ದೆಹಲಿ, ಜ.22: ನಡು ರಸ್ತೆಯಲ್ಲೇ ದುಷ್ಕರ್ಮಿಗಳ ಗುಂಪೊಂದು 25 ವರ್ಷದ ವ್ಯಕ್ತಿಯೊಬ್ಬನನ್ನು ಇರಿದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ (Delhi) ಮಂಗೋಲ್‍ಪುರಿಯಲ್ಲಿ ನಡೆದಿದೆ. ಈ ಘಟನೆಯು ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು, ಹತ್ಯೆಯಾದ ಯುವಕ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದಾನೆ. ಅವನನ್ನು ಬೆನ್ನಟ್ಟಿದ ನಾಲ್ಕೈದು ಜನರ ಗುಂಪು ಆತನಿಗೆ ಹಲ್ಲೆ ಮಾಡಿ, ಪದೇ ಪದೇ ಇರಿದಿದ್ದಾರೆ. ಬುಧವಾರ (ಜನವರಿ 22) ಸಂಜೆ ಈ ಘಟನೆ ನಡೆದಿದೆ. ಪಕ್ಕದಲ್ಲಿದ್ದ ಜನರು ಘಟನೆಯನ್ನು ನೋಡುತ್ತಾ ನಿಂತಿದ್ದಾರೆ. ಯಾರೊಬ್ಬರೂ ರಕ್ಷಿಸಲು ಮುಂದೆ ಬಂದಿಲ್ಲ.
ಮಂಗೋಲ್‌ಪುರಿಯ ಎನ್ ಬ್ಲಾಕ್‌ನ ಸಿಸಿಟಿವಿ ದೃಶ್ಯಾವಳಿಯಲ್ಲಿ ಈ ಕ್ರೂರ ಕೃತ್ಯದ ಘಟನೆ ಸೆರೆಯಾಗಿದೆ. ಮೃತ ವ್ಯಕ್ತಿಯನ್ನು ಆಕಾಶ್ ಎಂದು ಗುರುತಿಸಲಾಗಿದೆ. ಆಕಾಶ್‍ನನ್ನು ನಾಲ್ಕರಿಂದ ಐದು ಜನರು ಬೀದಿಯಲ್ಲಿ ಬೆನ್ನಟ್ಟಿದ್ದಾರೆ. ಕೆಲವರು ಕೈಯಲ್ಲಿ ಚಾಕು ಹಿಡಿದುಕೊಂಡಿದ್ದರು. ಅವನು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಹತ್ತಿರದ ಮನೆಯ ಕಡೆಗೆ ಓಡಿದ್ದಾನೆ.
ಮದುವೆಗೂ ಮುನ್ನವೇ ಗರ್ಭಿಣಿಯಾದ ಯುವತಿ; ಹುಟ್ಟಿದಾಕ್ಷಣ ಮಗುವಿನ ಕತ್ತು ಹಿಸುಕಿ ಕೊಂದ ಅಜ್ಜಿ?
ಅವನು ಮನೆಯೊಳಗೆ ಪ್ರವೇಶಿಸುವ ಮೊದಲೇ, ದುಷ್ಕರ್ಮಿಗಳು ಅವನನ್ನು ಗೇಟ್ ಬಳಿ ಹಿಡಿದು ಹಲ್ಲೆ ಮಾಡಿದ್ದಾರೆ. ಆಕಾಶ್ ಕುಸಿದು ಬಿದ್ದ ನಂತರ, ದಾಳಿಕೋರರು ಅವನನ್ನು ರಸ್ತೆಯ ಮಧ್ಯಕ್ಕೆ ಎಳೆದೊಯ್ದರು. ಈ ವೇಳೆ ಚಾಕುವಿನಿಂದ ಇರಿದು ಕೊಂದಿದ್ದಾರೆ. ಸ್ವಲ್ಪ ಸಮಯದ ನಂತರ, ಹತ್ತಿರದ ಮನೆಯಿಂದ ಒಬ್ಬ ವೃದ್ಧ ವ್ಯಕ್ತಿ ಕೋಲು ಹಿಡಿದುಕೊಂಡು ಬಂದು ದಾಳಿಕೋರರನ್ನು ತಡೆಯಲು ಪ್ರಯತ್ನಿಸಿದರು. ಆದರೆ ಅವರು ಆಗಲೇ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ದಾಳಿಯ ಸಮಯದಲ್ಲಿ ಹಲವಾರು ಮಂದಿ ರಸ್ತೆಯಲ್ಲಿದ್ದರು. ಘಟನೆ ಹೇಗೆ ನಡೆಯಿತು ಎಂಬುದನ್ನು ಸಿಸಿಟಿವಿ ದೃಶ್ಯಗಳಲ್ಲಿ ಕಾಣಬಹುದು. ಆದರೆ, ಅವರಲ್ಲಿ ಯಾರೂ ಮಧ್ಯಪ್ರವೇಶಿಸಲಿಲ್ಲ. ಕೆಲವು ನಿವಾಸಿಗಳು ತಮ್ಮ ಮನೆಗಳ ಬಾಗಿಲುಗಳನ್ನು ಮುಚ್ಚುವುದನ್ನು ಸಹ ಕಾಣಬಹುದು.
ಸಿಸಿಟಿವಿ ವಿಡಿಯೊ ಇಲ್ಲಿದೆ:
ನಿನ್ನೆ (ಬುಧವಾರ, ಜನವರಿ 21) ರಾತ್ರಿ ದೆಹಲಿಯ ಮಂಗೋಲ್‌ಪುರಿ ಪ್ರದೇಶದಲ್ಲಿ ಇರಿತದ ಘಟನೆ ವರದಿಯಾಗಿದೆ. ಘಟನೆಯಲ್ಲಿ ಆಕಾಶ್ ಎಂಬ ಯುವಕ ಮೃತಪಟ್ಟಿದ್ದಾನೆ. ಆರೋಪಿಗಳನ್ನು ಗುರುತಿಸಲಾಗಿದ್ದು, ಅವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ. ಪ್ರಸ್ತುತ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ದೆಹಲಿ ಹೊರ ಜಿಲ್ಲಾ ಪೊಲೀಸ್ ಡಿಸಿಪಿ ತಿಳಿಸಿದ್ದಾರೆ.
ಇನ್ನು ಕೆಲವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಶಂಕಿತರನ್ನು ಗುರುತಿಸಿ ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಸ್ತುತ ಸಮಗ್ರ ತನಿಖೆ ನಡೆಯುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೊಳಗಾದ ಯುವಕ ಆಕಾಶ್ ಸ್ಥಳೀಯ ನಿವಾಸಿಯಾಗಿದ್ದು, ಆ ಪ್ರದೇಶದಲ್ಲಿ ತಳ್ಳುವ ಗಾಡಿಯ ಮೂವಕ ಸರಕುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ. ಆತನನ್ನು ದುಷ್ಕರ್ಮಿಗಳು ಯಾಕೆ ಬೆನ್ನಟ್ಟಿ ಕೊಂದರು, ಹತ್ಯೆಯ ಉದ್ದೇಶವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.