ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಾರ್ಕಿಂಗ್ ವೇಳೆ ಕಾರು ಹಿಂದೆ ಚಲಿಸಿ ವಾಕಿಂಗ್ ಹೋಗುತ್ತಿದ್ದ ಹಿರಿಯ ಮಹಿಳೆ ಗೋಡೆಗೆ ಅಪ್ಪಳಿಸಿ ಸಾವು

ಪಾರ್ಕಿಂಗ್ ಸ್ಥಳದಲ್ಲಿ ನಡೆದ ದುರಂತವೊಂದು ಹಿರಿಯ ನಾಗರಿಕ ಮಹಿಳೆಯೊಬ್ಬರನ್ನು ಬಲಿ ಪಡೆದಿದೆ. ಫರೂಕಾಬಾದ್‌ನಲ್ಲಿ ಪಾರ್ಕ್ ಮಾಡುತ್ತಿದ್ದ ಎಸ್‌ಯುವಿ ಕಾರು ಹಿಂದಕ್ಕೆ ಚಲಿಸಿದ್ದು, ಸ್ಥಳದಲ್ಲಿ ವಾಕಿಂಗ್ ಹೋಗುತ್ತಿದ್ದ ಹಿರಿಯ ನಾಗರಿಕ ಮಹಿಳೆಯೊಬ್ಬರಿಗೆ ಗುದ್ದಿದೆ. ತೀವ್ರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಫರೂಕಾಬಾದ್‌: ಹಿರಿಯ ನಾಗರಿಕ ಮಹಿಳೆಯೊಬ್ಬರಿಗೆ (Senior Citizen) ಕಾರು (Car accident) ಗುದ್ದಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಫರೂಕಾಬಾದ್‌ನಲ್ಲಿ (Farrukhabad) ನಡೆದಿದೆ. ಫರೂಕಾಬಾದ್‌ನ ಆವಾಸ್ ವಿಕಾಸ್ ಕಾಲೋನಿಯಲ್ಲಿ ನಡೆದ ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral news) ಆಗಿದೆ. ವಾಕಿಂಗ್ ಹೋಗುತ್ತಿದ್ದ ಮಹಿಳೆಗೆ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡುತ್ತಿದ್ದ ಕಾರು ಹಿಂದಕ್ಕೆ ಚಲಿಸಿ ಬಂದು ಗುದ್ದಿದೆ. ಅವರು ಗೋಡೆಗೆ ಅಪ್ಪಳಿಸಿ ಸಾವನ್ನಪ್ಪಿದ್ದಾರೆ. ಅವರದ್ದೇ ಕುಟುಂಬ ಸದಸ್ಯರು ಕಾರನ್ನು ಪಾರ್ಕ್ ಮಾಡುತ್ತಿದ್ದಾಗ ಈ ದುರಂತ ನಡೆದಿದೆ ಎನ್ನಲಾಗಿದ್ದು, ಈ ಕುರಿತು ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.

ಫರೂಕಾಬಾದ್‌ನ ಆವಾಸ್ ವಿಕಾಸ್ ಕಾಲೋನಿಯಲ್ಲಿ ತಮ್ಮ ಮನೆಯ ಹೊರಗೆ ವಾಕಿಂಗ್ ಹೋಗುತ್ತಿದ್ದ ನಿವೃತ್ತ ಆರೋಗ್ಯ ಇಲಾಖೆಯ ಉದ್ಯೋಗಿ 70 ವರ್ಷದ ಸರಳಾ ಕಟಿಯಾರ್ ಅವರಿಗೆ ಕಾರು ಬಂದು ಗುದ್ದಿದೆ. ಅವರ ಸಂಬಂಧಿಕರೊಬ್ಬರು ತಂದು ಕಾರನ್ನು ಪಾರ್ಕ್ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡದೇ ಇರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಅವಳಿ ಹೆಣ್ಣು ಮಕ್ಕಳನ್ನು ಬಾವಿಗೆ ತಳ್ಳಿ ಹತ್ಯೆಗೈದ ನೀಚ ತಂದೆ; ಗಂಡು ಮಗು ಜನಿಸದ್ದಕ್ಕೆ ಈ ದುಷ್ಕೃತ್ಯ

ಸರಳಾ ಅವರು ಗುರುವಾರ ರಾತ್ರಿ 8.30ರ ಸುಮಾರಿಗೆ ತಮ್ಮ ನಿವಾಸದ ಬಳಿ ನಿತ್ಯದಂತೆ ವಾಕಿಂಗ್ ಹೋಗುತ್ತಿದ್ದರು. ಅವರ ಕುಟುಂಬದ ಯುವಕನೊಬ್ಬ ಕಾರು ಪಾರ್ಕ್ ಮಾಡುತ್ತಿದ್ದ ವೇಳೆ ಈ ದುರಂತ ನಡೆದಿದೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಗೋಡೆಗೆ ಅಪ್ಪಳಿಸಿದ ಸರಳಾ ಅವರು ತೀವ್ರವಾಗಿ ಗಾಯಗೊಂಡಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.



ಈ ಘಟನೆಯನ್ನು ಗುಪ್ತವಾಗಿಡಲು ಕುಟುಂಬ ಪ್ರಯತ್ನಿಸಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಘಟನೆ ನಡೆದ ತಕ್ಷಣವೇ ವಾಹನವನ್ನು ಸ್ಥಳಾಂತರಿಸಿ ಮನೆಯೊಳಗೆ ನಿಲ್ಲಿಸಲಾಗಿದೆ. ಪೊಲೀಸರಿಗೆ ಯಾವುದೇ ರೀತಿಯ ದೂರನ್ನು ಕೂಡ ನೀಡಲಿಲ್ಲ.

ಕುಟುಂಬ ಸದಸ್ಯರು ಈ ಕುರಿತು ಸ್ಥಳೀಯರ ಬಳಿ ಮಾತನಾಡಲು ಕೂಡ ಹಿಂದೇಟು ಹಾಕಿದ್ದು, ಇದು ತಮ್ಮ ಕುಟುಂಬದ ಆಂತರಿಕ ವಿಷಯ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಎಸ್‌ಯುವಿ ಚಾಲನೆ ಮಾಡುತ್ತಿದ್ದ ಯುವಕ ಈ ಹಿಂದೆಯೂ ಹಲವು ಸಣ್ಣ ಅಪಘಾತಗಳನ್ನು ಮಾಡಿದ್ದಾನೆ. ಆದರೆ ಕುಟುಂಬದವರು ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳದೆ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

10 ರುಪಾಯಿ ನೀಡದ್ದಕ್ಕೆ ಅಂಗವಿಕಲನನ್ನು ಕೊಂದೇ ಬಿಟ್ಟ ಪಾಪಿ

ಈ ಕುರಿತು ಮಾಹಿತಿ ನೀಡಿರುವ ಖಾದ್ರಿ ಗೇಟ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಕಪಿಲ್ ಚೌಧರಿ, ಘಟನೆಯ ಕುರಿತು ಯಾವುದೇ ದೂರು ದಾಖಲಾಗಿಲ್ಲ. ಔಪಚಾರಿಕವಾಗಿಯೂ ತಿಳಿಸಿಲ್ಲ. ಕುಟುಂಬದವರು ಅಥವಾ ಬೇರೆ ಯಾರೇ ಆಗಿರಲಿ ವಾಹನದಿಂದ ಸಂಭವಿಸುವ ಯಾವುದೇ ಆಕಸ್ಮಿಕ ಅಪಘಾತಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author