ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೊಲೆ ರಹಸ್ಯ ಭೇದಿಸಿದ ರಸ್ತೆ ಬದಿ ಬಿದ್ದಿದ್ದ ಮದ್ಯದ ಬಾಟಲ್‌; ಏನಿದು ಥ್ರಿಲ್ಲರ್‌ ಸಿನಿಮಾವನ್ನೂ ಮೀರಿಸುವ ರೋಚಕ ಘಟನೆ?

Crime News: ರಸ್ತೆ ಬದಿ ಅರೆಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯೊಬ್ಬನ ಕೊಲೆ ಪ್ರಕರಣವನ್ನು ಭೇದಿಸಿದ್ದು ಖಾಲಿ ಮದ್ಯದ ಬಾಟಲ್‌ ಎಂದರೆ ನಂಬುತ್ತೀರಾ? ಹೌದು, ನಿರುಪಯುಕ್ತ ಎಂದು ನಿರ್ಲಕ್ಷಿಸುವ ವಸ್ತುವೊಂದು ಹೇಗೆ ಕೆಲವೊಮ್ಮೆ ಮುಖ್ಯವಾಗುತ್ತದೆ ಎನ್ನುವುದಕ್ಕೆ ಈ ಘಟನೆ ಮುಖ್ಯ ಸಾಕ್ಷಿ.

ರಸ್ತೆ ಬದಿ ಬಿದ್ದಿದ್ದ ಮದ್ಯದ ಬಾಟಲಿಯಿಂದ ಕೊಲೆ ರಹಸ್ಯ ಬಯಲು

ಮೆಟಾ ಎಐ ಚಿತ್ರ -

Ramesh Ballamoole
Ramesh Ballamoole Apr 6, 2026 5:12 PM

ಲಖನೌ, ಏ. 6: ಸಿಕ್ಕ ಅತೀ ಸಣ್ಣ ಕ್ಲ್ಯೂ ಹಿಡಿದು ನಿಗೂಢ ಕೊಲೆ ಪ್ರಕರಣ ಭೇದಿಸುವ ರೋಚಕ ಸನ್ನಿವೇಶವನ್ನು ಥ್ರಿಲ್ಲರ್‌ ಸಿನಿಮಾಗಳಲ್ಲಿ ನೋಡಿ ಅನೇಕ ಬಾರಿ ನಾವು-ನೀವೆಲ್ಲ ರೋಮಾಂಚನಗೊಂಡಿದ್ದೇವೆ. ಹೀಗೂ ತನಿಖೆ ನಡೆಸಬಹುದಾ ಎಂದು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟದ್ದೇವೆ. ಅಂತದ್ದೇ ಬೆರಗಿನ ಸನ್ನಿವೇಶವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ರಸ್ತೆ ಬದಿ ಬಿದ್ದಿದ್ದ ಖಾಲಿ ಮದ್ಯದ ಬಾಟಲ್‌ ಕೊಲೆ ನಡೆದ 24 ಗಂಟೆಯಲ್ಲೇ ಪ್ರಕರಣ ಭೇದಿಸಲು ನೆರವಾಗಿದೆ. ಹೌದು, ಇಂತಹದ್ದೊಂದು ರಣ ರೋಚಕ ತನಿಖೆ ರೀಲ್‌ ಅಲ್ಲ ರಿಯಲ್‌ ಆಗಿ ನಡೆದಿದೆ. ಆ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.

ಪ್ರಿಯಕರನ ಸಹಾಯದಿಂದ ಮಹಿಳೆಯೊಬ್ಬಳು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಪತಿಯ ಕೊಲೆ ಮಾಡಿಸಿದ್ದಾಳೆ. ಆದರೆ ʼಪ್ರಯೋಜನಕ್ಕೆ ಬಾರದʼ ರಸ್ತೆ ಬದಿಯಲ್ಲಿ ಬಿದ್ದುಕೊಂಡಿದ್ದ ಖಾಲಿ ಮದ್ಯದ ಬಾಟಲ್‌ನಲ್ಲಿದ್ದ ಕ್ಯೂ ಆರ್‌ ಕೋಡ್‌ ಈ ನಿಗೂಢ ಕೊಲೆ ರಹಸ್ಯವನ್ನು ಭೇದಿಸಲು ಕಾರಣವಾಗಿದೆ. ಅದೂ ಕೊಲೆ ನಡೆದ ಒಂದೇ ದಿನದಲ್ಲಿ ತಪ್ಪಿತಸ್ಥರು ಪತ್ತೆಯಾಗಿದ್ದಾರೆ.

ಏನಿದು ಪ್ರಕರಣ?

ಉತ್ತರ ಪ್ರದೇಶದ ಆಗ್ರಾದ ಬಳಿ ಈ ಘಟನೆ ನಡೆದಿದೆ. ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಲೋಕೇಂದ್ರನ ಮೃತದೇಹ ಪತ್ತೆಯಾಗುವ ಮೂಲಕ ಪ್ರಕರಣದ ಎಳೆ ಬಿಚ್ಚತೊಡಗಿತು. ಏಪ್ರಿಲ್‌ 1ರಂದು ನಾಪತ್ತೆಯಾದ ಲೋಕೇಂದ್ರ ರಸ್ತೆ ಬದಿ ಶವವಾಗಿ ಬಿದ್ದಿದ್ದ. ಮೃತದೇಹವನ್ನು ಗಮನಿಸಿದ ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಒಂದುಕ್ಷಣ ಯಾವುದೇ ಸಾಕ್ಷಿ ಇಲ್ಲದೆ ಕಂಗೆಟ್ಟು ನಿಂತು ಬಿಟ್ಟರು. ಈ ಕೊಲೆ ಹೇಗಾಯ್ತು? ಕೊಂದವರು ಯಾರು? ಎಂಬ ಪ್ರಶ್ನೆ ಸಾರ್ವಜನಿಕರ ಜತೆ ಪೊಲೀಸರ ಮುಂದೆ ಬೃಹದಾಕಾರ ರೂ ತಾಳಿ ನಿಂತಿತ್ತು. ಕೂಲಂಕುಷ ತನಿಖೆಗಿಳಿದ ಪೊಲೀಸರಿಗೆ ನೆರವಾಗಿದ್ದೇ ಮೃತದೇಹದ ಬಳಿ ಪತ್ತೆಯಾದ ಖಾಲಿ ಮದ್ಯದ ಬಾಟಲ್‌.

ವ್ಯಕ್ತಿಯ ತಲೆ ಕಡಿದು ಮನೆಗೆ ಕೊಂಡೊಯ್ದು ಏನೂ ಆಗದಂತೆ ಅಡುಗೆ ಮಾಡಿದ ಪಾಪಿ!

ಮದ್ಯದ ಬಾಟಲ್‌ ನಿಗೂಢತೆ ಭೇದಿಸಿದ್ದೇಗೆ?

ಮದ್ಯದ ಬಾಟಲ್‌ನಲ್ಲಿದ್ದ ಕ್ಯೂಆರ್‌ ಕೋಡ್‌ ಗಮನಿಸಿದ ತನಿಖಾಧಿಕಾರಿಗಳು ಕೂಡಲೇ ಅದನ್ನು ಸ್ಕ್ಯಾನ್‌ ಮಾಡಿದರು. ಆ ವೇಳೆ ಬಾಟಲ್‌ ಯಾವ ಬಾರ್‌ನಿಂದ ಖರೀದಿಸಿದ್ದು ಎನ್ನುವುದು ಗೊತ್ತಾಯಿತು ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಅದು ಪ್ರಕರಣಕ್ಕೆ ಸಿಕ್ಕ ಬಹುದೊಡ್ಡ ಟರ್ನಿಂಗ್‌ ಪಾಯಿಂಟ್‌.

ಬಳಿಕ ಪೊಲೀಸರು ಬಾರ್‌ಗೆ ಧಾವಿಸಿ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಯನ್ನು ಪರಿಶೀಲಿಸಿದರು. ಅದರಲ್ಲಿ ಲೋಕೇಂದ್ರ ಇಬ್ಬರು ವ್ಯಕ್ತಿಗಳೊಂದಿಗೆ ಬಾರ್‌ಗೆ ಆಗಮಿಸುತ್ತಿರುವುದು ಕಂಡುಬಂದಿದೆ. ತನಿಖೆ ವೇಳೆ ಅವರಿಬ್ಬರನ್ನು ಮಹೇಶ್‌ ಮತ್ತು ಧರ್ಮವೀರ್‌ ಎಂದು ಗುರುತಿಸಲಾಯಿತು. ಅವರ ಬಂಧನದೊಂದಿಗೆ ಕೊಲೆ ಪ್ರಕರಣದ ನಿಗೂಢತೆ ಮಂಜಿನಂತೆ ಕರಗತೊಡಗಿತು.

ಅಂದು ಆಗಿದ್ದೇನು?

ತನಿಖೆ ವೇಳೆ ಬಂಧಿತರಲ್ಲಿ ಓರ್ವನಾದ ಮಹೇಶ್‌ ತನಗೆ ಲೋಕೇಂದ್ರನ ಪತ್ನಿ ಜತೆ ಅಕ್ರಮ ಸಂಬಂಧ ಇತ್ತು ಎನ್ನುವುದನ್ನು ಒಪ್ಪಿಕೊಂಡಿದ್ದಾನೆ. ಇದು ಗೊತ್ತಾಗುತ್ತಿದ್ದಂತೆ ಲೋಕೇಂದ್ರ ತೀವ್ರವಾಗಿ ವಿರೋಧಿಸಿದ್ದಾನೆ. ಈ ವಿಚಾರವನ್ನು ತನ್ನ ಕುಟುಂಬಸ್ಥರು ಮತ್ತು ನೆರೆಹೊರೆಯವರಿಗೂ ತಿಳಿಸಿದ್ದಾನೆ. ಅಷ್ಟಾದರೂ ಮಹೇಶ್‌ ಮತ್ತು ಲೋಕೇಂದ್ರ ಪತ್ನಿ ಅನೈತಿಕ ಸಂಬಂಧ ಮುಂದುವರಿದಿತ್ತು. ನಿಯಮಿತವಾಗಿ ಅವರು ಭೇಟಿಯಾಗುತ್ತಿದ್ದರು. ಬಳಿಕ ಅವರಿಬ್ಬರು ಸೇರಿ ಲೋಕೇಂದ್ರನ ಕೊಲೆ ಸಂಚು ರೂಪಿಸಿದರು.

ಧರ್ಮವೀರ್‌ ಜತೆ ಸೇರಿ ಕೊಲೆ

ತನಿಖೆ ನಡೆಸಿದ ಪೊಲೀಸರು ಪ್ರಕರಣದ ವಿವರ ನೀಡಿದ್ದಾರೆ. ಲೋಕೇಂದ್ರನನ್ನು ಮುಗಿಸುವ ಪ್ಲ್ಯಾನ್‌ ಮಾಡಿದ ಬಳಿಕ ಮಹೇಶ್‌ ಧರ್ಮವೀರ್‌ನನ್ನು ಸಂಪರ್ಕಿಸಿದ. ಅದರಂತೆ ಅವರಿಬ್ಬರು ಮದ್ಯ ಸೇವನೆಗಾಗಿ ಲೋಕೇಂದ್ರನನ್ನು ಆಹ್ವಾನಿಸಿದ್ದಾರೆ. ಮೊದಲೇ ಕುಡಿತದ ಚಟ ಹೊಂದಿದ್ದ ಲೋಕೇಂದ್ರ ಅವರು ಹೇಳಿ ಸ್ಥಳಕ್ಕೆ ತೆರಳಿದ್ದಾನೆ. ಆತನಿಗೆ ಕಂಠಪೂರ್ತಿ ಕುಡಿಸಿದ ಮಹೇಶ್‌ ಮತ್ತು ಧರ್ಮವೀರ್‌ ಬಳಿಕ ಕೊಲೆ ಮಾಡಿದ್ದಾರೆ. ಸಾಕ್ಷ್ಯ ನಾಶದ ಭಾಗವಾಗಿ ಇಬ್ಬರೂ ಮೃತದೇಹಕ್ಕೆ ಬೆಂಕಿ ಹಚ್ಚಿದ್ದಾರೆ. ಆದರೆ ಪೂರ್ತಿ ಸುಟ್ಟು ಹೋಗದ ಮೃತದೇಹ ಅವರಿಬ್ಬರ ಸಂಚನ್ನು ಬಯಲಿಗೆಳೆಯಿತು. ಮುಖ ಸುಟ್ಟು ಹೋಗಿದ್ದರೂ ಟ್ಯಾಟೂ ಮೂಲಕ ವ್ಯಕ್ತಿಯ ಗುರುತು ಪತ್ತೆಯಾಯ್ತು. ಬಳಿಕ ಮದ್ಯದ ಬಾಟಲ್‌ ಪೊಲೀಸರನ್ನು ಕೊಲೆಗಾರನ ಬಳಿಗೆ ಕರೆದುಕೊಂಡು ಹೋಯ್ತು. ಇದೀಗ ಲೋಕೇಂದ್ರನ ಪತ್ನಿ, ಮಹೇಶ್‌ ಮತ್ತು ಧರ್ಮವೀರ್‌ನಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

2ನೇ ಪತ್ನಿಯನ್ನು ಕೊಂದು ಮೃತದೇಹದೊಂದಿಗೆ 2 ದಿನ ಕಳೆದ ಪಾಪಿ ಪತಿ

ಸಣ್ಣ ನಿರ್ಲಕ್ಷ್ಯವೇ ಮುಳುವಾಯಿತು

ಅ‌ಚ್ಚುಕಟ್ಟಾಗಿ ಕೊಲೆಯ ಪ್ಲ್ಯಾನ್‌ ಮಾಡಿದ್ದರೂ ಕೊಲೆಗಾರರು ಮಾಡಿದ ಎರಡೇ ಎರಡು ಸಣ್ಣ ತಪ್ಪು ಅರನ್ನು ಕಾನೂನಿನ ಮುಂದೆ ಬಂದು ನಿಲ್ಲಿಸಿದೆ. ಮೃತದೇಹ ಸಂಪೂರ್ಣ ಸುಟ್ಟು ಹೋಗುವ ತನಕ ತಾಳ್ಮೆಯಿಂದ ಕಾಯದೇ ಇದ್ದುದು, ಖಾಲಿ ಮದ್ಯದ ಬಾಟಲ್‌ ಅನ್ನು ನಿರ್ಲಕ್ಷ್ಯದಿಂದ ರಸ್ತೆ ಬದಿ ಎಸೆದು ಹೋಗಿದ್ದು ಬಹುದೊಡ್ಡ ಸಂಚನ್ನು ವಿಫಲಗೊಳಿಸಿದೆ. ಸಂಚುಕೋರರು ಎಷ್ಟೇ ಬುದ್ಧಿವಂತರಾದರೂ ಒಂದಲ್ಲ ಒಂದು ಸಾಕ್ಷಿ ಬಿಟ್ಟೇ ಬಿಡುತ್ತಾರೆ ಎನ್ನುವ ಮಾತು ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.

ಮತ್ತಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.