ಬಿಹಾರ: ವಿಷದ ರುಚಿ ಹೇಗಿರುತ್ತದೆ ಮತ್ತು ಅದನ್ನು ಸೇವಿಸಿದರೆ ಏನಾಗುತ್ತದೆ" ಎಂಬ ಅಪಾಯಕಾರಿ ಪ್ರಯೋಗವನ್ನು ನಡೆಸಲು ಹೋಗಿ ನಾಲ್ವರು ಬಾಲಕಿಯರು ಸಾವನ್ನಪ್ಪಿದ್ದು. ಓರ್ವ ಬಾಲಕಿ ಬದುಕುಳಿದಿದ್ದಾಳೆ. ಬಿಹಾರ (Bihar)ದ ಔರಂಗಾಬಾದ್(Aurangabad) ಜಿಲ್ಲೆಯಲ್ಲಿ ನಡೆದ ಈ ಘೋರ ದುರಂತವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.
ವರದಿಗಳ ಪ್ರಕಾರ, ಜನವರಿ 29 ರಂದು ಮೋತಿ ಬಿಘಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬದುಕುಳಿದ 14 ವರ್ಷದ ಬಾಲಕಿಯ ಹೇಳಿಕೆಯ ಪ್ರಕಾರ, ಐವರು ಗೆಳತಿಯರು ಗ್ರಾಮದ ನಿರ್ಜನ ಪ್ರದೇಶಕ್ಕೆ ಹೋಗಿದ್ದರು. ಅಲ್ಲಿ ಹಕ್ಕಿಗಳನ್ನು ಕೊಲ್ಲಲು ಬಳಸುವ ವಿಷವನ್ನು ಸೇವಿಸಲು ನಿರ್ಧರಿಸಿದ್ದರು. ಈ ಗುಂಪಿನಲ್ಲಿದ್ದವರೆಲ್ಲರೂ 12 ರಿಂದ 15 ವರ್ಷದೊಳಗಿನವರಾಗಿದ್ದರು.
ಬದುಕುಳಿದ ಬಾಲಕಿಯ ಭೀಕರ ಹೇಳಿಕೆ
ಆ ಭೀಕರ ಕ್ಷಣಗಳನ್ನು ನೆನಪಿಸಿಕೊಂಡ ಬಾಲಕಿ, "ನನ್ನ ಗೆಳತಿಯೊಬ್ಬಳು ಇದನ್ನು ತಿಂದರೆ ನಾವು ಬದುಕುತ್ತೇವೋ ಅಥವಾ ಸಾಯುತ್ತೇವೋ ಎಂದು ನೋಡೋಣ ಎಂದಳು. ಕೂಡಲೇ ಅವರೆಲ್ಲರೂ ನೀರನ್ನು ಬೆರೆಸಿ ಆ ವಿಷವನ್ನು ಕುಡಿದರು. ನಾನು ಕೂಡ ಸ್ವಲ್ಪ ಸೇವಿಸಿದೆ, ಆದರೆ ತಕ್ಷಣವೇ ಅದನ್ನು ಉಗುಳಿದೆ. ಈ ಕಾರಣದಿಂದ ನಾನು ಬದುಕುಳಿದೆ" ಎಂದು ವಿವರಿಸಿದ್ದಾಳೆ. ಕಣ್ಣ ಮುಂದೆಯೇ ತನ್ನ ನಾಲ್ವರು ಗೆಳತಿಯರು ಕುಸಿದುಬಿದ್ದು ಪ್ರಾಣ ಬಿಡುವುದನ್ನು ನೋಡಿ ಭಯಗೊಂಡ ಆಕೆ ಮನೆಗೆ ಓಡಿ ಬಂದಿದ್ದಾಳೆ. ತಕ್ಷಣ ಆಕೆಯ ಪೋಷಕರು ಬೇವಿನ ಎಲೆಯ ರಸವನ್ನು ಕುಡಿಸಿ ವಾಂತಿ ಮಾಡಿಸಿದ ಕಾರಣ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ.
11ನೇ ತರಗತಿ ವಿದ್ಯಾರ್ಥಿನಿ ಮೇಲೆ ಕಾರಿನಲ್ಲಿ ಅತ್ಯಾಚಾರ; ಬೆದರಿಸಿ ಮತಾಂತರಕ್ಕೆ ಯತ್ನ
ಪೊಲೀಸರ ವಾದವೇ ಬೇರೆ
ಬಾಲಕಿ ಇದನ್ನು ಕುತೂಹಲದ 'ಪ್ರಯೋಗ' ಎನ್ನುತ್ತಿದ್ದರೆ, ಪೊಲೀಸರ ತನಿಖೆಯು ಬೇರೆಯದೇ ದಿಕ್ಕಿನಲ್ಲಿದೆ. ಸರಸ್ವತಿ ಪೂಜೆಯ ಸಂಜೆ ಈ ಬಾಲಕಿಯರು ಕೆಲವು ಹುಡುಗರೊಂದಿಗೆ ಸುತ್ತಾಡುತ್ತಿರುವುದನ್ನು ಪೋಷಕರು ನೋಡಿದ್ದರು ಎನ್ನಲಾಗಿದೆ. ಈ ವಿಷಯಕ್ಕೆ ಪೋಷಕರು ಬೈದಿದ್ದರಿಂದ ಅವಮಾನ ಹಾಗೂ ಕೋಪಗೊಂಡು ಐವರು ಗೆಳತಿಯರು ಒಟ್ಟಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು ಎಂದು ಡಿಎಸ್ಪಿ ಅಶೋಕ್ ಕುಮಾರ್ ದಾಸ್ ತಿಳಿಸಿದ್ದಾರೆ.
ಪೋಷಕರ ಆಕ್ರೋಶ
ಆದರೆ, ಮೃತ ಬಾಲಕಿಯೊಬ್ಬಳ ತಂದೆ ಪೊಲೀಸರ ಈ "ಪ್ರೇಮ ಪ್ರಕರಣ"ದ ವಾದವನ್ನು ತಳ್ಳಿಹಾಕಿದ್ದಾರೆ. "12 ರಿಂದ 15 ವರ್ಷದ ಪುಟ್ಟ ಮಕ್ಕಳಿಗೆ ಪ್ರೀತಿ-ಪ್ರೇಮದ ಬಗ್ಗೆ ಏನು ಗೊತ್ತು? ನನ್ನ ಮಗಳು ಇಂತಹ ಕೆಲಸ ಮಾಡಲು ಸಾಧ್ಯವೇ ಇಲ್ಲ" ಎಂದು ಕಣ್ಣೀರು ಹಾಕಿದ್ದಾರೆ. ಬಡತನ ಹಾಗೂ ಸಾಮಾಜಿಕ ಒತ್ತಡದಿಂದಾಗಿ, ಪೋಸ್ಟ್‌ಮಾರ್ಟಮ್ ಸೇರಿದಂತೆ ಯಾವುದೇ ಅಧಿಕೃತ ಪ್ರಕ್ರಿಯೆಗಳಿಗೆ ಕಾಯದೆ ನಾಲ್ವರು ಬಾಲಕಿಯರ ಅಂತ್ಯಸಂಸ್ಕಾರವನ್ನು ಒಂದೇ ಚಿತೆಯಲ್ಲಿ ನೆರವೇರಿಸಲಾಗಿದೆ. ಪ್ರಸ್ತುತ ಬಿಹಾರ ಪೊಲೀಸರು ಬದುಕುಳಿದ ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.