ಭುವನೇಶ್ವರ, ಆ. 22: ವ್ಯಕ್ತಿಯೊಬ್ಬ ತನ್ನ ಪರಿತ್ಯಕ್ತ ಪತ್ನಿಯನ್ನು ಮರಳಿ ಪಡೆಯುವ ಅಂಧ ವಿಶ್ವಾಸದಲ್ಲಿ ವ್ಯಕ್ತಿಯೊಬ್ಬನ ತಲೆ ಕಡಿದು ಅದನ್ನು ದೇವರ ಕೋಣೆಯಲ್ಲಿ ಹೂತುಹಾಕಿರುವ ಆಘಾತಕಾರಿ ಘಟನೆ ಒಡಿಶಾದ (Odisha Horror) ಬೋಲಂಗಿರ್ ಜಿಲ್ಲೆಯಲ್ಲಿ ನಡೆದಿದೆ. ಆಗಸ್ಟ್ 18ರಂದು ನಾಪತ್ತೆಯಾಗಿದ್ದ ತೆಬದಮುಂಡ ಗ್ರಾಮದ ನಿವಾಸಿ ಸಂತೋಷ್ ಖರ್ಸೆಲ್ (45) ಅವರ ಶಿರ ಇಲ್ಲದ ಮೃತದೇಹ ಗುರುವಾರ (ಆ. 20) ಬಗಡಾ ಗ್ರಾಮದ ಕೊಳವೊಂದರಲ್ಲಿ ಪತ್ತೆಯಾದ ನಂತರ ಈ ವಿಷಯ ಬೆಳಕಿಗೆ ಬಂದಿದೆ (Crime News). ಸದ್ಯ ಈ ಘಟನೆಗೆ ದೇಶವೇ ಬಿಚ್ಚಿ ಬಿದ್ದಿದೆ.
ತನಿಖೆಯಲ್ಲಿ ಮೃತ ವ್ಯಕ್ತಿ ಕೊನೆಯ ಬಾರಿಗೆ ಶತ್ರುಘ್ನ ಸಾಹು (40) ಜತೆ ಕಾಣಿಸಿಕೊಂಡಿದ್ದ ಎಂದು ತಿಳಿದುಬಂದ ನಂತರ ಪ್ರಕರಣ ಎಳೆ ಬಿಚ್ಚ ತೊಡಗಿತು. ಸದ್ಯ ಕೃತ್ಯ ಎಸಗಿದ್ದು ಸಾಹು ಎನ್ನುವುದು ತಿಳಿದು ಬಂದಿದ್ದು ಆತನನ್ನು ಬಂಧಿಸಲಾಗಿದೆ. ವಿಚಾರಣೆಯ ಸಮಯದಲ್ಲಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಮದ್ಯ ಸೇವಿಸಿದ ನಂತರ ಕೊಲೆ ನಡೆಸಿದ್ದಾಗಿ ಆರಂಭದಲ್ಲಿ ಹೇಳಿದ್ದ.
ಹೆಚ್ಚಿನ ವಿಚಾರಣೆಯ ಸಮಯದಲ್ಲಿ, ಸುಮಾರು ಮೂರು ವರ್ಷಗಳ ಹಿಂದೆ ತನ್ನನ್ನು ಬಿಟ್ಟು ಹೋಗಿದ್ದ ಪತ್ನಿಯನ್ನು ಮರಳಿ ಪಡೆಯುವ ಉದ್ದೇಶದಿಂದ ತಾನು ಈ ಕೃತ್ಯ ಎಸಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಪ್ಪೊಪ್ಪಿಗೆಯ ನಂತರ, ಕೊಲೆಯಾದ ಸಂತೋಷ್ ತಲೆಯನ್ನು ಸಾಹುವಿನ ಪೂಜಾ ಕೊಠಡಿಯಿಂದ ಹೊರತೆಗೆಯಲಾಯಿತು.
ವಿಜಯಪುರದಲ್ಲಿ ಬಾವಿಗೆ ಬಿದ್ದು ಇಬ್ಬರು ಮಕ್ಕಳ ಸಾವು, ರಕ್ಷಿಸಲು ಹೋದ ತಂದೆಯೂ ನಾಪತ್ತೆ!
ಅಪರಾಧಿ ಮತ್ತು ಕೊಲೆಯಾದ ವ್ಯಕ್ತಿ ಇಬ್ಬರು ಪರಿಚಿತರೇನಲ್ಲ. ಸಂತೋಷ್ ಖರ್ಸೆಲ್‌ನನ್ನು ಭೇಟಿಯಾದ ನಂತರ, ಸಾಹು ತನ್ನ ಮನೆಗೆ ಆಹ್ವಾನಿಸಿ ಕೊಲೆ ಮಾಡಿದ್ದಾನೆ ಎಂದು ಬೋಲಾಂಗಿರ್‌ನ ಪೊಲೀಸ್ ವರಿಷ್ಠಾಧಿಕಾರಿ (SP) ಅಭಿಲಾಷ್ ತಿಳಿಸಿದ್ದಾರೆ. “ನಾವು ಅಪರಾಧಿಯನ್ನು ಬಂಧಿಸಿದ್ದೇವೆ ಮತ್ತು ಕೊಲೆಗೆ ಬಳಸಿದ ಆಯುಧವನ್ನೂ ವಶಪಡಿಸಿಕೊಂಡಿದ್ದೇವೆ” ಎಂದು ಎಸ್‌ಪಿ ಹೇಳಿದ್ದಾರೆ.
ಮೊದಲಿಗೆ, ಪೊಲೀಸರನ್ನು ದಾರಿ ತಪ್ಪಿಸಲು ಆರೋಪಿಗಳು ತಲೆಯನ್ನು ಎಸೆದಿರಬಹುದು ಎಂದು ಶಂಕಿಸಲಾಗಿತ್ತು. ದೇವರ ಕೋಣೆಯ ಕೆಳಗಿನಿಂದ ತಲೆಯನ್ನು ಹೊರತೆಗೆದಾಗ ಇದು ನರಬಲಿಗಾಗಿ ಮಾಡಿದ ಕೃತ್ಯ ಎಂಬುದು ಬಹಿರಂಗವಾಯಿತು ಎಂದು ಅಧಿಕಾರಿ ಹೇಳಿದರು.