Physical Abuse: ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿದ್ದ ಗಗನಸಖಿಯ ಮೇಲೆ ಲೈಂಗಿಕ ದೌರ್ಜನ್ಯ
ಮೇದಾಂತ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿದ್ದಾಗ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಗಗನಸಖಿಯೊಬ್ಬರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವಾಗ ಇಬ್ಬರು ನರ್ಸ್‌ಗಳು ಕೋಣೆಯಲ್ಲಿದ್ದರು ಆದರೆ ಘಟನೆಯನ್ನು ತಡೆಯಲು ಏನೂ ಮಾಡಲಿಲ್ಲ ಎಂದು ಹೇಳಿಕೊಂಡಿದ್ದಾರೆ.


ಗುರುಗ್ರಾಮ: ಮೇದಾಂತ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿದ್ದಾಗ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ (Physical Abuse) ಎಂದು ಗಗನಸಖಿಯೊಬ್ಬರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವಾಗ ಇಬ್ಬರು ನರ್ಸ್‌ಗಳು ಕೋಣೆಯಲ್ಲಿದ್ದರು ಆದರೆ ಘಟನೆಯನ್ನು ತಡೆಯಲು ಏನೂ ಮಾಡಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಸದ್ಯ ಆಕೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ. ಪೊಲೀಸರ ಪ್ರಕಾರ, ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ಕಾರ್ಯಾಗಾರಕ್ಕಾಗಿ ನಗರಕ್ಕೆ ಬಂದಿದ್ದರು , ಅವರು ತಂಗಿದ್ದ ಹೋಟೆಲ್‌ನ ಈಜುಕೊಳದಲ್ಲಿ ಈಜಲು ಹೋಗಿ ಅಸ್ವಸ್ಥಳಾದ ನಂತರ ಆಸ್ಪತ್ರೆಗೆ ದಾಖಲಾಗಿದ್ದರು.
ದೂರಿನಲ್ಲಿ ಉಲ್ಲೇಖಿಸಿರುವಂತೆ, ಮಹಿಳೆ ಮಾರ್ಚ್ 31 ರಂದು ಗುರುಗ್ರಾಮ್‌ಗೆ ದರ್ಬಾರಿಪುರ, ಸೆಕ್ಟರ್ 75 ರಲ್ಲಿ ವಿಮಾನಯಾನ ನಿರ್ವಾಹಕರೊಬ್ಬರ ತರಬೇತಿ ಕಾರ್ಯಕ್ರಮಕ್ಕಾಗಿ ಬಂದಿದ್ದರು. ಏಪ್ರಿಲ್ 5 ರಂದು, ಗಗನಸಖಿಯನ್ನು ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್ 6 ರಂದು, ಕೆಲವು ಆಸ್ಪತ್ರೆ ಸಿಬ್ಬಂದಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದಾಗ ನಾನು ವೆಂಟಿಲೇಟರ್‌ನಲ್ಲಿದ್ದೆ" ಎಂದು ದೂರಿನಲ್ಲಿ ಹೇಳಲಾಗಿದೆ. ನಾನು ಸಂಪೂರ್ಣವಾಗಿ ಅಶಕ್ತಳಾಗಿದ್ದೆ, ವ್ಯಕ್ತಿಯ ವರ್ತನೆಯನ್ನು ವಿರೋಧಿಸುವ ಅಥವಾ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಕೋಣೆಯಲ್ಲಿದ್ದ ಇಬ್ಬರು ನರ್ಸ್‌ಗಳು ಇದ್ದರು, ಆದರೆ ಅವರು ಮಧ್ಯಪ್ರವೇಶಿಸಲಿಲ್ಲ ಎಂದು ಸಂತ್ರಸ್ತೆ ದೂರಿನಲ್ಲಿ ದಾಖಲಿಸಿದ್ದಾರೆ.
ಏಪ್ರಿಲ್ 13 ರಂದು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ, ಗಗನಸಖಿ ತನ್ನ ಪತಿಗೆ ಘಟನೆಯ ಬಗ್ಗೆ ತಿಳಿಸಿ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಮರುದಿನ ಭಾರತೀಯ ನ್ಯಾಯ ಸಂಹಿತಾದ ಲೈಂಗಿಕ ಕಿರುಕುಳ ಮತ್ತು ಇತರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು.
ಮೇದಾಂತ ಆಸ್ಪತ್ರೆ ಹೇಳಿದ್ದೇನು?
ಪೊಲೀಸ್ ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತಿರುವುದಾಗಿ ಮೇದಾಂತ ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ. ಆದಾಗ್ಯೂ, ಇಲ್ಲಿಯವರೆಗೆ ಯಾವುದೇ ಆರೋಪಗಳು ಸಾಬೀತಾಗಿಲ್ಲ ಎಂದು ಅದು ಹೇಳಿದೆ. ರೋಗಿಯೊಬ್ಬರ ದೂರಿನ ಬಗ್ಗೆ ನಮಗೆ ಮಾಹಿತಿ ಸಿಕ್ಕಿದ್ದು, ಸಂಬಂಧಿತ ಅಧಿಕಾರಿಗಳು ನಡೆಸಿದ ತನಿಖೆಗೆ ನಾವು ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ. ಈ ಹಂತದಲ್ಲಿ, ಯಾವುದೇ ಆರೋಪಗಳು ಸಾಬೀತಾಗಿಲ್ಲ ಮತ್ತು ಪ್ರಶ್ನಾರ್ಹ ಅವಧಿಗೆ ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಎಲ್ಲಾ ಸಂಬಂಧಿತ ದಾಖಲೆಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆರೋಪಗಳ ಗಂಭೀರತೆಯನ್ನು ಪರಿಗಣಿಸಿ ಸದರ್ ಎಸಿಪಿ ಯಶವಂತ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಪೂರ್ವ) ಗೌರವ್ ತಿಳಿಸಿದ್ದಾರೆ. "ತಂಡವು ಆಸ್ಪತ್ರೆಯಿಂದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಿದೆ ಎಂದು ಹೇಳಿದ್ದಾರೆ. ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದ್ದು, ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿ, ಈ ಹಂತದಲ್ಲಿ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಡಿಸಿಪಿ ಹೇಳಿದರು.