ಜೈಪುರ, ಮೇ 29: 16 ವರ್ಷದ ಬಾಲಕನೊಬ್ಬ ತನ್ನ 10 ವರ್ಷದ ಸ್ನೇಹಿತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಅವನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ರಾಜಸ್ಥಾನದ (Rajasthan) ಕೋಟಾದಲ್ಲಿ ನಡೆದಿದೆ. ಬಾಲಕನನ್ನು ಹತ್ಯೆ ಮಾಡಿದ ನಂತರವೂ ಆತನ ರಾಕ್ಷಸ ಕ್ರೌರ್ಯ ಅಲ್ಲಿಗೆ ನಿಲ್ಲಲಿಲ್ಲ. ಮೃತದೇಹವನ್ನು ಮತ್ತಷ್ಟು ವಿರೂಪಗೊಳಿಸಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನನ್ನು ಬಾಲಾಪರಾಧಿಗಳ ವೀಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ (Crime News).
ಅಪರಾಧ ನಡೆದ ಮೇ 25 ರ ಮಧ್ಯಾಹ್ನ ಆರೋಪಿಯು, ಕೊಲೆಯಾದ ಬಾಲಕನ ಜೊತೆಯಲ್ಲಿ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಕೋಟಾದ ಸೊಗರಿಯಾ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹತ್ಯೆಯಾದ ಬಾಲಕ ಮೇ 25 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಟವಾಡಲು ಮನೆಯಿಂದ ಹೊರಗೆ ಹೋಗಿದ್ದ. ಆದರೆ ಸಂಜೆಯಾದರೂ ಅವನು ಹಿಂತಿರುಗದಿದ್ದಾಗ, ಅವನ ಕುಟುಂಬಕ್ಕೆ ಆತಂಕವಾಗಿದೆ. ಅವರು ಹತ್ತಿರದ ಪ್ರದೇಶಗಳನ್ನು ಹುಡುಕಿ ಸಂಬಂಧಿಕರನ್ನು ಸಂಪರ್ಕಿಸಿದರೂ ಬಾಲಕನ ಪತ್ತೆಯಾಗಲಿಲ್ಲ. ಮರುದಿನ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದರು.
ದೂರಿನ ನಂತರ, ಪೊಲೀಸರು ತಕ್ಷಣವೇ ಹಲವಾರು ತಂಡಗಳನ್ನು ರಚಿಸಿ ಸಿಸಿಟಿವಿ ದೃಶ್ಯಾವಳಿಗಳು, ಸ್ಥಳೀಯ ಗುಪ್ತಚರ ಮಾಹಿತಿ ಮತ್ತು ಆ ಪ್ರದೇಶದ ಮಕ್ಕಳು ಮತ್ತು ಪರಿಚಯಸ್ಥರನ್ನು ಪ್ರಶ್ನಿಸುವ ಮೂಲಕ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಸುಮಾರು 30 ಗಂಟೆಗಳ ನಂತರ, ಬಾಲಕನ ಶವವು ಕಾಡಿನಲ್ಲಿ ಪತ್ತೆಯಾಗಿದೆ.
ಮೃತದೇಹವು ಗುರುತುಸಿಗದಷ್ಟು ಚಿಂತಾಜನಕವಾಗಿತ್ತು. ಕಾಡು ಪ್ರಾಣಿಗಳು ಶವವನ್ನು ಭಾಗಶಃ ಕತ್ತರಿಸಿ ಹಾಕಿದಂತಿತ್ತು. ತಲೆ ಮತ್ತು ಮುಂಡವು ಪರಸ್ಪರ ದೂರದಲ್ಲಿ ಪ್ರತ್ಯೇಕವಾಗಿ ಕಂಡುಬಂದಿವೆ. ಈ ವೇಳೆ ಪೊಲೀಸರು ತನಿಖೆ ಆರಂಭಿಸಿದಾಗ 16 ವರ್ಷದ ಬಾಲಕನ ವಿರುದ್ಧ ಅನುಮಾನಗಳು ಮೂಡಿದವು. ಆತನನ್ನು ಪ್ರಶ್ನಿಸಿದಾಗ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ಎಂಟನೇ ತರಗತಿಯ ವಿದ್ಯಾರ್ಥಿಯಾಗಿರುವ ಆರೋಪಿಯು ಮೊಬೈಲ್ ಫೋನ್‌ಗಳಲ್ಲಿ ಅಶ್ಲೀಲ ದೃಶ್ಯ ಮತ್ತು ಅಪರಾಧ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದನು. ಅಪ್ರಾಪ್ತ ವಯಸ್ಕನಾಗಿರುವುದರಿಂದ ಕಠಿಣ ಶಿಕ್ಷೆಯಿಂದ ಪಾರಾಗುವುದಾಗಿ ಆತ ಭಾವಿಸಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದ ದಿನ ಆರೋಪಿ ತನ್ನ ತಾಯಿಯ ಮೊಬೈಲ್ ಫೋನ್ ಅನ್ನು ಕದ್ದಿದ್ದ.
ಅವನು ಮತ್ತು ಕೊಲೆಯಾದ ಬಾಲಕ ಆಟೋರಿಕ್ಷಾದಲ್ಲಿ ಪ್ರಯಾಣಿಸಿ ಒಟ್ಟಿಗೆ ಅಶ್ಲೀಲ ವಿಡಿಯೊಗಳನ್ನು ವೀಕ್ಷಿಸಿದ್ದರು ಎನ್ನಲಾಗಿದೆ. ನಂತರ ಆರೋಪಿಯು ಬಾಲಕನನ್ನು ಸಿಗರೇಟ್ ಸೇದುವ ನೆಪದಲ್ಲಿ ಹತ್ತಿರದ ಕಾಡಿಗೆ ಕರೆದೊಯ್ದಿದ್ದಾನೆ. ನಂತರ ಕಾಡಿನಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಹಲ್ಲೆ ನಡೆಸಿದ್ದಾನೆ. ಇದಕ್ಕೆ ಬಾಲಕ ವಿರೋಧಿಸಿದಾಗ, ಕೋಪಗೊಂಡ ಆರೋಪಿಯು ಉರಿಯುತ್ತಿದ್ದ ಸಿಗರೇಟ್ ಅನ್ನು ಬಾಲಕನ ಕೆನ್ನೆಗೆ ಒತ್ತಿದ್ದಾನೆ. ನಂತರ ಅಲ್ಲೇ ಇದ್ದ ಕಲ್ಲಿನಿಂದ ಬಾಲಕನ ಮೇಲೆ ಪದೇ ಪದೇ ಹಲ್ಲೆ ನಡೆಸಿದ್ದಾನೆ. ಇದರಿಂದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕೊಲೆಯ ನಂತರವೂ ಈ ಕ್ರೌರ್ಯ ಮುಂದುವರೆದಿದೆ. ಆರೋಪಿಯು ಬಾಲಕನ ಕಾಲುಗಳನ್ನು ಬೆಲ್ಟ್‌ನಿಂದ ಕಟ್ಟಿ, ದೇಹವನ್ನು ಹತ್ತಿರದ ಪೊದೆಗಳಿಗೆ ಎಳೆದುಕೊಂಡು ಹೋಗಿ, ಶವದ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸಾಕ್ಷ್ಯಗಳನ್ನು ನಾಶಮಾಡಲು ಬಾಲಕನ ಮೇಲೆ ಒಣಎಲೆಗಳನ್ನಿಟ್ಟು ಬೆಂಕಿ ಹಚ್ಚಿ ಸುಡಲು ಯತ್ನಿಸಿದ್ದಾನೆ.
ತನ್ನ ಬಟ್ಟೆಗಳ ಮೇಲೆ ರಕ್ತದ ಕಲೆಗಳನ್ನು ತೆಗೆಯಲು ಮಾಸ್ಟರ್ ಪ್ಲಾನ್ ಮಾಡಿದ ಆರೋಪಿ, ಹತ್ತಿರದ ಚರಂಡಿಗೆ ಹಾರಿ ತನ್ನ ಬಟ್ಟೆಯನ್ನು ಗಲೀಜು ಮಾಡಿದ್ದಾನೆ. ನಂತರ ಮನೆಗೆ ಹೋಗಿ ಏನೂ ನಡೆದೇ ಇಲ್ಲ ಎಂಬಂತೆ ವರ್ತಿಸಿದ್ದಾನೆ. ತಾನು ಆಕಸ್ಮಿಕವಾಗಿ ಚರಂಡಿಗೆ ಜಾರಿ ಬಿದ್ದೆ ಎಂದು ತನ್ನ ಕುಟುಂಬದವರನ್ನು ನಂಬಿಸಿದ್ದಾನೆ.
ಅಪರಾಧ ಸ್ಥಳದಿಂದ ಸಿಗರೇಟ್ ತುಂಡುಗಳು, ರಕ್ತಸಿಕ್ತ ಬಟ್ಟೆ ಇತ್ಯಾದಿಗಳನ್ನು ಪೊಲೀಸರು ವಶಪಡಿಸಿಕೊಂಡರು. ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಸ್ಕೋ) ಕಾಯ್ದೆ, ಎಸ್‌ಸಿ-ಎಸ್‌ಟಿ ದೌರ್ಜನ್ಯ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.