ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dausa Horror: ಹೋಳಿಯ ಬಣ್ಣದೋಕುಳಿ ನಡುವೆ ಹರಿಯಿತು ನೆತ್ತರು; ತನ್ನ ಪಾಡಿಗೆ ಓದುತ್ತಿದ್ದ 25 ವರ್ಷದ ಯುವಕನನ್ನು ಕೊಂದ ಮೂವರು

Dausa Horror: ಹೋಳಿ ಬಣ್ಣ ಹಚ್ಚಿಸಿಕೊಳ್ಳಲು ನಿರಾಕರಿಸಿದ ಕಾರಣಕ್ಕೆ 25 ವರ್ಷದ ಯುವಕನನ್ನು ಮೂವರ ಗುಂಪು ಕೊಲೆ ಮಾಡಿರುವ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು ಹನ್ಸ್‌ರಾಜ್‌ ಎಂದು ಗುರುತಿಸಲಾಗಿದ್ದು, ಅಶೋಕ್‌, ಬಬ್ಲು ಮತ್ತು ಕಲೂರಾಮ್‌ ಆರೋಪಿಗಳು.

ಹೋಳಿಯ ಬಣ್ಣದೋಕುಳಿ ನಡುವೆ ಹರಿಯಿತು ನೆತ್ತರು

ಸಾಂದರ್ಭಿಕ ಚಿತ್ರ.

Profile Ramesh B Mar 13, 2025 7:41 PM

ಜೈಪುರ: ದೇಶಾದ್ಯಂತ ಹೋಳಿ ಹಬ್ಬ (Holi)ವನ್ನು ಕೊಂಡಾಡಲಾಗುತ್ತಿದ್ದು, ಈಗಾಲೇ ವಿವಿಧ ಕಡೆಗಳಲ್ಲಿ ಆಚರಣೆ ಆರಂಭವಾಗಿದೆ. ಆದರೆ ದುರಂತವೆಂದರೆ ಸಂಭ್ರಮ ಹೆಚ್ಚಿಸಬೇಕಿದ್ದು ಹೋಳಿ ಯುವಕನೋರ್ವನ ಕೊಲೆಗೆ ಕಾರಣವಾಗಿದ್ದು, ಇದೀಗ ಆತನ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಬಣ್ಣ ಹಚ್ಚಿಸಿಕೊಳ್ಳಲು ನಿರಾಕರಿಸಿದ ಕಾರಣಕ್ಕೆ 25 ವರ್ಷದ ಯುವಕನನ್ನು ಮೂವರ ಗುಂಪು ಕೊಲೆ ಮಾಡಿದೆ. ಈ ಬೆಚ್ಚಿ ಬೀಳಿಸುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಮೃತನನ್ನು ಹನ್ಸ್‌ರಾಜ್‌ (Hansraj) (25) ಎಂದು ಗುರುತಿಸಲಾಗಿದೆ. ಅಶೋಕ್‌, ಬಬ್ಲು ಮತ್ತು ಕಲೂರಾಮ್‌ ಆರೋಪಿಗಳು. ರಾಜಸ್ಥಾನದ ದೌಸಾ ಜಿಲ್ಲೆಯ (Rajasthan's Dausa district) ರಾಲ್ವಾಸ್‌ ಗ್ರಾಮದಲ್ಲಿ (Dausa Horror) ಈ ಘಟನೆ ಸಂಭವಿಸಿದೆ.

ಬುಧವಾರ (ಮಾ. 12) ಸಂಜೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಹನ್ಸ್‌ರಾಜ್‌ ಬಣ್ಣ ಹಚ್ಚಿಸಿಕೊಳ್ಳಲು ನಿರಾಕರಿಸಿದ್ದರಿಂದ ಕುಪಿತರಾದ ಅಶೋಕ್‌, ಬಬ್ಲು ಮತ್ತು ಕಲೂರಾಮ್‌ ಆತನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ

ʼʼಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಹನ್ಸ್‌ರಾಜ್‌ ಗ್ರಾಮದ ಗ್ರಂಥಾಲಯದಲ್ಲಿ ಕುಳಿತು ಓದುತ್ತಿದ್ದರು. ಈ ವೇಳೆ ಕೈಯಲ್ಲಿ ಬಣ್ಣ ಹಿಡಿದುಕೊಂಡ ಅಶೋಕ್‌, ಬಬ್ಲು ಮತ್ತು ಕಲೂರಾಮ್‌ ಅವರ ಸವಾರಿ ಇತ್ತ ಕಡೆ ಬಂದಿತ್ತು. ಅವರು ಹನ್ಸ್‌ರಾಜ್‌ ಮೈಗೆ ಬಣ್ಣ ಬಳಿಯಲು ಮುಂದಾದರು. ಆದರೆ ಓದುತ್ತಿರುವ ಕಾರಣ ಅವರು ಬಣ್ಣ ಹಚ್ಚಿಸಿಕೊಳ್ಳಲು ನಿರಾಕರಿಸಿದರು. ಇದರಿಂದ ಕೋಪಗೊಂಡ ಮೂವರು ಹನ್ಸ್‌ರಾಜ್‌ನನ್ನು ಎಳೆದಾಡಿ ಥಳಿಸಿದರು. ಅಲ್ಲದೆ ಬೆಲ್ಟ್‌ನಿಂದ ಸರಿಯಾಗಿ ಹೊಡೆದಿದ್ದಾರೆ. ಈ ಪೈಕಿ ಓರ್ವ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ಇವರು ಪರಾರಿಯಾಗಿದ್ದಾರೆʼʼ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ದಿನೇಶ್ ಅಗರ್ವಾಲ್ ತಿಳಿಸಿದ್ದಾರೆ.

ಪ್ರತಿಭಟನೆ

ಉದ್ರಿಕ್ತ ಹನ್ಸ್‌ರಾಜ್‌ ಕುಟುಂಬಸ್ಥರು ಮತ್ತು ಸಾರ್ವಜನಿಕರು ಆತನ ಮೃತದೇಹ ಮುಂದಿಟ್ಟುಕೊಂಡು, ರಾಷ್ಟ್ರೀಯ ಹೆದ್ದಾರಿ ತಡೆದು ನ್ಯಾಯಕ್ಕಾಗಿ ಮಧ್ಯರಾತ್ರಿ 1 ಗಂಟೆ ತನಕ ಪ್ರತಿಭಟನೆ ನಡೆಸಿದರು. ಹನ್ಸ್‌ರಾಜ್‌ ಕುಟುಂಬಕ್ಕೆ ಪರಿಹಾರ ಧನವಾಗಿ 50 ಲಕ್ಷ ರೂ. ನೀಡುವಂತೆ ಮತ್ತು ಕುಟುಂಬಸ್ಥರ ಪೈಕಿ ಒಬ್ಬರಿಗೆ ಸರ್ಕಾರಿ ಉದ್ಯೋಗ ಒದಗಿಸುವಂತೆ ಆಗ್ರಹಿಸಿದರು. ಜತೆಗೆ ಮೂವರನ್ನು ಕೂಡಲೇ ಬಂಧಿಸುವಂತೆ ಪಟ್ಟು ಹಿಡಿದರು. ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.