ಬಳ್ಳಾರಿ, ಜ.05: ಬ್ಯಾನರ್ ಅಳವಡಿಕೆ ವಿಚಾರವಾಗಿ ಬಳ್ಳಾರಿಯಲ್ಲಿ ನಡೆದ ಗಲಭೆ (Ballari firing) ತನಿಖೆಗೆ ಸ್ಫೋಟಕ ತಿರುವು ಸಿಕ್ಕಿದೆ. ಮಾರಾಮಾರಿ ವೇಳೆ ಬುಲೆಟ್ ತಗುಲಿ ಮೃತಪಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತ (congress worker) ರಾಜಶೇಖರ್ ದೇಹ ಹೊಕ್ಕ ಗುಂಡು ಯಾರದ್ದು ಎಂದು ಗೊತ್ತಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ 26 ಆರೋಪಿಗಳನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.
ಶಾಸಕ ಭರತ್ ರೆಡ್ಡಿ (Bharath Reddy) ಅತ್ಯಾಪ್ತ ಸತೀಶ್ ರೆಡ್ಡಿಯ ಗನ್‌ಮ್ಯಾನ್ ಗುರುಚರಣ್ ಸಿಂಗ್ ಫೈರ್ ಮಾಡಿದ್ದ ಬಂದೂಕಿನ ಬುಲೆಟ್ ತಗುಲಿಯೇ ರಾಜಶೇಖರ್ ಮೃತಪಟ್ಟಿದ್ದಾರೆ. 12 ಎಂಎಂ ಬುಲೆಟ್ ಅನ್ನು ರಾಜಶೇಖರ್ ದೇಹದಿಂದ ಪೋಸ್ಟ್ ಮಾರ್ಟಮ್ ವೇಳೆ ಹೊರ ತೆಗೆಯಲಾಗಿದೆ. ಹೊರ ತೆಗೆದ ಬುಲೆಟ್ ಫೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದೆ.
ರಾಜಶೇಖರ್ ಮೃತನ ದೇಹ ಹೊಕ್ಕಿದ್ದು 12 ಎಂಎಂ ಸಿಂಗಲ್‌ಬೋರ್ ಬುಲೆಟ್ ಎಂದು ಖಚಿತವಾಗಿದೆ. ಪ್ರಕರಣ ಸಂಬಂಧ ಪೊಲೀಸರು (Ballari Police) 5 ಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ. ಫೈರಿಂಗ್ ಸಂಬಂಧ ಪಂಜಾಬ್ ಮೂಲದ ಗುರುಚರಣ್ ಸಿಂಗ್ ಜೊತೆಗೆ ಬಲ್ಜಿತ್ ಸಿಂಗ್, ಮಹೇಂದ್ರ ಸಿಂಗ್ ಅನ್ನೋ ಗನ್‌ಮ್ಯಾನ್‌ಗಳನ್ನು ಪೊಲೀಸರು ಬಂಧನ ಮಾಡಿ ವಿಚಾರಣೆಗೊಳಪಡಿಸಿದ್ದಾರೆ. ಗುರುಚರಣ್‌ನನ್ನು ಆತನ ರೂಮ್‌ಗೆ ಕರೆದೊಯ್ದು ಪೊಲೀಸರು ಮಹಜರು ಮಾಡಿ, ಬಳಿಕ ಎಸ್‌ಪಿ ಕಚೇರಿಗೆ ಕರೆತಂದು ಫಿಂಗರ್‌ಪ್ರಿಂಟ್, ಕಣ್ಣಿನ ಟೆಸ್ಟ್ ಮಾಡಿದ್ದಾರೆ.
12 ಎಂಎಂ ಬುಲೆಟ್ (12 MM Bullet) ಕೇವಲ 4-5 ಅಡಿ ದೂರದಲ್ಲಿ ಗುಂಡು ಹಾರಿದ ಕಾರಣ ಓರ್ವ ಮಾತ್ರ ಸಾವನ್ನಪ್ಪಿದ್ದಾನೆ. ಒಂದೊಮ್ಮೆ 10 ಅಡಿಗಿಂತ ದೂರ ಹಾರಿದ್ದರೆ ಬುಲೆಟ್ ಸ್ಪ್ರೆಡ್ ಆಗಿ ಇನ್ನಷ್ಟು ಜನರ ಪ್ರಾಣ ತೆಗೆಯುವ ಹೋಗುವ ಸಾಧ್ಯತೆ ಇತ್ತು.
Bellary Clash: ಸಿಎಂ ಭೇಟಿಯಾದ ಶಾಸಕ ಭರತ್ ರೆಡ್ಡಿ; ಬಳ್ಳಾರಿ ಗಲಭೆ ಬಗ್ಗೆ ಚರ್ಚೆ
ಈ ನಡುವೆ ನಿನ್ನೆ 45 ಜನರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ, ಬಿಜೆಪಿಯ 13 ಜನ ಸೇರಿ ಒಟ್ಟು 26 ಜನರನ್ನು ಪೊಲೀಸರು ಬಂಧಿಸಿ, ಮೆಡಿಕಲ್ ಟೆಸ್ಟ್ ನಡೆಸಿದ್ದಾರೆ. ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ಗೆ ಕರೆತರುತ್ತಿದ್ದಾರೆ. ಈ ಮಧ್ಯೆ, ಆರೋಪಿಗಳ ಬಂಧನ, ಚಾರ್ಜ್‌ಶೀಟ್ ಸಲ್ಲಿಕೆ ವಿಚಾರವಾಗಿ ಬ್ರೂಸ್‌ಪೇಟೆ ಪೊಲೀಸರು ಸಿಐಡಿ ಪೊಲೀಸ್ ವಿಭಾಗದ ಕಾನೂನು ಸಲಹೆಗಾರರಾಗಿರುವ ಮಹೇಶ್ ವೈದ್ಯ ಮೊರೆ ಹೋಗಿದ್ದಾರೆ.
ಪೆಟ್ರೋಲ್ ಬಾಂಬ್ ತಂದಿದ್ದರು
ಗಂಗಾವತಿಯ ಶಾಸಕ ಜನಾರ್ದನ ರೆಡ್ಡಿ (Janardhana Reddy) ಮನೆ ಮೇಲೆ ದಾಳಿ ನಡೆಸಲು ಮೊದಲೇ ಪ್ಲ್ಯಾನ್ ಮಾಡಲಾಗಿತ್ತಾ ಎಂಬ ಅನುಮಾನ ಮೂಡಿದೆ. ಈ ಅನುಮಾನಕ್ಕೆ ಸಾಕ್ಷ್ಯ ಎಂಬಂತೆ ಮತ್ತೊಂದು ವಿಡಿಯೋ ಬಯಲಾಗಿದೆ. ಜನಾರ್ದನ ರೆಡ್ಡಿ ನಿವಾಸದ ಮೇಲೆ ದಾಳಿ ನಡೆಸಲು ಕಿಡಿಗೇಡಿಗಳು ಖಾಲಿ ಬಾಟಲ್, ಪೆಟ್ರೋಲ್ ಬಾಂಬ್‌ಗಳನ್ನು (Petrol Bomb) ಆಟೋದಲ್ಲಿ ತುಂಬಿಕೊಂಡು ಬಂದಿರುವುದು ವಿಡಿಯೋದಲ್ಲಿ ಗೋಚರವಾಗಿದೆ.
ಬಳ್ಳಾರಿ ಗಲಾಟೆ ಬೆನ್ನಲ್ಲೇ ತಮಗೆ ಮತ್ತು ತಮ್ಮ ಕುಟುಂಬಕ್ಕೆ ʻಝೆಡ್ʼ ಶ್ರೇಣಿಯ ಭದ್ರತೆ ಒದಗಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಡಿಜಿಪಿ ಡಾ.ಎಂ.ಎ ಸಲೀಂ ಅವರಿಗೆ ಜನಾರ್ದನ ರೆಡ್ಡಿ ಪ್ರತ್ಯೇಕ ಪತ್ರ ಬರೆದು ಮನವಿ ಮಾಡಿದ್ದಾರೆ. ಜೊತೆಗೆ, ಶಾಸಕ ನಾರಾ ಭರತ್ ರೆಡ್ಡಿ ಮತ್ತು ಸತೀಶ್ ರೆಡ್ಡಿಯನ್ನು ಬಂಧಿಸಬೇಕು. ಘಟನೆಯನ್ನು ನಿಭಾಯಿಸದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕು. ಭದ್ರತೆ ನೀಡದೇ ಇದ್ದರೆ ಮುಂದೆ ನನ್ನ ಮತ್ತು ಕುಟುಂಬದ ಮೇಲೆ ದಾಳಿ ನಡೆದರೆ ರಾಜ್ಯ ಸರ್ಕಾರವೇ ಹೊಣೆ ಎಂದು ಉಲ್ಲೇಖಿಸಿದ್ದಾರೆ. ಆದರೆ, ಈವರೆಗೆ ನನಗೆ ಪತ್ರ ಬಂದಿಲ್ಲ ಅಂತ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಪೊಲೀಸ್ ಗನ್ ಹಾಗೂ ರಿವಾಲ್ವರ್‌ನಿಂದ ಫೈರ್ ಆಗಿಲ್ಲ. ಇದನ್ನು ಎಡಿಜಿಪಿ ಖಾತ್ರಿ ಪಡಿಸಿದ್ದಾರೆ ಎಂದ ಪರಮೇಶ್ವರ್, ಖಾಸಗಿ ಗನ್‌ನಿಂದ ಫೈರ್ ಆಗಿರೋದು ಎಂದಿದ್ದಾರೆ. ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಪ್ರಕರಣವನ್ನ ಸಿಐಡಿ ತನಿಖೆಗೆ ಕೊಡುವುದರ ಬಗ್ಗೆ ಯೋಚನೆ ಮಾಡ್ತಿದ್ದೇವೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಮಾತಾಡ್ತೀನಿ, ಅಗತ್ಯ ಇದ್ರೆ ಸಿಐಡಿ ತನಿಖೆಗೆ ಒಪ್ಪಿಸ್ತೀವಿ ಎಂದಿದ್ದಾರೆ.