ಮುಂಬೈ, ಫೆ. 18: ಹದಿಹರೆಯದ ಬಾಲಕನೊಬ್ಬ ತನ್ನ ಸೋದರತ್ತೆಯನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ (Maharashtra) ವಸಾಯಿಯಲ್ಲಿ ನಡೆದಿದೆ. ಭಾನುವಾರ (ಫೆಬ್ರವರಿ 15) ಇಬ್ಬರ ನಡುವೆಯೂ ಸಣ್ಣ ಜಗಳವಾಗಿದೆ. ಇದರಿಂದ ಕೋಪಗೊಂಡ 15 ವರ್ಷದ ಬಾಲಕ ತನ್ನ ಸೋದರತ್ತೆಯನ್ನು ಬಿದಿರಿನ ಕೋಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ತನ್ನ ಅಪರಾಧವನ್ನು ಮುಚ್ಚಿಹಾಕಲು ಬಾಲಕ ತನ್ನ ಸ್ನೇಹಿತನ ಸಹಾಯ ಪಡೆದಿದ್ದಾನೆ. ಆರೋಪಿಯು ತನ್ನ ಅತ್ತೆ ದುರ್ಗಾ ಬನ್ಸೋದ್ (60) ಅವರೊಂದಿಗೆ ವಸಾಯಿಯಲ್ಲಿರುವ ತನ್ನ ಮನೆಯಲ್ಲಿ ವಾಸವಾಗಿದ್ದ (Crime News).
ಮಹಾರಾಷ್ಟ್ರದ ಬೋಯಿಸರ್ ಪಟ್ಟಣದಲ್ಲಿ ವಾಸಿಸುವ ಮೃತಳ ಮಗಳು ಪದೇ ಪದೆ ಕರೆ ಮಾಡಿದರೂ ತನ್ನ ತಾಯಿಯನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಸೋಮವಾರ (ಫೆಬ್ರವರಿ 16) ರಾತ್ರಿ ಈ ಅಪರಾಧ ಬೆಳಕಿಗೆ ಬಂದಿತು. ಆರೋಪಿಗಳಿಬ್ಬರು ಮೃತಳ ಎರಡೂ ಮೊಬೈಲ್ ಫೋನ್‌ಗಳನ್ನು ಒಡೆದು ಹಾಕಿದ್ದರು.
ಮಂಗಳಮುಖಿ ಜತೆ ಪ್ರೀತಿಯಲ್ಲಿದ್ದ ಯುವಕ; ಬಾಡಿಗೆ ಮನೆಯಲ್ಲಿ ಇಬ್ಬರೂ ಅನುಮಾನಾಸ್ಪದ ಸಾವು
ಆತಂಕದಿಂದ ಪುತ್ರಿ ತನ್ನ ಸಹೋದರನಿಗೆ ಕರೆ ಮಾಡಿ ತಾಯಿಯ ಕರೆ ಸ್ವೀಕರಿಸುತ್ತಿಲ್ಲ ಎಂದು ಹೇಳಿದ್ದಾಳೆ. ಆತ ಮನೆಗೆ ಹೋದಾಗ ಮುಖ್ಯ ದ್ವಾರಕ್ಕೆ ಬೀಗ ಹಾಕಲಾಗಿತ್ತು. ಅವನು ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕಿಟಕಿಯ ಮೂಲಕ ಇಣುಕಿ ನೋಡಿದಾಗ ಆಘಾತಕ್ಕೊಳಗಾದನು. ರಕ್ತದಲ್ಲಿ ಮುಳುಗಿದ್ದ ತನ್ನ ತಾಯಿಯ ಪಾದಗಳನ್ನು ನೋಡಿ ಶಾಕ್ ಆಗಿದ್ದಾನೆ. ಕೂಡಲೇ ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿದಾಗ ಮನೆ ಒಳಗಿನಿಂದ ಲಾಕ್ ಆಗಿರುವುದು ಕಂಡುಬಂದಿದೆ. ಸುಮಾರು ಮೂರು ಗಂಟೆಗಳ ಪ್ರಯತ್ನದ ನಂತರ, ಪೊಲೀಸರು ಸ್ನಾನಗೃಹದ ಕಿಟಕಿಗಳಿಂದ ಸ್ಲ್ಯಾಬ್‌ಗಳನ್ನು ತೆಗೆದು ಮನೆಯೊಳಗೆ ಪ್ರವೇಶಿಸುವಲ್ಲಿ ಯಶಸ್ವಿಯಾದರು.
ತನಿಖೆಯಲ್ಲಿ ಬಾಗಿಲುಗಳನ್ನು ಉದ್ದೇಶಪೂರ್ವಕವಾಗಿ ಲಾಕ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆಯಲ್ಲಿ ಆಕೆಯ ತಲೆಗೆ ಬಿದಿರಿನ ಕೋಲಿನಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ವೇಳೆ ಅದೇ ಮನೆಯಲ್ಲಿ ವಾಸಿಸುತ್ತಿದ್ದ ಮಹಿಳೆಯ ಅಪ್ರಾಪ್ತ ಸೋದರಳಿಯನ ಮೇಲೆ ಪೊಲೀಸರಿಗೆ ಅನುಮಾನ ಬಂತು. ಅವನು (ಆರೋಪಿ ಸೋದರಳಿಯ) ತುಂಬಾ ಆತಂಕಗೊಂಡಿದ್ದ ಮತ್ತು ಮುಖವನ್ನು ಮುಚ್ಚಿಕೊಂಡಿದ್ದ. ಪೊಲೀಸರು ಇಬ್ಬರೂ ಅಪ್ರಾಪ್ತ ವಯಸ್ಕರನ್ನು ಬಂಧಿಸಿದ್ದಾರೆ.
ಸೂರಜ್ ರೇವಣ್ಣಗೆ ಕೋರ್ಟ್ ಶಾಕ್; ಮರುಪರಿಶೀಲನಾ ಅರ್ಜಿ ವಜಾ
ನಿರಂತರ ವಿಚಾರಣೆಯ ಸಮಯದಲ್ಲಿ, ಬಾಲಕ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಶವವನ್ನು ವಿಲೇವಾರಿ ಮಾಡಲು ತನ್ನ 15 ವರ್ಷದ ಸ್ನೇಹಿತನ ಸಹಾಯ ಪಡೆದಿದ್ದಾನೆ ಮತ್ತು ಸಾಕ್ಷ್ಯಗಳನ್ನು ನಾಶ ಮಾಡಲು ಅವನು ಸಹಾಯ ಮಾಡಿದ್ದಾಗಿ ಒಪ್ಪಿಕೊಂಡನು.
ಕ್ಷುಲ್ಲಕ ಕಾರಣ
ಕ್ಷುಲ್ಲಕ ಕಾರಣಕ್ಕೆ ಆತ ತನ್ನ ಸೋದರತ್ತೆಯನ್ನೇ ಹೊಡೆದು ಕೊಂದಿದ್ದಾನೆ. ಮನೆಯ ಸ್ಮಾರ್ಟ್ ಟಿವಿ ಬಫರಿಂಗ್ ಆಗುತ್ತಿತ್ತು. ಇದರಿಂದ ಆತ ತನ್ನ ಅತ್ತೆಯೊಂದಿಗೆ ಜಗಳ ಮಾಡಿದ್ದಾನೆ. ಈ ಕಾರಣಕ್ಕೆ ಸಿಟ್ಟಿಗೆದ್ದ ಮಹಿಳೆ ತನ್ನ ಸೋದರಳಿಯನನ್ನು ಗದರಿಸಿದ್ದಾರೆ. ವಸ್ತುಗಳನ್ನು ಎಲ್ಲೆಂದರಲ್ಲಿ ಇಡುವುದು ಹಾಗೂ ಅಧ್ಯಯನದ ಕಡೆಗೆ ಗಮನಹರಿಸದ ಕಾರಣ ಅವನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸೋದರತ್ತೆಯ ಈ ಮಾತಿನಿಂದ ಕೋಪಗೊಂಡ ಹುಡುಗ ಕೋಲನ್ನು ಎತ್ತಿಕೊಂಡು ತಲೆಗೆ ಹೊಡೆದಿದ್ದಾನೆ. ಹೊಡೆತ ತುಂಬಾ ತೀವ್ರವಾಗಿದ್ದರಿಂದ ಅವರು ರಕ್ತಸ್ರಾವಗೊಂಡು ನೆಲಕ್ಕೆ ಬಿದ್ದರು. ಆರೋಪಿ ಸೋದರಳಿಯ ಸಹಾಯಕ್ಕಾಗಿ ತನ್ನ ಸ್ನೇಹಿತನಿಗೆ ಕರೆ ಮಾಡಿ ಮೃತದೇಹವನ್ನು ಸೋಫಾದ ಕೆಳಗೆ ಯಾರಿಗೂ ಕಾಣದಂತೆ ಇಡಲು ಪ್ರಯತ್ನಿಸಿದ್ದಾನೆ. ಅಪ್ರಾಪ್ತ ವಯಸ್ಕರನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.