ತಿರುವನಂತಪುರಂ, ಆ. 18: ಕೇರಳಂನ ಆಲಪ್ಪುಳ ಜಿಲ್ಲೆಯ ಕರುವಟ್ಟದಲ್ಲಿ 65 ವರ್ಷದ ವ್ಯಕ್ತಿಯೊಬ್ಬರು ಬಾಡಿಗೆ ಮನೆಯಲ್ಲಿ ಕೈಕಾಲುಗಳನ್ನು ಹಿಂದೆ ಕಟ್ಟಿ ಹಾಕಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಕೊಲ್ಲಂ ಜಿಲ್ಲೆಯ ನಿವಾಸಿ ಶಿವನ್‌ಕುಟ್ಟಿ ಎಂದು ಗುರುತಿಸಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, 13 ವರ್ಷದ ಮೊಮ್ಮಗಳು ತನ್ನ ಸ್ನೇಹಿತರ ಮೂಲಕ ಅಜ್ಜನ ಹತ್ಯೆ ಮಾಡಿಸಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಪ್ರಕಾರ, ಬಾಲಕಿ ತನ್ನ ಅಜ್ಜನನ್ನು ಕೊಲ್ಲಲು ತನ್ನ ಸ್ನೇಹಿತರಾಗಿದ್ದ ಇತರ ಕೆಲವು ಅಪ್ರಾಪ್ತರನ್ನು ಬಳಸಿಕೊಂಡಿದ್ದಾಳೆ ಎನ್ನಲಾಗಿದೆ. ಹತ್ಯೆಯ ದೃಶ್ಯವನ್ನು ಅವರು ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಬಳಿಕ ಆ ವಿಡಿಯೋವನ್ನು ಬಾಲಕಿಗೆ ತೋರಿಸಿದ್ದಾರೆ ಎಂಬ ಶಂಕೆಯೂ ಇದೆ. ಬಾಲಕಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆಕೆಯ ಹೇಳಿಕೆಗಳನ್ನು ಪರಿಶೀಲಿಸಲಾಗುತ್ತಿದೆ.
ಆರಂಭದಲ್ಲಿ ದರೋಡೆ ಶಂಕೆ
ಶಿವನ್‌ಕುಟ್ಟಿ ಅವರ ಮೃತದೇಹ ಪತ್ತೆಯಾದಾಗ ಮನೆಯ ಮಲಗುವ ಕೋಣೆಯ ಕಪಾಟು ಒಡೆದಿರುವುದು ಕಂಡುಬಂದಿತ್ತು. ಮನೆಯಿಂದ ಚಿನ್ನಾಭರಣ ಹಾಗೂ ನಗದು ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆರಂಭದಲ್ಲಿ ಇದು ದರೋಡೆಗಾಗಿ ನಡೆದ ಕೊಲೆ ಎಂದು ಶಂಕಿಸಿದ್ದರು. ಸುಮಾರು ಆರು ಸವರನ್ ಚಿನ್ನ ಕಳುವಾಗಿರುವುದು ವರದಿಯಾಗಿದೆ. ಆದರೆ ತನಿಖೆ ಮುಂದುವರಿದಂತೆ ಪ್ರಕರಣದ ದಿಕ್ಕು ಕುಟುಂಬದತ್ತ ತಿರುಗಿತು. ಮೊಬೈಲ್ ಫೋನ್ ಕರೆ ದಾಖಲೆಗಳನ್ನು ಪರಿಶೀಲಿಸಿದ ವೇಳೆ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ ಎನ್ನಲಾಗಿದೆ.
ಕೈಕಾಲು ಕಟ್ಟಿ, ಉಸಿರುಗಟ್ಟಿಸಿ ಕೊಲೆ?
ಶಿವನ್‌ಕುಟ್ಟಿ ಅವರ ಕೈ ಮತ್ತು ಕಾಲುಗಳನ್ನು ಮನೆಯಲ್ಲಿದ್ದ ಬೆಡ್‌ಶೀಟ್ ಸೇರಿ ಇತರ ವಸ್ತುಗಳಿಂದ ಕಟ್ಟಲಾಗಿತ್ತು. ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ನಡೆದ ಸ್ಥಳದ ಸಮೀಪ ಮೆಣಸಿನ ಪುಡಿಯೂ ಪತ್ತೆಯಾಗಿದೆ.
ಐಫೋನ್ ಮತ್ತು ಪ್ರಿಯಕರನಿಗೆ ಬೈಕ್ ಖರೀದಿಸಲು ಸಂಚು?
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬಾಲಕಿ ತನಗಾಗಿ ಐಫೋನ್ ಹಾಗೂ ತನ್ನ ಪ್ರಿಯಕರನಿಗಾಗಿ ಬೈಕ್ ಖರೀದಿಸಲು ಹಣದ ಅಗತ್ಯವಿದ್ದ ಕಾರಣ ಈ ಕೃತ್ಯಕ್ಕೆ ಮುಂದಾಗಿದ್ದಾಳೆ ಎನ್ನಲಾಗಿದೆ.
ಅನುಕಂಪದ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ತಾಯಿಯನ್ನೇ ಕೊಂದ ಪಾಪಿ ಮಗಳು
ಅಲ್ಲದೆ, ಬಾಲಕಿ ಮೊಬೈಲ್ ಫೋನ್ ಅನ್ನು ಹೆಚ್ಚು ಬಳಸುವುದು ಮತ್ತು ತಡವಾಗಿ ಮನೆಗೆ ಬರುವುದನ್ನು ಶಿವನ್‌ಕುಟ್ಟಿ ಪದೇಪದೇ ಪ್ರಶ್ನಿಸುತ್ತಿದ್ದರಿಂದ ಅವರ ಮೇಲೆ ಬಾಲಕಿಗೆ ಅಸಮಾಧಾನವಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲ್ಲಂನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಬಾಲಕಿ ಇತರ ಕೆಲವು ಅಪ್ರಾಪ್ತರೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಳು. ಶಿವನ್‌ಕುಟ್ಟಿ ಮನೆಯಲ್ಲಿ ಒಬ್ಬರೇ ಇರುವುದನ್ನು ತಿಳಿದ ಬಳಿಕ ಹತ್ಯೆ ನಡೆಸಲು ಸಂಚು ರೂಪಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಆಸ್ಪತ್ರೆಯಲ್ಲಿದ್ದರು ಪತ್ನಿ
ಶಿವನ್‌ಕುಟ್ಟಿ ಕೆಲವು ದಿನಗಳಿಂದ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಅವರ ಪತ್ನಿ ತಮ್ಮ ಮಗಳೊಂದಿಗೆ ಆಸ್ಪತ್ರೆಯಲ್ಲಿದ್ದರು. ಮಗಳು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮತ್ತೊಬ್ಬ ಮಗಳು ಶಶಿಕಲಾ ವಿದೇಶದಲ್ಲಿದ್ದಾರೆ ಎನ್ನಲಾಗಿದೆ. ಶಿವನ್‌ಕುಟ್ಟಿ ಅವರ ಮೃತದೇಹವನ್ನು ಹರಿಪಾಡ್ ತಾಲೂಕು ಆಸ್ಪತ್ರೆಗೆ ಇರಿಸಲಾಗಿದ್ದು, ಆಲಪ್ಪುಳ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ಸೇರಿದಂತೆ ಇತರರ ಹೇಳಿಕೆಗಳು ಹಾಗೂ ಲಭ್ಯವಿರುವ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿದಿದೆ.