ಭಾರತದಲ್ಲಿ ಪ್ರೋಟೀನ್ ಉತ್ಪನ್ನಗಳ ಮಾರುಕಟ್ಟೆ ಹೊಸ ಮೈಲುಗಲ್ಲನ್ನು ತಲುಪುತ್ತಿದೆ. ಗ್ರಾಹಕರು ಈಗ ಕೇವಲ ಸಾಂಪ್ರದಾಯಿಕ ಪ್ರೋಟೀನ್ ಪುಡಿಗಳ ಬದಲಾಗಿ, ಸುಲಭವಾಗಿ ಸೇವಿಸಬಹುದಾದ, ರುಚಿಯಾದ ಹಾಗೂ ತಮ್ಮ ದೈನಂದಿನ ಜೀವನಶೈಲಿಗೆ ಹೊಂದುವಂತಹ ಉತ್ಪನ್ನಗಳನ್ನು ಹುಡುಕುತ್ತಿದ್ದಾರೆ. ಗ್ರಾಹಕರ ಈ ಬೇಡಿಕೆಯನ್ನು ಪೂರೈಸಲು ಪ್ರಮುಖ ಎಫ್‌ಎಂಸಿಜಿ ಕಂಪನಿ ಯಾದ ಝೈಡಸ್ ವೆಲ್ನೆಸ್ ಲಿ. ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.
ತನ್ನ ಜನಪ್ರಿಯ 'ರೈಟ್‌ಬೈಟ್ ಮ್ಯಾಕ್ಸ್ ಪ್ರೋಟೀನ್' ಬ್ರ್ಯಾಂಡ್‌ನಡಿಯಲ್ಲಿ ರೆಡಿ-ಟು-ಡ್ರಿಂಕ್ ಪ್ರೋಟೀನ್ ಶೇಕ್‌ಗಳು, ಭಾರತೀಯರ ರುಚಿಗೆ ಹೊಂದಿಕೆಯಾಗುವ ತುಪ್ಪ-ಬೆಲ್ಲದ ಪ್ರೋಟೀನ್ ಬಾರ್‌ಗಳು ಹಾಗೂ ಕೊರಿಯನ್ ಫ್ಲೇವರ್‌ನ ಪ್ರೋಟೀನ್ ಚಿಪ್ಸ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಪ್ರಸ್ತುತ ಭಾರತದ ಪ್ರೋಟೀನ್ ಮಾರುಕಟ್ಟೆಯು ಸುಮಾರು 10-12 ಬಿಲಿಯನ್ ಡಾಲರ್ ಮೌಲ್ಯ ದ್ದಾಗಿದ್ದು, ಇದು ವಾರ್ಷಿಕವಾಗಿ ಎರಡಂಕಿಯ ಪ್ರಗತಿ ಸಾಧಿಸುತ್ತಿದೆ. ಈ ಬೃಹತ್ ಮಾರುಕಟ್ಟೆ ಯನ್ನು ಗುರಿಯಾಗಿಸಿಕೊಂಡು ಝೈಡಸ್ ಈ ಹೆಜ್ಜೆ ಇಟ್ಟಿದೆ.
ಇದನ್ನೂ ಓದಿ: Bangalore News: ಎಪಿಎಸ್.ನಿಂದ ಕಿಡ್.ಝೀ ಪ್ರೀ-ಸ್ಕೂಲ್ ಪ್ರಾರಂಭ
ರೆಡಿ-ಟು-ಡ್ರಿಂಕ್ ಪ್ರೋಟೀನ್ ಶೇಕ್ಸ್
ಪ್ರಯಾಣದಲ್ಲಿರುವಾಗ ಅಥವಾ ಕೆಲಸದ ನಡುವೆ ಸುಲಭವಾಗಿ ಕುಡಿಯಲು ಅನುಕೂಲವಾಗು ವಂತೆ ಡೈರಿ-ಆಧಾರಿತ ಪ್ರೋಟೀನ್ ಶೇಕ್‌ಗಳನ್ನು ಪರಿಚಯಿಸಲಾಗಿದೆ. ಚೊಕೊ ಬರ್ಸ್ಟ್ ಮತ್ತು ಬೆರ್ರಿ ಬ್ಲಶ್ ಎಂಬ ಎರಡು ರುಚಿಗಳಲ್ಲಿ ಇದು ಲಭ್ಯವಿದ್ದು, 250 ಎಂಎಲ್‌ನ ಪ್ರತಿ ಬಾಟಲಿಯಲ್ಲಿ ಬರೋಬ್ಬರಿ 26 ಗ್ರಾಂ ಪ್ರೋಟೀನ್ ಇರಲಿದೆ.
ರೂಟ್ಸ್ ತುಪ್ಪ-ಬೆಲ್ಲದ ಪ್ರೋಟೀನ್ ಬಾರ್
ಭಾರತೀಯರ ಸಾಂಪ್ರದಾಯಿಕ ರುಚಿಗೆ ಒತ್ತು ನೀಡುವ ಉದ್ದೇಶದಿಂದ, ತುಪ್ಪ ಮತ್ತು ಬೆಲ್ಲದ ಜೊತೆಗೆ 'ವೇ' ಮತ್ತು 'ಕೇಸಿನ್' ಪ್ರೋಟೀನ್ ಮಿಶ್ರಣ ಮಾಡಿ ಈ ಬಾರ್ ತಯಾರಿಸಲಾಗಿದೆ. ಇದರಲ್ಲಿ 10 ಗ್ರಾಂ ಪ್ರೋಟೀನ್ ಮತ್ತು 4 ಗ್ರಾಂ ಫೈಬರ್ ಇರಲಿದ್ದು, ದೇಸಿ ರುಚಿ ಹಾಗೂ ಆರೋಗ್ಯ ಎರಡನ್ನೂ ಒದಗಿಸುತ್ತದೆ.
ಕೊರಿಯನ್ ಫ್ಲೇವರ್ಡ್ ಪ್ರೋಟೀನ್ ಚಿಪ್ಸ್
ಹೊಸ ಬಗೆಯ ಹಾಗೂ ಕೊರಿಯನ್ ರುಚಿಯನ್ನು ಇಷ್ಟಪಡುವ ಯುವಜನತೆಗಾಗಿ 7 ಬಗೆಯ ಧಾನ್ಯಗಳಿಂದ ತಯಾರಿಸಿದ ಪ್ರೋಟೀನ್ ಚಿಪ್ಸ್ ಬಿಡುಗಡೆ ಮಾಡಲಾಗಿದೆ.
ಇದು ಹಾಟ್ ಚಿಲ್ಲಿ, ಬಾರ್ಬೆಕ್ಯೂ ಮತ್ತು ಗೋಚುಜಾಂಗ್‌ನಂತಹ ಕೊರಿಯನ್ ಫ್ಲೇವರ್‌ಗಳಲ್ಲಿ ಬರುತ್ತದೆ. 60 ಗ್ರಾಂನ ಪ್ರತಿ ಪ್ಯಾಕ್‌ನಲ್ಲಿ 10 ಗ್ರಾಂ ಪ್ರೋಟೀನ್, 4 ಗ್ರಾಂ ಫೈಬರ್ ಇರಲಿದೆ. ವಿಶೇಷ ವೆಂದರೆ ಇದು ಗ್ಲುಟನ್ ಮುಕ್ತವಾಗಿದ್ದು, ಇದರಲ್ಲಿ ಪಾಮ್ ಎಣ್ಣೆಯನ್ನು ಸಹ ಬಳಸಿಲ್ಲ.
ಈ ಬೆಳವಣಿಗೆಯ ಕುರಿತು ಮಾತನಾಡಿರುವ ಝೈಡಸ್ ವೆಲ್ನೆಸ್‌ನ ಸಿಇಒ ತರುಣ್ ಅರೋರಾ, "ಭಾರತದಲ್ಲಿ ಪ್ರೋಟೀನ್ ಬಗ್ಗೆ ಅರಿವು ಹೆಚ್ಚಾಗಿದೆ. ಆದರೆ ದೈನಂದಿನ ಓಡಾಟದ ಜೀವನಶೈಲಿ ಯಲ್ಲಿ, ತಯಾರಿ ಬೇಡುವ ಸಾಂಪ್ರದಾಯಿಕ ಪ್ರೋಟೀನ್ ಪುಡಿಗಳ ನಿಯಮಿತ ಬಳಕೆ ಕಷ್ಟವಾಗು ತ್ತಿದೆ. ಪ್ರೋಟೀನ್ ಆಯ್ಕೆ ಹಾಗೂ ಸೇವನೆಯನ್ನು ಆನಂದಿಸುವುದು ಸುಲಭವಾದಾಗ ಮಾತ್ರ ನೈಜ ಬದಲಾವಣೆ ಸಾಧ್ಯ. ಕೇವಲ ಜಿಮ್‌ಗೆ ಹೋಗುವವರಿಗೆ ಮಾತ್ರ ಸೀಮಿತವಾಗಿದ್ದ ಪ್ರೋಟೀನ್ ಅನ್ನು ಕೆಲಸದ ಸ್ಥಳದಲ್ಲಿ, ಪ್ರಯಾಣದ ನಡುವೆ ಬಳಸುವಂತಾಗಲು ನಾವು ಈ ಹೊಸ ಸ್ನ್ಯಾಕ್ಸ್ ಹಾಗೂ ಪಾನೀಯ ರೂಪದ ಉತ್ಪನ್ನಗಳನ್ನು ತಂದಿದ್ದೇವೆ," ಎಂದು ತಿಳಿಸಿದರು.
ಈ ಹೊಸ ಉತ್ಪನ್ನಗಳು ಇ-ಕಾಮರ್ಸ್ ಮತ್ತು ಕ್ವಿಕ್-ಕಾಮರ್ಸ್ ವೇದಿಕೆಗಳ ಮೂಲಕ ದೇಶಾದ್ಯಂತ ಲಭ್ಯವಿರಲಿವೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಕಾಂಪ್ಲಾನ್, ಶುಗರ್ ಫ್ರೀ, ಗ್ಲುಕಾನ್-ಡಿಗಳಂತಹ ಪ್ರಸಿದ್ಧ ಬ್ರ್ಯಾಂಡ್‌ಗಳನ್ನು ಹೊಂದಿರುವ ಝೈಡಸ್ ವೆಲ್ನೆಸ್, ಈ ಹೊಸ ಸೇರ್ಪಡೆಯೊಂದಿಗೆ ಪೌಷ್ಟಿಕಾಂಶ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.