ಬೆಳಗಾವಿ: ರಾಜಕಾರಣಿಯೊಬ್ಬರ ಭದ್ರತಾ ಸಿಬ್ಬಂದಿಯೇ ಸಿನಿಮಾ ಶೈಲಿಯಲ್ಲಿ ದರೋಡೆಗೆ ಸಂಚು ರೂಪಿಸಿ, ಕೋಟ್ಯಂತರ ರೂಪಾಯಿ (Robbery) ಲೂಟಿ ಮಾಡಲು ಯತ್ನಿಸಿದ ರೋಚಕ ಘಟನೆಯೊಂದು ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ಬೆಳಕಿಗೆ ಬಂದಿದೆ. ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಅವರ ಗನ್ಮ್ಯಾನ್ ಆಗಿದ್ದ ಡಿಆರ್ ಕಾನ್ಸ್ಟೇಬಲ್ ಚಿದಾನಂದ ಕುರಬೇಟ್ ಸೇರಿದಂತೆ ಒಟ್ಟು ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಬರೋಬ್ಬರಿ 2.39 ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ಮಾಸ್ಟರ್ ಮೈಂಡ್ ಗನ್ಮ್ಯಾನ್ ಚಿದಾನಂದನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಮೂಲಗಳ ಪ್ರಕಾರ, ಗನ್ಮ್ಯಾನ್ ಚಿದಾನಂದ ಕುರಬೇಟ್ ದೂರುದಾರರಾದ ಕಲ್ಮೇಶ್ ರಂಗಾಪುರ ಎಂಬುವವರಿಗೆ ಹಣ ದ್ವಿಗುಣಗೊಳಿಸುವ (ಮನಿ ಡಬ್ಲಿಂಗ್) ಆಮಿಷ ಒಡ್ಡಿದ್ದ. 1 ಲಕ್ಷ ರೂ. ನಗದು ನೀಡಿದರೆ, ನಿಮ್ಮ ಬ್ಯಾಂಕ್ ಖಾತೆಗೆ 1.30 ಲಕ್ಷ ರೂ. ಜಮಾ ಮಾಡಲಾಗುವುದು" ಎಂದು ನಂಬಿಸಿದ್ದ. ಈ ಮಾತನ್ನು ಸತ್ಯ ಎಂದು ನಂಬಿದ ಕಲ್ಮೇಶ್, ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಂದ ಒಟ್ಟು 2.68 ಕೋಟಿ ರೂ. ಹಣವನ್ನು ಸಂಗ್ರಹಿಸಿದ್ದರು.
ಅಕ್ಟೋಬರ್ 30ರಂದು ಹಣ ಎಣಿಕೆ ಮಾಡುವ ನೆಪದಲ್ಲಿ ಕಲ್ಮೇಶ್ ಅವರನ್ನು ಮೂಡಲಗಿ ಪಟ್ಟಣದ ನಿರ್ಜನ ಶೆಡ್ ಒಂದಕ್ಕೆ ಕರೆಯಿಸಿಕೊಳ್ಳಲಾಗಿತ್ತು. ಕಲ್ಮೇಶ್ ಹಣದ ಬ್ಯಾಗ್ನೊಂದಿಗೆ ಬರುತ್ತಿದ್ದಂತೆ, ಚಿದಾನಂದ ಮೊದಲೇ ಸಿದ್ಧಪಡಿಸಿಟ್ಟಿದ್ದ ದರೋಡೆಕೋರರ ಗ್ಯಾಂಗ್ ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ ಹಣವನ್ನು ದೋಚಲು ಯತ್ನಿಸಿದೆ. ದರೋಡೆ ಗ್ಯಾಂಗ್ ದಾಳಿ ನಡೆಸಬಹುದು ಎಂಬ ಅನುಮಾನ ಕಲ್ಮೇಶ್ ಅವರಿಗೆ ಮುಂಚಿತವಾಗಿಯೇ ಇತ್ತು. ಹೀಗಾಗಿ ಅವರು ಮುಂಜಾಗ್ರತಾ ಕ್ರಮವಾಗಿ ಶೆಡ್ ಸುತ್ತಲೂ ತಮ್ಮ ಹುಡುಗರನ್ನು ಕಾವಲಿಗಟ್ಟಿದ್ದರು. ಗ್ಯಾಂಗ್ ದಾಳಿ ಮಾಡುತ್ತಿದ್ದಂತೆ ಅಲರ್ಟ್ ಆದ ಕಲ್ಮೇಶ್ ಬೆಂಬಲಿಗರು, ದರೋಡೆಕೋರರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಚಿದಾನಂದ ಕುರಬೇಟ್, ಸಂಜೀವ್ ಅರಭಾವಿ, ರಾಜಾರಾಮ್ ಮಾಳ್ಯಾಗೋಳ, ರಮೇಶ್ ಮಾಳ್ಯಾಗೋಳ, ಪ್ರಕಾಶ್ ಮೆಳವಂಕಿ, ರಾಘವೇಂದ್ರ ಕೊಪ್ಪದ್ ಹಾಗೂ ರಾಮಪ್ಪ ತಳವಾರ್ ಎಂಬ ಏಳು ಜನರನ್ನು ಮೂಡಲಗಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 2.39 ಕೋಟಿ ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
Police trap an Armed Gang: ತಡೋಳಾ ಬಳಿ ಪಿಸ್ತೂಲ್ನಿಂದ ಗುಂಡಿನ ಸದ್ದು: ದರೋಡೆಗೆ ಹೊಂಚು ಹಾಕಿದ್ದ ಸಶಸ್ತ್ರ ಗ್ಯಾಂಗ್ಗೆ ಪೊಲೀಸರ ಬಲೆ
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಮಾತನಾಡಿ, "ಈ ದರೋಡೆ ಪ್ರಕರಣಕ್ಕೂ ಶಾಸಕ ರಮೇಶ್ ಜಾರಕಿಹೊಳಿ ಅವರಿಗೂ ಯಾವುದೇ ಸಂಬಂಧವಿಲ್ಲ. ಆರೋಪಿ ಚಿದಾನಂದ ಶಾಸಕರ ಬಳಿ ಗನ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದನಷ್ಟೇ. ಆತನನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ. ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.