ರಾಂಚಿ, ನ.27: ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ಇಬ್ಬರು ಸಹೋದರರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಮ್ಮ ಪತ್ನಿಯರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ವರದಿಯಾಗಿದೆ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವಗಳನ್ನು ಆಂಬ್ಯುಲೆನ್ಸ್‌ನಲ್ಲಿ ಸಾಗಿಸಿ ಕಾಡಿನಲ್ಲಿ ಹೂತುಹಾಕಿದ್ದಾರೆ. ಈ ಸಂಬಂಧ ಇಬ್ಬರು ಸಹೋದರರು ಹಾಗೂ ಅವರ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ಮಿನಿ ಪ್ರಿಯಾ (28) ಮತ್ತು ರಾಧಿಕಾ ಕುಮಾರಿ (20) ಎಂದು ಗುರುತಿಸಲಾಗಿದೆ. ಇವರ ಪತಿಯರಾದ ಶಿವಶಂಕರ್ ಸಾಹು ಮತ್ತು ನವೀನ್ ಸಾಹು ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ. ಇಬ್ಬರು ಮಹಿಳೆಯರ ನಡುವಿನ ದೀರ್ಘಕಾಲದ ಮನಸ್ತಾಪವೇ ಈ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯ ಎಸಗಿದ ನಂತರ ಮಂಗಳವಾರದಂದು ಇಬ್ಬರೂ ಸಹೋದರರು ತಮ್ಮ ಮಕ್ಕಳೊಂದಿಗೆ ಗುಮ್ಲಾ ಪೊಲೀಸ್ ಠಾಣೆಗೆ ತೆರಳಿ, ತಮ್ಮ ಪತ್ನಿಯರು ಕಾಣೆಯಾಗಿದ್ದಾರೆ ಎಂದು ಸುಳ್ಳು ದೂರು ದಾಖಲಿಸಿ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದಾರೆ. ಪೊಲೀಸರ ತೀವ್ರ ವಿಚಾರಣೆಯ ವೇಳೆ ಆರೋಪಿಗಳು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ನಿತ್ಯದ ಜಗಳವೇ ಮುಳುವಾಯಿತೇ?
ಕುಟುಂಬದೊಳಗೆ ಹೆಂಡತಿಯರ ನಡುವೆ ಆಗಾಗ ಜಗಳ ಮತ್ತು ವಾಗ್ವಾದ ನಡೆಯುತ್ತಿದ್ದವು ಎನ್ನಲಾಗಿದೆ. ಇದೇ ವಿಷಯವಾಗಿ ಸಹೋದರರಿಗೆ ತೀವ್ರ ಸಿಟ್ಟಿತ್ತು. ಆದರೆ ಕೊಲೆ ನಡೆಯುವುದಕ್ಕೆ ಎರಡು ದಿನಗಳ ಮೊದಲೇ ಮಹಿಳೆಯರು ತಮ್ಮ ನಡುವಿನ ಜಗಳ ಮರೆತು ರಾಜಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೋಮವಾರ ಬೆಳಗ್ಗೆ ಸುಮಾರು 9 ಗಂಟೆಗೆ ಮೃತರ ಕುಟುಂಬಸ್ಥರು ಅವರೊಂದಿಗೆ ಮಾತನಾಡಿದ್ದು, ಆಗ ಎಲ್ಲವೂ ಸಹಜವಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಬಿನ್ ಜಮಾ ಹೇಳಿದರು.