ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜೆಮ್ ಗ್ರಾನೈಟ್ಸ್ ಅಧ್ಯಕ್ಷ ವೀರಮಣಿ ವಿರುದ್ಧ ಮತ್ತೊಂದು ದೂರು: ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ

Crime News: ಜೆಮ್ ಗ್ರಾನೈಟ್ಸ್ ಅಧ್ಯಕ್ಷ ಆರ್. ವೀರಮಣಿ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಮುಂದುವರಿಸುತ್ತಿದ್ದಂತೆ ಮತ್ತೊಂದು ಹೊಸ ದೂರು ದಾಖಲಾಗಿದೆ. ತನ್ನ ಮಗಳು ಅಪ್ರಾಪ್ತ ವಯಸ್ಕಳಾಗಿದ್ದಾಗ ವೀರಮಣಿಯಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾಳೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ.

ಜೆಮ್ ಗ್ರಾನೈಟ್ಸ್ ಅಧ್ಯಕ್ಷ ಆರ್. ವೀರಮಣಿ (ಸಂಗ್ರಹ ಚಿತ್ರ)

ಚೆನ್ನೈ, ಸೆ. 28: ತನ್ನ ಮಗಳು ಅಪ್ರಾಪ್ತ ವಯಸ್ಕಳಾಗಿದ್ದಾಗ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾಳೆ (Physical Assaulted) ಎಂದು ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಜೆಮ್ ಗ್ರಾನೈಟ್ಸ್ ಅಧ್ಯಕ್ಷ ಆರ್. ವೀರಮಣಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿ ಹೊಸ ಪ್ರಕರಣ ದಾಖಲಿಸಲಾಗಿದೆ. ವೀರಮಣಿ ಅವರ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (SIT) ಮುಂದುವರಿಸುತ್ತಿದ್ದಂತೆ ಈ ದೂರು ದಾಖಲಾಗಿದೆ. ಇತ್ತೀಚಿನ ದೂರಿನ ಅನ್ವಯ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆಗೆ ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯದ ಮತ್ತೊಂದು ಆರೋಪ ಸೇರ್ಪಡೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ, ಸಾಕ್ಷ್ಯಗಳು ಅಥವಾ ಇತರ ವಿವರಗಳನ್ನು ಹೊಂದಿರುವ ಸಾರ್ವಜನಿಕರು ಮುಂದೆ ಬಂದು ತನಿಖೆಗೆ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ನೀಡಲು ಅಥವಾ ದೂರು ದಾಖಲಿಸಲು ಸಾರ್ವಜನಿಕರಿಗಾಗಿ ಪೊಲೀಸರು 9345319676 ಎಂಬ ಪ್ರತ್ಯೇಕ ವಾಟ್ಸ್‌ಆ್ಯಪ್‌ ಸಂಖ್ಯೆಯನ್ನು ಪರಿಚಯಿಸಿದ್ದಾರೆ.

ವೀರಮಣಿ ಪ್ರಕರಣವು ತಮಿಳುನಾಡಿನಲ್ಲಿ ಪ್ರಮುಖ ರಾಜಕೀಯ ವಿವಾದವಾಗಿದ್ದು, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮತ್ತು ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪರಸ್ಪರ ವಾಗ್ವಾದ ನಡೆಸಿದ್ದಾರೆ.

ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ; ಭಾಗ್ಯವಂತಿ ಮಠದ ಪೂಜಾರಿ ವಿರುದ್ಧ ಪೋಕ್ಸೋ ಕೇಸ್‌

ವೀರಮಣಿ ಪ್ರಕರಣದ ಕುರಿತು ವಿಜಯ್ ಮಾಡಿದ ಹೇಳಿಕೆಗೆ, ರಾಜಕೀಯ ಬೂಟಾಟಿಕೆ ಮತ್ತು ಆಡಳಿತಾತ್ಮಕ ವೈಫಲ್ಯ ಎಂದು ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಆರೋಪಿಸಿದ್ದರು. ಸಿಎಂ ವಿಜಯ್, ತಮ್ಮ ಪಕ್ಷವನ್ನು ಶುದ್ಧ ಶಕ್ತಿ ಮತ್ತು ಡಿಎಂಕೆಯನ್ನು ದುಷ್ಟ ಶಕ್ತಿ ಎಂದು ಬಣ್ಣಿಸಿದ್ದರು.

ಏಪ್ರಿಲ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯ ಪೂರ್ವಭಾವಿ ಅವಧಿಯಿಂದಲೂ ಟಿವಿಕೆ ಮುಖ್ಯಸ್ಥ ವಿಜಯ್‌ ಡಿಎಂಕೆಯನ್ನು ಪದೇ ಪದೆ ಕೆಟ್ಟ ಶಕ್ತಿ ಎಂದು ಬಣ್ಣಿಸುತ್ತಿದ್ದಾರೆ. ಮಧುರಾಂತಕಂನಲ್ಲಿ ನಡೆದ ತಮ್ಮ ಭಾಷಣದಲ್ಲಿ, ಡಿಎಂಕೆ, ಎಐಎಡಿಎಂಕೆ ಮತ್ತು ಬಿಜೆಪಿಯ ನಡುವೆ ಒಳಸಂಚು ಇದೆ ಎಂದು ಅವರು ಆರೋಪಿಸಿದ್ದರು. ಅಲ್ಲದೆ, ಜೆಮ್ ಗ್ರಾನೈಟ್ಸ್ ಅಧ್ಯಕ್ಷ ಆರ್. ವೀರಮಣಿ ವಿರುದ್ಧದ ಪೋಕ್ಸೋ ಪ್ರಕರಣವನ್ನು ಹಿಂದಿನ ಡಿಎಂಕೆ ಸರ್ಕಾರ ಮುಚ್ಚಿಹಾಕಿತ್ತು ಎಂದು ಅವರು ಹೇಳಿದ್ದರು.

ಈ ಆರೋಪವನ್ನು ತಿರಸ್ಕರಿಸಿದ ಸ್ಟಾಲಿನ್, ಈ ವಿಷಯದ ಬಗ್ಗೆ ತಮ್ಮ ನಿಲುವನ್ನು ಈಗಾಗಲೇ ವಿಧಾನಸಭೆಯಲ್ಲಿ ವಿವರಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು. “ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಿದ್ದೇನೆ ಎಂದು ಹೇಳಿರುವ ಮುಖ್ಯಮಂತ್ರಿ ವಿಜಯ್, ಜನರ ಮುಂದೆ ನಟಿಸುವುದನ್ನು ಮುಂದುವರಿಸಿದ್ದಾರೆ. ಇಂದು ಮಧುರಾಂಟಕಂ ಶೂಟಿಂಗ್‌ನಲ್ಲಿ ನಿಮ್ಮ ಸಂಭಾಷಣೆಯನ್ನು ನಾನು ನೋಡಿದೆ” ಎಂದು ಸ್ಟಾಲಿನ್ ಲೇವಡಿ ಮಾಡಿದ್ದರು.