ಭೋಪಾಲ್, ಫೆ. 24: ಮಧ್ಯ ಪ್ರದೇಶದ ಈ ಸಹೋದರಿಯರು ಹುಟ್ಟಿದ್ದು, ಬೆಳೆದಿದ್ದು ಎಲ್ಲ ಸ್ಲಂನಲ್ಲಿ. ಆದರೆ ಈಗ ವಾಸವಾಗಿರುವುದು ಐಷಾರಾಮಿ ಬಂಗಲೆಯಲ್ಲಿ. ಜತೆಗೆ ಕೋಟ್ಯಂತರ ರುಪಾಯಿ ಆಸ್ತಿ ಹೊಂದಿದ್ದಾರೆ. ಆದರೆ ಇದೆಲ್ಲ ಸಾಧ್ಯವಾಗಿದ್ದು ಇವರು ಕಷ್ಟಪಟ್ಟು ದುಡಿದ ಕಾರಣಕ್ಕೆ ಅಲ್ಲವೇ ಅಲ್ಲ. ಮುಗ್ಧ ಯುವತಿಯರನ್ನು ಬಲೆಗೆ ಬೀಳಿಸಿ ಅವರನ್ನು ವೇಶ್ಯಾವಾಟಿಕೆಗೆ ತಳ್ಳಿ ಈ ಚಾಲಾಕಿ ಸಹೋದರಿಯರು ಆಸ್ತಿ ಸಂಪಾದಿಸಿದ್ದಾರೆ (Madhya Pradesh News). ಸದ್ಯ ಇವರ ಪಾಪದ ಕೊಡ ತುಂಬಿದ್ದು, ಪೊಲೀಸರು ಬಂಧಿಸಿದ್ದಾರೆ (Crime News). ಬಂಧಿತ ಮಹಿಳೆಯರನ್ನು ಅಮ್ರೀನ್ (21) ಮತ್ತು ಅಫ್ರೀನ್ (32) ಎಂದು ಗುರುತಿಸಲಾಗಿದೆ.
ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಸೆಕ್ಸ್ ರಾಕೆಟ್ ಜಾಲವನ್ನು ಪೊಲೀಸರು ಬೇಧಿಸಿದ್ದು, ಇದರ ಮಾಸ್ಟರ್ ಮೈಂಡ್‌ಗಳಾದ ಸಹೋದರಿಯರಾದ ಅಮ್ರೀನ್, ಅಫ್ರೀನ್ ಮತ್ತು ಅವರ ಸಹಾಯಕ ಚಂದನ್ ಯಾದವ್‌ನನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಆರೋಪಿಗಳಾದ ಬಿಲಾಲ್, ಚಾನು ಮತ್ತು ಯಾಸಿರ್ ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ. ಬಂಧಿತರ ವಿರುದ್ಧ ಅತ್ಯಾಚಾರ, ಬಲವಂತದ ಮತಾಂತರ ಮತ್ತು ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಬಾಗ್ ಸೇವಾನಿಯ ಠಾಣೆಯ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ವೇಶ್ಯಾವಾಟಿಕೆ ಜಾಲ ಪತ್ತೆ:
ಏನಿದು ಘಟನೆ?
ಈ ಸಹೋದರಿಯರು ಉದ್ಯೋಗ ನೀಡುವ ಆಮಿಷ ಒಡ್ಡಿ ಯುವತಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ʼʼಅಬ್ಬಾಸ್ ನಗರದ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದ ಅಮ್ರೀನ್ ಮತ್ತು ಅಫ್ರೀನ್ ಇದೀಗ ಭೋಪಾಲ್‌ನಲ್ಲಿರುವ ಐಷಾರಾಮಿ ಸಾಗರ್ ರಾಯಲ್ ವಿಲ್ಲಾಕ್ಕೆ ಸ್ತಳಾಂತರಗೊಂಡಿದ್ದಾರೆ. ಯುವತಿಯರನ್ನು ಮುಂದಿಟ್ಟುಕೊಂಡು ಇವರು ಹಣ ಸಂಪಾದಿಸಿದ್ದಾರೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿರುಕುಳ ನೀಡಿದ ಯುವಕನಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ; ನಡು ರಸ್ತೆಯಲ್ಲಿ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಬಾರಿಸಿದ ಮಹಿಳೆ
ಕಾರ್ಯ ವೈಖರಿ
ತನಿಖೆ ವೇಳೆ ಬೆಚ್ಚಿ ಬೀಳಿಸುವ ಹಲವು ಸಂಗತಿಗಳು ಹೊರ ಬಂದಿವೆ. ಆರ್ಥಿಕವಾಗಿ ದುರ್ಬಲವಾಗಿರುವ ಯುವತಿಯರಿಗೆ ಕೆಲಸದ ಆಮಿಷ ಒಡ್ಡುವುದು ಇವರ ಕಾರ್ಯಾಚರಣೆಯ ಮೊದಲ ಹಂತ. ಮಾಸಿಕ 10,000 ರುಪಾಯಿ ಸಂಬಳ ಜತೆಗೆ ಉಚಿತ ವಸತಿ, ಆಹಾರ ಒದಗಿಸುವುದಾಗಿ ಭರವಸೆ ನೀಡುತ್ತಾರೆ. ಇದನ್ನು ನಂಬಿ ಸಹೋದರಿಯರ ಬಲೆಗೆ ಬೀಳುವ ಯುವತಿಯರ ಬದುಕು ಬಳಿಕ ಅಕ್ಷರಶಃ ನರಕವಾಗುತ್ತದೆ.
ಯುವತಿಯರನ್ನು ಪಾರ್ಟಿ, ಪಬ್‌ಗೆ ಕರೆದೊಯ್ದು ಶ್ರೀಮಂತ ವ್ಯಕ್ತಿಗಳಿಗೆ ಪರಿಚಯ ಮಾಡಿ ಕೊಡಲಾಗುತ್ತದೆ. ಅವರೊಂದಿಗೆ ಬೆರೆಯುವಂತೆ, ಅವರ ಸ್ನೇಹ ಸಂಪಾದಿಸುವಂತೆ ಒತ್ತಡ ಹೇರಲಾಗುತ್ತದೆ. ಜತೆಗೆ ಯುವತಿಯರಿಗೆ ಬಲವಂತವಾಗಿ ಮದ್ಯ ಕುಡಿಸಲಾಗುತ್ತದೆ. ಮಾದಕ ದ್ರವ್ಯವನ್ನೂ ನೀಡಲಾಗುತ್ತದೆ. ಈ ಬಗ್ಗೆ ಸಂತ್ರಸ್ತೆಯರು ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಏನಿದೆ?
ಛತ್ತೀಸ್‌ಗಢದ ಮಂಗೇಲಿ ಜಿಲ್ಲೆಯ ಸಂತ್ರಸ್ತೆ ನೀಡಿದ ದೂರು ನೀಡಿ ತನ್ನ ಮೇಲಾದ ದೌರ್ಜನ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. 2025ರ ಡಿಸೆಂಬರ್‌ನಲ್ಲಿ ಕೆಲಸದ ನೆಪ ಒಡ್ಡಿ ಅವರನ್ನು ಗುಜರಾತ್‌ನ ಅಹಮಾದಾಬಾದ್‌ಗೆ ಕರೆದೊಯ್ಯಲಾಯಿತು. ಅಲ್ಲಿ ಸಂತ್ರಸ್ತೆ ಮೇಲೆ ಅಮ್ರೀನ್ ಸಂಬಂಧಿಕ ಯಾಸಿರ್ ಅತ್ಯಾಚಾರ ಎಸಗಿದ. ಬಳಿಕ ಬಿಲಾಲ್ ಮತ್ತು ಚಾನು ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಮತ್ತೊಂದು ದೂರನ್ನು ಅಮ್ರೀನ್ ಮನೆಯಲ್ಲಿ ಕೆಲಸ ಮಾಡುತ್ತಿರುವ ಸಂತ್ರಸ್ತೆ ನೀಡಿದ್ದು, ಅವರೂ ಗಂಭೀರ ಆರೋಪ ಮಾಡಿದ್ದಾರೆ. ಚಂದನ್ ಯಾದವ್ ನಾರಾಯಣ ನಗರದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾಗಿಯೂ ಈ ಬಗ್ಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದಿದ್ದಾರೆ.
ಮತಾಂತರ
ಇದರ ಜತೆಗೆ ಬಲವಂತದ ಮತಾಂತರದ ದೂರು ಕೇಳಿ ಬಂದಿದೆ. ಚಂದನ್ ಯಾದವ್ ಸಂತ್ರಸ್ತೆಯೊಬ್ಬಳಿಗೆ ತಾನು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದಾಗಿಯೂ ಆಕೆಯೂ ಇಸ್ಲಾಂ ಧರ್ಮ ಸ್ವೀಕರಿಸಿದರೆ ಮದುವೆಯಾಗುವುದಾಗಿಯೂ ತಿಳಿಸಿದ್ದಾನೆ. ಕೊನೆಗೆ ಆಕೆಯನ್ನು ಬಲವಂತದಿಂದ ಮತಾಂತರಿಸಲಾಯಿತು. ಸದ್ಯ ಈ ಬಗ್ಗೆಯೂ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆಗಿಳಿಸಿದ ಪಾಪಿ ತಂದೆ, ಅಜ್ಜಿ ಸೇರಿ 12 ಮಂದಿ ಬಂಧನ
ಮೊಬೈಲ್ ಫೋನ್ ವಶ
ಬಂಧಿತರಾದ ಅಮ್ರೀನ್, ಅಫ್ರೀನ್ ಮತ್ತು ಚಂದನ್‌ನ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ವಿವರವಾದ ಪರಿಶೀಲನೆ ನಡೆಯುತ್ತಿದೆ. ಅಮ್ರೀನ್ ಮೊಬೈಲ್‌ನ ವ್ಯಾಟ್ಸ್‌ಆ್ಯಪ್‌ನಲ್ಲಿ ವಿವಿಧ ಗ್ರೂಪ್ ಗುರುತಿಸಲಾಗಿದ್ದು, ಇದರಲ್ಲಿ ಹಲವು ಯುವತಿಯರ ಫೋಟೊ ಪತ್ತೆಯಾಗಿದೆ. ಇದೊಂದು ಬೃಹತ್ ಜಾಲವಾಗಿದ್ದು, ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ವಿಸ್ತರಿಸಿರುವ ಸಾಧ್ಯತೆ ಇದೆ. ʼʼಕೆಲಸ ಬಿಡುತ್ತೇನೆ ಎಂದಾಗ ಬೆದರಿಕೆ ಒಡ್ಡುತ್ತಿದ್ದರು. ನಮ್ಮ ಖಾಸಗಿ ಕ್ಷಣಗಳ ಫೋಟೊವನ್ನು ಮುಂದಿಟ್ಟು ಬ್ಲ್ಯಾಕ್‌ಮೇಲ್ ಮಾಡುತ್ತಾರೆʼʼ ಎಂದು ಸಂತ್ರಸ್ತೆಯರು ತಿಳಿಸಿದ್ದಾರೆ. ʼʼಆರೋಪಿಗಳ ಬ್ಯಾಂಕ್ ವಿವರಗಳನ್ನೂ ಪರಿಶೀಲಿಸಲಾಗುತ್ತಿದೆʼʼ ಎಂದು ಡಿಸಿಪಿ ಗೌತಮ್ ಸೋಲಂಕಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.