ಪಾಕಿಸ್ತಾನ: ಕಲ್ಲಿದ್ದಲು ಗಣಿಯಲ್ಲಿ (Coal Mine) ಸ್ಫೋಟ (Massive explosion) ಸಂಭವಿಸಿ 32 ಮಂದಿ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದಲ್ಲಿ (Pakistan) ಸಂಭವಿಸಿದೆ. ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಏಳು ಮಂದಿಯ ಶವವನ್ನು ಹೊರತೆಗೆಯಲಾಗಿದ್ದು, ಬಳಿಕ ಆಗಮಿಸಿದ ತುರ್ತು ಪ್ರತಿಕ್ರಿಯೆ ತಂಡ 25ಕ್ಕೂ ಹೆಚ್ಚು ಶವಗಳನ್ನು ಹೊರತೆಗೆದಿದೆ. ಈ ಘಟ್ಟನೆ ನೈಋತ್ಯ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ( Baluchistan province ) ಕಲ್ಲಿದ್ದಲು ಗಣಿಯಲ್ಲಿ ಗುರುವಾರ ನಡೆದಿದೆ. 10ಕ್ಕೂ ಹೆಚ್ಚು ಮಂದಿ ಭೂಗತದೊಳಗೆ ಸಿಲುಕಿಕೊಂಡಿದ್ದು, ಅವರನ್ನು ಸುರಕ್ಷಿತವಾಗಿ ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸರ್ಕಾರಿ ಗಣಿ ನಿರೀಕ್ಷಕ ಘನಿ ಬಲೋಚ್, ನೈಋತ್ಯ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದ ಹೊರವಲಯದ ಗುರುವಾರ ಮೀಥೇನ್ ಅನಿಲದ ಶೇಖರಣೆಯಿಂದ ಸ್ಫೋಟ ಉಂಟಾಗಿದೆ. ಇದರಲ್ಲಿ 32 ಮಂದಿಯ ಶವವನ್ನು ಹೊರ ತೆಗೆಯಲಾಗಿದೆ. 10 ಮಂದಿ ಭೂಗತದೊಳಗೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಇವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ರೈತರ ಹೋರಾಟ; ಪ್ರತಿಭಟನಾಕಾರರ ಚಲಿಸುವ ಬಸ್ ಮುಂದೆ ನಿಂತ 'ಲೇಡಿ ಸಿಂಘಂ' ಎಸಿಪಿ ಮೋನಿಕಾ ಶುಕ್ಲಾ: ವಿಡಿಯೊ ನೋಡಿ
ಸ್ಫೋಟದ ಬಳಿಕ ಏಳು ಜನರ ಶವಗಳನ್ನು ಹೊರತೆಗೆಯಲಾಗಿ. ಬಳಿಕ ಆಗಮಿಸಿದ ತುರ್ತು ಪ್ರತಿಕ್ರಿಯೆ ತಂಡ 25 ಜನರ ಶವವನ್ನು ಪತ್ತೆ ಹಚ್ಚಿದೆ. ಭೂಗತದಲ್ಲಿ ಸಿಕ್ಕಿಬಿದ್ದಿರುವ ಎಲ್ಲಾ ಗಣಿಗಾರರು ಪತ್ತೆಯಾಗುವವರೆಗೆ ಕಾರ್ಯಾಚರಣೆ ಮುಂದುವರಿಸುವುದಾಗಿ ಅವರು ತಿಳಿಸಿದರು.
ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹೇಳಿರುವ ಅವರು, ಭೂಗತದೊಳಗೆ ಆಮ್ಲಜನಕದ ಮಟ್ಟ ತೀವ್ರವಾಗಿ ಕಡಿಮೆ ಇರುವುದರಿಂದ ರಕ್ಷಣಾ ಸಿಬ್ಬಂದಿ ಗಣಿ ಒಳಗೆ ಎಚ್ಚರಿಕೆಯಿಂದ ಚಲಿಸಬೇಕಾಗಿದೆ. ಮೀಥೇನ್ ಅನಿಲ ಸ್ಫೋಟದ ಬಳಿಕ ಒಳಗೆ ಸಿಲುಕಿರುವವರು ಜೀವಂತವಾಗಿ ಇರುವ ಸಾಧ್ಯತೆ ಕಡಿಮೆ. ಈಗಾಗಲೇ ದೊರೆತಿರುವ ಶವಗಳನ್ನು ಅಂತ್ಯಕ್ರಿಯೆಗಾಗಿ ಕುಟುಂಬಗಳಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಬಲೂಚಿಸ್ತಾನದ ಗಣಿ ಮತ್ತು ಖನಿಜ ಸಚಿವ ಶೋಯೆಬ್ ನೊಶೆರ್ವಾನಿ ಅವರು ಮಾಹಿತಿ ನೀಡಿ, ಕಠಿಣ ಪರಿಸ್ಥಿತಿಯಲ್ಲಿ ರಕ್ಷಣಾ ತಂಡಗಳು ಗಣಿಯೊಳಗೆ ಸಿಲುಕಿರುವವರುಗಾಗಿ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ. ಸರ್ಕಾರವು ಸಾವನ್ನಪ್ಪಿದ್ದ ಪ್ರತಿಯೊಬ್ಬ ಗಣಿಗಾರನ ಕುಟುಂಬಕ್ಕೆ ತಲಾ 5,00,000 ರೂಪಾಯಿ ಪರಿಹಾರವನ್ನು ನೀಡುವುದಾಗಿ ಘೋಷಿಸಿದರು.
ಗಣಿಗಾರಿಕೆಯಲ್ಲಿ ಮೀಥೇನ್ ಅನಿಲದ ಶೇಖರಣೆಯಿಂದ ಉಂಟಾಗಿರುವ ಸ್ಫೋಟಕ್ಕೆ ಕಾರಣವನ್ನು ಪತ್ತೆ ಹಚ್ಚಲಾಗುವುದು. ಈ ಕುರಿತು ತನಿಖೆ ನಡೆಸಲಾಗುತ್ತದೆ. ಮುಂದಿನ ದಿನಗಳಲ್ಲಿ ಗಣಿ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದರು.
ಈ ದುರಂತಕ್ಕೆ ನಿರ್ಲಕ್ಷ್ಯವೇ ಮುಖ್ಯ ಕಾರಣ. ಇದಕ್ಕೆ ಕಾರಣವಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಲ್ಲಿದ್ದಲು ಗಣಿಗಾರರ ಒಕ್ಕೂಟ, ಪಾಕಿಸ್ತಾನ ಕೇಂದ್ರ ಗಣಿ ಕಾರ್ಮಿಕ ಒಕ್ಕೂಟ ಆಗ್ರಹಿಸಿದೆ. ಅಲ್ಲದೇ ಸರ್ಕಾರವು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಗಣಿ ಸುರಕ್ಷತಾ ಕಾನೂನುಗಳನ್ನು ಉಲ್ಲಂಘಿಸುವ ಕಂಪೆನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.