ಭೋಪಾಲ್, ಸೆ. 1: ಮಧ್ಯ ಪ್ರದೇಶದ ಗ್ವಾಲಿಯರ್ ಜಿಲ್ಲೆಯ ಡಬ್ರಾ ಪಟ್ಟಣದಲ್ಲಿ 21 ವರ್ಷದ ಯುವತಿಯನ್ನು ಕ್ಷುಲ್ಲಕ ಕಾರಣಕ್ಕೆ ತಂದೆ ಮತ್ತು ಚಿಕ್ಕಪ್ಪನೇ ಕೊಲೆ ಮಾಡಿದ್ದಾರೆ. ಕೆಲಸಕ್ಕೆ ಹೋಗುತ್ತಿದ್ದರು, ಕೂದಲಿ ಚಿಕ್ಕದಾಗಿ ಕತ್ತರಿಸಿಕೊಂಡಿದ್ದರು ಹಾಗೂ ತಮ್ಮ ರಾಖಿ ಸಹೋದರನನ್ನು ಮನೆಗೆ ಕರೆತಂದಿದ್ದಾರೆ ಎಂಬ ಕಾರಣಕ್ಕೆ ತಂದೆ ಮತ್ತು ಚಿಕ್ಕಪ್ಪ ಸೇರಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಮೃತ ಯುವತಿಯನ್ನು ನಂದಿನಿ ಯಾದವ್ ಎಂದು ಗುರುತಿಸಲಾಗಿದೆ. ಕರ್ನಾಟಕದ ವಿಜಯಪುರ ನಗರದ ಮಾಲ್‌ವೊಂದರಲ್ಲಿ ಅವರು ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡುತ್ತಿದ್ದ ನಂದಿನಿ, ಕುಟುಂಬದ ವಿರೋಧದ ನಡುವೆಯೂ ತಾಯಿಯ ಬೆಂಬಲದಿಂದ ಕರ್ನಾಟಕಕ್ಕೆ ಆಗಮಿಸಿ ಕೆಲಸ ಮಾಡುತ್ತಿದ್ದರು.
ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಕಳೆದ ವಾರ ನಂದಿನಿ ತನ್ನ ಸಹೋದ್ಯೋಗಿ ಹಾಗೂ ‘ರಾಖಿ ಸಹೋದರ’ ಮಹೇಂದ್ರ ಪಾಂಡೆ ಅವರೊಂದಿಗೆ ಮನೆಗೆ ಮರಳಿದ್ದರು. ಇದರಿಂದ ಕುಟುಂಬದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ನಂದಿನಿಯ ತಂದೆ ಭಗವಾನ್ ಸಿಂಗ್ ಯಾದವ್ ಮತ್ತು ಚಿಕ್ಕಪ್ಪ ಸಂತೋಷ್ ಸಿಂಗ್ ಯಾದವ್ ಆಕೆಯ ನಿರ್ಧಾರಗಳನ್ನು ಪ್ರಶ್ನಿಸಿ ಜಗಳ ಆರಂಭಿಸಿದ್ದಾರೆ. ಮೊದಲು ನಂದಿನಿಯ 17 ವರ್ಷದ ಸಹೋದರಿಯ ಮೇಲೆ ಹಲ್ಲೆ ನಡೆಸಿದ್ದು, ಆಕೆಯನ್ನು ರಕ್ಷಿಸಲು ಬಂದ ತಾಯಿಯನ್ನು ಮತ್ತೊಂದು ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ.
ಬಳಿಕ ನಂದಿನಿಯೊಂದಿಗೆ ಮನೆಗೆ ಬಂದಿದ್ದ ಮಹೇಂದ್ರ ಪಾಂಡೆ ಮೇಲೂ ಹಲ್ಲೆ ನಡೆಸಲಾಗಿದೆ. ಗಾಯಗೊಂಡ ಪಾಂಡೆ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ತಂದೆ-ಚಿಕ್ಕಪ್ಪನ ದ್ವೇಷ ನಂದಿನಿ ಮೇಲೆ ತಿರುಗಿತು. ಬೇರೆ ರಾಜ್ಯದಲ್ಲಿ ಕೆಲಸ ಮಾಡುತ್ತಿರುವುದು, ಕೂದಲು ಚಿಕ್ಕದಾಗಿ ಕತ್ತರಿಸಿಕೊಂಡಿರುವುದು ಹಾಗೂ ಪುರುಷ ಸಹೋದ್ಯೋಗಿಯನ್ನು ಮನೆಗೆ ಕರೆತಂದಿರುವುದನ್ನು ಆಕ್ಷೇಪಿಸಿ ನಂದಿನಿ ಮೇಲೆ ಹಲ್ಲೆ ನಡೆಸಿದ್ದಾರೆ. ಆಕೆಯ ತಲೆಯನ್ನು ಗೋಡೆಗೆ ಹೊಡೆದು, ಕೋಲಿನಿಂದ ಹಲವು ಬಾರಿ ಥಳಿಸಿ, ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನುಕಂಪದ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ತಾಯಿಯನ್ನೇ ಕೊಂದ ಪಾಪಿ ಮಗಳು
ಘಟನೆಯ ಬಳಿಕ ಇಬ್ಬರೂ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ನೆರೆಹೊರೆಯವರು ಕೂಗು-ಗದ್ದಲ ಕೇಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೊಠಡಿಯಲ್ಲಿ ಕೂಡಿ ಹಾಕಲಾಗಿದ್ದ ನಂದಿನಿಯ ತಾಯಿ ಮತ್ತು ಸಹೋದರಿಯನ್ನು ಹೊರಗೆ ಕರೆತಂದಿದ್ದಾರೆ.
ಪ್ರಕರಣದಲ್ಲಿ ತಂದೆ ಭಗವಾನ್ ಸಿಂಗ್ ಯಾದವ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಪ್ಪ ಸಂತೋಷ್ ಸಿಂಗ್ ಯಾದವ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕೊಲೆ ಹಾಗೂ ಹಲ್ಲೆ ಪ್ರಕರಣ ದಾಖಲಿಸಲಾಗಿದೆ. ಹೇಳಿಕೆಯನ್ನು ದಾಖಲಿಸಲು ಪೊಲೀಸರು ಮಹೇಂದ್ರ ಪಾಂಡೆಯನ್ನು ಹುಡುಕುತ್ತಿದ್ದಾರೆ.