ಬೆಂಗಳೂರು, ನ. 6: ಯಾವುದೇ ಸರಣಿ ಹತ್ಯೆಯ ಕಾದಂಬರಿ, ಚಿತ್ರವನ್ನೂ ಮೀರಿಸುವಂತಹ, ದೇಶವೇ ಬೆಚ್ಚಿಬೀಳಿಸುವ ಹತ್ಯಾಕಾಂಡವೊಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸದ್ದಿಲ್ಲದೆ ನಡೆದು ಇದೀಗ ಬೆಳಕಿಗೆ ಬಂದಿದೆ (Bengaluru Mass Murder). ಸೈಕೋ ಕ್ಯಾಬ್ ಚಾಲಕ, 52 ವರ್ಷದ ಇಂದುಶೇಖರ್ ತನ್ನ ಪತ್ನಿ ಮತ್ತು ಪತ್ನಿಯ ಮನೆಯವರು ಸೇರಿ 7 ಮಂದಿಯನ್ನು ರುಬ್ಬುವ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಅನುಮಾನ ಬರದಿರಲು ಹೆಣವನ್ನು ವಿವಿಧ ಕಡೆಗಳಲ್ಲಿ ಎಸೆದಿದ್ದಾನೆ. ಇದೀಗ ರಾಜಾಜಿನಗರ ಪೊಲೀಸರು ಆತನನ್ನು ಬಂಧಿಸಿದ್ದು, ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆಘಾತಕಾರಿ ವಿಚಾರ ಎಂದರೆ ಆತ ಒಟ್ಟು 9 ಮಂದಿಯನ್ನು ಕೊಲೆ ಮಾಡುವ ಸಂಚು ರೂಪಿಸಿದ್ದ!
ಇಬ್ಬರನ್ನು ಕೊಲೆ ಮಾಡುವ ಮುನ್ನ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಕೆಲವು ದಿನಗಳ ಬ್ರೇಕ್ ಬಳಿಕ ಮತ್ತಿಬ್ಬರನ್ನು ಕೊಲೆ ಮಾಡಬೇಕೆಂದುಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಹತ್ಯಾಕಾಂಡ; ಮಗಳ ಬ್ರೈನ್ ವಾಶ್ ಮಾಡಿ ಕೃತ್ಯಕ್ಕೆ ಬಳಸಿಕೊಂಡಿದ್ದ ತಂದೆ!
ಪತ್ನಿಯ ಕುಟುಂಬಸ್ಥರನ್ನೇ ಕೊಲೆ
ಅಚ್ಚರಿ ಎಂದರೆ ಇಂದುಶೇಖರ್ ಕೊಲೆ ಮಾಡಿದ್ದು ತನ್ನ ಪತ್ನಿ ಮತ್ತು ಆಕೆಯ ಮನೆಯವರನ್ನು. ಪತ್ನಿ ಸುನೀತಾ, ಅತ್ತೆ ಶ್ರೀರಾಮಪುರದ ರೂಪವತಿ, ಅವರ ಮಕ್ಕಳಾದ ಶಿವಕುಮಾರ್ ಮತ್ತು ಶಂಕರ್, ಸೊಸೆಯಂದಿರಾದ ದಿವ್ಯಾ ಮತ್ತು ನಳಿನಿ ಹಾಗೂ ಮೊಮ್ಮಗ 7 ವರ್ಷದ ಪುನೀತ್‌ನನ್ನು ಇಂದುಶೇಖರ್ ಕೊಲೆ ಮಾಡಿದ್ದಾನೆ.
ರಾಜಾಜಿನಗರದಲ್ಲಿರುವ ಭಾಷ್ಯಂ ಸರ್ಕಲ್ ಬಳಿಯ ಕಟ್ಟಡವೊಂದರ ರೂಮ್ ಒಂದಕ್ಕೆ ಒಬ್ಬೊಬ್ಬರನ್ನೇ ಕರೆದು ಅವರಿಗೆ ಪಾನೀಯದಲ್ಲಿ ನಿದ್ದೆ ಮಾತ್ರೆ ಬೆರೆಸಿಕೊಟ್ಟು ರುಬ್ಬುಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಅಕ್ಟೋಬರ್ 16ರಂದು ಸುನೀತಾ ಅವರ ಕೊಲೆಯ ಮೂಲಕ ಈ ಸರಣಿ ಆರಂಭವಾಯ್ತು. ಕೊಲೆ ಮಾಡಿದ ಬಳಿಕ ಅವರೆಲ್ಲ ಪ್ರವಾಸ ಹೋಗಿದ್ದಾರೆ ಎಂದು ಸಂಬಂಧಿಕರ ಬಳಿ ಕಥೆ ಕಟ್ಟಿದ್ದ.
ಬಾಲಕನ ಸಮ್ಮುಖದಲ್ಲೇ ಕೃತ್ಯ
ಇನ್ನೂಂದು ಆಘಾತಕಾರಿ ವಿಚಾರ ಎಂದರೆ ಇಂದುಶೇಖರ್ ಮೃತದೇಹಗಳನ್ನು ಎಸೆಯಲು ಹೋಗುವಾಗಲೆಲ್ಲ ನಳಿನಿ ಅವರ 11 ವರ್ಷದ ಪುತ್ರನನ್ನು ಜತೆಗೆ ಕರೆದೊಯ್ಯುತ್ತಿದ್ದ. ಪ್ರತಿ ಬಾರಿ ಮೃತದೇಹ ತುಂಬಿದ ಚೀಲವನ್ನು ಕಾರಿನ ಡಿಕ್ಕಿಗೆ ಹಾಕುವಾಗ ಏನಿದು ಎಂದು ಕೇಳುತ್ತಿದ್ದ ಆ ಬಾಲಕನಿಗೆ ಮನೆಯ ಕಸದ ಚೀಲ ಎನ್ನುತ್ತಿದ್ದ.
ಉಳಿದವರೆಲ್ಲಾ ಎಲ್ಲಿ ಎಂದು ಕೇಳಿದರೆ ಅವರೆಲ್ಲ ಪ್ರವಾಸಕ್ಕೆ ತೆರಳಿದ್ದಾಗಿಯೂ ಕೆಲವು ದಿನ ಬಿಟ್ಟು ಆತನನ್ನೂ ಕರೆದುಕೊಂಡು ಹೋಗುವುದಾಗಿಯೂ ಹೇಳಿದ್ದ. ಹೀಗೆ ಇಂದುಶೇಖರ್ ಮೃತದೇಹಗಳನ್ನು ನಂದಿಬೆಟ್ಟ, ಸ್ಕಂದಗಿರಿಯ ದಟ್ಟ ಪೊದೆಗಳು, ಹಾಸನದ ಕಡಿದಾದ ಕಣಿವೆ-ಬಂಡೆಗಳು, ಚಾರ್ಮಾಡಿ ಘಾಟ್ ಹಾಗೂ ತಮಿಳುನಾಡಿನ ಸೇಲಂ ಗಡಿಯಲ್ಲಿ ಎಸೆದಿದ್ದ. ತಾನು ಕೂತಿರುವ ಕಾರ್‌ನ ಡಿಕ್ಕಿಯಲ್ಲಿ ತಂದೆ-ತಾಯಿಯ ಮೃತದೇಹವಿದೆ ಎನ್ನುವ ಭಯಾನಕ ಸತ್ಯ ಪಾಪ ಆ ಬಾಲಕನಿಗೆ ಗೊತ್ತಿರಲಿಲ್ಲ! ಇಂದುಶೇಖರ್ ಈ ಬಾಲಕನನ್ನೂ ಹತೈಗೈಯ್ಯುವ ಉದ್ದೇಶ ಹೊಂದಿದ್ದ ಎನ್ನಲಾಗಿದೆ.
ಅತಿ ಬುದ್ಧಿವಂತಿಕೆಯೇ ಮುಳುವಾಯ್ತು
ಮೃತದೇಹಗಳನ್ನು ವಿವಿಧ ಕಡೆ ಎಸೆದ ಇಂದುಶೇಖರ್ ಅವರ ಮೊಬೈಲ್ ಫೋನ್‌ಗಳನ್ನು ತನ್ನ ಬಳಿ ಇರಿಸಿಕೊಂಡಿದ್ದ. ಹಲವು ದಿನಗಳಾದರೂ ನಳಿನಿ ಮತ್ತು ದಿವ್ಯಾ ಕರೆ ಮಾಡದ ಹಿನ್ನೆಲೆಯಲ್ಲಿ ಅನುಮಾನಗೊಂಡ ಅವರ ತಾಯಂದಿರು ಶ್ರೀರಾಮಪುರ ಠಾಣೆಯಲ್ಲಿ ನವೆಂಬರ್ 3ರಂದು ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ಅವರು ಸೇರಿ ನಾಪತ್ತೆಯಾದ ಎಲ್ಲರ ಮೊಬೈಲ್ ಟವರ್ ಟ್ರೇಸ್ ಮಾಡಿದಾಗ ಆಲ್ ಇಂಡಿಯಾ ಟೂರ್‌ನಲ್ಲಿದ್ದಾರೆ ಎಂದವರ ಮೊಬೈಲ್‌ಗಳು ಬೆಂಗಳೂರಿನ ಒಂದೇ ಲೊಕೇಶನ್‌ನಲ್ಲಿ ಆಕ್ಟಿವ್ ಆಗಿರುವುದು ಪತ್ತೆಯಾಯಿತು.
ಹಂತಕನ ಕ್ರೌರ್ಯದ ಬಗ್ಗೆ ಬಿಚ್ಚಿಟ್ಟ ಬದುಕುಳಿದ ಬಾಲಕ; ಒಂದೊಂದು ಮೃತದೇಹ ಒಂದೊಂದು ದಿಕ್ಕಿಗೆ
ಅನುಮಾನಗೊಂಡ ಪೊಲೀಸರು ಮೊದಲು ತನಿಖೆ ಆರಂಭಿಸಿದ್ದೇ ಇಂದುಶೇಖರ್ ಮೂಲಕ. ವಿಚಾರಣೆ ವೇಳೆ ಆತ 7 ಕೊಲೆ ವಿಚಾರವನ್ನು ಬಾಯ್ಬಿಟ್ಟಿದ್ದಾನೆ. ಮತ್ತಿಬ್ಬರನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುವ ಪ್ಲ್ಯಾನ್ ಇದ್ದುದಾಗಿ ತಿಳಿಸಿದ್ದಾನೆ ಎಂದು ವರದಿಯೊಂದು ಹೇಳಿದೆ.
ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.