ಚೆನ್ನೈ: ಥೇನಿ ಜೈಲಿನಿಂದ (Jailbreak) ಸೋಮವಾರ ರಾತ್ರಿ ಪರಾರಿಯಾಗಿದ್ದ 17 ಕೈದಿಗಳ ಪೈಕಿ 13 ಮಂದಿಯನ್ನು ಪೊಲೀಸರು (tamil nadu police) ಬಂಧಿಸಿದ್ದು, ಉಳಿದ ನಾಲ್ವರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಕಳೆದ ವಾರ ಚೆನ್ನೈ ಕಾರಾಗೃಹದಿಂದ (Chennai jail) ಇಬ್ಬರು ಕೈದಿಗಳು ತಪ್ಪಿಕೊಂಡ ಬೆನ್ನಲ್ಲೇ ತಮಿಳುನಾಡಿನ ಥೇನಿ ಉಪ ಜೈಲಿನಿಂದ ಸೋಮವಾರ ತಡರಾತ್ರಿ 17 ಕೈದಿಗಳು ತಪ್ಪಿಸಿಕೊಂಡಿದ್ದರು. ಇವರಲ್ಲಿ ಒಬ್ಬನನ್ನು ತಕ್ಷಣವೇ ಬಂಧಿಸಲಾಗಿತ್ತು. ಉಳಿದವರ ಪತ್ತೆಗೆ ತಂಡಗಳನ್ನು ರಚಿಸಿ ತೀವ್ರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. ಜೈಲಿನಿಂದ ತಪ್ಪಿಸಿಕೊಂಡ ಕೈದಿಗಳು ಕೆಲವು ಗಂಟೆಗಳ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಓಡಾಡಿದ್ದು, ಇವರ ಜಾಡನ್ನು ಡ್ರೋನ್ಗಳು ಕಂಡು ಹಿಡಿದಿವೆ.
ಮೂರ್ಛೆ ರೋಗ ಬಂದಂತೆ ನಟಿಸಿ, ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ದಾಳಿ ಮಾಡಿ ತಮಿಳುನಾಡಿನ ಥೇನಿ ಜಿಲ್ಲೆಯ ತೆಕ್ಕಂಪಟ್ಟಿ ಉಪ ಜೈಲಿನಿಂದ ಪರಾರಿಯಾದ 17 ವಿಚಾರಣಾಧೀನ ಕೈದಿಗಳ ಪೈಕಿ 13 ಮಂದಿಯನ್ನು ಪೊಲೀಸರು ಒಂದೇ ದಿನದಲ್ಲಿ ಬಂಧಿಸಿದರು. ಇವರಲ್ಲಿ ಬಹುತೇಕ ಮಂದಿ ಮುಖ್ಯ ದ್ವಾರದ ಮೂಲಕ ಹೊರಬಂದಿದ್ದರು. ಉಳಿದ ನಾಲ್ವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ.
ಬೀದಿ ನಾಯಿಗಳ ದಾಳಿಗೆ ಸೇಡಂ ಜನ ತತ್ತರ: ಒಂದೇ ದಿನ ನಾಲ್ವರ ಮೇಲೆ ದಾಳಿ; ಗಾಯಾಳುಗಳು ಸರ್ಕಾರಿ ಆಸ್ಪತ್ರೆಗೆ ದಾಖಲು
ಈ ಕುರಿತು ಮಾಹಿತಿ ನೀಡಿದ ದಕ್ಷಿಣ ವಲಯದ ಪೊಲೀಸ್ ಮಹಾನಿರೀಕ್ಷಕ ವಿಜಯೇಂದ್ರ ಬಿದರಿ, ಥೇನಿ ಅರಣ್ಯ ಪ್ರದೇಶದಲ್ಲಿ ಅಡಗಿದ್ದವರನ್ನು ಕೈದಿಗಳನ್ನು ಪತ್ತೆ ಹಚ್ಚಲು ಡ್ರೋನ್ಗಳನ್ನು ಬಳಸಲಾಯಿತು. ಇದರ ದೃಶ್ಯಾವಳಿಯಲ್ಲಿ ಕೈದಿಗಳು ದಟ್ಟ ಅರಣ್ಯದ ಮೂಲಕ ಓಡಿಹೋಗುತ್ತಿರುವುದು ಸೆರೆಯಾಗಿದೆ ಎಂದು ಹೇಳಿದರು.
ಜೈಲಿನ ಸುತ್ತಮುತ್ತ ದಟ್ಟ ಅರಣ್ಯ ಪ್ರದೇಶವಾಗಿರುವುದರಿಂದ ಆರಂಭದಲ್ಲೇ ಎಲ್ಲಾ ನಿರ್ಗಮನ ಮಾರ್ಗಗಳನ್ನು ತಡೆ ಮಾಡಲಾಯಿತು. ಬಳಿಕ ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸಲಾಯಿತು. ಪರಾರಿಯಾದ ಕೈದಿಗಳನ್ನು ಪತ್ತೆಹಚ್ಚಲು 17 ವಿಶೇಷ ತಂಡಗಳೊಂದಿಗೆ ಮೂರು ಅತ್ಯಾಧುನಿಕ ಡ್ರೋನ್ಗಳನ್ನು ನಿಯೋಜಿಸಲಾಯಿತು. ಡ್ರೋನ್ ದೃಶ್ಯಾವಳಿಗಳು ಕೈದಿಗಳ ನಿಖರ ಸ್ಥಳವನ್ನು ಗುರುತಿಸಲು ಸಹಾಯ ಮಾಡಿದೆ ಎಂದರು.
ಕೈದಿಗಳು ಪರಾರಿಯಾಗಿದ್ದು ಹೇಗೆ?
ಕೊಲೆ ಯತ್ನ, ಮಾದಕ ವಸ್ತು ಪ್ರಕರಣಗಳಿಗೆ ಸಂಬಂಧಿಸಿ ಬಂಧಿತರಾಗಿ ಒಂದು ಬ್ಲಾಕ್ನಲ್ಲಿದ್ದ ಕೈದಿಗಳಲ್ಲಿ ಒಬ್ಬ ತನಗೆ ಮೂರ್ಛೆ ಬಂದಂತೆ ನಟಿಸಿದ್ದಾನೆ. ಇದನ್ನು ಪರಿಶೀಲಿಸಲು ಒಳ ಹೋದ ಪೊಲೀಸ್ ಸಿಬ್ಬಂದಿ ಮೇಲೆ ಕೂಡಲೇ ಕೈದಿಗಳು ದಾಳಿ ನಡೆಸಿದ್ದಾರೆ. ಬಳಿಕ ಪ್ರವೇಶ ದ್ವಾರದಲ್ಲಿದ್ದ ಕಾವಲುಗಾರರನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಕೀಲಿಗಳನ್ನು ಕಸಿದುಕೊಂಡು ಮುಖ್ಯ ದ್ವಾರವನ್ನು ಬಲವಂತವಾಗಿ ತೆರೆದು ಹೊರಗೆ ಓಡಿ ಹೋಗಿದ್ದಾರೆ.
ಪರಾರಿಯಾದವರಲ್ಲಿ ಬಹುತೇಕರು 19 ರಿಂದ 26 ವರ್ಷ ವಯಸ್ಸಿನವರಾಗಿದ್ದು, ಮಧುರೈ, ಶಿವಗಂಗೈ, ರಾಮನಾಥಪುರಂ, ಸೇಲಂ, ಕನ್ಯಾಕುಮಾರಿ ಮತ್ತು ಥೇನಿ ಸೇರಿದಂತೆ ತಮಿಳುನಾಡಿನ ವಿವಿಧ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡು ಕಾರಾಗೃಹ ಇಲಾಖೆಯು ಒಂಬತ್ತು ಜೈಲು ಸಿಬ್ಬಂದಿಯನ್ನು ಅಮಾನತುಗೊಳಿಸಿದೆ.
ಕೊಚ್ಚಿ ಸಿನಗಾಗ್ ಬಳಿಯ ದಾಳಿ ಹಿಂದೆ ಭಯೋತ್ಪಾದಕ ಸಂಚು; ವಿವಿಧ ರಾಜ್ಯಗಳ ಮೇಲಿನ ಆಕ್ರಮಣಕ್ಕೆ ಮುನ್ನ ನಡೆಯಿತು ತಾಲೀಮು
ಜೈಲಿನಿಂದ ಕೈದಿಗಳು ಪರಾರಿಯಾದ ಘಟನೆಯ ಕುರಿತು ತನಿಖೆ ನಡೆಸಲು ಚೆನ್ನೈನಿಂದ ಮಧುರೆಗೆ ಆಗಮಿಸಿರುವ ಪೊಲೀಸ್ ಮಹಾನಿರ್ದೇಶಕ ಸಂದೀಪ್ ರೈ ರಾಥೋರ್, ಜೈಲು ಸಿಬ್ಬಂದಿ ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ತಿಳಿಸಿದ್ದಾರೆ.