ನವದೆಹಲಿ: ಮಣಿಪುರದ ಪರಿಹಾರ ಶಿಬಿರಗಳಲ್ಲಿ (Manipur's relief camps) ಸಂಭವಿಸಿದ ಅಸಹಜ ಸಾವು (suspicious deaths) ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಸಂಬಂಧಿಸಿ ವಿವರವಾದ ವರದಿ ಸಲ್ಲಿಸುವಂತೆ ಮಣಿಪುರದ ಮುಖ್ಯ ಕಾರ್ಯದರ್ಶಿಗೆ (Chief Secretary of Manipur) ಸುಪ್ರೀಂ ಕೋರ್ಟ್ (Supreme Court) ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ಪೀಠವು 2023ರಲ್ಲಿ ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ವೇಳೆ ಪರಿಹಾರ ಶಿಬಿರಗಳಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಹಿಂಸಾಚಾರ ಪ್ರಕರಣಗಳ ತನಿಖೆ ಮತ್ತು ವಿಚಾರಣೆಗೆ ಸಂಬಂಧಿಸಿ ವಿವರವಾದ ವರದಿಯನ್ನು ಕೇಳಿದೆ.
ಮಣಿಪುರದ ಪರಿಹಾರ ಶಿಬಿರಗಳಲ್ಲಿ ಸಂಭವಿಸಿದ 25 ಅನುಮಾನಾಸ್ಪದ ಸಾವು ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನ್ಯಾಯಪೀಠ, ಮರಣೋತ್ತರ ವರದಿ, ಸಾವಿನ ಕಾರಣಗಳಿಗೆ ಸಂಬಂಧಿಸಿದ ದಾಖಲೆಗಳು ಸೇರಿದಂತೆ ವಿವರವಾದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಆದೇಶಿಸಿದೆ.
ಇನ್ಮುಂದೆ ಜನನ, ಮರಣ ನೋಂದಣಿ ನಿಯಮ ಕಠಿಣ; ಅಕ್ಟೋಬರ್ 1ರಿಂದ ಜಾರಿಯಾಗಲಿದೆ ಹೊಸ ಕಾಯ್ದೆ
2023ರಲ್ಲಿ ನಡೆದಿರುವ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ನೇತೃತ್ವದ ಸಮಿತಿಯ ವರದಿಯನ್ನು ಉಲ್ಲೇಖಿಸಿ ಪರಿಹಾರ ಶಿಬಿರಗಳಲ್ಲಿದ್ದ ವ್ಯಕ್ತಿಗಳ ಸುರಕ್ಷತೆ ಮತ್ತು ಘನತೆಯ ಬಗ್ಗೆ ಪ್ರಶ್ನಿಸಿತು.
ಪರಿಹಾರ ಶಿಬಿರಗಳಲ್ಲಿ ಜುಲೈ 4ರಂದು 25 ಅಸಹಜ ಸಾವುಗಳ ಕುರಿತು ಸಮಿತಿ ಕೋರಿದ ಮಾಹಿತಿಯ ಬಗ್ಗೆ ನ್ಯಾಯಾಲಯವು ಮಣಿಪುರ ಅಡ್ವೊಕೇಟ್ ಜನರಲ್ ಅವರನ್ನು ಪ್ರಶ್ನಿಸಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶ ಹೊರಡಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಬೇಡಿ. ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎಂದು ನಮಗೆ ತಿಳಿಸಿ ಎಂದು ಹೇಳಿದೆ.
ವರದಿ ಪ್ರಕಾರ ಎಂಟು ಜಿಲ್ಲೆಗಳಾದ್ಯಂತ ಪರಿಹಾರ ಶಿಬಿರಗಳಲ್ಲಿ 640 ಸಾವು ಉಂಟಾಗಿದೆ. ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರೂ ಕೇವಲ 20 ಮರಣೋತ್ತರ ಪರೀಕ್ಷೆಗಳನ್ನು ನಡೆಸಲಾಗಿದೆ. ಹಲವು ಪ್ರಕರಣಗಳಿಗೆ ಕೇವಲ 20,000 ರಿಂದ 30,000 ರೂ.ಗಳ ಪರಿಹಾರ ಮಾತ್ರ ನೀಡಿರುವುದು ಏಕೆ ಎಂದು ಪ್ರಶ್ನಿಸಿದೆ.
ಈ ಕುರಿತು ತಕ್ಷಣ ಕ್ರಮಕ್ಕೆ ಮಣಿಪುರ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿರುವ ಸುಪ್ರೀಂ ಕೋರ್ಟ್ ಎಲ್ಲಾ ಅನುಮಾನಾಸ್ಪದ ಸಾವುಗಳಿಗೆ ಎಫ್‌ಐಆರ್‌ಗಳು ದಾಖಲಿಸಿ ಸರಿಯಾದ ತನಿಖೆ ನಡೆಸುವಂತೆ ಆದೇಶಿಸಿದೆ.
ವಿಚಾರಣೆಯ ಸಮಯದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು ಮಾತನಾಡಿ, ಎಂಟು ಜಿಲ್ಲೆಗಳಲ್ಲಿ 42 ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ. ಒಟ್ಟು 3,020 ಪ್ರಕರಣಗಳು ತನಿಖೆಯಲ್ಲಿವೆ. 302 ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಲಾಗಿದೆ ಮತ್ತು 1,583 ಪ್ರಕರಣಗಳಲ್ಲಿ ಮುಕ್ತಾಯ ವರದಿಗಳನ್ನು ನೀಡಲಾಗಿದೆ. 1,135 ಪ್ರಕರಣಗಳಲ್ಲಿ ತನಿಖೆಗಳು ನಡೆಯುತ್ತಿವೆ, ಆದರೆ 33 ಪ್ರಕರಣಗಳಲ್ಲಿ ವಿಚಾರಣೆಗಳು ಪ್ರಾರಂಭವಾಗಿವೆ ಎಂದು ತಿಳಿಸಿದರು.
ಜಿರಾಮ್ ಕಣಿವೆ ಹತ್ಯಾಕಾಂಡ: 13 ವರ್ಷಗಳ ಬಳಿಕ 10 ಮಾವೋವಾದಿಗಳಿಗೆ ಮರಣ ದಂಡನೆ
ಗುವಾಹಟಿಯ ವಿಶೇಷ ನ್ಯಾಯಾಲಯವು ವಾರದಲ್ಲಿ ಎರಡು ದಿನ ಮಾತ್ರ ಪ್ರಕರಣಗಳನ್ನು ವಿಚಾರಣೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಗುವಾಹಟಿ ಹೈಕೋರ್ಟ್‌ನ ಅವಶ್ಯಕತೆಗಳನ್ನು ತಕ್ಷಣವೇ ಪರಿಶೀಲಿಸಿ ಪರಿಹರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ಸಿಬಿಐ ಪ್ರಕರಣಗಳನ್ನು ಆಲಿಸಲು ಎರಡು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸೂಚಿಸಿದರು.