ಮುಂಬೈ, ಏ. 5: ದೇಶದ ಪ್ರಮುಖ ಸ್ಥಳಗಳಲ್ಲಿ ಭಾರಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಉಗ್ರ ಜಾಲವನ್ನು ಉತ್ತರ ಪ್ರದೇಶದಲ್ಲಿ ಭೇದಿಸಿದ ಬೆನ್ನಲ್ಲೇ ಮುಂಬೈಯಲ್ಲೂ ಕಾರ್ಯಾಚರಣೆ ನಡೆಸಿ ಇಬ್ಬರು ಭಯೋತ್ಪಾದಕರನ್ನು ಸೆರೆ ಹಿಡಿಯಲಾಗಿದೆ. ಆ ಮೂಲಕ ಮತ್ತೊಂದು ಭಾರಿ ಸ್ಫೋಟದ ಸಂಚು ವಿಫಲವಾಗಿದೆ. ಜತೆಗೆ ದೇಶ ಬಹುದೊಡ್ಡ ಗಂಡಾಂತರದಿಂದ ಪಾರಾಗಿದೆ. ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಮತ್ತು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿಯಾಗಿ ಕಾರ್ಯಾರಣೆ ನಡೆಸಿ ಮಹಾರಾಷ್ಟ್ರದ ಮುಂಬೈಯಲ್ಲಿ ಜೈಶ್-ಎ-ಮೊಹಮ್ಮದ್ (Jaish-e-Mohammed) ಸಂಘಟನೆಯ ಇಬ್ಬರು ಉಗ್ರರು ಬಂಧಿಸಿದೆ. ಈ ಉಗ್ರರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಬಂಧಿತರನ್ನು ಮೊಸ್ಸಾದ್ ಅಹ್ದಮ್ ಆಲಿಯಾಸ್ ಕಲಂ ಕಲ್ಯಾಣ್ ಮತ್ತು ಮೊಹಮ್ಮದ್ ಹಮದ್ ಕೊಲ್ಲಾರ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಮುಂಬೈ ನಿವಾಸಿಗಳಾದ್ದು, ಸದ್ಯ ವಿಚಾರಣೆಗಾಗಿ ಅಧಿಕಾರಿಗಳು ಮುಂಬೈಗೆ ಕರೆದೊಯ್ದಿದ್ದಾರೆ.
ಮುಂಬೈಯಲ್ಲಿ ಇಬ್ಬರು ಉಗ್ರರ ಬಂಧನ:
ತನಿಖಾಧಿಕಾರಿಗಳ ಪ್ರಕಾರ, ಇಬ್ಬರೂ ಮೂಲಭೂತವಾದಿಗಳಾಗಿದ್ದು, ಜೈಷ್-ಎ-ಮೊಹಮ್ಮದ್ (JeM) ಮತ್ತು ಇಸ್ಲಾಮಿಕ್ ಸ್ಟೇಟ್ ಸೇರಿ ಹಲವು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಅಲ್ಲದೆ ʼಮಿಷನ್ ಖಿಲಾಫತ್ (Mission Khilafat) ಮತ್ತು ʼಸೋಲ್ಜರ್ಸ್ ಆಫ್ ಪ್ರೊಫೆಟ್ʼ (Soldiers of Prophet)ನಂತಹ ಆನ್‌ಲೈನ್ ಉಗ್ರಗಾಮಿ ಜಾಲಗಳ ಭಾಗವಾಗಿದ್ದಾರೆ.
ಜಮ್ಮು-ಕಾಶ್ಮೀರದ ಗ್ಯಾಂಡರ್‌ಬಲ್‌ನಲ್ಲಿ ಎನ್‌ಕೌಂಟರ್; ಓರ್ವ ಭಯೋತ್ಪಾದಕನ ಹತ್ಯೆ
ಆನ್‌ಲೈನ್ ಮೂಲಕ ಬ್ರೈನ್‌ವಾಶ್
ʼʼಆನ್‌ಲೈನ್ ಮೂಲಕ ಇವರನ್ನು ಸಂಪರ್ಕಿಸಿದ್ದ ಉಗ್ರರು ಬ್ರೈನ್‌ವಾಶ್ ಮಾಡಿದ್ದರು. ಜೈಷ್-ಎ-ಮೊಹಮ್ಮದ್ ಸಂಘಟನೆಯ ಅಬು ಹುಫೇಝ್ ಇವರ ತಲೆಗೆ ಉಗ್ರವಾದವನ್ನು ತುಂಬಿದ್ದʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಮೊಸ್ಸಾದ್ ಅಹ್ದಮ್ ಮತ್ತು ಮೊಹಮ್ಮದ್ ಹಮದ್ ಕೊಲ್ಲಾರ ಇಬ್ಬರೂ ಸುಧಾರಿತ ಸ್ಫೋಟಕ ವಸ್ತುಗಳನ್ನು ಜೋಡಿಸುವ ತರಬೇತಿ ಪಡೆದಿದ್ದಾರೆ. ಆಟಿಕೆ ಕಾರಲ್ಲಿ ಸ್ಫೋಟಕಗಳನ್ನು ಇರಿಸಿ ದೆಹಲಿಯಲ್ಲಿ ಭಾರಿ ಪ್ರಮಾಣದ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು.
ದೇಶಾದ್ಯಂತ ಹರಡಿರುವ ಜಾಲ?
ಸದ್ಯ ತನಿಖಾಧಿಕಾರಿಗಳು ಈ ಜಾಲ ದೇಶಾದ್ಯಂತ ಹರಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಮುಂಬೈಯ ನಾಲ್ಕರಿಂದ ಐವರು ಅಪ್ರಾಪ್ತರು ಐಸಿಸ್‌ನಿಂದ ಪ್ರಭಾವಿತರಾಗಿದ್ದು, ಅವರ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ.
ಉಗ್ರ ಚಟುವಟಿಕೆ ಹಿನ್ನೆಲೆಯಲ್ಲಿ ಸಿಕ್ಕಿಬಿದ್ದ ರಿಜ್ವಾನ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಎಂದ ತಂದೆ
ಉತ್ತರ ಪ್ರದೇಶದಲ್ಲಿ ಉಗ್ರ ಜಾಲ ಪತ್ತೆ
ಪಾಕಿಸ್ತಾನದ ನಿರ್ದೇಶನದ ಮೇರೆಗೆ ಭಾರತದ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಿ ದೇಶದಲ್ಲಿ ತಲ್ಲಣ ಸೃಷ್ಟಿಸಲು ಸಂಚು ಹೂಡಿದ್ದ ಭಯೋತ್ಪದಕರ ಜಾಲವನ್ನು ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಪಡೆ ಪತ್ತೆ ಹಚ್ಚಿದೆ. ಈ ಜಾಲದ ಭಾಗವಾಗಿರುವ ಸಾಕಿಬ್, ಅರ್ಬಾಬ್, ವಿಕಾಸ್ ಮತ್ತು ಲೋಕೇಶ್‌ನನ್ನು ಸೆರೆ ಹಿಡಿಯಲಾಗಿದ್ದು, ತನಿಖೆ ನಡೆಯುತ್ತಿದೆ. ಉತ್ತರ ಪ್ರದೇಶದ ಮೀರತ್ ನಗರದ ನಿವಾಸಿ, ವೃತ್ತಿಯಲ್ಲಿ ಕ್ಷೌರಿಕನಾಗಿದ್ದ ಸಾಕಿಬ್ ಈ ಉಗ್ರರ ತಂಡದ ನಾಯಕನಾಗಿದ್ದ. ಈತ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐನ ಹಾಂಡ್ಲರ್‌ಗಳ ಜತೆ ನಿರಂತರ ಸಂಪರ್ಕದಲ್ಲಿದ್ದ. ಸದ್ಯ ತನಿಖಾ ಸಂಸ್ಥೆಗಳು ದೇಶದ ವಿವಿಧ ಭಾಗಳಲ್ಲಿ ಯೋಧ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಿವೆ.
ಮತ್ತಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.