Bengaluru Mass Murder: ಹಂತಕನ ಕ್ರೌರ್ಯದ ಬಗ್ಗೆ ಬಿಚ್ಚಿಟ್ಟ ಬದುಕುಳಿದ ಬಾಲಕ; ಒಂದೊಂದು ಮೃತದೇಹ ಒಂದೊಂದು ದಿಕ್ಕಿಗೆ, ಕಸ ಎಂದು ಹೇಳಿ ಡೆಡ್‌ಬಾಡಿ ವಿಲೇವಾರಿ!
ಮೃತದೇಹಗಳನ್ನು ವಿಲೇವಾರಿ ಮಾಡುವಾಗ ಆರೋಪಿ ಇಂದುಶೇಖರ್ ಜತೆಗೆ ಮೃತ ಶಂಕರ್-ನಳಿನಿ ದಂಪತಿಯ 11 ವರ್ಷದ ಮಗ ಕೂಡ ಇದ್ದ. ಆತನನ್ನು ಆರೋಪಿ ಕಾರಿನಲ್ಲಿ ವಿವಿಧ ಸ್ಥಳಗಳಿಗೆ ಕರೆದೊಯ್ದಿದ್ದ. ಈ ಬಗ್ಗೆ ಮಾಧ್ಯಮಗಳೊಂದಿಗೆ ಬಾಲಕ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಕ ನೀಡಿದ ಮಾಹಿತಿ ಆಧಾರದಲ್ಲಿ ಮೃತದೇಹಗಳ ಶೋಧಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.
-
ಬೆಂಗಳೂರು: ನಗರದಲ್ಲಿ ನಡೆದಿರುವ ಒಂದೇ ಕುಟುಂಬದ 7 ಮಂದಿಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಇಂದುಶೇಖರ್ ಕುರಿತು ಹಲವು ಆಘಾತಕಾರಿ ವಿಚಾರಗಳು ಬಯಲಾಗುತ್ತಿವೆ. ಇದೀಗ ಆರೋಪಿಯ ಬಗ್ಗೆ ಹತ್ಯಾಕಾಂಡದಲ್ಲಿ ಬದುಕುಳಿದ ಬಾಲಕ ಹಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾನೆ. ಶವಗಳ ವಿಲೇವಾರಿ ಯಾವ ರೀತಿಯಲ್ಲಿ ಆರೋಪಿ ಮಾಡುತ್ತಿದ್ದ ಎಂಬ ಕುರಿತು 11 ವರ್ಷದ ಬಾಲಕ ಮಾಹಿತಿ ನೀಡಿದ್ದಾನೆ.
ಮೃತದೇಹಗಳನ್ನು ವಿಲೇವಾರಿ ಮಾಡುವಾಗ ಆರೋಪಿ ಜತೆಗೆ ಮೃತ ಶಂಕರ್-ನಳಿನಿ ದಂಪತಿಯ ಮಗ ಕೂಡ ಇದ್ದ. ಆತನನ್ನು ಆರೋಪಿ ಕಾರಿನಲ್ಲಿ ವಿವಿಧ ಸ್ಥಳಗಳಿಗೆ ಕರೆದೊಯ್ದಿದ್ದ. ಈ ಬಗ್ಗೆ ಮಾಧ್ಯಮಗಳೊಂದಿಗೆ ಬಾಲಕ ಪ್ರತಿಕ್ರಿಯೆ ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ ತಂದೆ-ತಾಯಿ ಜತೆ ಆರೋಪಿಯ ಮನೆಗೆ ಹೋಗಿದ್ದ. ರಾತ್ರಿ ಅಲ್ಲೇ ಮಲಗಿದ್ದೆವು. ಮಾರನೇ ದಿನ ಬೆಳಗ್ಗೆ ಎದ್ದು ನೋಡಿದಾಗ ನಮ್ಮ ಅಪ್ಪ ಇರಲಿಲ್ಲ. ನಂತರ ತಾಯಿ ಜತೆ ಹೊರಗೆ ಹೋಗಲು ಹೋದಾಗ ಅಕ್ಕ ಬಂದು ನನ್ನನ್ನು ಎಳೆದುಕೊಂಡು ಬಾಗಿಲು ಹಾಕಿದರು. ಆಗ ಅಮ್ಮ ಜೋರಾಗಿ ಕಿರುಚಿದರು. ಬಳಿಕ ಏನಾಯ್ತು ಎಂದು ಗೊತ್ತಾಗಿಲ್ಲ. ನಂತರ ನನ್ನನ್ನು ಕಾರಲ್ಲಿ ಧರ್ಮಸ್ಥಳದ ಕಡೆ ಕರೆದುಕೊಂಡು ಹೋಗಿದ್ದರು ಎಂದು ಬಾಲಕ ಹೇಳಿದ್ದಾನೆ.
ಶವಗಳನ್ನು ಚೀಲದಲ್ಲಿ ಕಟ್ಟಿ ಕಾರಲ್ಲಿ ಆರೋಪಿ ಇಟ್ಟಿದ್ದ. ಚೀಲ ಮುಟ್ಟಲು ಹೋದಾಗ ಇಂದುಶೇಖರ್ ಗದರಿಸುತ್ತಿದ್ದ. ನಮ್ಮ ಜತೆ ಇಂದುಶೇಕರ್ ಮಗಳೂ ಇದ್ದಳು. ಅವರು ನನ್ನನ್ನು ಕುಕ್ಕೆ, ಧರ್ಮಸ್ಥಳ, ಶೃಂಗೇರಿ, ಬೆಂಗಳೂರು ಏರ್‌ಪೋರ್ಟ್ ಸೇರಿ ವಿವಿದ ಸ್ಥಳಗಳಿಗೆ ಕರೆದೊಯ್ದಿದ್ದ. ಕಾರಿನಲ್ಲಿ ಮೃತದೇಹಗಳಿದ್ದ ಚೀಲಗಳಿದ್ದವು. ನಾನು ನಾಲ್ಕು ಚೀಲಗಳನ್ನು ನೋಡಿದ್ದೆ, ಕಾರಿನಲ್ಲಿ ವಾಸನೆ ಬರುತ್ತಿತ್ತು. ಆದರೆ ಅವರು ಅದು ಕಸದ ಚೀಲ ಎನ್ನುತ್ತಿದ್ದರು. ಅವುಗಳನ್ನು ಬೇರೆ ಬೇರೆ ಕಡೆ ಚೀಲಗಳನ್ನು ಎಸೆದಿದ್ದರು ಎಂದು ಬಾಲಕ ಹೇಳಿದ್ದಾನೆ.
ಪೊಲೀಸರಿಂದ ಮೃತದೇಹಗಳಿಗಾಗಿ ಶೋಧ
ಕೊಲೆ ಮಾಡಿದ ನಂತರ ಒಂದೊಂದೇ ಶವವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿ ನಗರದ ಹೊರವಲಯದ ನಂದಿಬೆಟ್ಟ, ಚಾರ್ಮಾಡಿಘಾಟ್, ತಮಿಳುನಾಡಿನ ಸೇಲಂ ಬಳಿ ಇರುವ ಯೆರ್ಕಾಡ್ ಘಾಟ್, ಚಾಮುಂಡಿಬೆಟ್ಟ, ಶಿರಾಡಿಘಾಟ್ ಸೇರಿದಂತೆ ಮುಂತಾದ ಪ್ರದೇಶಗಳಿಗೆ ತೆಗೆದುಕೊಂಡು ಹೋಗಿ ಬೀಸಾಡಿರುವುದಾಗಿ ಆರೋಪಿ ಇಂದುಶೇಖರ್ ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಹೀಗಾಗಿ ಹಲವು ಸ್ಥಳಗಳಲ್ಲಿ ಮೃತದೇಹಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.
7 ಮಂದಿ ಹತ್ಯೆಗೆ ಕಾರಣವೇನು?
ಇಂದುಶೇಖರ್ ಸುಮಾರು 20 ವರ್ಷಗಳ ಹಿಂದೆ ಶ್ರೀರಾಮಪುರದ ಸುನಿತಾ ಎಂಬುವವರನ್ನು ವಿವಾಹವಾಗಿದ್ದ. ಸುನಿತಾ ತಾಯಿ ರೂಪವತಿ ಕುಟುಂಬಕ್ಕೆ ಸೇರಿದ ಸುಮಾರು 2.5ಕೋಟಿ ರೂ. ಮೌಲ್ಯದ ಆಸ್ತಿ ಶ್ರೀರಾಮಪುರದಲ್ಲಿದೆ. ಪತ್ನಿ ಸುನಿತಾ ಕುಟುಂಬದವರ ಎಲ್ಲಾ ಆಸ್ತಿಯನ್ನು ಲಪಟಾಯಿಸಬೇಕು ಎಂಬ ಉದ್ದೇಶದಿಂದ ಹಂತಕ ಇಂದುಶೇಖರ್ ಏಳು ಮಂದಿಯನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪತ್ನಿಯ ತವರು ಮನೆಯವರು ಆಗಾಗ್ಗೆ ಮನೆಗೆ ಬರುತ್ತಿದ್ದರು. ಸುನಿತಾ ತವರು ಮನೆಯ ಸಂಬಂಧವನ್ನು ಮುಂದುವರಿಸಿದ್ದರು. ಇದು ಆತನಿಗೆ ಇಷ್ಟವಿರಲಿಲ್ಲ. ಹೀಗಾಗಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಹೀಗಾಗಿ ಈ ಹತ್ಯಾಕಾಂಡಕ್ಕೆ ಕಾರಣ ಹುಡುಕಲು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಶ್ರೀರಾಮಪುರದ ನಿವಾಸಿಗಳಾದ ರೂಪವತಿ (ಆರೋಪಿಯ ಅತ್ತೆ), ಆಕೆಯ ಮಗಳು ಸುನೀತಾ (ಆರೋಪಿಯ ಪತ್ನಿ), ಪುತ್ರರಾದ ಶಿವಕುಮಾರ್, ಶಂಕರ್, ಸೊಸೆಯಂದಿರಾದ ದಿವ್ಯಾ, ನಳಿನಿ ಹಾಗೂ ಮೊಮ್ಮಗ ಪುನೀತ್ ಅವರನ್ನು ಆರೋಪಿ ಕೊಲೆಗೈದಿದ್ದಾನೆ. ಬಳಿಕ ಶವಗಳನ್ನು ಬೇರೆ ಬೇರೆ ಕಡೆಗಳಲ್ಲಿ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.