ಅಮರಾವತಿ: ಕಳೆದ ಎರಡು ದಶಕಗಳಲ್ಲಿ ಹಲವಾರು ದಾಳಿಗಳನ್ನು ನಡೆಸಿದ್ದ ನಕ್ಸಲ್ ನಾಯಕ ಮದ್ವಿ ಹಿಡ್ಮಾ ಹತ್ಯೆಯ (Maoist commander Madvi Hidma ) ಮರುದಿನವೇ ಆಂಧ್ರಪ್ರದೇಶದಲ್ಲಿ (Andhra pradesh) ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ (Maoists killed) ನಡುವಿನ ಸಂಘರ್ಷದಲ್ಲಿ ಏಳು ಮಂದಿ ನಕ್ಸಲರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂವರು ಮಹಿಳಾ ಮಾವೋವಾದಿಗಳು ಸೇರಿದ್ದು, ಮೃತರಲ್ಲಿ ಒಬ್ಬರನ್ನು ಮೇತುರಿ ಜೋಖಾ ರಾವ್ ಅಲಿಯಾಸ್ ಶಂಕರ್ ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ಮಾರೆಡುಮಿಲ್ಲಿಯಲ್ಲಿ ಬುಧವಾರ ಬೆಳಗ್ಗೆಯೇ ಈ ಕಾರ್ಯಾಚರಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಪಿ ಗುಪ್ತಚರ ಎಡಿಜಿ ಮಹೇಶ್ ಚಂದ್ರ ಲಡ್ಡಾ, ನಕ್ಸಲ್ ನಾಯಕ ಮದ್ವಿ ಹಿಡ್ಮಾ ಹತ್ಯೆಯ ಬಳಿಕ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ಮುಂದುವರಿಸಿರುವ ಭದ್ರತಾ ಪಡೆಗಳು ಮಾರೆಡುಮಿಲ್ಲಿಯಲ್ಲಿ ಬುಧವಾರ ಮುಂಜಾನೆ ನಡೆಸಿದ ಗುಂಡಿನ ಚಕಮಕಿಯಲ್ಲಿ ಏಳು ಮಾವೋವಾದಿಗಳನ್ನು ಎನ್‌ಕೌಂಟರ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Dr N Someshwara Column: ಸಿಡಿಮದ್ದು ಸ್ಫೋಟಕ್ಕೆ ಕಬ್ಬಿಣದ ಸರಳು ಮಿದುಳನ್ನು ಹೊಕ್ಕಿತು !
ಮೃತರ ಗುರುತು ಪತ್ತೆ ಕಾರ್ಯ ನಡೆಸಲಾಗುತ್ತಿದ್ದು, ಏಳು ಮಂದಿ ಸಾವನ್ನಪ್ಪಿದವರಲ್ಲಿ ಮೂವರು ಮಹಿಳಾ ಮಾವೋವಾದಿಗಳು ಸೇರಿದ್ದಾರೆ. ಮೃತರಲ್ಲಿ ಒಬ್ಬರನ್ನು ಮೇತುರಿ ಜೋಖಾ ರಾವ್ ಅಲಿಯಾಸ್ ಶಂಕರ್ ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.
ಮಂಗಳವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಹಿಡ್ಮಾ ಮತ್ತು ಇತರ ಐದು ಜನರನ್ನು ಗುಂಡಿಕ್ಕಿ ಕೊಂದ ಬಳಿಕ ಸಂಗ್ರಹಿಸಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಎನ್‌ಟಿಆರ್, ಕೃಷ್ಣ, ಕಾಕಿನಾಡ, ಕೊನಸೀಮಾ ಮತ್ತು ಎಲೂರು ಜಿಲ್ಲೆಗಳಲ್ಲಿ 50 ಮಾವೋವಾದಿಗಳನ್ನು ಬಂಧಿಸಲಾಗಿದೆ. ಇದು ಆಂಧ್ರಪ್ರದೇಶದ ಇತಿಹಾಸದಲ್ಲಿ ಅತಿದೊಡ್ಡ ಬಂಧನವಾಗಿದೆ ಎಂದು ಅವರು ಹೇಳಿದರು.
ಭದ್ರತಾ ಪಡೆಗಳು 45 ಶಸ್ತ್ರಾಸ್ತ್ರಗಳು, 272 ಸುತ್ತುಗಳು, ಎರಡು ಮ್ಯಾಗಜೀನ್‌ಗಳು, 750 ಗ್ರಾಂ ವೈರ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿವೆ. ಛತ್ತೀಸ್‌ಗಢದಿಂದ ಪೊಲೀಸರು ಮಾವೋವಾದಿ ಚಲನವಲನಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಶ್ರೀಕಾಕುಲಂ ಮೂಲದ ಶಂಕರ್ ಆಂಧ್ರ ಒಡಿಶಾ ಗಡಿ (ಎಒಬಿ) ಯ ಉಸ್ತುವಾರಿ (ಎಸಿಎಂ) ನೋಡುತ್ತಿದ್ದನು. ತಾಂತ್ರಿಕ ವಿಷಯಗಳು, ಶಸ್ತ್ರಾಸ್ತ್ರ ತಯಾರಿಕೆ, ಸಂವಹನದಲ್ಲಿ ಪರಿಣತಿ ಹೊಂದಿದ್ದನು ಎಂದು ಪ್ರಾಥಮಿಕ ತನಿಖೆ ವರದಿ ತಿಳಿಸಿದೆ ಎಂದರು.
ಬಸ್ತಾರ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಭದ್ರತಾ ಪಡೆಗಳು ಬುಧವಾರ ಬೆಳಗ್ಗೆ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಮಾರೆಡುಮಿಲ್ಲಿ ಕಾಡಿನಲ್ಲಿ ಮಂಗಳವಾರ ಹಿಡ್ಮಾ, ಆತನ ಪತ್ನಿ ಮಡ್ಕಮ್ ರಾಜೆ ಮತ್ತು ಇತರ ನಾಲ್ವರು ನಕ್ಸಲರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ದೃಢಪಡಿಸಿದ್ದಾರೆ.
ಮಾವೋವಾದಿಗಳ ವಿರುದ್ಧ ನಡೆಸಿದ ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿರುವ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದಿಯೋ ಸಾಯಿ, ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿರುವ ಭದ್ರತಾ ಪಡೆಗಳಿಗೆ ಇದು ಐತಿಹಾಸಿಕ ಮತ್ತು ನಿರ್ಣಾಯಕ ದಿನವಾಗಿದೆ. ಛತ್ತೀಸ್‌ಗಢ ಮತ್ತು ಆಂಧ್ರಪ್ರದೇಶ ಗಡಿಯಲ್ಲಿ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಹಿಡ್ಮಾ ಮತ್ತು ಇತರ ಐದು ನಕ್ಸಲರ ಹತ್ಯೆ ಎಡಪಂಥೀಯ ಉಗ್ರವಾದದ ವಿರುದ್ಧದ ಹೋರಾಟದಲ್ಲಿ ಅತ್ಯಂತ ಮಹತ್ವಪೂರ್ಣ ಸಾಧನೆಯಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Rising Stars Asia Cup: ಹರ್ಷ್ ದುಬೆ ಅರ್ಧಶತಕ; ಸೆಮಿ ಫೈನಲ್ ಪ್ರವೇಶಿಸಿದ ಭಾರತ
ಹಿಡ್ಮಾ ಸಾವು ಛತ್ತೀಸ್‌ಗಢ, ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಮಾತ್ರವಲ್ಲ ಸಂಪೂರ್ಣ ರಾಷ್ಟ್ರದ ನಕ್ಸಲ್ ವಿರೋಧಿ ಕಾರ್ಯಾಚರಣೆಗಳ ಇತಿಹಾಸದಲ್ಲಿ ಅತ್ಯಂತ ನಿರ್ಣಾಯಕ ಪ್ರಗತಿಯಾಗಿದೆ. 2013 ರ ಝೀರಾಮ್ ಕಣಿವೆ ದಾಳಿ ಸೇರಿದಂತೆ ಹಲವಾರು ದಾಳಿಗಳನ್ನು ಹಿಡ್ಮಾ ಸಂಘಟಿಸಿದ್ದನು ಎಂದು ಬಸ್ತಾರ್ ರೇಂಜ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಟ್ಟಿಲಿಂಗಂ ಹೇಳಿದ್ದಾರೆ.