ಆಗ್ರಾ : ಉತ್ತರ ಪ್ರದೇಶ (Uttar Pradesh)ದ ಆಗ್ರಾ (Agra)ದ ಸಿಕಂದ್ರಾ ಪ್ರದೇಶದಲ್ಲಿ ದೇಶವನ್ನೇ ಬೆಚ್ಚಿಬೀಳಿಸಿರುವ ಕೊಲೆ ಪ್ರಕರಣ (Murder Case) ಬೆಳಕಿಗೆ ಬಂದಿದೆ. ಸುಮಾರು 45 ದಿನಗಳಿಂದ ನಾಪತ್ತೆಯಾಗಿದ್ದಾನೆ ಎಂದು ಭಾವಿಸಲಾಗಿದ್ದ ಸುರೇಂದ್ರ ಶರ್ಮಾ ಎಂಬ ವ್ಯಕ್ತಿಯ ಅಸ್ಥಿಪಂಜರವು ಅವರ ಮನೆಯ ಬಾತ್‌ರೂಮ್ ನೆಲದಡಿ ಹೂತುಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಮೃತನ ಪತ್ನಿ ರೂಬಿ ಅವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಪತಿಯನ್ನು ಕೊಲೆ ಮಾಡಿ ಮನೆಯಲ್ಲೇ ಹೂತುಹಾಕಿದ್ದಾಗಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸುರೇಂದ್ರ ಶರ್ಮಾ ನಿರುದ್ಯೋಗಿಯಾಗಿದ್ದು, ಮದ್ಯದ ವ್ಯಸನಿಯಾಗಿದ್ದರು. ಪ್ರತಿದಿನ ಮದ್ಯಪಾನ ಮಾಡಿ ಮನೆಗೆ ಬಂದು ಪತ್ನಿ ರೂಬಿ ಮೇಲೆ ಹಲ್ಲೆ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಕುಟುಂಬದ ಖರ್ಚುಗಳು ಮುಖ್ಯವಾಗಿ ಸುರೇಂದ್ರ ಅವರ ತಾಯಿಗೆ ಬರುತ್ತಿದ್ದ ಪಿಂಚಣಿ ಹಣದಿಂದಲೇ ನಡೆಯುತ್ತಿತ್ತು.
ಮೇ 26ರಂದು ನಡೆದ ಕೊಲೆ?
ವಿಚಾರಣೆ ವೇಳೆ ರೂಬಿ ನೀಡಿರುವ ಹೇಳಿಕೆಯಂತೆ, ಮೇ 26ರಂದು ಪತಿ ಮತ್ತೊಮ್ಮೆ ಮದ್ಯದ ಅಮಲಿನಲ್ಲಿ ಹಲ್ಲೆ ನಡೆಸಿದ ಬಳಿಕ ಆಕ್ರೋಶಗೊಂಡು ಆತನನ್ನು ಕೊಲೆ ಮಾಡಿದ್ದಾಳೆ. ಬಳಿಕ ಯಾರಿಗೂ ಅನುಮಾನ ಬಾರದಂತೆ ಮನೆಯ ಬಾತ್‌ರೂಮ್‌ನಲ್ಲಿ ಗುಂಡಿ ತೋಡಿ ಶವವನ್ನು ಹೂತು, ಅದರ ಮೇಲೆ ಮತ್ತೆ ಸಿಮೆಂಟ್ ಹಾಕಿ ನೆಲವನ್ನು ಮೊದಲಿನಂತೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
45 ದಿನಗಳ ಕಾಲ ನಾಪತ್ತೆ ಪ್ರಕರಣದ ತನಿಖೆ
ಸುರೇಂದ್ರ ಕಾಣೆಯಾಗುತ್ತಿದ್ದಂತೆ ಅವರ ಸಹೋದರ ಅನಿಲ್ ಶರ್ಮಾ ಸಿಕಂದ್ರಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಕಳೆದ ಒಂದೂವರೆ ತಿಂಗಳಿನಿಂದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದರು. ಈ ಅವಧಿಯಲ್ಲಿ ಪೊಲೀಸರು ಹಲವು ಬಾರಿ ಮನೆಗೂ ಭೇಟಿ ನೀಡಿದ್ದರು. ಆದರೆ ಮೃತದೇಹ ಮನೆಯೊಳಗೇ ಹೂತುಹಾಕಿರುವ ಸಂಗತಿ ಯಾರಿಗೂ ತಿಳಿದಿರಲಿಲ್ಲ.
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನದಿಂದ ಆಧುನಿಕ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ
ಅತ್ತೆಯ ಮುಂದೆ ಸತ್ಯ ಬಾಯ್ಬಿಟ್ಟ ರೂಬಿ
ಜುಲೈ 3ರಂದು ಪೊಲೀಸರು ಮತ್ತೆ ಮನೆಗೆ ಬಂದು ವಿಚಾರಣೆ ನಡೆಸಿ ತೆರಳಿದ ಬಳಿಕ, ಅದೇ ರಾತ್ರಿ ರೂಬಿ ತನ್ನ ಅತ್ತೆಯ ಬಳಿ ಪತಿಯನ್ನು ತಾನೇ ಕೊಲೆ ಮಾಡಿರುವುದಾಗಿ ಹಾಗೂ ಶವವನ್ನು ಬಾತ್‌ರೂಮ್‌ನಲ್ಲಿ ಹೂತುಹಾಕಿರುವುದಾಗಿ ಹೇಳಿದ್ದಾಳೆ ಎನ್ನಲಾಗಿದೆ. ಈ ವಿಷಯವನ್ನು ಮೃತನ ಸಹೋದರ ತಕ್ಷಣ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ರಾತ್ರಿ ಮನೆಗೆ ದೌಡಾಯಿಸಿ ರೂಬಿಯನ್ನು ವಶಕ್ಕೆ ಪಡೆದರು.
ಬಾತ್‌ರೂಮ್ ನೆಲ ಅಗೆದು ಅಸ್ಥಿಪಂಜರ ಪತ್ತೆ
ರೂಬಿ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಬಾತ್‌ರೂಮ್ ನೆಲವನ್ನು ಅಗೆದಾಗ ಸುರೇಂದ್ರ ಶರ್ಮಾ ಅವರ ಅಸ್ಥಿಪಂಜರ ಪತ್ತೆಯಾಯಿತು. ಅಗತ್ಯ ಕಾನೂನು ಪ್ರಕ್ರಿಯೆ (ಪಂಚನಾಮೆ) ಪೂರ್ಣಗೊಳಿಸಿದ ಬಳಿಕ ಅವಶೇಷಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮರಣದ ನಿಖರ ಕಾರಣ ಹಾಗೂ ಕೊಲೆ ಹೇಗೆ ನಡೆದಿದೆ ಎಂಬುದು ವರದಿಯ ನಂತರ ಸ್ಪಷ್ಟವಾಗಲಿದೆ.
ರೂಬಿ ಒಬ್ಬಳೇ ಕೃತ್ಯ ಎಸಗಿದ್ದಳಾ?
ಈ ಕೊಲೆಯನ್ನು ರೂಬಿ ಒಬ್ಬಳೇ ಮಾಡಿದ್ದಳಾ ಅಥವಾ ಶವವನ್ನು ಹೂತುಹಾಕಲು ಬೇರೆ ಯಾರಾದರೂ ಸಹಾಯ ಮಾಡಿದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮನೆಯನ್ನು ಸೀಜ್ ಮಾಡಲಾಗಿದ್ದು, ಘಟನಾ ಸ್ಥಳದಿಂದ ಇತರ ಸಾಕ್ಷ್ಯಗಳನ್ನು ಕೂಡ ಸಂಗ್ರಹಿಸಲಾಗುತ್ತಿದೆ.
ಪೊಲೀಸರ ಪ್ರಕಾರ, ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಶೀಲಿಸಲಾಗುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಫೊರೆನ್ಸಿಕ್ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.