ಪುಣೆ: ಎರಡು ಟ್ರಕ್‌ಗಳು ಡಿಕ್ಕಿ ಹೊಡೆದು ಕಾರೊಂದು (Road Accident) ಅಪಘಾತಕ್ಕೀಡಾಗಿದ್ದು, ಎಂಟು ಜನರು ಸಾವನ್ನಪ್ಪಿದ್ದು, 15 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪುಣೆಯ ನವಲೆ ಸೇತುವೆ ಪ್ರದೇಶದಲ್ಲಿ ( Puna- Bangaluru Highway) ನಡೆದ ಅಪಘಾತದ ವೀಡಿಯೊಗಳಲ್ಲಿ, ಒಂದು ಟ್ರಕ್ ಬೆಂಕಿಯಲ್ಲಿ ಆವರಿಸಿರುವುದನ್ನು ಕಾಣಬಹುದು. ಟ್ರಕ್‌ಗಳ ನಡುವೆ ಸಿಲುಕಿಕೊಂಡಿದ್ದ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.
ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು, ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಸದ್ಯ ಅಪಘಾತದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ಬೆಂಗಳೂರು - ಪುಣೆ ಹೆದ್ದಾರಿಯಲ್ಲಿ ನವಲೆ ಸೇತುವೆ ಬಳಿ ರಾತ್ರಿ 8:30ರ ಸುಮಾರಿಗೆ ವೇಗವಾಗಿ ಬಂದ ಟ್ರಕ್‌ವೊಂದು ನಿಯಂತ್ರಣ ಕಳೆದುಕೊಂಡು ಹಲವು ವಾಹನಗಳಿಗೆ ಸರಣಿಯಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನಗಳಲ್ಲಿ ತಕ್ಷಣವೇ ಭಾರಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ವಾಹನಗಳಲ್ಲಿದ್ದ ಎಂಟು ಮಂದಿ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ ಎನ್ನಲಾಗಿದೆ.
ಪ್ರತ್ಯೇಕ ಘಟನೆಯಲ್ಲಿ, ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಣ್ಣಾವರಂನಿಂದ ಹಿಂತಿರುಗುತ್ತಿದ್ದ ಮದುವೆ ಕಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ಕಿರ್ಲಂಪುಡಿ ಮಂಡಲದ ಮೋನೂರ್ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.
ಈ ಸುದ್ದಿಯನ್ನೂ ಓದಿ: UPS cargo Plane Crash: ಅಮೆರಿಕದ ಕೆಂಟುಕಿಯಲ್ಲಿ ವಿಮಾನ ಟೇಕಾಫ್ ವೇಳೆ ಅಪಘಾತ, ಮೂವರು ಸಾವು
ಪೊಲೀಸ್ ವರದಿಗಳ ಪ್ರಕಾರ, ಕಾರಿನ ಮುಂಭಾಗದ ಟೈರ್ ಸಿಡಿದ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರ ಗುಂಪಿಗೆ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿದ ಕಾರು ಎರಡು ಮೋಟಾರ್‌ಸೈಕಲ್‌ಗಳು ಮತ್ತು ರಿಕ್ಷಾಕ್ಕೂ ಡಿಕ್ಕಿ ಹೊಡೆದು ಅವ್ಯವಸ್ಥೆ ಉಂಟು ಮಾಡಿದೆ. ದುರದೃಷ್ಟವಶಾತ್, ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಏಳು ಮಂದಿ, ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಥಳೀಯರು ರಕ್ಷಣೆಗೆ ಧಾವಿಸಿ ತಕ್ಷಣ ತುರ್ತು ಸೇವೆಗಳಿಗೆ ಕರೆ ಮಾಡಿದರು. ಗಾಯಾಳುಗಳನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಸ್ಥಳೀಯ ಶಾಸಕ ಜ್ಯೋತುಲ ನೆಹರು ಅಪಘಾತದ ಸ್ಥಳಕ್ಕೆ ತಕ್ಷಣ ಧಾವಿಸಿ ಎಲ್ಲಾ ಗಾಯಾಳುಗಳಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಆರೈಕೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.