಲಜಿ ಆಧಾರಿತ ಮ್ಯೂಚುವಲ್‌ ಫಂಡ್‌ಗಳು ಇಳಿಕೆಯ ಹಾದಿಯಲ್ಲಿದ್ದರೂ, ಹೂಡಿಕೆದಾರರು ಶಾಂತಚಿತ್ತರಾಗಿ ಹೂಡಿಕೆಯನ್ನು ಮುಂದುವರಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಕೇಶವ ಪ್ರಸಾದ್​ ಬಿ

View all posts by this author