ಪಾಟ್ನಾ, ಸೆ. 22: ಸರ್ಕಾರಿ ಶಾಲೆಯೊಂದರ 8ನೇ ತರಗತಿಯ ವಿದ್ಯಾರ್ಥಿನಿಯರು ತಮ್ಮ 52 ವರ್ಷದ ಮುಖ್ಯ ಶಿಕ್ಷಕನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಈ ಆರೋಪದ ಬಳಿಕ ಶಾಲೆಯಲ್ಲಿ ಪ್ರತಿಭಟನೆ ಹಾಗೂ ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ಬಿಹಾರದ ನವಾಡಾ ಜಿಲ್ಲೆಯಲ್ಲಿ ಘಟನೆ ನಡೆದಿದೆ (crime news). ನವಾಡಾ ಸದರ್ ಬ್ಲಾಕ್‌ನ ಆನಂದಪುರದಲ್ಲಿರುವ ಅಪ್‌ಗ್ರೇಡೆಡ್ ಮಿಡಲ್ ಸ್ಕೂಲ್‌ನ ಮುಖ್ಯಶಿಕ್ಷಕ ಮಹೇಶ್ ಪ್ರಸಾದ್ ಯಾದವ್ ವಿರುದ್ಧ ವಿದ್ಯಾರ್ಥಿನಿಯರು ಈ ಆರೋಪ ಮಾಡಿದ್ದಾರೆ.
ಮುಖ್ಯಶಿಕ್ಷಕ ವಿದ್ಯಾರ್ಥಿನಿಯರನ್ನು ಎತ್ತಿಕೊಳ್ಳುವುದು, ಕೆನ್ನೆ ಮುಟ್ಟುವುದು ಹಾಗೂ ಅವರು ಶೌಚಾಲಯಕ್ಕೆ ತೆರಳುವಾಗ ಹಿಂಬಾಲಿಸುವುದು ಸೇರಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಶೌಚಾಲಯದ ಬಳಿ ಇಣುಕಿ ನೋಡುತ್ತಿದ್ದ ಎಂದೂ ವಿದ್ಯಾರ್ಥಿನಿಯರು ಪೊಲೀಸರಿಗೆ ಮತ್ತು ಪೋಷಕರಿಗೆ ತಿಳಿಸಿದ್ದಾರೆ.
ಈ ಆರೋಪಗಳನ್ನು ವಿದ್ಯಾರ್ಥಿನಿಯರು, ಪೊಲೀಸರು ಹಾಗೂ ತಮ್ಮ ಕುಟುಂಬ ಸದಸ್ಯರ ಮುಂದೆ ವಿವರಿಸಿದ್ದಾರೆ. ಈ ಆರೋಪಗಳಿಂದ ಪೋಷಕರು ಮತ್ತು ಸ್ಥಳೀಯ ನಿವಾಸಿಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅವರು ಶಾಲೆಯ ಬಳಿ ಜಮಾಯಿಸಿ, ಮುಖ್ಯಶಿಕ್ಷಕನ ವಿರುದ್ಧ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಧಾವಿಸಿದ ನಾಗರ್ ಪೊಲೀಸ್ ಠಾಣೆಯ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಜಮುಯಿ ಬಾಲಕಿ ಮೇಲಿನ ದೌರ್ಜನ್ಯ; ಪ್ರಮುಖ ಆರೋಪಿ ನಂದನ್ ಯಾದವ್‌ಗೆ ಎನ್‌ಕೌಂಟರ್‌ನಲ್ಲಿ ಕಾಲಿಗೆ ಗುಂಡು
ವಿದ್ಯಾರ್ಥಿನಿಯರು ನೀಡಿದ ದೂರಿನ ಆಧಾರದ ಮೇಲೆ, ಯಾದವ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅನುಚಿತ ಉದ್ದೇಶದಿಂದ ಬಾಲಕಿಯರನ್ನು ಮುಟ್ಟಿದ ಆರೋಪದಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳನ್ನೂ ಪ್ರಕರಣದಲ್ಲಿ ದಾಖಲಿಸಲಾಗಿದೆ.
ಸೆಪ್ಟೆಂಬರ್ 18ರಂದು, ಲೈಂಗಿಕ ಕಿರುಕುಳದ ಆರೋಪದ ಕುರಿತು ಮಾಹಿತಿ ದೊರೆತ ಬಳಿಕ ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಇತರ ಸಿಬ್ಬಂದಿಯನ್ನು ಒಳಗೊಂಡ ಪೊಲೀಸ್ ತಂಡ ಶಾಲೆಗೆ ಭೇಟಿ ನೀಡಿತು. ಪೊಲೀಸ್ ತಂಡವು ಶಾಲಾ ಆವರಣವನ್ನು ಪರಿಶೀಲಿಸಿ, ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿಕೊಂಡಿತು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿತು.
ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗಿದೆ. ದೂರಿನ ಆಧಾರದ ಮೇಲೆ ಶಾಲೆಯ ಮುಖ್ಯಶಿಕ್ಷಕ ಮಹೇಶ್ ಪ್ರಸಾದ್ ಯಾದವ್‌ನನ್ನು ಪೊಲೀಸರು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆತಂದರು. ಬಳಿಕ ವಿಚಾರಣೆ ವೇಳೆ ಅಧಿಕೃತವಾಗಿ ಬಂಧಿಸಲಾಯಿತು ಎಂದು ನವಾಡಾ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ಒಡಿಶಾದಲ್ಲೂ ಬೀಭತ್ಸ ಲೈಂಗಿಕ ದೌರ್ಜನ್ಯ ಪ್ರಕರಣ: ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಹಲ್ಲೆ
ವಿದ್ಯಾರ್ಥಿನಿಯರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಉಮಾಶಂಕರ್ ಸಿಂಗ್ ತಿಳಿಸಿದ್ದಾರೆ. ಆರೋಪಗಳಲ್ಲಿ ಲೈಂಗಿಕ ಕಿರುಕುಳ ಮತ್ತು ಅನುಚಿತ ಸ್ಪರ್ಶ ಸೇರಿವೆ ಮತ್ತು ಪೋಕ್ಸೊ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಮಹಿಳಾ ಪೊಲೀಸ್ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಪರೀಕ್ಷೆಯ ನಂತರ, ಅವರ ಹೇಳಿಕೆಗಳನ್ನು ದಾಖಲಿಸಲು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.