ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಆರ್‌ಸಿಬಿ ವರ್ಸಸ್ ಸಿಎಸ್‌ಕೆ (RCB vs CSK) ಪಂದ್ಯದ ಐಪಿಎಲ್ ಟಿಕೆಟ್ (IPL Ticket) ಪಡೆಯಲು ಹೋಗಿ ಟೆಕ್ಕಿಯೊಬ್ಬರು ಭಾರೀ ವಂಚನೆಗೆ ಒಳಗಾಗಿದ್ದಾರೆ. ಟೆಕ್ಕಿ 1.46 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಮಹದೇವಪುರದಲ್ಲಿ ನಡೆದಿದೆ. ಐಪಿಎಲ್ ಟಿಕೆಟ್‌ಗೆ ಸಂಬಂಧಿಸಿದಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಲಾಗಿದ್ದ ಒಂದು ಪೋಸ್ಟ್ ನೋಡಿದ ಟೆಕ್ಕಿ ಪೋಸ್ಟ್ ಹಾಕಿದ ವಂಚಕನನ್ನು ಸಂಪರ್ಕಿಸಿದ್ದಾರೆ. ವಂಚಕ ಪಂದ್ಯದ ಟಿಕೆಟ್‌ಗಳು, ಊಟದ ಕೂಪನ್‌ಗಳು ಮತ್ತು ವಿಐಪಿ ಸೌಲಭ್ಯಗಳನ್ನು ಹೊಂದಿರುವ ಟಿಕೆಟ್‌ಗಳನ್ನು ನೀಡುವುದಾಗಿ ಆಮಿಷ ಒಡ್ಡಿದ್ದಾನೆ. ಇದನ್ನು ನಂಬಿದ ಟೆಕ್ಕಿ, ತಾನು ಮತ್ತು ತನ್ನ ತಾಯಿಯ ಬ್ಯಾಂಕ್ ಖಾತೆಗಳಿಂದ ಹಣವನ್ನು ಪಾವತಿಸಿದ್ದಾರೆ.
ಹಣ ಪಾವತಿಯ ನಂತರ, ವಂಚಕನು ಟೆಕ್ಕಿಗೆ ಸ್ಟೇಡಿಯಂನ ಗೇಟ್ ಸಂಖ್ಯೆ 10ರ ಬಳಿ ಬರಲು ಸೂಚಿಸಿದ್ದಾನೆ. ಅಲ್ಲಿಗೆ ತಲುಪಿದಾಗ, ಟೆಕ್ಕಿ ಕನಿಷ್ಠ ದರದ ಟಿಕೆಟ್‌ಗಳನ್ನು ಕೇಳಿದ್ದಾರೆ. ಆದರೆ, ವಂಚಕನು ಕೂಪನ್‌ಗಳು ಮತ್ತು ಭದ್ರತಾ ಠೇವಣಿ ಹೆಸರಿನಲ್ಲಿ ಹೆಚ್ಚಿನ ಹಣವನ್ನು ವಸೂಲಿ ಮಾಡಿದ್ದಾನೆ. ಬೇರೆ ಬೇರೆ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 1.46 ಲಕ್ಷ ರೂ. ಹಣವನ್ನು ಟೆಕ್ಕಿಯಿಂದ ವರ್ಗಾಯಿಸಿಕೊಂಡಿದ್ದಾನೆ.
ವಂಚನೆ ಬಳಿಕ ಟೆಕ್ಕಿ, ತಕ್ಷಣವೇ ಸೈಬರ್ ಕಂಟ್ರೋಲ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರ್‌ಸಿಬಿ-ಸಿಎಸ್‌ಕೆ ಪಂದ್ಯದ ಟಿಕೆಟ್ ಆಮಿಷವೊಡ್ಡಿ, ಇನ್‌ಸ್ಟಾಗ್ರಾಮ್ ಮೂಲಕ ಟೆಕ್ಕಿಯೊಬ್ಬರಿಂದ 1.46 ಲಕ್ಷ ರೂ. ವಂಚನೆ ಮಾಡಲಾಗಿದೆ. ಹಣ ಪಾವತಿಯಾದ ಬ್ಯಾಂಕ್ ಖಾತೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
RCB Vs CSK
ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ವ್ಯವಸ್ಥೆ ಹಾಗೂ ಮೆಟ್ರೋ ಸೇವೆಯ ಅವಧಿಯೂ ಹಿಂದಿನಂತೆ ವಿಸ್ತರಿಸಲಾಗುತ್ತದೆ. ಇನ್ನೊಂದೆಡೆ, ಟಿಕೆಟ್ ಇಲ್ಲದವರು ಸ್ಟೇಡಿಯಂ ಸುತ್ತಮುತ್ತ ಬಾರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.