ನವದೆಹಲಿ: ವಿದ್ಯಾರ್ಥಿಯೊಬ್ಬ ಯದ್ವಾ-ತದ್ವಾ ʼಆಡಿ ಕನ್ವರ್ಟಿಬಲ್ ಕಾರುʼ ಚಲಾಯಿಸಿ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ (Rash Driving) ನಡೆದಿದೆ. ಗಾಯಗೊಂಡಿರುವವರ ಪೈಕಿ ಓರ್ವ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ದಕ್ಷಿಣ ದೆಹಲಿಯ (Delhi) ದುಬಾರಿ ಲೋಧಿ ರಸ್ತೆ ಪ್ರದೇಶದ ಜೋರ್ ಬಾಗ್ ಅಂಚೆ ಕಚೇರಿ ಬಳಿ ಸೋಮವಾರ ತಡರಾತ್ರಿ ಕೆಂಪು ಆಡಿ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಕೂಟರ್‌ನ ಸವಾರ ಮತ್ತು ಹಿಂಬದಿ ಸವಾರ ಗಾಯಗೊಂಡಿದ್ದು, ಅವರನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ BBA ವಿದ್ಯಾರ್ಥಿಯನ್ನುಅರೆಸ್ಟ್ ಮಾಡಲಾಗಿದೆ.
ಆಡಿ ಕಾರಿನಲ್ಲಿ ಇಬ್ಬರು ಬಿಬಿಎ ವಿದ್ಯಾರ್ಥಿಗಳಿದ್ದು, ಅಜಾಗರೂಕತೆ ಕಾರು ಚಲಾಯಿಸಿದ್ದಾನೆ. ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದು ನಂತರ ಮರಕ್ಕೆ ಡಿಕ್ಕಿ ಹೊಡೆದಿದೆ. ಅತಿವೇಗದ ಚಾಲನೆ ಮತ್ತು ಇತರರ ಸುರಕ್ಷತೆಗೆ ಅಪಾಯವನ್ನುಂಟು ಮಾಡಿದ ಪ್ರಕರಣವನ್ನು ದಾಖಲಿಸಲಾಗಿದ್ದು, ಆಡಿ ಚಾಲಕನನ್ನು ಬಂಧಿಸಲಾಗಿದೆ. ಸ್ಕೂಟರ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ನೈತಿಕ್ ಮತ್ತು ತುಷಾರ್ ಎಂದು ಗುರುತಿಸಲಾಗಿದೆ. ಅವರನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಗಿದೆ. ಅವರಲ್ಲಿ ಒಬ್ಬರ ಸ್ಥಿತಿ ಸ್ಥಿರವಾಗಿದ್ದು, ಇನ್ನೊಬ್ಬರ ಸ್ಥಿತಿ ಗಂಭೀರವಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೊಗಳಲ್ಲಿ ಕಾರಿನ ಮುಂಭಾಗವು ತೀವ್ರವಾಗಿ ಹಾನಿಗೊಳಗಾಗಿರುವುದನ್ನು ತೋರಿಸಲಾಗಿದೆ, ಇದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ವೇಗವನ್ನು ಸೂಚಿಸುತ್ತದೆ.
ಗಾಯಗೊಂಡ ನೈತಿಕ್ ಅವರ ಸಂಬಂಧಿ ಶುಭಂ ಹೇಳಿಕೆ ನೀಡಿದ್ದು, ಗಾಯಗೊಂಡವರ ಕಾಲು, ತಲೆಗೆ ಗಂಭೀರ ಗಾಯವಾಗಿದೆ. ಸದ್ಯ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರ ನಿಗಾದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.