ಬೆಂಗಳೂರು, ಜ.27 : ಬೆಂಗಳೂರಿನಲ್ಲಿ (Bengaluru) ಭಾರಿ ಮೊತ್ತದ ಎಟಿಎಂ ಹಣ ದರೋಡೆ (ATM money robbery case) ನಡೆದ ಕೆಲವೇ ತಿಂಗಳಲ್ಲಿ ಮತ್ತೊಂದು ಅಂಥದೇ ದರೋಡೆ ಸಂಭವಿಸಿದೆ. ಎಟಿಎಂಗೆ ಹಣ ಸಾಗಿಸುತ್ತಿದ್ದ ವಾಹನವನ್ನು ದರೋಡೆ ಮಾಡಲಾಗಿದೆ. HITACHI ಕಂಪನಿ ಸಿಬ್ಬಂದಿಯಿಂದ ಬರೋಬ್ಬರಿ ಒಟ್ಟು 1.37 ಕೋಟಿ ರೂ. ಲೂಟಿ ಮಾಡಲಾಗಿದೆ. ಪೊಲೀಸರು ದರೋಡೆಕೋರರಿಗಾಗಿ ತೀವ್ರ ಶೋಧದಲ್ಲಿ ತೊಡಗಿದ್ದಾರೆ.
ಬೆಂಗಳೂರಿನಲ್ಲಿ ಎಸ್‌ಬಿಐ, ಎಕ್ಸಿಸ್ ಬ್ಯಾಂಕ್ ಎಟಿಎಂಗೆ ಹಣ ತುಂಬುವ ಕಂಪನಿ ಹಿಟಾಚಿ ಸಿಬ್ಬಂದಿಯಿಂದ ಎಟಿಎಂ ವಾಹನ ದರೋಡೆ ಮಾಡಲಾಗಿದೆ. ಎರಡು ತಂಡಗಳು ಸೇರಿ 1.37 ಕೋಟಿ ರೂ. ಹಣ ಲೂಟಿ ಮಾಡಿವೆ. ಒಂದು ತಂಡ 57 ಲಕ್ಷ ರೂ. ದೋಚಿದರೆ, ಮತ್ತೊಂದು ತಂಡ 80 ಲಕ್ಷ ರೂ. ದರೋಡೆ ಮಾಡಿದೆ. ಜನವರಿ 19 ರಂದು ಎಟಿಎಂ ವಾಹನ ದರೋಡೆ ಮಾಡಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪ್ರವೀಣ್, ಧನಶೇಖರ್, ರಾಮಕ್ಕ, ಹರೀಶ್ ಕುಮಾರ್ ಎಂಬವರು ಎಟಿಎಂ ವಾಹನ ದರೋಡೆ ಮಾಡಿ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಹಣ ಸಾಗಿಸುವ ಹೊಣೆ ಹೊತ್ತಿರುವ ಒಂದೇ ಕಂಪನಿಯ ಎರಡು ವಾಹನಗಳನ್ನು ದರೋಡೆ ಮಾಡಲಾಗಿದ್ದು, ಇನ್ನಷ್ಟು ಮಂದಿ ಶಾಮೀಲಾಗಿರುವ ಅನುಮಾನ ಮೂಡಿಸಿದೆ. ಆರೋಪಿಗಳ ನಿಕಟ ಸಂಪರ್ಕದಲ್ಲಿರುವವರ ಮೇಲೂ ಕಣ್ಣಿಡಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ನವಂಬರ್‌ನಲ್ಲಷ್ಟೇ ಇನ್ನೊಂದು ಇಂಥದೇ ದರೋಡೆ ನಡೆದಿತ್ತು. ಬೆಂಗಳೂರಿನ ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ನಡುಮಧ್ಯಾಹ್ನ 1 ಗಂಟೆಗೆ ಎಟಿಎಂಗೆ ಹಣ ಸಾಗಿಸುವ ವಾಹನವನ್ನು ತಡೆಗಟ್ಟಿ, ವಾಹನದಲ್ಲಿದ್ದ 7 ಕೋಟಿ 11 ಲಕ್ಷ ರೂಪಾಯಿ ಹಣವನ್ನು ದೋಚಿದ್ದರು. ಆರ್‌ಬಿಐ ಅಧಿಕಾರಿಗಳೆಂದು ನಟಿಸಿ ಬಂದ ಗ್ಯಾಂಗ್‌ನಿಂದ ನಡೆದ ಈ ಹೈ-ಪ್ರೊಫೈಲ್ ದರೋಡೆಗೆ ಸಂಬಂಧಿಸಿ ಪೊಲೀಸರು ಇದುವರೆಗೂ 9 ಜನರನ್ನು ಬಂಧಿಸಿ, ಹಣವನ್ನು ವಶಪಡಿಸಿಕೊಂಡಿದ್ದಾರೆ.